ಭಾನುವಾರ, ಮೇ 22, 2022
21 °C

ಕಡಿಮೆ ಬೆಲೆಗೆ ಹರಾಜು; ರೈತರಿಗೆ ನಷ್ಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರಸೀಕೆರೆ: ಒಂದು ವಾರದಿಂದ ಇಲ್ಲಿನ ಕೃಷಿ ಉತ್ಪನ್ನ ಮಾರುಕಟ್ಟೆ ಪ್ರಾಂಗಣದಲ್ಲಿ ಸಂತಸದಿಂದ ಟೊಮಾಟೋ ಮಾರಾಟ ಮಾಡುತ್ತಿದ್ದ ರೈತರಿಗೆ ಬುಧವಾರ ವರ್ತಕರು ಕಡಿಮೆ ಬೆಲೆಗೆ ಹರಾಜು ಕೂಗಿದ್ದರಿಂದ ರೈತರು ಮತ್ತು ವರ್ತಕರ ನಡುವೆ ಮಾತಿನ ಚಕಮಕಿ ನಡೆದು ಗೊಂದಲಮಯ ವಾತಾವರಣ ಉಂಟಾಗಿ, ರೈತರು ಕಚೇರಿ ಮುಂದೆ ಪ್ರತಿಭಟನೆ ನಡೆಸಿದ ಘಟನೆ ನಡೆಯಿತು.ದೀಢಿರ್ ಬೆಳವಣಿಗೆಯಿಂದ ಎಚ್ಚೆತ್ತ ಮಾರುಕಟ್ಟೆ ಕಾರ್ಯದರ್ಶಿ ಗಾಯಿತ್ರಿ ರೈತರನ್ನು ಸಮಾಧಾನಪಡಿಸಿ ಪ್ರಸ್ತುತ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ತರಕಾರಿ ಯಾವ ಬೆಲೆಯಲ್ಲಿ ಮಾರಾಟವಾಗಿದೆ. ಆ ಧಾರಣೆಯನ್ನು ಕೊಡಿಸುವುದಾಗಿ ಭರವಸೆ ನೀಡಿ ವರ್ತಕರೊಡನೆ ಸಮಾಲೋಚಿಸಿ ರೈತರಿಗೆ ಕ್ವಿಂಟಾಲ್ ಟೊಮಾಟೊಗೆ 500ರಿಂದ 1000 ರೂಪಾಯಿವರೆಗೆ ಗುಣಮಟ್ಟಕ್ಕೆ ತಕ್ಕಂತೆ ಧಾರಣೆಯನ್ನು ಕೊಡಿಸುವ ಮೂಲಕ ವಾತಾವರಣವನ್ನು ತಿಳಿಗೊಳಿಸಿದರು.ಪಟ್ಟಣದ ಸಂತೇಪೇಟೆಯಲ್ಲಿ ನಡೆಯುತ್ತಿದ್ದ ಸಗಟು ತರಕಾರಿ ಹರಾಜು ಪ್ರಕ್ರಿಯೆಯನ್ನು ಕಳೆದ ಗಣರಾಜ್ಯೋತ್ಸವದಂದು ಕೃಷಿ ಉತ್ಪನ್ನ ಮಾರುಕಟ್ಟೆಗೆ ಸ್ಥಳಾಂತರಗೊಳಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ಯಾವುದೇ ಅಡ್ಡಿ ಆತಂಕಗಳಿಲ್ಲದೇ ಸುಗಮವಾಗಿ ಹರಾಜು ನಡೆದು ರೈತರು ತರಕಾರಿ ಮಾರಾಟ ಮಾಡಿ ಸಂತಸದಿಂದ ಹೋಗುತ್ತಿದ್ದರು.ಆದರೆ, ಇಂದು ಬೆರಳೆಣಿಕೆಯಷ್ಟು ವರ್ತಕರು ಹರಾಜಿನಲ್ಲಿ ಭಾಗವಹಿಸಿದ ಕಾರಣ ಧಾರಣೆಯಲ್ಲಿ ತೀವ್ರ ಕುಸಿಗೊಂಡು ಬೆಳೆಗಾರರಲ್ಲಿ ಆತಂಕ ಉಂಟಾಯಿತು. ಇದರಲ್ಲಿ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಮತ್ತು ಮಧ್ಯವರ್ತಿಗಳ ಕುತಂತ್ರ ಹಾಗೂ ಹುನ್ನಾರದಿಂದ ಮತ್ತೆ ಸಂತೇಪೇಟೆಯಲ್ಲಿ ನಡೆದಂತೆ ಇಲ್ಲಿಯೂ ರೈತರ ಶೋಷಣೆ ಮಾಡಲಾಗುತ್ತಿದೆ ಎಂದು ರೈತರಾದ ಹಬ್ಬನಘಟ್ಟ ಭೈರೇಶ್, ನಾಗಸಂದ್ರದ ಪ್ರಸನ್ನ, ರಾಮೇನಹಳ್ಳಿ ನಿಂಗಪ್ಪ ತಮ್ಮ ನೋವನ್ನು ವ್ಯಕ್ತಪಡಿಸಿದರು.ನಂತರ ರೈತರನ್ನೊಳಗೊಂಡ ವರ್ತಕರು ಶಾಸಕ ಕೆ.ಎಂ. ಶಿವಲಿಂಗೇಗೌಡ ಅವರ ಅಧ್ಯಕ್ಷತೆಯಲ್ಲಿ ಗ್ರಾ.ಪಂ ಅಧ್ಯಕ್ಷರು ಮತ್ತು ಪಿಡಿಓ ಅಧಿಕಾರಿಗಳ ಸಭೆ ನಡೆಯುತ್ತಿದ್ದ  ತಾಲ್ಲೂಕು ಪಂಚಾಯಿತಿ ಸಭಾಂಗಣಕ್ಕೆ ತೆರಳಿ, ‘ನಮಗೆ ಮಾರುಕಟ್ಟೆ ಪ್ರಾಂಗಣದಲ್ಲಿ ತರಕಾರಿ ಮಾರಾಟ ಮಾಡಲು ಸರಿಯಾದ ಜಾಗವಿಲ್ಲ. ಅಲ್ಲದೇ ಮೂಲಭೂತ ಸೌಲಭ್ಯಗಳಿಲ್ಲದೆ ತೊಂದರೆಯಾಗುತ್ತಿದೆ. ಮೊದಲು ಎಲ್ಲಿ ಹರಾಜು ನಡೆಯುತ್ತಿತ್ತೊ ಅಲ್ಲಿಗೆ ಅನುಮತಿ ಕೊಡಿಸಿ’ ಎಂದು ಅವಲತ್ತುಕೊಂಡರು.ಆದರೆ, ಶಾಸಕ ಶಿವಲಿಂಗೇಗೌಡರು, ಸರ್ಕಾರದ ಕಾನೂನಿನಂತೆ ಮಾರುಕಟ್ಟೆ ಪ್ರಾಂಗಣದಲ್ಲಿಯೇ ಹರಾಜು ನಡೆಯಬೇಕು. ಆದ್ದರಿಂದ ಅಧಿಕಾರಿಗಳು ಈ ಕ್ರಮ ಕೈಗೊಂಡಿದ್ದಾರೆ. ಮಾರುಕಟ್ಟೆ ಆಡಳಿತ ರೈತರು ತಂದ ತರಕಾರಿಗಳು ಕೆಡದಂತೆ ಶೀತಲ ಗೃಹ ನಿರ್ಮಿಸಬೇಕು. ರೈತರಿಗೆ ಆಗತ್ಯವಾದ ಎಲ್ಲ ಮೂಲಭೂತ ಸೌಲಭ್ಯಗಳನ್ನು ಒದಗಿಸಬೇಕು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.