ಭಾನುವಾರ, ಡಿಸೆಂಬರ್ 8, 2019
25 °C

ಕನಸುಗಳೇ ಇಲ್ಲದ ರಾಜಕಾರಣಿಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನಸುಗಳೇ ಇಲ್ಲದ ರಾಜಕಾರಣಿಗಳು

ಮೈಸೂರು: `ಕವಿಗಳಿಗೆ ಕನಸುಗಳಿವೆ, ಆದರೆ ಅಧಿಕಾರವಿಲ್ಲ. ರಾಜಕಾರಣಿಗಳಿಗೆ ಅಧಿಕಾರವಿದೆ, ಕನಸುಗಳೇ ಇಲ್ಲ~ ಎಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ಶನಿವಾರ ಮಾರ್ಮಿಕವಾಗಿ ಹೇಳಿದರು. ದಸರಾ ಕವಿಗೋಷ್ಠಿ ಉಪಸಮಿತಿಯು ಮಹಾರಾಜ ಕಾಲೇಜು ಶತಮಾನೋತ್ಸವ ಭವನದಲ್ಲಿ ಆಯೋಜಿಸಿದ್ದ ದಸರಾ ಕವಿಗೋಷ್ಠಿ ಉದ್ಘಾಟಿಸಿದ ಅವರು ಕೊನೆಯಲ್ಲಿ ಸಭಿಕರ ಒತ್ತಾಯದಿಂದಾಗಿ `ಮರತೇನಂದರ ಮರೆಯಲಿ ಹ್ಯಾಂಗ, ಮಾವೋತ್ಸೇತುಂಗ~ ಎನ್ನುವ ತಮ್ಮ ಕವಿತೆಯನ್ನು ಹಾಡುವ ಮುನ್ನ ಪೂಕರವಾಗಿ ಮೇಲಿನ ಮಾತುಗಳನ್ನಾಡಿದರು. ಇದಕ್ಕೆ ಸಭಿಕರಿಂದ ದೊಡ್ಡ ಚಪ್ಪಾಳೆ ಸಿಕ್ಕಿತು. ವೇದಿಕೆಯಲ್ಲಿದ್ದ  ರಾಜಕಾರಣಿಗಳು ಮಾತ್ರ ಪೆಚ್ಚು ಮೋರೆ ಹಾಕಿದರು.ಮಾತು ಮುಂದುವರಿಸಿದ ಕಂಬಾರರು `ಕವಿಗಳಲ್ಲಿ ಕನಸುಗಳಿವೆ, ಅಧಿಕಾರವಿಲ್ಲ. ಇದರಿಂದ ಕವಿಗಳು ಏನೂ ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಆದರೆ ರಾಜಕಾರಣಿಗಳ ಬಳಿ ಅಧಿಕಾರವಿದೆ, ಅವರಿಗೆ ಕನಸುಗಳು ಇಲ್ಲದಿರುವುದರಿಂದ ಉಪಯೋಗವಾಗುತ್ತಿಲ್ಲ. ಆದರೆ ಮಾವೋತ್ಸೆತುಂಗ್‌ನ ಬಳಿ  ಕನಸುಗಳೂ ಇದ್ದವು, ಅಧಿಕಾರವೂ ಇತ್ತು. ಆದರೆ ಆತನಿಂದಲೂ ಏನನ್ನೂ ಮಾಡಲಾಗಲಿಲ್ಲ~ ಎಂದರು.ಮುಖ್ಯ ಅತಿಥಿಯಾಗಿದ್ದ ಕವಿ ಡಾ.ಎಚ್.ಎಸ್.ವೆಂಕಟೇಶಮೂರ್ತಿ ಅವರು ಚಂದ್ರಶೇಖರ ಕಂಬಾರರ ಮಾತನ್ನು ಅನುಮೋದಿಸುವಂತೆ ಮಾತನಾಡಿ, `ನಮ್ಮ ಬಹುತೇಕ ರಾಜಕಾರಣಿಗಳು ಕನಸಿನ ಪೂರ್ವ ಸ್ಥಿತಿ (ನಿದ್ರೆ)ಯಲ್ಲಿದ್ದಾರೆ. ಸಭೆ, ಸಮಾರಂಭ, ವಿಧಾನಸಭೆ, ಸಂಸತ್‌ನಲ್ಲಿ ನಿದ್ರಿಸುತ್ತಿರುತ್ತಾರೆ. ರಾಜಕಾರಣಿಗಳಿಗೆ ಅಲ್ಲಿಯಾದರೂ ಕನಸುಗಳು ಬೀಳಲಿ. ಆ ಕನಸುಗಳು ರಾಜ್ಯ, ದೇಶವನ್ನೂ ತಲುಪಲಿ~ ಎಂದರು.ಇದೇ ಸಮಾರಂಭದಲ್ಲಿ ದಸರಾ ಮಹೋತ್ಸವ-2011 ಪರವಾಗಿ ಡಾ.ಚಂದ್ರಶೇಖರ ಕಂಬಾರ, ಪತ್ನಿ ಸತ್ಯಭಾಮ ಕಂಬಾರ ಅವರನ್ನು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎ.ರಾಮದಾಸ್, ಮೇಯರ್ ಪುಷ್ಪಲತಾ ಟಿ.ಬಿ.ಚಿಕ್ಕಣ್ಣ, ಶಾಸಕ ಎಚ್.ಎಸ್.ಶಂಕರಲಿಂಗೇಗೌಡ ಸನ್ಮಾನಿಸಿದರು.

ಪ್ರತಿಕ್ರಿಯಿಸಿ (+)