ಭಾನುವಾರ, ಮೇ 16, 2021
22 °C

ಕತ್ತಲೆಯಲ್ಲಿ ಅಂಬೇಡ್ಕರ್ ಭವನ

ಬಸವರಾಜ ಸಂಪಳ್ಳಿ / ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕತ್ತಲೆಯಲ್ಲಿ ಅಂಬೇಡ್ಕರ್ ಭವನ

ಬಾಗಲಕೋಟೆ: `ಮೇಲೆಲ್ಲ ಹೊಳಪು, ಒಳಗೆಲ್ಲ ಹುಳುಕು~ ಎಂಬ ಗಾದೆ ಮಾತಿನಂತೆ ಹೊರಗಿನಿಂದ ನೋಡಲು ಚಂದವಾಗಿ ತೋರುವ ನವನಗರದ ಸೆಕ್ಟರ್ ನಂ. 37ರಲ್ಲಿ ಇರುವ ಡಾ. ಬಿ.ಆರ್. ಅಂಬೇಡ್ಕರ್ ಭವನ ಒಳಾಂಗಣ ಮೂಲಸೌಲಭ್ಯಗಳ ಕೊರತೆಯಿಂದ ಬಳಲುತ್ತಿದೆ.ಭವನಕ್ಕೆ ಅಗತ್ಯವಿರುವ ವಿದ್ಯುತ್ ವ್ಯವಸ್ಥೆ ಇಲ್ಲದೇ ಕತ್ತಲೆಯಲ್ಲಿ ಕಾರ್ಯಕ್ರಮಗಳನ್ನು ನಡೆಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಸಮರ್ಪಕ ನೀರಿನ ವ್ಯವಸ್ಥೆ ಇಲ್ಲದೇ ಶೌಚಾಲಯ ದುರ್ವಾಸನೆ ಬೀರುತ್ತಿದೆ. ಇಲ್ಲಿ ನಡೆಯುವ ಕಾರ್ಯಕ್ರಮಕ್ಕೆ ಬರುವ ಸಾರ್ವಜನಿಕರು ಮೂಗು ಹಿಡಿದುಕೊಂಡು ಭವನದಲ್ಲಿ ಕೂರುವಂತಾಗಿದೆ.ಸರಿಯಾದ ಗಾಳಿ-ಬೆಳಕಿನ ವ್ಯವಸ್ಥೆ ಇಲ್ಲದ ಕಾರಣ ಕಾರ್ಯಕ್ರಮಗಳು ನಡೆಯುವ ಸಂದರ್ಭದಲ್ಲಿ ಸಾರ್ವಜನಿಕರು ಹೆಚ್ಚು ಹೊತ್ತು ಕೂರಲು ಆಗದೇ ಉಸಿರುಕಟ್ಟುವ ವಾತಾವರಣ ನಿರ್ಮಾಣವಾಗಿದೆ. ಕುಡಿಯುವ ನೀರಿನ ವ್ಯವಸ್ಥೆಯೂ ಇಲ್ಲ, ಸ್ವಚ್ಛತೆಯನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ.ಈ ಕುರಿತು `ಪ್ರಜಾವಾಣಿ~ಯೊಂದಿಗೆ ಮಾತನಾಡಿದ ಶಬರೀಶ ಅಂಗವಿಕಲರ ಸಂಸ್ಥೆಯ ಅಧ್ಯಕ್ಷ ಘನಶಾಂ ಭಾಂಡಗೆ, ಡಾ. ಬಿ.ಆರ್. ಅಂಬೇಡ್ಕರ್ ಅವರ ಹೆಸರಿಗೆ ಕಳಂಕ ತರುವಂತೆ ಭವನದ ಸ್ಥಿತಿಯಾಗಿದೆ. ಭವನಕ್ಕೆ ಅಗತ್ಯವಿರುವ ವಿದ್ಯುತ್, ನೀರು ಪೂರೈಕೆ ಮಾಡದೇ ಬಿಟಿಡಿಎ ಮತ್ತು ಜಿಲ್ಲಾಡಳಿತ ನಿರ್ಲಕ್ಷಿಸಿದೆ ಎಂದು ಆರೋಪಿಸಿದರು.ಸೂಕ್ತ ರಕ್ಷಣೆ ಇಲ್ಲದ ಭವನಕ್ಕೆ ಸಂಜೆಯಾಗುತ್ತಲೇ  ಕಿಡಿಗೇಡಿಗಳು ಪ್ರವೇಶಿಸಿ, ಮದ್ಯ -ಮಾಂಸ ಸೇವಿಸಿ, ಜೂಜಾಡುತ್ತಾರೆ. ರಾತ್ರಿ ವೇಳೆ ಕೂಗಾಡುವುದು, ರಸ್ತೆ ಮೇಲೆ ಹೋಗುವವರಿಗೆ ಕೀಟಲೆ ಮಾಡುವ ಮೂಲಕ ಪರಿಸರವನ್ನು ಹಾಳುಮಾಡಿದ್ದಾರೆ. ಆದರೆ ಅವರಿಗೆ ಹೇಳುವವರಾಗಲಿ, ಕೇಳುವವರಾಗಲಿ ಇಲ್ಲ, ಒಟ್ಟಾರೆ ಸುಂದರ ಭವನ ಅಧಿಕಾರಿಗಳ ನಿರ್ಲಕ್ಷ್ಯದಿಂದ ಹಾಳಾಗುತ್ತಿದೆ ಎಂದು ದೂರಿದರು.ಭಾನುವಾರ ಇದೇ ಭವನದಲ್ಲಿ ನಡೆದ `ಪೆರಿಯಾರ್ ತತ್ವ ಚಿಂತನೆಯ ಪ್ರಸ್ತುತತೆ~ ಕುರಿತ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡ ಮೈಸೂರಿನ ವಿಚಾರವಾದಿ ಕೆ.ಎಸ್. ಭಗವಾನ್ ಸಹ ಅಂಬೇಡ್ಕರ್ ಭವನದ ದುಃಸ್ಥಿತಿ ಬಗ್ಗೆ ಕಳವಳ ವ್ಯಕ್ತಪಡಿಸಿದರು.ತಕ್ಷಣ ಭವನಕ್ಕೆ ಸೂಕ್ತ ನೀರು, ವಿದ್ಯುತ್ ವ್ಯವಸ್ಥೆ ಕಲ್ಪಿಸಿ, ಭವನವನ್ನು ಸುಂದರವಾಗಿ ಇಡುವ ನಿಟ್ಟಿನಲ್ಲಿ ಜಿಲ್ಲೆಯ ಅಧಿಕಾರಿಗಳು, ಜನಪ್ರತಿನಿಧಿಗಳು ಮುಂದಾಗಬೇಕು ಎಂದರು.ಭವನದ ಸುತ್ತ ಮುಳ್ಳಿನ ಗಿಡಗಂಟಿಗಳು ಬೆಳೆದು ಭಯಾನಕ ವಾತಾವರಣ ನಿರ್ಮಾಣವಾಗಿದೆ. ಸಂಜೆ ವೇಳೆ ಭವನದ  ಸುತ್ತ ಸಾರ್ವಜನಿಕರು ಅಡ್ಡಾಡಲು ಆತಂಕ ಪಡುವಂತ ಸ್ಥಿತಿ ನಿರ್ಮಾಣವಾಗಿದೆ.

ಭವನದ ದುರವಸ್ಥೆ ಮತ್ತು ಮೂಲಸೌಕರ್ಯಗಳ ಕೊರತೆ ಇರುವ ಕಾರಣ ಸಂಘ-ಸಂಸ್ಥೆಗಳು ಇಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸಲು ಹಿಂದೇಟು ಹಾಕುತ್ತಿದ್ದಾರೆ.ಅಂಬೇಡ್ಕರ್ ಭವನದ ಮುಂಭಾಗದ ರಸ್ತೆ ಮತ್ತು ಪಕ್ಕದ ರಸ್ತೆಗಳ ಗಟಾರ ಕೊಳಚೆ ನೀರು ಮತ್ತು ತ್ಯಾಜ್ಯದಿಂದ ತುಂಬಿಕೊಂಡು ಅಸಹ್ಯ ವಾತಾವರಣ ನಿರ್ಮಾಣವಾಗಿದ್ದು, ತಕ್ಷಣ ಭವನ ಸೇರಿದಂತೆ ಸುತ್ತಲಿನ ಪರಿಸರವನ್ನು ಸ್ವಚ್ಛಗೊಳಿಸಬೇಕು ಎಂಬುದು ಸಾರ್ವಜನಿಕರ ಆಗ್ರಹ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.