ಬುಧವಾರ, ಮೇ 12, 2021
26 °C
ಹರಪನಹಳ್ಳಿಯಲ್ಲಿ ಸ್ಥಾಪನೆಯಾಗಿದ್ದ ಶಾಲೆ; 125 ವಿದ್ಯಾರ್ಥಿಗಳ ದಾಖಲಾತಿ

ಕದ ಮುಚ್ಚಿದ ಸರ್ಕಾರಿ ವಸತಿ ಶಾಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹರಪನಹಳ್ಳಿ: ಆರ್ಥಿಕವಾಗಿ ದುರ್ಬಲವಾದವರ ಹಾಗೂ ವಲಸೆ ಕುಟುಂಬದ ಮಕ್ಕಳ ಶೈಕ್ಷಣಿಕ ಉತ್ತೇಜನಕ್ಕಾಗಿ ಪಟ್ಟಣದಲ್ಲಿ ಆರಂಭಿಸಲಾಗಿದ್ದ ಸರ್ಕಾರಿ ವಸತಿಶಾಲೆ ಮುಚ್ಚಲು ಮುಂದಾಗಿರುವ ಇಲಾಖೆಯ ಕ್ರಮ, ಬಡ ಮಕ್ಕಳ ಶೈಕ್ಷಣಿಕ ಭವಿಷ್ಯಕ್ಕೆ ತೊಡಕಾಗಿ ಪರಿಣಮಿಸಿದೆ.`ಬರ'ದಿಂದಾಗಿ, ತುತ್ತಿನಚೀಲ ತುಂಬಿಸಿಕೊಳ್ಳಲು ಭೂರಹಿತ ಹಾಗೂ ಸಣ್ಣಹಿಡುವಳಿ ಹೊಂದಿರುವ ಬುಡಕಟ್ಟು ಸಮುದಾಯದ ಶೇ 75ರಷ್ಟು ಕುಟುಂಬಗಳು ಮಲೆನಾಡಿನ ಕಾಫಿ ತೋಟ ಇಲ್ಲವೇ; ಬೆಂಗಳೂರು, ಮಂಗಳೂರು, ಗೋವಾದಂಥ ನಗರದಲ್ಲಿ ಕಟ್ಟಡದ ಗಾರೆ ಕೆಲಸಕ್ಕೆ `ಗುಳೇ' ಹೋಗುವುದು ಕಂಡುಬಂದಿತ್ತು.ಇಂಥ ಕುಟುಂಬದವರ ಮಕ್ಕಳ ಶಿಕ್ಷಣಕ್ಕೆ ಆಸರೆಯಾಗಲೆಂದು ಸಮಾಜ ಕಲ್ಯಾಣ ಇಲಾಖೆ 1987-88ನೇ ಸಾಲಿನಲ್ಲಿ ಪಟ್ಟಣದಲ್ಲಿ ವಸತಿಶಾಲೆ ಆರಂಭಿಸಿತ್ತು. 1ರಿಂದ 5ರವರೆಗೆ ಪ್ರತಿ ತರಗತಿಗೆ 25 ಸ್ಥಾನ ನಿಗದಿಪಡಿಸಿ ಶಾಲೆ ಆರಂಭಿಸಲಾಯಿತು. ಪ್ರತಿ ತರಗತಿಯಲ್ಲಿಯೂ ಶೇ 75;25ರ ಅನುಪಾತದಲ್ಲಿ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಇತರ ಹಿಂದುಳಿದ ವರ್ಗದ ವಿದ್ಯಾರ್ಥಿಗಳ ದಾಖಲಾತಿಗೆ ಅವಕಾಶ ಇದೆ. ಒಟ್ಟು 125 ಮಕ್ಕಳು ಆಶ್ರಯ ಪಡೆದಿದ್ದರು.ಹಾಜರಾತಿ ಅಥವಾ ದಾಖಲಾತಿ ಪ್ರಮಾಣ 50ಕ್ಕಿಂತ ಕಡಿಮೆ ಇದ್ದರೆ ಅಂಥ ಶಾಲೆ ಮುಚ್ಚಲು ಇಲಾಖೆ ಆದೇಶ ಹೊರಡಿಸಿದೆ. ಆದರೆ, ಈ ನಿಯಮ ಪಟ್ಟಣದ ವಸತಿ ಶಾಲೆಗೆ ಅನ್ವಯ ಆಗುವುದಿಲ್ಲ. ಪ್ರತಿ ವರ್ಷ ದಾಖಲಾತಿ ಬಯಸಿ ನೂರಾರು ಅರ್ಜಿಗಳು ಸಲ್ಲಿಕೆಯಾಗುತ್ತಿವೆ.ಆದರೂ, ಇದನ್ನು ಪರಿಗಣಿಸದ ಇಲಾಖೆ ಮೇಲಧಿಕಾರಿಗಳು ಕಳೆದ ವರ್ಷ 1ನೇ ತರಗತಿಗೆ ದಾಖಲಾತಿ ಪ್ರಕ್ರಿಯೆ ನಡೆಸದಂತೆ ಮೌಖಿಕ ಆದೇಶ ನೀಡಿದ್ದಾರೆ. ಪ್ರಸಕ್ತ ಶೈಕ್ಷಣಿಕ ಸಾಲಿನಲ್ಲಿಯೂ 2ನೇ ತರಗತಿಗೂ ಅಧಿಕಾರಿಗಳ ಮೌಖಿಕ ಆದೇಶ ಪಾಲನೆ ಆಗಿದೆ. ಮುಂದಿನ ವರ್ಷ ಮತ್ತೊಂದು ತರಗತಿಗೆ ಇತಿಶ್ರೀ ಹಾಡಲಾಗುತ್ತದೆ.ಅಲ್ಲಿಗೇ ಇಲಾಖೆ ಹೊರಡಿಸಿದ 50ಕ್ಕಿಂತ ಕಡಿಮೆ ಮಕ್ಕಳ ಸಂಖ್ಯೆಗೆ ಸರಿ ಹೊಂದುತ್ತದೆ. ಅದನ್ನೇ ನೆಪವಾಗಿಟ್ಟುಕೊಂಡು, ಶಾಲೆಯ ಕದ ಮುಚ್ಚುವುದು ಸಲೀಸು ಎನ್ನುವುದು ಇಲಾಖೆ ಅಧಿಕಾರಿಗಳ ಯೋಚನೆಯಾಗಿದೆ ಎಂಬ ಮಾತು ಕೇಳಿಬಂದಿದೆ.ಶಾಲೆಗೆ 1998ರಲ್ಲಿ ಸುಸಜ್ಜಿತ ಕಟ್ಟಡ ನಿರ್ಮಿಸಲಾಗಿದೆ. ಬೋಧಕ- ಬೋಧಕೇತರ ಸಿಬ್ಬಂದಿ ನೇಮಿಸಲಾಗಿದೆ. ಆದರೂ, ಹಂತ- ಹಂತವಾಗಿ ಶಾಲೆ ಮುಚ್ಚುವ ಯತ್ನ ಸಾಗಿರುವುದರಿಂದ, ನೂರಾರು ವಲಸೆ ಕುಟುಂಬದ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಇದನ್ನು ವಿರೋಧಿಸಿ ಚಳವಳಿ ರೂಪಿಸಲಾಗುವುದು ಎಂದು ಎನ್‌ಎಸ್‌ಯುಐ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಶಿವಕುಮಾರನಾಯ್ಕ ತಿಳಿಸಿದರು.ದಾಖಲಾತಿ ಕೊರತೆ ಇರದಿದ್ದರೂ, ಕೃತಕ ಕೊರತೆ ಸೃಷ್ಟಿಸಿ ಶಾಲೆ ಮುಚ್ಚಲು ಮುಂದಾಗಿರುವುದು ಮೇಲಧಿಕಾರಿಗಳ ಅವೈಜ್ಞಾನಿಕ ನೀತಿ ಎಂಬ ಅನಿಸಿಕೆ ಕೆಲ ಪೋಷಕರದ್ದು.`ಕಳೆದ ವರ್ಷ ಮಂಜೂರಾಗಿದ್ದ ಮೊರಾರ್ಜಿ ದೇಸಾಯಿ, ಅಟಲ್ ಬಿಹಾರಿ ವಾಜಪೇಯಿ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಮಾದರಿ ವಸತಿಶಾಲೆ ಸೇರಿದಂತೆ 74 ವಸತಿಶಾಲೆ ರದ್ದುಪಡಿಸದಿರಲು ಇಲಾಖೆ ಮುಂದಾಗಿದೆ. ಆದರೆ, 1ರಿಂದ 5ನೇ ತರಗತಿವರೆಗೂ ಇಲಾಖೆ ಅಧೀನದಲ್ಲಿ ನಡೆಯುತ್ತಿರುವ ಸರ್ಕಾರಿ ವಸತಿಶಾಲೆ ಮುಚ್ಚಲು ಹೊರಡಿಸಿರುವ ಆದೇಶ ಇದಕ್ಕೆ ಅನ್ವಯ ಆಗುವುದಿಲ್ಲ. ಹೀಗಾಗಿ ಶಾಲೆ ಮುಚ್ಚುವ ಆದೇಶ ಜಾರಿ ಬಹುತೇಕ ಖಚಿತ' ಎಂದು ಸಮಾಜ ಕಲ್ಯಾಣಾಧಿಕಾರಿ ಸಿ.ತಿಪ್ಪೇಸ್ವಾಮಿ ಪ್ರತಿಕ್ರಿಯಿಸಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.