ಗುರುವಾರ , ಮೇ 26, 2022
30 °C

ಕಡೂರು: ಕಲುಷಿತ ಆಹಾರ ಸೇವನೆ, 30ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಿರೇನಲ್ಲೂರು(ಬೀರೂರು): ಹಿರೇನಲ್ಲೂರಿನ ಸಮಾಜಕಲ್ಯಾಣ ಇಲಾಖೆಯ ವಸತಿನಿಲಯದಲ್ಲಿ ಬುಧವಾರ ಬೆಳಗ್ಗೆ ಕಲುಷಿತ ಆಹಾರ ಸೇವನೆಯಿಂದ ಮೂವತ್ತಕ್ಕೂ ಹೆಚ್ಚು ಹೆಣ್ಣುಮಕ್ಕಳು ಅಸ್ವಸ್ಥಗೊಂಡಿದ್ದು ಕರ್ತವ್ಯ ನಿರ್ಲಕ್ಷ್ಯದ ಆರೋಪದ ಮೇಲೆ ಹಾಸ್ಟೆಲ್ ವಾರ್ಡನ್ ನಿರ್ಮಲಾರನ್ನು ಅಮಾನತುಗೊಳಿಸಲಾಗಿದೆ.

ಕಡೂರು ತಾಲ್ಲೂಕು ಹಿರೇನಲ್ಲೂರಿನ ಸಮಾಜಕಲ್ಯಾಣ ಇಲಾಖೆಯ ಬಾಲಕಿಯರ ಹಾಸ್ಟೆಲ್‌ನಲ್ಲಿ ಒಂದರಿಂದ ಹತ್ತನೇ ತರಗತಿವರೆಗಿನ ನಲವತ್ತಕ್ಕೂ ಹೆಚ್ಚು ವಿದ್ಯಾರ್ಥಿನಿಯರು ವಾಸವಿದ್ದು ಮಂಗಳವಾರ ರಾತ್ರಿ ಚಪಾತಿ ನೀಡಲಾಗಿತ್ತು,ಬುಧವಾರ ಬೆಳಗ್ಗೆ ತಯಾರಿಸಲಾಗಿದ್ದ ಉಪಾಹಾರ ಸೇವಿಸಿದ ವಿದ್ಯಾರ್ಥಿನಿಯರು ಆಹಾರ ಕಳಪೆಯಾಗಿದ್ದು ವಾಸನೆಯಿಂದ ಕೂಡಿದೆ ಎಂದು ದೂರಿದರೂ ಕಿವಿಗೊಡದ ಹಾಸ್ಟೆಲ್ ವಾರ್ಡನ್ ಗದರಿಸಿ ಆಹಾರಸೇವಿಸುವಂತೆ ಮಾಡಿದರು ಎಂದು ವಿದ್ಯಾರ್ಥಿನಿಯರು ದೂರಿದರು.

ಆಹಾರ ಸೇವಿಸುತ್ತಿದ್ದಂತೆ ಅಸ್ವಸ್ಥಗೊಂಡ ಸುಮಾರು ಮೂವತ್ತಕ್ಕೂ ಹೆಚ್ಚು ಬಾಲಕಿಯರು ವಾಂತಿ ಮತ್ತು ಹೊಟ್ಟೆನೋವಿನಿಂದ ಬಳಲತೊಡಗಿದಾಗ ಗ್ರಾಮಸ್ಥರು ‘108’ವಾಹನಕ್ಕೆ ಕರೆ ಮಾಡಿ ವಿದ್ಯಾರ್ಥಿನಿಯರನ್ನು ಬೀರೂರು ಆಸ್ಪತ್ರೆಗೆ ದಾಖಲು ಮಾಡಿದರು.

ಬೀರೂರು ಆಸ್ಪತ್ರೆಗೆ ಧಾವಿಸಿದ ಜಿಲ್ಲಾ ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಪ್ರಭಾಕರ್ ವಾರ್ಡನ್ ಅಮಾನತು ಘೋಷಿಸಿ ಇಲಾಖಾ ತನಿಖೆ ನಡೆಸುವುದಾಗಿ ತಿಳಿಸಿದರು.ಸ್ಥಳಕ್ಕೆ ಆಗಮಿಸಿದ ಸ್ವತಃ ವೈದ್ಯರೂ ಆದ ಕಡೂರು ಶಾಸಕ ಡಾ.ವಿಶ್ವನಾಥ್ ಆಸ್ಪತ್ರೆಯಲ್ಲಿ ವೈದ್ಯರ ಕೊರತೆ ಇದ್ದುದನ್ನು ಗಮನಿಸಿ ತಾವೇ ವಿದ್ಯಾರ್ಥಿನಿಯರ ಆರೋಗ್ಯ ತಪಾಸಣೆಗೆ ಮುಂದಾದರು.

ಆಸ್ಪತ್ರೆಗೆ ದಾಖಲಾದ ವಿದ್ಯಾರ್ಥಿನಿಯರಾದ ಹೇಮಲತಾ,ಸುಧಾ,ವೀಣಾ,ಅರ್ಪಿತಾ ಮತ್ತವರ ಪೋಷಕರು ಈಗ್ಯೆ ವಾರದ ಹಿಂದೆಯೂ ಕಳಪೆ ಆಹಾರ ನೀಡಲಾಗಿತ್ತು,ಆದರೆ ಹಾಸ್ಟೆಲ್‌ಗೆ ಭೇಟಿ ನೀಡಿದ್ದ ಅಧಿಕಾರಿಗಳು ಮುಂದೆ ಈ ರೀತಿ ತಪ್ಪಾಗದಂತೆ ಎಚ್ಚರ ವಹಿಸುವುದಾಗಿ ಕೋರಿದಾಗ ವಿಷಯ ತಣ್ಣಗಾಗಿತ್ತು,ಅಲ್ಲದೇ ಪಟ್ಟಿಯ ಪ್ರಕಾರ ಮಕ್ಕಳಿಗೆ ಪೌಷ್ಟಿಕ ಆಹಾರ ಮತ್ತು ಹಣ್ಣುಗಳನ್ನು ನೀಡುತ್ತಿರಲಿಲ್ಲ ಎಂಬ ವಿಷಯವನ್ನೂ ಅಧಿಕಾರಿಗಳ ಗಮನಕ್ಕೆ ತರಲಾಗಿತ್ತು,ಆದರೆ ಮತ್ತೆ ಈ ರೀತಿಯ ಘಟನೆ ಸಂಭವಿಸಿದೆ ಹೀಗಾದರೆ ನಮ್ಮ ಮಕ್ಕಳ ಜೀವದ ಗತಿ ಏನು ಎಂದು ಪ್ರಶ್ನಿಸಿದ್ದಾರೆ.

ಘಟನೆಯ ಸುದ್ದಿ ತಿಳಿಯುತ್ತಿದ್ದಂತೆ ಹಿರೇನಲ್ಲೂರಿಗೆ ಆಗಮಿಸಿದ ತಾಲ್ಲೂಕು ಸಮಾಜಕಲ್ಯಾಣ ಇಲಾಖೆ ಅಧಿಕಾರಿ ಎಂ.ಎಚ್.ಪ್ರಕಾಶಮೂರ್ತಿಯವರಿಗೆ ಘೇರಾವ್ ಮಾಡಿ ದಿಗ್ಬಂಧನ ವಿಧಿಸಿದ ಗ್ರಾಮಸ್ಥರು ಇಲಾಖೆ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಕುರಿತು ಪ್ರತಿಕ್ರಿಯಿಸಿದ ಗ್ರಾಮದ ಮಾಧ್ಯಮಿಕ ಶಾಲೆಯ ಮುಖ್ಯಶಿಕ್ಷಕ ರೇವಣಸಿದ್ದಪ್ಪ ಕಳೆದ ಕೆಲ ದಿನಗಳಿಂದಲೂ ಮಕ್ಕಳು ಅನಾರೋಗ್ಯದ ಕಾರಣದಿಂದ ಶಾಲೆಗೆ ತಪ್ಪಿಸಿಕೊಳ್ಳುತ್ತಿದ್ದರು,ವಿಚಾರಿಸಿದಾಗ ಕಳಪೆ ಆಹಾರ ನೀಡುತ್ತಿರುವುದಾಗಿ

ಳಿದುಬಂದಿತ್ತು,ಅಧಿಕಾರಿಗಳು ಕ್ರಮಕೈಗೊಳ್ಳುವುದಾಗಿ ತಿಳಿಸಿದ್ದರು,ಈಗ ಇಂತಹವರ ವಿರುದ್ಧ ಕಠಿಣಕ್ರಮ ಜರುಗಿಸಬೇಕೆಂದು ಆಗ್ರಹಿಸಿದರು.

ಬೀರೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಕ್ಕಳು ಅಪಾಯದಿಂದ ಪಾರಾಗಿದ್ದು ವೈದ್ಯರು ಮತ್ತು ಅಧಿಕಾರಿಗಳು ಸ್ಥಳದಲ್ಲೇ ಇದ್ದು ಕಾಳಜಿ ವಹಿಸಿದ್ದಾರೆ.  

ಮೇಡಂ,ಈ ಆಹಾರ ಕಳಪೆಯಾಗಿದೆ,ಇದರಿಂದ ಏನಾದರೂ ಹೆಚ್ಚು ಕಮ್ಮಿಯಾದರೆ ತಲೆಗೆ ಬರುತ್ತೆ ಅಂತ ಕೆಲದಿವಸಗಳಿಂದ ಹೇಳ್ತಿದ್ರೂ, ನಿಮ್ಮ ಕೆಲ್ಸ ನೀವ್ ಮಾಡ್ರಿ ನನಗೆ ಹೇಳಕ್ಕೆ ನೀವ್ಯಾರು? ಕೊಟ್ಟಿದ್ದನ್ನ ಹಾಕಿ ಮಾಡೋದನ್ನ ಕಲೀರಿ ಅಂತ ನಮ್ಮನ್ನೇ ವಾರ್ಡನ್ ಗದರಿಸ್ತಿದ್ರು ಎಂದು ಅಡುಗೆ ಸಹಾಯಕಿಯರಾದ ಲಕ್ಷ್ಮಮ್ಮ ಮತ್ತು ರೇಖಾ ದೂರಿದ್ದಾರೆ.

ನಾಲ್ಕು ತಿಂಗಳ ಹಿಂದೆ ವಿಜಯಲಕ್ಷ್ಮಿ ಮೇಡಂ ಇದ್ದಾಗ ವಾರಕ್ಕೊಮ್ಮೆ ತರಕಾರಿ ತರೋವ್ರ,ಇವ್ರ ಬಂದಾಗಿಂದ ಎರಡು ವಾರಕ್ಕೋ ಮೂರು ವಾರಕ್ಕೊ ಒಮ್ಮೆ ಕಡೂರಿಂದ ಬರುವಾಗ ಯಾವುದಾದ್ರೂ ಒಂದ್ ಕೆ.ಜಿ. ತರಕಾರಿ ತರೋವ್ರ,ನಮಗೆ ಹಣ್ಣು ಕೊಡ್ಬೇಕು,ಅದ್ರೆ ಇವ್ರ ಅದೇನೂ ತರ್ತಿರಲಿಲ್ಲ ಎಂದು ವಿದ್ಯಾರ್ಥಿನಿಯರು ದೂರುತ್ತಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.