ಮಂಗಳವಾರ, ಮೇ 11, 2021
19 °C
ಏಷ್ಯಾದ ಮೊದಲ ಸಹಕಾರಿ ಸಂಘದ ನಿರ್ಲಕ್ಷ್ಯ: ತೋಂಟದ ಶ್ರೀ ವಿಷಾದ

`ಕಣಗಿನಹಾಳಕ್ಕಿಲ್ಲದ ಶತಮಾನೋತ್ಸವ ಸಂಭ್ರಮ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

`ಕಣಗಿನಹಾಳಕ್ಕಿಲ್ಲದ ಶತಮಾನೋತ್ಸವ ಸಂಭ್ರಮ'

ಗದಗ: ಏಷ್ಯಾಖಂಡದಲ್ಲಿಯೇ ಮೊದಲ ಸಹಕಾರಿ ಪತ್ತಿನ ಸಂಘ ಜಿಲ್ಲೆಯ ಕಣಗಿನಹಾಳ ಗ್ರಾಮದಲ್ಲಿ ಆರಂಭಗೊಂಡು ನೂರು ವರ್ಷ ಪೂರೈಸಿದರೂ ಶತಮಾನ ಆಚರಿಸಲು ಸಾಧ್ಯವಾಗಿಲ್ಲ ಎಂದು ತೋಂಟದಾರ್ಯ ಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಹೇಳಿದರು.ನಗರದ ಎಪಿಎಂಸಿ ಆವರಣದಲ್ಲಿ ಸೋಮವಾರ ದಿ ಮರ್ಚೆಂಟ್ಸ್ ಅರ್ಬನ್ ಕೋ ಆಫ್ ಬ್ಯಾಂಕ್‌ನ ನೂತನ ಕಟ್ಟಡ ಉದ್ಘಾಟಿಸಿದ ಬಳಿಕ ನಡೆದ ಸಮಾರಂಭದಲ್ಲಿ ಮಾತನಾಡಿದ ಅವರು, ಕಣಗಿನಹಾಳದ ಸಿದ್ಧನಗೌಡ ಪಾಟೀಲರು 1904ರಲ್ಲಿ ಸಹಕಾರಿ ಪತ್ತಿನ ಸಂಘ ಆರಂಭಿಸುವ ಮೂಲಕ ಸಹಕಾರಿ ರಂಗಕ್ಕೆ ಕೊಡುಗೆ ನೀಡಿದರು. ಅದನ್ನು ಬೆಳೆಸಲು ನಮ್ಮವರಿಂದ ಸಾಧ್ಯವಾಗಲಿಲ್ಲ. ಬೇಜವಾಬ್ದಾರಿತನ ಮತ್ತು ನಿರ್ಲಕ್ಷ್ಯತನದಿಂದ ಶತಮಾನ ಆಚರಿಸಲು ಆಗಲಿಲ್ಲ.ಕರಾವಳಿ ಜನರು ಸ್ಥಾಪಿಸಿದ ಸಿಂಡಿಕೇಟ್, ಕೆನರಾ, ವಿಜಯ, ಕರ್ಣಾಟಕ ಬ್ಯಾಂಕ್‌ಗಳು ಯಶಸ್ಸು ಕಂಡು ರಾಷ್ಟ್ರ ಮಟ್ಟದಲ್ಲಿ ಹೆಸರು ಗಳಿಸಿದವು. ಕಣಗಿನಹಾಳ ಹಾಳಾಗಿದೆ. ಉತ್ತರ ಕರ್ನಾಟಕ ಸಹಕಾರಿ ಕ್ಷೇತ್ರದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಅಭಿವೃದ್ಧಿ ಕಾಣಲಿಲ್ಲ.  ಮೂವರು ಸಚಿವರು ಬಂದರೂ ಕೆಸಿಸಿ ಬ್ಯಾಂಕ್ ಅಭಿವೃದ್ಧಿ ಹೊಂದಲಿಲ್ಲ ಎಂದು ಸ್ವಾಮೀಜಿ  ನುಡಿದರು.ಮರ್ಚೆಂಟ್ಸ್ ಬ್ಯಾಂಕ್ 58 ವರ್ಷ  ಪೂರೈಸಿದ್ದಲ್ಲದೆ, 200 ಕೋಟಿ ರೂಪಾಯಿ ವಹಿವಾಟು ನಡೆಸುತ್ತಿದೆ. ಕೋ ಅಪರೇಟಿವ್ ಬ್ಯಾಂಕ್‌ಗಳು ಜನಸಾಮಾನ್ಯರ ಅನುಕೂಲಕ್ಕೆ ತಕ್ಕಂತೆ ಕಾರ್ಯನಿರ್ವಹಿಸಬೇಕು. ಜನ ಹಿತದ ಮೂಲಕ ತಮ್ಮ ಭವಿಷ್ಯ ಕಂಡುಕೊಳ್ಳಬೇಕಾದ ಅನಿವಾರ್ಯತೆ ಇದೆ ಎಂದು ಅವರು ಹೇಳಿದರು.ಸಹಕಾರಿ ಸಂಘಗಳ ಉಪನಿಬಂಧಕ ಜಬ್ಬಾರ್ ಬೇಗ್ ಮಾತನಾಡಿ, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಅವಿಷ್ಕಾರಗೊಂಡಿರುವ ನೂತನ ವಿಧಾನಗಳನ್ನು ಬ್ಯಾಂಕ್‌ಗಳಲ್ಲಿ ಅಳವಡಿಸಬೇಕು. ಇದರಿಂದ ಬ್ಯಾಂಕ್‌ಗಳು ತಮ್ಮ ವಿಸ್ತಾರ ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದು ಅಭಿಪ್ರಾಯಪಟ್ಟರು.ಸಹಕಾರಿ ಸಂಘಗಳ ಸಹಾಯಕ ನಿಬಂಧಕ ಎಂ.ಸಿ.ಉಪ್ಪಿನ ಮಾತನಾಡಿ, ಖಾಸಗಿ ಬ್ಯಾಂಕ್‌ಗಳ  ಸ್ಪರ್ಧೆ ಹೆಚ್ಚಾಗಿರುವುದರಿಂದ ಕೋ ಆಪರೇಟಿವ್ ಬ್ಯಾಂಕ್ ಆಡಳಿತ ಮಂಡಳಿ ಎಚ್ಚರಿಕೆಯಿಂದ ವ್ಯವಹಾರ ನಡೆಸಬೇಕು ಸಲಹೆ ನೀಡಿದರು.ಆರ್.ಎಸ್. ಭೂಸನೂರಮಠ, ಎಸ್.ಕೆ. ಮೇಟಿ ಅವರನ್ನು ಸನ್ಮಾನಿಸಲಾಯಿತು. ಆರ್.ಎಸ್. ಭೂಸನೂರಮಠ, ಎಸ್.ಕೆ.ಮೇಟಿ, ಬ್ಯಾಂಕ್ ಉಪಾಧ್ಯಕ್ಷ  ಶಾಂತೇಶ ಅರಮನಿ ಮಾತನಾಡಿದರು. ಎಸ್.ಕೆ.ಚೆಟ್ಟಿ ಹಾಜರಿದ್ದರು. ಬ್ಯಾಂಕ್ ಸಚಿನ್ ಪಟ್ಟಣಶೆಟ್ಟಿ ಸ್ವಾಗತಿಸಿರು. ನಾಗರತ್ನ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಅಂದಾನಪ್ಪ ವಿಭೂತಿ ನಿರೂಪಿಸಿದರು. ನಟರಾಜ್ ವಂದಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.