ಶನಿವಾರ, ಜನವರಿ 25, 2020
27 °C

ಕನ್ನಡದಲ್ಲಿ ನೋಟಿಸ್: ತಾ.ಪಂ. ಸಭೆಯಲ್ಲಿ ಎಂಇಎಸ್ ಸದಸ್ಯರ ಕ್ಯಾತೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ: ಮರಾಠಿಯಲ್ಲಿ ನೀಡಿದ ಸಭೆಯ ನಡಾವಳಿ ದೋಷಪೂರಿತವಾಗಿದೆ ಎಂದು ಆರೋಪಿಸಿದ  ಮಹಾರಾಷ್ಟ್ರ ಏಕೀಕರಣ ಸಮಿತಿ ಸದಸ್ಯರು ಕರ್ನಾಟಕ ಸರ್ಕಾರದ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ ಘಟನೆ ಇಲ್ಲಿನ ತಾಲ್ಲೂಕು ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ಮಂಗಳವಾರ  ನಡೆಯಿತು.ಬೆಳಿಗ್ಗೆ ಸಭೆ ಆರಂಭ ಆಗುತ್ತಿದ್ದಂತೆಯೇ ಎಂಇಎಸ್ ಪರ ಸದಸ್ಯರು, ತಮಗೆ ಮರಾಠಿ ಭಾಷೆಯಲ್ಲಿ ನೀಡಿದ ನೋಟಿಸ್ ಹಾಗೂ ಹಿಂದಿನ ಸಭೆಯ ನಡಾವಳಿಗಳಲ್ಲಿ ಹಲವು ದೋಷಗಳಿವೆ ಎಂದು ಗದ್ದಲ ಎಬ್ಬಿಸಿದರು. ತಾ.ಪಂ. ಅಧಿಕಾರಿಗಳ ವಿರುದ್ಧ ಕೆಲವು ಸದಸ್ಯರು ಹರಿಹಾಯ್ದರು.ಈ ಸಂದರ್ಭದಲ್ಲಿ ಮಾತನಾಡಿದ ಸದಸ್ಯ ಪ್ರತಾಪ ಕುಳೆ, `ನನಗೆ ಕನ್ನಡದಲ್ಲಿ ಸಭೆಯ ನೋಟಿಸ್ ನೀಡಿದ್ದೀರಿ. ಕನ್ನಡ ಭಾಷೆ ಚಕ್ಕುಲಿಯಂತೆ ಕಾಣುತ್ತದೆ. ನಮಗೆ ಈ ಭಾಷೆ ಅರ್ಥವಾಗುವುದಿಲ್ಲ ಎಂದು ಹೇಳಿದರೂ ಮತ್ತೆ ಮತ್ತೆ ಕನ್ನಡದಲ್ಲೇ ನೋಟಿಸ್ ನೀಡಿದ್ದೀರಿ` ಎಂದು ಆಕ್ರೋಶ ವ್ಯಕ್ತಪಡಿಸಿದರು.`ಹಿಂದಿನ ಸಭೆಯ ನಡಾವಳಿಯನ್ನು ತಪ್ಪು ತಪ್ಪಾಗಿ ಕೈಯಲ್ಲಿ ಬರೆದು ಸದಸ್ಯರಿಗೆ ನೀಡಿದ್ದೀರಿ. ಟೈಪ್ ಮಾಡಿಸಲು ಕರ್ನಾಟಕ ಸರ್ಕಾರದ ಬಳಿ ಹಣ ಇಲ್ಲವೇ? ರಾಜ್ಯ ಸರ್ಕಾರಕ್ಕೆ ಭಿಕ್ಷೆ ಬೇಡುವ ಸ್ಥಿತಿ ಬಂದಿದೆಯೇ? ಆ ಸ್ಥಿತಿ ಇದೆ ಎಂದಾದರೆ, ನಮ್ಮ ಸದಸ್ಯರ ಗೌರವಧನವನ್ನು ನೀಡುತ್ತೇವೆ, ಮರಾಠಿಯಲ್ಲೇ ಟೈಪ್ ಮಾಡಿಸಿಕೊಡಿ` ಎಂದು ಪ್ರತಾಪ ಕುಳೆ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.ಇನ್ನೊಬ್ಬ ಸದಸ್ಯ ಸುರೇಶ ರಾಜುಕರ, `ಹಲವು ವರ್ಷಗಳಿಂದ ಮರಾಠಿಯಲ್ಲೇ ಮಾಹಿತಿ ನೀಡಿ ಎಂದು ನಾವು ಮನವಿ ಮಾಡುತ್ತಿದ್ದರೂ ಪರಿಗಣಿಸುತ್ತಿಲ್ಲ.  ಹಿಂದಿನ ಸಭೆಯ ನಡಾವಳಿಯ ಮರಾಠಿ ಅನುವಾದ ತಪ್ಪಾಗಿದೆ. ಕಾಟಾಚಾರಕ್ಕೆ ಮರಾಠಿಗೆ ಅನುವಾದ ಮಾಡಿಸಲಾಗುತ್ತಿದೆ` ಎಂದು ಆಕ್ರೋಶ ವ್ಯಕ್ತಪಡಿಸಿದಾಗ, ಹಲವು ಎಂಇಎಸ್ ಪರ ಸದಸ್ಯರು ಧ್ವನಿಗೂಡಿಸಿದರು.ಆಗ ಮಧ್ಯ ಪ್ರವೇಶಿಸಿದ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎ.ಎಂ. ಹುದ್ದಾರ, ಆಗಿರುವ ಪ್ರಮಾದಕ್ಕೆ  ಕ್ಷಮೆಯಾಚಿಸಿ, 15 ದಿನಗಳಲ್ಲಿ ಎಲ್ಲ ಸದಸ್ಯರಿಗೆ ಕನ್ನಡ ಹಾಗೂ ಮರಾಠಿ ಭಾಷೆಯಲ್ಲಿ ನಡಾವಳಿಗಳನ್ನು ತಲುಪಿಸಲಾಗುವುದು ಎಂದರು.ಸಭೆಯಲ್ಲಿ ಪ್ರೊಬೆಷನರಿ ಐಎಎಸ್ ಅಧಿಕಾರಿ ವಿಜಯಾ ಜೋತ್ಸ್ನಾ, ತಹಶೀಲ್ದಾರ ಎ.ಎಚ್. ಆಲೂರ ಹಾಜರಿದ್ದರು.

 

ಪ್ರತಿಕ್ರಿಯಿಸಿ (+)