ಸೋಮವಾರ, ಮೇ 17, 2021
21 °C
ಬ್ಲಾಗಿಲನು ತೆರೆದು...

ಕಥೆ, ಲಹರಿ, ತುಸು ತತ್ವ

-ಸಾಕ್ಷಿ Updated:

ಅಕ್ಷರ ಗಾತ್ರ : | |

ಕಥೆ, ಲಹರಿ, ತುಸು ತತ್ವ

ಹೊಸ ರುಚಿ (ಹೆಚ್ಚಾಗಿ ಇದೇ ಅಡುಗೆ ಎಲ್ಲರ ಮನೆಯಲ್ಲಿ ಚಾಲ್ತಿಯಲ್ಲಿದೆ)

ಬೇಕಾಗುವ ಸಾಮಗ್ರಿಗಳು: ಯಾವುದಾದರೂ ತರಕಾರಿ, ಮೆಣಸು, ಕೊತ್ತಂಬರಿ ಇತ್ಯಾದಿ ಸಾಂಬಾರ ಪದಾರ್ಥಗಳು, ಸಾಂಬಾರ ಪುಡಿ (ಎಂಟಿಆರ್, ಶಕ್ತಿ- ಯಾವುದಾದರೂ ಒಂದು), ಉಪ್ಪು, ಎಣ್ಣೆ, ಪಾತ್ರೆಗಳು, ತೆಂಗಿನಕಾಯಿ...ಮೊದಲು ತರಕಾರಿಯನ್ನು ಬೇಕಾದ ಹಾಗೆ ಕತ್ತರಿಸಿಕೊಂಡು, ಅವುಗಳನ್ನು ಒಂದು ಪಾತ್ರೆಯಲ್ಲಿ ಹಾಕಿ ನೀರು ಸೇರಿಸಿ, ಬೇಯಲು ಇಡಿ. ಬೇಯುವ ಸಮಯದಲ್ಲಿ ನಿಮಗಿಷ್ಟವಾದ ಪುಸ್ತಕಗಳನ್ನು ಓದಬಹುದಾಗಿದೆ. (ಉದಾ: ಶೀಘ್ರವಾಗಿ ಬೇಯುವ ತರಕಾರಿ ಆದಲ್ಲಿ ರಮ್ಯ ಕವನಗಳನ್ನು, ಹಾಸ್ಯಲೇಖನ ಓದಿ. ತುಂಬಾ ತಡವಾಗುತ್ತದೆ ಎಂದಾದರೆ ನೀಳ್ಗತೆ, ನವ್ಯ ಕವನಗಳನ್ನ ಓದಿ- ಹೀಗಾದರೂ ಸಾಹಿತ್ಯ ಉಳಿಯಲಿ).ಈಗ ತರಕಾರಿ ಬೆಂದಿದೆ. ಬೆಂದ ತರಕಾರಿಗೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ, ಕುದಿಯಲು ಬಿಡಿ. ಇನ್ನೊಂದು ಪಾತ್ರೆಯಲ್ಲಿ ಸ್ವಲ್ಪ ಎಣ್ಣೆ ಹಾಕಿ, ಸಾಂಬಾರ ಪದಾರ್ಥಗಳನ್ನ ಹುರಿಯಿರಿ. ಹುರಿದ ಪದಾರ್ಥಗಳನ್ನ ತೆಂಗಿನಕಾಯಿ ತುರಿಯ ಜೊತೆ ಸೇರಿಸಿ ರುಬ್ಬಿ. ಅಗತ್ಯಕ್ಕೆ ಸ್ವಲ್ಪ ಹುಳಿಯನ್ನೂ ಹಾಕಿ.ನಂತರ ಈ ಮಸಾಲೆಯನ್ನು ಬೇಯುತ್ತಿರುವ ತರಕಾರಿಯ ಜೊತೆಗೆ ಸೇರಿಸಿ. (ಪುನಃ ಕುದಿಸುತ್ತಿರಬೇಕಾದರೆ ಮೂರು ನಾಲ್ಕು ಹನಿಗವನ ಓದಬಹುದು).ಈಗ ಸಾಂಬಾರ್ ತಯಾರಾಗಿದೆ. ಇದಕ್ಕೆ ಒಂದು ಚಮಚೆಯಷ್ಟು ಯಾವುದಾದರೂ (ಮೇಲೆ ತಿಳಿಸಿದ) ಸಾಂಬಾರ್ ಪುಡಿಯನ್ನು ಸೇರಿಸಿಬಿಡಿ, ಇನ್ನೂ ಘಮಘಮಿಸುತ್ತದೆ.ಮುಖ್ಯವಾದ ಸೂಚನೆಗಳು :

1. ಸಾಂಬಾರ್ ಪೌಡರ್‌ಗಳನ್ನ ಕಿಚನ್ನಿನಲ್ಲಿ ಯಾರೂ ಕಾಣದಂತೆ ಅಡಗಿಸಿಡಬೇಕು. ಅದನ್ನ ಸೇರಿಸುವಾಗ ಯಾರೂ ಇರದಂತೆ ಎಚ್ಚರವಹಿಸಿ.2. ಬೇರೆ ಬೇರೆ ಸಾಂಬಾರ್ ಪುಡಿಗಳನ್ನು ಉಪಯೋಗಿಸಿ. ರುಚಿ ವ್ಯತ್ಯಾಸವಾಗುತ್ತಾ ಇದ್ದರೆ ಯಾರಿಗೂ ಅನುಮಾನ ಬರಲಾರದು.***

ಮೇಲಿನದು `ಈಶ್ವರ ತತ್ವ' ಬ್ಲಾಗ್‌ನ, `ಈಗಿನ ಅಡುಗೆ' ಶೀರ್ಷಿಕೆಯ ಬರಹ. ಈ ಬರಹದ ಮೂಲಕ ಲೇಖಕರು ಹೇಳಲು ಹೊರಟಿರುವುದಾದರೂ ಏನನ್ನು? ತಮಾಷೆ, ವಿಡಂಬನೆ, ವಾಸ್ತವದ ಒಂದು ತುಣುಕು- ಇವೆಲ್ಲವೂ ಈ ಬರಹದಲ್ಲಿ ಇವೆಯಲ್ಲವೇ? ಇವುಗಳ ಜೊತೆಗೆ ಹೊಸ ತಲೆಮಾರಿನ ಬಗೆಗೊಂದು ತಾತ್ವಿಕ ನೋಟವೂ ಇದೆ ಅನ್ನಿಸುತ್ತದೆ. ಇಂಥ ಪುಟ್ಟ ಪುಟ್ಟ ನೋಟಗಳ ಬ್ಲಾಗು- `ಈಶ್ವರ ತತ್ವ'. ಇದು ಕಾಸರಗೋಡಿನ ಈಶ್ವರ ಭಟ್ ಅವರ ಸಂಕಲನ.`ಈಶ್ವರ ತತ್ವ'ದ ಬಹುತೇಕ ಬರಹಗಳು ಕಥೆಯ ರೂಪದಲ್ಲಿವೆ. `ಅಪ್ಪಚ್ಚಿಯ ಕಥೆ'ಗಳನ್ನೇ ನೋಡಿ. ಚಿಕ್ಕಪ್ಪನ ಮೂಲಕ ಅಥವಾ ಚಿಕ್ಕಪ್ಪ ಎನ್ನುವ ವ್ಯಕ್ತಿಯ ಮೂಲಕ ಲೇಖಕರು ತಮ್ಮ ಕುಟುಂಬದ ಹಿರಿಯರ ಕುರಿತ ಕಥನಗಳನ್ನು ಕಟ್ಟಿಕೊಟ್ಟಿದ್ದಾರೆ. ಈ ಕಥನಗಳ ಮೂಲಕ ಬದುಕಿನ ಸಣ್ಣ ಸಣ್ಣ ಸಂಗತಿಗಳ ಬಗ್ಗೆ, ವೈರುಧ್ಯಗಳ ಬಗ್ಗೆ ಹೇಳಲು ಅವರು ಪ್ರಯತ್ನಿಸಿದಂತಿದೆ. ಅಂಥದೊಂದು ಪ್ರಸಂಗ ಚಿಕ್ಕಪ್ಪನ ಅಣ್ಣ (ಲೇಖಕರ ಅಪ್ಪ) ತೆಂಗಿನಕಾಯಿ ಹಿಡಿಯಲು ಹೋದದ್ದು. ಜೋರು ಸುರಿದ ಮಳೆಯಲ್ಲಿ ನದಿ ಉಕ್ಕಿ ಹರಿದಿದೆ.ಪ್ರವಾಹದಲ್ಲಿ ತೆಂಗಿನಕಾಯಿಗಳು ಕೊಚ್ಚಿಕೊಂಡು ಬರುತ್ತಿವೆ. ಈ ತೆಂಗಿನಕಾಯಿಗಳನ್ನು ಹಿಡಿಯಲು ಬಾಲಕನೊಬ್ಬ ನೀರಿಗಿಳಿದಿದ್ದಾನೆ. ಹುಡುಗ ನಾಪತ್ತೆಯಾದುದು ಮನೆಯಲ್ಲಿ ಆತಂಕ ಹುಟ್ಟಿಸಿದೆ. ಕೊನೆಗೆ ಹುಡುಗ ಮನೆಗೆ ಮರಳುವುದರೊಂದಿಗೆ ಕಥೆಗೆ ಶುಭಂ. ಈ ಬರಹದ ಕೊನೆಗೆ ಚಿಕ್ಕಪ್ಪ ಹೇಳುವುದು- `ಈ ಸಾಹಸಕ್ಕೆ ಯಾವುದಾದರೂ ಪ್ರಶಸ್ತಿ ದೊರೆಯಬೇಕಿತ್ತು. ಆದರೆ, ದೊರೆತದ್ದು ಏಟು!'.ಕಥೆ ಹೇಳುವ ಉಮೇದಿನ ಈಶ್ವರ ಭಟ್, ಕೆಲವೊಮ್ಮೆ ಕಥೆಗಳನ್ನು ಕಡ ತಂದಿರುವುದೂ ಇದೆ. ಶ್ಲೋಕವೊಂದರಲ್ಲಿ ಹುದುಗಿರುವ `ಗೋಪ ಗೃಹಿಣೀ ನ್ಯಾಯ' ಎನ್ನುವ ಕಥೆಯೊಂದನ್ನು ಅವರು ಹೊಸಗನ್ನಡದಲ್ಲಿ ಹೇಳಿರುವುದು ಹೀಗೆ: “ಅವಳು ರಾಜನ ಮಡದಿಯಾಗಿ ಸುಖವಾಗಿದ್ದಳು. ಆದರೂ ಅವಳು ಬೇರೆ ಒಬ್ಬ ಗೆಳೆಯನಲ್ಲಿ ಮನಸ್ಸನ್ನು ಹೊಂದಿದ್ದಳು.ರಾಜನಿಗೆ ವಿಷವನ್ನಿಕ್ಕಿ ಗೆಳೆಯನ ಜೊತೆ ಓಡಿ ಹೋದಳು. ಗೆಳೆಯ ಹಾವಿನ ಕಡಿತಕ್ಕೊಳಗಾಗಿ ಮೃತನಾದನು. ಬೇರೆ ಗತಿಯಿಲ್ಲದೆ ಹೆಂಗಸು ವೇಶ್ಯಾವೃತ್ತಿಯನ್ನು ಕೈಗೊಂಡಳು. ಈಡಿಪಸ್ಸಿನಂತೆ, ತಾನೇ ಹಡೆದ ಮಗ ಅಕಸ್ಮತ್ತಾಗಿ ಅವಳನ್ನು ಕೂಡಿದನು. ಅನಂತರ ತಾಯಿ ಮಕ್ಕಳೆಂದು ಅರಿತೊಡನೆ, ಪ್ರಾಯಶ್ಚಿತ್ತಾಕ್ಕಾಗಿ ಚಿತೆಯಲ್ಲಿ ಮಲಗಿ ಬೆಂಕಿ ಹಚ್ಚಿಕೊಂಡರು.ರಾಜಪುತ್ರ ಸುಟ್ಟುಹೋದ, ಇವಳೋ ಅಲ್ಲಿಂದಲೂ ಓಡಿದಳು. ಸುಟ್ಟ ಗಾಯಗಳಿಂದ ನೊಂದ ಇವಳನ್ನು ಒಬ್ಬ ಗೊಲ್ಲ  ಉಪಚರಿಸಿದನು. ಅವನನ್ನೇ ಇವಳು ಮದುವೆಯಾದಳು. ಕೆಲಸದಂತೆ ಮಜ್ಜಿಗೆ ಮಾರಲು ಪೇಟೆಗೆ ಒಯ್ಯುತ್ತಿರುವಾಗ, ಮಡಿಕೆ ಉರುಳಿಬಿದ್ದು ಮಜ್ಜಿಗೆ ಭೂಮಿ ಪಾಲಾಯಿತು. ತನ್ನ ಕೆಟ್ಟ ನಡವಳಿಕೆಗಳಿಂದ ಮಜ್ಜಿಗೆ ಹಾಳಾಯಿತು ಎಂದು ಅವಳು ಪಶ್ಚಾತ್ತಾಪ ಪಟ್ಟಳಂತೆ. ಇದನ್ನು `ನ್ಯಾಯ'ದಲ್ಲಿ `ಗೋಪ ಗೃಹಿಣೀ ನ್ಯಾಯ' ಎನ್ನುತ್ತಾರೆ. ಅದ್ಭುತ ಕಥೆ ಅಲ್ಲವೇ?”ಲಹರಿ ರೀತಿಯ ಬರವಣಿಗೆಯನ್ನು ಹೋಲುವ ಪುಟ್ಟ ಪುಟ್ಟ ಬರಹಗಳೂ ಬ್ಲಾಗಿನಲ್ಲಿವೆ. ಈ ಬರಹಗಳು ಸ್ವಾರಸ್ಯದಿಂದ ಕೂಡಿದ್ದು ಓದಿನ ರುಚಿ ಹೆಚ್ಚಿಸುವಂತಿವೆ. `ಹತ್ತಿರವೋ ದೂರವೋ' ಎನ್ನುವ ರಚನೆಯನ್ನೇ ನೋಡಿ. ಬಸ್‌ನಲ್ಲಿ ಬಿಳಿ ಚೂಡಿಧಾರದ ಚೆಲುವೆಯೊಬ್ಬಳು ಎದುರಾಗಿದ್ದಾಳೆ. ಆಕೆ ತಾನು ಇಳಿಯುವ ಸ್ಥಳ ಬಂದಾಗ ಬಸ್‌ನಿಂದ ಇಳಿದು ಹೋಗುತ್ತಾಳೆ. ಆದರೂ ಹುಡುಗನ ಕಣ್ಣು ಅವಳನ್ನು ಹುಡುಕುತ್ತಲೇ ಇದೆ. ಆದರೆ ಅವಳು ಎಲ್ಲಿದ್ದಾಳೆ? ಆಗ ಕಥೆಗಾರ ತನ್ನನ್ನು ಸಮಾಧಾನಿಸಿಕೊಳ್ಳುವುದು- `ಹತ್ತಿರವಿರುವ ಕಣಗಿಲೆ ಹೂವು ದೂರದ ಚಿನ್ನದ ತಾವರೆಗಿಂತ ಸೊಗಸು'. ಕಣಗಿಲೆ ಯಾರು ಎನ್ನುವ ಪ್ರಶ್ನೆಯನ್ನು ಉಳಿಸುವ ಈ ಬರಹ ಕೂಡ ತನ್ನಲ್ಲೊಂದು ತತ್ವದ ತುಣುಕು ಇರಿಸಿಕೊಂಡಂತಿದೆ.`ಹೆಂಡತಿಯೋ ಅಲ್ಲ ಪ್ರೇಯಸಿಯೋ' ಬ್ಲಾಗ್‌ನ ಮತ್ತೊಂದು ಬರಹ. ಶೀರ್ಷಿಕೆಯಲ್ಲೇ ಕುತೂಹಲ ಮೂಡಿಸುವ ಈ ಬರಹದ ಸ್ವಾರಸ್ಯವನ್ನು ಬ್ಲಾಗ್ ಪ್ರವೇಶಿಯೇ ತಿಳಿಯಿರಿ- ishwaratatva.blogspot.in

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.