ಮಂಗಳವಾರ, ಏಪ್ರಿಲ್ 20, 2021
26 °C

ಕನ್ನಡಮ್ಮನ ಮಕ್ಕಳಿಗೆ ಹೀಗಾಗಬಾರದಾಗಿತ್ತು!

ವಾಮನರಾವ್, ತುಮಕೂರು Updated:

ಅಕ್ಷರ ಗಾತ್ರ : | |

ತಾ. 29.10.2012ರ ಪತ್ರಿಕೆಯಲ್ಲಿ `ಇಂಗ್ಲಿಷ್ ಕಲಿಕೆ ಬೇಡ ತಪ್ಪುಗ್ರಹಿಕೆ~ ಓದಿದೆ. 1931 ರಲ್ಲಿ ಮೈಸೂರು ಸಂಸ್ಥಾನದ ಆಡಳಿತದಲ್ಲಿ ಎಲ್ಲ 6243 ಪ್ರಾಥಮಿಕ ಶಾಲೆಗಳು 2,47,191 ವಿದ್ಯಾರ್ಥಿಗಳಿಗೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುವ ವ್ಯವಸ್ಥೆ ಇತ್ತು. ಮಿಶನರಿ ಶಾಲೆಗಳನ್ನು ಬಿಟ್ಟರೆ ಎಲ್ಲ 991 ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡ ಮಾಧ್ಯಮದ ಶಾಲೆಗಳೇ ಆಗಿದ್ದವು.ಈ ಶಾಲೆಗಳ ಜೊತೆಗೆ ಉರ್ದು, ಸಂಸ್ಕೃತ, ತೆಲುಗು ಮಾಧ್ಯಮದ ಪ್ರಾಥಮಿಕ ಶಾಲೆಗಳಿದ್ದವು. ಇಂದು ಬಹುತೇಕ ಖಾಸಗಿ ಶಾಲೆಗಳು ಇಂಗ್ಲಿಷ್ ಮಾಧ್ಯಮ ಶಾಲೆಗಳೇ ಆಗಿರುವುದು ದುರಂತ.ಸೆಕೆಂಡರಿ ಶಿಕ್ಷಣ ವ್ಯವಸ್ಥೆಯಲ್ಲಿ ಎರಡು ರೀತಿಯ ಶಿಕ್ಷಣ ಸಂಸ್ಥೆಗಳಿದ್ದು ಅವುಗಳಲ್ಲಿ ಒಂದನೇ ರೀತಿಯ ಶಿಕ್ಷಣ ಸಂಸ್ಥೆಗಳನ್ನು ಲೋಯರ್ ಸೆಕೆಂಡರಿ ಶಾಲೆಗಳೆಂದೂ, ಎರಡನೆ ರೀತಿಯ ಶಾಲೆಗಳನ್ನು ಹೈಯರ್ ಸೆಕೆಂಡರಿ ಶಾಲೆಗಳೆಂದೂ ಕರೆಯುತ್ತಿದ್ದರು.ಈ ಲೋಯರ್ ಮತ್ತು ಹೈಯರ್ ಸೆಕೆಂಡರಿ ಶಿಕ್ಷಣ ವ್ಯವಸ್ಥೆಯ ಅವಧಿಯು ಕ್ರಮವಾಗಿ 4 ಮತ್ತು 3 ವರ್ಷಗಳಾಗಿತ್ತು. ಈ ಎರಡೂ ಹಂತದ ಶಿಕ್ಷಣ ವ್ಯವಸ್ಥೆಯ ಕೊನೆಯ ವರ್ಷದಲ್ಲಿ ಪಬ್ಲಿಕ್ ಪರೀಕ್ಷೆಯನ್ನು ಏರ್ಪಡಿಸುತ್ತಿದ್ದರು.ಸೆಕೆಂಡರಿ ಶಿಕ್ಷಣವನ್ನು ಆರು ಬಗೆಯ ಶಿಕ್ಷಣ ಶಾಲೆಗಳಿಂದ ಒದಗಿಸುತ್ತಿದ್ದು, ಅವುಗಳೆಂದರೆ ವರ್ನ್ಯಾಕ್ಯುಲರ್ ಮಿಡಲ್ ಸ್ಕೂಲ್, ಆಂಗ್ಲೋ ವರ್ನ್ಯಾಕ್ಯುಲರ್ ಸ್ಕೂಲ್, ರೂರಲ್ ವರ್ನ್ಯಾಕ್ಯುಲರ್ ಸ್ಕೂಲ್, ಸ್ಕೂಲ್ ಫಾರ್ ಯುರೋಪಿಯನ್ಸ್ ಮತ್ತು ಆಂಗ್ಲೋ ಇಂಡಿಯನ್ಸ್, ಇಂಗ್ಲಿಷ್ ಹೈಸ್ಕೂಲ್, ಕನ್ನಡ ಹೈಸ್ಕೂಲ್.1931ರಲ್ಲಿ ಒಟ್ಟು 366 ಸೆಕೆಂಡರಿ ಶಾಲೆಗಳಲ್ಲಿ 4 ಶಾಲೆಗಳು ಮಾತ್ರ ಕನ್ನಡ ಮಾಧ್ಯಮದ ಶಾಲೆಗಳಾಗಿದ್ದವು. ಈ ಎಲ್ಲ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮದಲ್ಲಿ ಓದುವವರ ವಿದ್ಯಾರ್ಥಿಗಳ ಪ್ರಮಾಣವು 40,957 (ಶೇ 99.4) ಮತ್ತು ಕನ್ನಡ ಮಾಧ್ಯಮದಲ್ಲಿ ಓದುತ್ತಿರುವವರ ಮಕ್ಕಳ ಸಂಖ್ಯೆ 251 (ಶೇ 0.6) ಮಾತ್ರ.ಅಂದಿನ ಶಿಕ್ಷಣ ವ್ಯವಸ್ಥೆಯಿಂದ ಕನ್ನಡ ಭಾಷೆಗೆ ಯಾವುದೇ ರೀತಿಯ ಕುತ್ತು ಬರಲೇ ಇಲ್ಲ. 2012ರ ಸಿಇಟಿಯಲ್ಲಿ  ಶೇ 70 ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ಓದಿದವರು ಪಡೆದ ಸೀಟುಗಳ ಪ್ರಮಾಣ ಕೇವಲ ಶೇ 10 ರಷ್ಟಾದರೆ, ಶೇ 30ರಷ್ಟು ವಿದ್ಯಾರ್ಥಿಗಳು ಇಂಗ್ಲಿಷ್ ಮಾಧ್ಯಮದಲ್ಲಿ ಓದಿದವರು ಪಡೆದ ಸೀಟುಗಳ ಪ್ರಮಾಣ ಶೇ 90 ರಷ್ಟು. ಇದು ಕನ್ನಡಮ್ಮನ ಮಕ್ಕಳಿಗೆ ಆದ ಅನ್ಯಾಯ ಅಲ್ಲವೆ?5ನೇ ತರಗತಿಯಿಂದ ಇಂಗ್ಲಿಷ್ ಕಲಿಕೆ, ಪರೀಕ್ಷೆ ಕಡ್ಡಾಯ. ಕರ್ನಾಟಕದ ಈ ಭಾಷಾ ನೀತಿಯನ್ನು ಸುಪ್ರೀಂಕೋರ್ಟ್‌ಪ್ರಶಂಸಿಸಿ 1993ರಲ್ಲಿ ಅನುಮೋದಿಸಿತು. ಸರ್ಕಾರ ತನ್ನ ಭಾಷಾ ನೀತಿಯನ್ನು ಅಂತಿಮವಾಗಿ 1994ರಲ್ಲಿ ರೂಪಿಸಿತು. ಅದರ ಪ್ರಕಾರ 1ರಿಂದ 5ವರೆಗೆ ಮಾತ್ರ ಮಾತೃಭಾಷೆ ಕಡ್ಡಾಯ ಶಿಕ್ಷಣ ಮಾಧ್ಯಮ.

 

ತಮ್ಮ ಕುಡಿಗಳನ್ನು ಇಂಗ್ಲಿಷ್ ಮಾಧ್ಯಮದಲ್ಲಿ ಓದಿಸುತ್ತಾ ಕನ್ನಡ ಪರ ಮಾತನಾಡುವ ಈ ನಕಲಿ ಕನ್ನಡ ಅಭಿಮಾನಿಗಳು ಮೌನವಾಗಿದ್ದರೆ ಅವರಿಗೆ ನನ್ನದೊಂದು ದೊಡ್ಡ ಸಲಾಮು. ಬಿಟ್ಟಿ ಉಪದೇಶ ಬೇಡ; ನಿಲ್ಲಿಸಿ. ನನ್ನ ಎರಡೂ ಮಕ್ಕಳು ಕನ್ನಡ ಮಾಧ್ಯಮದಲ್ಲಿ ಓದಿದ್ದಾರೆ, ಓದುತ್ತಿದ್ದಾರೆ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.