ಗುರುವಾರ , ಏಪ್ರಿಲ್ 15, 2021
27 °C

ಕನ್ನಡ ಕಾವ್ಯ ಕಣಜ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಎದೆ ತುಂಬಿ ಹಾಡಿದೆನು ಅಂದು ನಾನು

ಮನವಿಟ್ಟು ಕೇಳಿದಿರಿ ಅಲ್ಲಿ ನೀವು

ಇಂದು ನಾ ಹಾಡಿದರು ಅಂದಿನಂತೆಯೆ ಕುಳಿತು

ಕೇಳುವಿರಿ ಸಾಕೆನಗೆ ಅದುವೆ ಬಹುಮಾನ

ಹಾಡುಹಕ್ಕಿಗೆ ಬೇಕೆ ಬಿರುದು ಸನ್ಮಾನ?ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪ ಅವರ ಎದೆತುಂಬಿ ಹಾಡುವ `ಗುರುಗಾನ~ಕ್ಕೆ ತಲೆದೂಗದವರಾರು? ಇದು ಶಿಷ್ಯನ ವಿನಯ ಹಾಗೂ ಆತ್ಮವಿಶ್ವಾಸದ ಗೀತೆ ಮಾತ್ರವಲ್ಲ, ತಮ್ಮ ಎದೆಯ ಗಾನಕ್ಕೆ ಓಗೊಡುವ ಎಲ್ಲ ಕಲಾವಿದರ ದನಿಯೂ ಹೌದು. ಹೀಗೆ, ತಮ್ಮಷ್ಟಕ್ಕೆ ತಾವು ಹಾಡು ಗುನುಗುತ್ತ, ಕವಿತೆ ಆಸ್ವಾದಿಸುತ್ತ, ಇಷ್ಟದ ಗೀತೆ-ಕವಿತೆಗಳನ್ನೆಲ್ಲ ಸಹೃದಯರೊಬ್ಬರು ಕಲೆ ಹಾಕಿರುವ ಬ್ಲಾಗ್- `ಕನ್ನಡ ಕಾವ್ಯ ಕಣಜ~ ((kannadakavyakanaja.blogspot.in ).`ಕನ್ನಡ ಕಾವ್ಯ ಕಣಜ~ದ ಬ್ಲಾಗಿತಿ ತಮ್ಮನ್ನು `ಕನಸು~ ಎಂದು ಕರೆದುಕೊಂಡಿದ್ದಾರೆ. ಅದೇನು ಇಹದ ಕನಸೋ ಪರದ ಸ್ವಪ್ನವೋ ಹೇಳಬಲ್ಲವರಾರು? `ಒಂದು ಮಾದರಿ ಕನಸು~ ಎಂದಂತೂ ಹೇಳಬಹುದು. ಇಷ್ಟಂತೂ ನಿಜ, ಅವರು ಗುಡ್ಡೆ ಹಾಕಿರುವ ಕನ್ನಡದ ಪದ್ಯಗಳಿಗೆ ಸಹೃದಯರನ್ನು ಸ್ವಪ್ನಲೋಕಕ್ಕೆ ಕೊಂಡೊಯ್ಯುವ ಗುಣವಿದೆ.

 

ಈ ಕವಿತೆಗಳು ಕನ್ನಡ ಕಾವ್ಯ ಸುಗಂಧವನ್ನು ಅಂತರ್ಜಾಲದಲ್ಲಿ ಪಸರಿಸುತ್ತ ನಳನಳಿಸುತ್ತಿರುವಂತೆ ಕಾಣಿಸುತ್ತವೆ. ಸಹೃದಯರಿಗೆ ತಲುಪುವ ನಿಟ್ಟಿನಲ್ಲಿ ಕಾವ್ಯದ ವಿಸ್ತರಣೆಯ ಹೊಸ ಕವಲಿನಂತೆಯೂ ಈ ಕಣಜ ಮುಖ್ಯವೆನ್ನಿಸುತ್ತದೆ.ಅಂದಹಾಗೆ, ಈ ಕನಸಮ್ಮ ವೃತ್ತಿಯಿಂದ ಮನಃಶಾಸ್ತ್ರಜ್ಞೆ. ಮಂಗಳೂರು ಮೂಲದ, ಸದ್ಯದ ನೆಲೆಯನ್ನು ಬೆಂಗಳೂರಿನಲ್ಲಿ ಕಂಡುಕೊಂಡಿರುವ ಅವರಿಗೆ ಸಾಹಿತ್ಯ, ಸಂಗೀತದಲ್ಲಿ ಆಸ್ಥೆಯಂತೆ. ಪ್ರಕೃತಿಯೆಡೆಗೆ ಅವರದು ಎಂದೂ ಮುಗಿಯದ ಒಲವು. ಇಷ್ಟೆಲ್ಲ ಒಲವುಗಳ ಜೊತೆಗೆ, ಮನಃಶಾಸ್ತ್ರದ ಸಖ್ಯದ ಜೊತೆಗೆ, ಬ್ಲಾಗ್ ಪೋಷಿಸುವ ಕೆಲಸವನ್ನೂ ಅವರು ಪ್ರೀತಿಯಿಂದ ಮಾಡುತ್ತಿದ್ದಾರೆ.ಕಳೆದ ಎರಡು ವರ್ಷಗಳಿಂದಲೂ `ಕಾವ್ಯ ಕಣಜ~ವನ್ನು ಕನಸು ಪೋಷಿಸುತ್ತಿದ್ದಾರೆ. ತಮ್ಮಿಷ್ಟದ ಕವಿತೆಗಳನ್ನು ಪ್ರತ್ಯೇಕವಾಗಿ ಪೋಣಿಸುವ ಕೆಲಸವನ್ನೂ ಅವರು ಮಾಡಿದ್ದಾರೆ. ಶಿಶುನಾಳ ಷರೀಫ, ಬೇಂದ್ರೆ, ಕುವೆಂಪು, ಗೋಪಾಲಕೃಷ್ಣ ಅಡಿಗ, ಕೆ.ಎಸ್. ನರಸಿಂಹ ಸ್ವಾಮಿ, ಕೆ.ಎಸ್. ನಿಸಾರ್ ಅಹಮದ್ ಸೇರಿದಂತೆ ಹಲವು ಕವಿಗಳ ನೂರಾರು ಕವಿತೆಗಳು ಈ ಕಣಜದಲ್ಲಿವೆ. ವೈದೇಹಿ, ಮುಕ್ತಾಯಕ್ತ, ಎಚ್.ಎಸ್.ವೆಂಕಟೇಶಮೂರ್ತಿ, ಬಿ.ಆರ್. ಲಕ್ಷ್ಮಣರಾವ್, ಜಯಂತ ಕಾಯ್ಕಿಣಿ, ಪ್ರತಿಭಾ ನಂದಕುಮಾರ್ ಅವರ ಕವಿತೆಗಳೂ ಇವೆ. ಗಂಭೀರ ಕವಿತೆಗಳೊಂದಿಗೆ ಹಾಡಿಕೊಳ್ಳಲು ಒಗ್ಗುವ ರಚನೆಗಳೂ ಕಣಜದಲ್ಲಿ ಒಟ್ಟಾಗಿವೆ.ಒಂದು ಟಿಪ್ಪಣಿ ಹೀಗಿದೆ:
“ಮನಸಿನ ಅರ್ಥವಿಲ್ಲದ ಅಸಹನೆ, ಕಾರಣವಿಲ್ಲದ ಜಡತ್ವಕ್ಕೆ ಕಾರಣ ಹುಡುಕುತ್ತಿರುವಾಗ ನನಗೆ ಇತ್ತೀಚಿನ ಪುಸ್ತಕ ಮೇಳವೊಂದರಲ್ಲಿ ಉತ್ತರ ದೊರೆಯಿತು. ಕುವೆಂಪು, ಜಿ.ಎಸ್. ಶಿವರುದ್ರಪ್ಪ, ಬಿ.ಆರ್. ಲಕ್ಷ್ಮಣರಾವ್ ಮುಂತಾದವರ ಕವನ ಸಂಕಲನಗಳು ಕಣ್ಣಿಗೆ ಬಿದ್ದಾಗ ಇಷ್ಟು ದಿನ  ಕಳೆದುಕೊಂಡಿದ್ದೇನೆಂಬುದರ ಅರಿವಾಯ್ತು...”. ನಿಜದ ಮಾತುಗಳು ಇವಲ್ಲವೇ? ಕಾವ್ಯ ಕಣಜದ ಪುಟಗಳನ್ನು ತೆರೆಯುತ್ತಾ ಹೋದಂತೆ ಕಳಕೊಂಡ ಹಾಗೂ ಪಡಕೊಂಡ ಭಾವ ಸಹೃದಯರದೂ ಆಗುತ್ತದೆ.ಕನ್ನಡದ ಬಹುತೇಕ ಬ್ಲಾಗುಗಳು ಸ್ವರತಿಯಲ್ಲಿ ಹಾಗೂ ಪರಸ್ಪರ ಟೀಕೆಗಳಲ್ಲಿ ಮುಳುಗಿಹೋಗಿರುವಾಗ, `ಕನ್ನಡ ಕಾವ್ಯ ಕಣಜ~ ಒಂದು ಆರೋಗ್ಯಕರ ಬ್ಲಾಗ್‌ನಂತೆ ಕಾಣಿಸುತ್ತದೆ. ಮಾಹಿತಿ, ಮನರಂಜನೆ ಹಾಗೂ ಟೈಂಪಾಸ್ ಜೊತೆಗೆ ಸಾಂಸ್ಕೃತಿಕ ಸಂಗತಿಗಳಿಗೂ ಜಾಲತಾಣವನ್ನು ಪರಿಣಾಮಕಾರಿಯಾಗಿ ಬಳಸಿಕೊಳ್ಳಬಹುದು ಎನ್ನುವುದಕ್ಕೂ ಈ ಬ್ಲಾಗ್ ಉದಾಹರಣೆಯಾಗಿದೆ.ಕಣಜದಲ್ಲಿ ಸಂಗ್ರಹಗೊಂಡಿರುವ ಎನ್.ಎಸ್. ಲಕ್ಷ್ಮೀನಾರಾಯಣ ಭಟ್ಟರ `ಹೊಸ ಆಸೆಗೆ ಕಾರಣವೇ~ ಎನ್ನುವ ಕವಿತೆಯ ಒಂದು ಭಾಗ ಹೀಗಿದೆ: `ಮರಮರವೂ ಮುಡಿದು ನಿಲಲಿ / ಬಂಗಾರದ ಚಿಗುರ / ನರನರನೂ ನೋವ ನುಂಗಿ / ಮೇಲೇಳಲಿ ಹಗುರ / ಹರಹರೆಗೂ ಹಾರಿಬರಲಿ / ಹಕ್ಕಿ ಮಾಲೆ ಮಾಲೆ / ಕರ ನೀಡಲಿ ಎಲ್ಲರಿಗೂ ಶುಭ ನೀಡುವ ನಾಳೆ~.ಸುತ್ತಲಿನ ಸಮಾಜದಲ್ಲಿ ನೋವಿನ ಚಿತ್ರಗಳೇ ವ್ಯಾಪಕವಾಗಿರುವಾಗ, ಕವಿತೆಯ ಆತ್ಮವಾಗಿರುವ ಆ `ಪೊರೆಯುವ ನಾಳೆ~ ಎನ್ನುವುದು ನಮ್ಮೆಲ್ಲರ ನಿತ್ಯದ ಕನಸಲ್ಲವೇ? ಕವಿತೆಯೊಂದು ತುಂಬಿಕೊಡುವುದು ಇಂಥ ಭರವಸೆಯನ್ನೇ ಅಲ್ಲವೇ? ಅಂಥ ನೂರಾರು ಭರವಸೆಗಳ ಸಂಕಲನ- `ಕನ್ನಡ ಕಾವ್ಯ ಕಣಜ~.

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.