ಭಾನುವಾರ, ಮೇ 22, 2022
24 °C

ಕನ್ನಡತನವೆಲ್ಲ ಕೇವಲ ಬೊಗಳೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಯಾ ರಾಜ್ಯದ ಭಾಷೆಯಲ್ಲಿ ಆಡಳಿತ, ವ್ಯವಹಾರ ನಡೆಯಬೇಕೆಂಬ ಘನ ಉದ್ದೇಶದಿಂದ ಸಂವಿಧಾನಬದ್ಧವಾಗಿ ಭಾಷಾವಾರು ಪ್ರಾಂತ ರಚನೆಯಾಗಿದೆ. ಆದ್ದರಿಂದ ರಾಜ್ಯ ಸಭೆಗೋ, ಲೋಕಸಭೆಗೋ, ವಿಧಾನ ಸಭೆಗೋ ಅಥವಾ ಯಾವುದೇ ಸ್ಥಳೀಯ ಆಡಳಿತ ಮಂಡಳಿಗೆ ಆಯ್ಕೆಯಾಗುವ ಪ್ರತಿನಿಧಿಗಳು ಕನ್ನಡ ಬಲ್ಲ, ಕನ್ನಡಿಗರಾಗಿರಬೇಕಾದುದು ಸರ್ವಥಾ ನ್ಯಾಯ. ಇದರಲ್ಲಿ ಯಾವ ಸಂಕೋಚ  ಮುಜುಗರ ಹೊಂದಾಣಿಕೆಗೆ ಅವಕಾಶವಿಲ್ಲ. ಕರ್ನಾಟಕದಲ್ಲಿ ಈಗಾಗಲೇ ಕನ್ನಡವರಿಯದವರನ್ನು ಒಂದಲ್ಲ, ಎರಡನೆ ಬಾರಿಗೂ ರಾಜ್ಯ ಸಭೆಗೆ ಆಯ್ಕೆ ಮಾಡಿದರು. ಆಗಲೇ ಎಚ್ಚರಗೊಳ್ಳಬೇಕಿದ್ದ ಕನ್ನಡಿಗರು ತಿಳಿದೂ ತಿಳಿಯದಂತೆ ಮೌನವಾದರು. ಈಗ ಇನ್ನೊಬ್ಬರು ಕನ್ನಡಿಗರಲ್ಲದ ಸಿನಿಮಾ ನಟಿಯನ್ನು ಕೇವಲ ಮುಂದಿನ ಚುನಾವಣೆಗಳ ಪ್ರಚಾರಕ್ಕೆ ಬಳಸಿಕೊಳ್ಳುವ ಕಾರಣಕ್ಕಾಗಿ ರಾಜ್ಯ ಸಭೆಗೆ  ಉಮೇದುವಾರರಾಗಿ ಮಾಡಿರುವುದು ಖಂಡಿತವಾಗಿ ನ್ಯಾಯವೆನಿಸುವುದಿಲ್ಲ. ಯೋಗ್ಯ ಕನ್ನಡಿಗರೊಬ್ಬರಿಗೆ ಸಿಗಬೇಕಾದ ಸ್ಥಾನವಿದು. ಈ ಸ್ಥಾನಕ್ಕೆ ಅರ್ಹರಾದವರು ಕರ್ನಾಟಕದಲ್ಲಿ ಯಾರೂ ಇಲ್ಲವೆ? ಕನ್ನಡ ಕನ್ನಡವೆಂದು ಬೊಬ್ಬಿರಿಯುವ ರಾಜಕಾರಣಿಗಳಿಗೆ ನ್ಯಾಯೋಚಿತ ಪ್ರಜಾರಕ್ಷಣೆಗಿಂತ ಪಕ್ಷರಕ್ಷಣೆಯೇ ಮೇಲೆನಿಸಿತೆ? ಇಂತಹ ನಿರಭಿಮಾನಿಗಳಿಂದ, ಕನ್ನಡದ ಉದ್ಧಾರ ಸಾಧ್ಯವೆ? ಸಮ್ಮೇಳನಗಳಲ್ಲಿ ಕನ್ನಡದ ಕಹಳೆ ಆಡಳಿತದಲ್ಲಿ ಇನ್ನಿರದ ಬೊಗಳೆ! ಕನ್ನಡಿಗರಲ್ಲದಿದ್ದರೂ ‘ಭಾರತೀಯ’ ಅಲ್ಲವೇ ಎಂಬ ‘ವಿಶ್ವವಿಶಾಲ’ ಭಾವನೆಯ ಮೊಂಡುವಾದವಾದರೆ ಕರ್ನಾಟಕವೆಂಬ ರಾಜ್ಯವೇಕೆ ಬೇಕಿತ್ತು?


 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.