ಶುಕ್ರವಾರ, ಜನವರಿ 24, 2020
17 °C

ಕನ್ನಡಕ್ಕೆ ಅಗೌರವ

–ಪ್ರೊ. ಮುಮ್ತಾಜ್‌ ಅಲಿ ಖಾನ್,ಬೆಂಗಳೂರು Updated:

ಅಕ್ಷರ ಗಾತ್ರ : | |

ಕನ್ನಡ ಭಾಷೆಗೆ ಸಲ್ಲಿಸುತ್ತಿರುವ ಅಗೌರವ, ಅವಮಾನಕ್ಕೆ ಕೊನೆಯೇ ಇಲ್ಲ ಎಂಬುದು ಎದ್ದು ಕಾಣುತ್ತಿದೆ. ರಾಜಕೀಯ ಪಕ್ಷಗಳೂ, ಕನ್ನಡದ ಪರ ಹೋರಾಟ ಮಾಡುತ್ತಿರುವವರೂ, ಸಾಹಿತಿಗಳೂ, ಸಾಹಿತ್ಯ ಪರಿಷತ್ತು, ಕನ್ನಡ ಅಭಿವೃದ್ಧಿ ಪ್ರಾಧಿಕಾರ ಇವೆಲ್ಲವೂ ಮೊಸಳೆ ಕಣ್ಣೀರಿಡುತ್ತಿರುವುದು ನಿಜವಲ್ಲವೇ?ಕೋಟ್ಯಂತರ ಹಣ ಸರ್ಕಾರದ ಬೊಕ್ಕಸದಿಂದ ಖಾಲಿಯಾಗುತ್ತಿದೆಯೇ ಹೊರತು ಸಕಾರಾತ್ಮಕ ಪರಿಣಾಮದ ನೆರಳನ್ನು ನಾವು ಕಾಣುತ್ತಿಲ್ಲ.ಸತ್ಯ ಶೋಧನೆ  ಏನೂ ಬೇಕಾಗಿಲ್ಲ. ಏಕೆಂದರೆ ಅವಾಂತರ ಎದ್ದು ಕಾಣುತ್ತಿದೆ. ಆಂಗ್ಲ ಮಾಧ್ಯಮ ಶಾಲೆಗಳ ಬಳಿ ಒಂದು ತಾಸು ಶಾಂತಿಯಿಂದ ಮಕ್ಕಳನ್ನು ಭೇಟಿಯಾಗಿ ಮೂರು ಮುಖ್ಯ ಪ್ರಶ್ನೆಗಳನ್ನು ಹಾಕಿ.ನಿಮ್ಮ ಶಾಲೆ ಯಾವುದು? ಶಿಕ್ಷಣದ ಮಾಧ್ಯಮ ಯಾವುದು? ಕನ್ನಡದಲ್ಲಿ ಓದಲು, ಬರೆಯಲು ಸಾಧ್ಯವೇ? ಬಹುತೇಕ ಉತ್ತರ ಬರುವುದು, ಇಂಗ್ಲಿಷ್ ಭಾಷೆಯಲ್ಲಿ.ಈ ಶಾಲೆಗಳಲ್ಲಿ ಕನ್ನಡಕ್ಕೆ ಮೋಸ ಆಗುತ್ತಿದೆ ಎಂಬುದರಲ್ಲಿ  ಸಂಶಯವಿಲ್ಲ. ಈ ಶಾಲೆಗಳ ಆಡಳಿತ ಮಂಡಳಿಯವರು ಸರ್ಕಾರದಿಂದ ಪಡೆದಿರುವುದು ಕನ್ನಡ ಮಾಧ್ಯಮಕ್ಕೆ ಅನುಮತಿ.  ಆದರೆ ವಾಸ್ತವವಾಗಿ ಜಾರಿಯಲ್ಲಿರುವುದು ಆಂಗ್ಲ ಭಾಷೆ. ನಾನು ಕೆಲವು ಪ್ರಾಮಾಣಿಕ ಶಿಕ್ಷಕರನ್ನು ಭೇಟಿಯಾಗಿ ರಹಸ್ಯವನ್ನು ತಿಳಿಯಲು ಪ್ರಯತ್ನಿಸಿ ಸಫಲನಾದೆ. ಶಾಲೆ ಆಡಳಿತ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಹೊಂದಾಣಿಕೆ­ಯಿಂದ ಕನ್ನಡಕ್ಕೆ ವಂಚನೆ ಆಗುತ್ತಿದೆ. ಶಾಲೆಯಲ್ಲಿ ಎರಡು ತರಹದ ಪಠ್ಯ ಪುಸ್ತಕಗಳನ್ನು ಇಟ್ಟಿದ್ದಾರೆ.ಶಾಲೆಗೆ ಹಿರಿಯ ಅಧಿಕಾರಿಗಳು ಬರುತ್ತಿದ್ದಾರೆಂದು ಕಿರಿಯ ದರ್ಜೆಯ ವೀಕ್ಷಕರು ದೂರವಾಣಿ ಮೂಲಕ ಶಾಲೆಯ ಮುಖ್ಯಸ್ಥರಿಗೆ ಸಂದೇಶ ಕೊಡುವರು.  ಆಗ ತಕ್ಷಣವೇ ಆಂಗ್ಲ ಭಾಷೆಯಲ್ಲಿರುವ ಪುಸ್ತಕಗಳು ಮಾಯ, ಕನ್ನಡದಲ್ಲಿರುವ ಪುಸ್ತಕಗಳು ಪ್ರತ್ಯಕ್ಷ. ಪರೀಕ್ಷೆ ಸಮಯದಲ್ಲಿಯೂ ಇದೇ ನಾಟಕ. ಇದನ್ನು ಮಟ್ಟ ಹಾಕಲು ಸಾಧ್ಯವಿಲ್ಲವೇ?‘ಮುಖ್ಯಮಂತ್ರಿ’ ಚಂದ್ರು ಅವರ ಪರಮ ಕೆಲಸ ಇದು. ಬಹು ಸುಲಭವಾಗಿ ಮೋಸಗಾರರನ್ನು ಪತ್ತೆ ಹಚ್ಚಬಹುದು. ಇಲ್ಲದೆ ಹೋದರೆ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಬೇಡವೇ ಬೇಡ. ಶಿಕ್ಷಣ ಇಲಾಖೆಯ ಸಂಬಂಧ ಪಟ್ಟ ಅಧಿಕಾರಿಗಳನ್ನು ಶಿಕ್ಷೆಗೆ ಗುರಿ ಮಾಡಬೇಕು.ಸಾಧ್ಯವಾಗದೆ ಇದ್ದರೆ ಬಹಿರಂಗವಾಗಿ ಆಂಗ್ಲ ಭಾಷೆಯನ್ನು ಸ್ವಾಗತಿಸಿ. ಇದಕ್ಕೆಲ್ಲ ಮುಖ್ಯವಾಗಿ ಒಂದೇ ಕಾರಣ ಲಂಚ. ಸರ್ಕಾರ ಕಣ್ಣು ಮುಚ್ಚಿ ಕೂಡುವುದು ಅಪರಾಧವಲ್ಲವೇ? ಜನರಿಗೆ ಉತ್ತರ ಬೇಕು.

  

ಪ್ರತಿಕ್ರಿಯಿಸಿ (+)