ಶನಿವಾರ, ಜನವರಿ 18, 2020
27 °C

ಕನ್ನಡ ಬಳಕೆ; ಹಲವು ಇಲಾಖೆಗಳ ಹಿಂಜರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಬಳಕೆ; ಹಲವು ಇಲಾಖೆಗಳ ಹಿಂಜರಿಕೆ

ದಾವಣಗೆರೆ: ನಿತ್ಯದ ವ್ಯವಹಾರದಲ್ಲಿ ಕನ್ನಡ ಭಾಷೆ ಬಳಕೆ ಕಡ್ಡಾಯವಾಗಿ ಜಾರಿಗೊಳಿಸಬೇಕಿದ್ದು, ಈ ಕುರಿತು ಜಿಲ್ಲಾ ಪಂಚಾಯ್ತಿಗೆ ವರದಿ ನೀಡದ ಇಲಾಖೆಗಳಿಗೆ ನೋಟಿಸ್‌ ನೀಡಲು ಗುರುವಾರ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸಿಇಒ ಎ.ಬಿ.ಹೇಮಚಂದ್ರ ಸೂಚಿಸಿದರು.ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಬಹುತೇಕ ಇಲಾಖೆಗಳು ಕನ್ನಡ ಅನುಷ್ಠಾನ ಕುರಿತು ವರದಿ ನೀಡಿಲ್ಲ. ಸರ್ಕಾರದ ಆದೇಶದಂತೆ ಕೋರ್ಟ್‌ ಪ್ರಕರಣ, ಕೇಂದ್ರ ಸರ್ಕಾರದ ವ್ಯವಹಾರ ಹೊರತುಪಡಿಸಿ ಉಳಿದ ವಿಷಯಗಳಲ್ಲಿ ಕನ್ನಡ ಅಳವಡಿಗೆ ಕಡ್ಡಾಯ. ಆದರೆ, ಪಾಲಿಕೆ, ನಗರಸಭೆ, ರಸ್ತೆ ಸಾರಿಗೆ ನಿಗಮ, ಜಲಾನಯನ, ತೂಕ ಮತ್ತು ಅಳತೆ ಇಲಾಖೆ ಸೇರಿದಂತೆ ಹಲವು ಇಲಾಖೆಗಳು ವರದಿ ನೀಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಮಹಾನಗರ ಪಾಲಿಕೆ, ಜಲಸಂಪನ್ಮೂಲ ಇಲಾಖೆ ಸೇರಿದಂತೆ ಪದೇ ಪದೇ ಸಭೆಗೆ ಗೈರು ಹಾಜರಾದ ಅಧಿಕಾರಿಗಳಿಗೆ ನೋಟಿಸ್‌ ಜಾರಿಗೊಳಿಸಲು ಸೂಚಿಸಿದರು.ಡಿಡಿಪಿಐ ಡಿ.ಕೆ.ಶಿವಕುಮಾರ್‌ ಮಾತನಾಡಿ, ಸಾಧನ ಸಲಕರಣೆಗಳಿಗೆ ಸರ್ಕಾರ ₨ 10 ಲಕ್ಷ ನಿಗದಿ ಮಾಡಿದ್ದು, ಅದನ್ನು ಹೆಚ್ಚಿಸುವ ಕುರಿತು ಪ್ರಸ್ತಾವ ಸಲ್ಲಿಸಲಾಗಿದೆ ಹಾಗೂ ಅನುದಾನಿತ ಶಾಲೆಗಳ ಮಕ್ಕಳಿಗೂ ಸಮವಸ್ತ್ರ ನೀಡುವ ಕುರಿತು ಕ್ರಿಯಾ ಯೋಜನೆ ರೂಪಿಸಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.ಬಿಸಿಯೂಟ, ಸೈಕಲ್‌ ವಿತರಣೆ, ಕ್ಷೀರಭಾಗ್ಯ ಯೋಜನೆ ಅನುಷ್ಠಾನ ಕುರಿತು ಮಾಹಿತಿ ನೀಡಿದ ಸಂದರ್ಭದಲ್ಲಿ ಮಧ್ಯ ಪ್ರವೇಶಿಸಿದ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ಬಿ.ಎನ್‌.ವೀರಭದ್ರಪ್ಪ, ಈ ಎಲ್ಲ ಯೋಜನೆಗಳಿಂದ ಮುಖ್ಯ ಶಿಕ್ಷಕರಿಗೆ ಹೊರೆಯಾಗುತ್ತಿದೆ. ಇದು ಶೈಕ್ಷಣಿಕ ಚಟುವಟಿಕೆಗಳ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಾಗಾಗಿ, ಇಂತಹ ಯೋಜನೆಗಳ ಅನುಷ್ಠಾನಕ್ಕೆ ಪ್ರತಿ ಶಾಲೆಯಲ್ಲೂ ಪ್ರತ್ಯೇಕ ಸಿಬ್ಬಂದಿ ನೇಮಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿ ಎಂದು ಸಲಹೆ ನೀಡಿದರು.ಶಾಲೆಗಳಿಗೆ ಕಳಪೆ ಗುಣಮಟ್ಟದ ಆಹಾರ ಸರಬರಾಜು ಮಾಡುತ್ತಿರುವ ಕುರಿತು ಸಾಕಷ್ಟು ದೂರು ಬಂದಿವೆ. ಈ ಬಗ್ಗೆ ಸೂಕ್ತಕ್ರಮ ಕೈಗೊಳ್ಳಬೇಕು. ಗ್ರಾಮಿಣ ಪ್ರದೇಶದ ಆಸ್ಪತ್ರೆಗಳಿಗೆ ಅಗತ್ಯ ಔಷಧ ಸರಬರಾಜು ಮಾಡಬೇಕು ಎಂದು ಅಧ್ಯಕ್ಷೆ ಪ್ರೇಮಾ ಲೋಕೇಶಪ್ಪ ತಾಕೀತು ಮಾಡಿದರು.ಕೇವಲ 6 ತಿಂಗಳ ಹಿಂದೆ ಪ್ರಧಾನಮಂತ್ರಿ ಗ್ರಾಮಸಡಕ್‌ ಯೋಜನೆ ಅಡಿ ನಿರ್ಮಿಸಿದ ಹಿಂಡಸಕಟ್ಟೆ ರಸ್ತೆ ಕಿತ್ತುಹೋಗಿದೆ. ಕೂಡಲೇ, ಅದನ್ನು ದುರಸ್ತಿಗೊಳಿಸಿ ಎಂದು ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾರದಮ್ಮ ಉಮೇಶ್‌ ನಾಯ್ಕ ಒತ್ತಾಯಿಸಿದರು.ಕೃಷಿ ಅನುದಾನ ಬಳಕೆಯಲ್ಲಿ ಜಿಲ್ಲೆ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ ಎಂದು ಜಂಟಿ ಕೃಷಿ ನಿರ್ದೇಶಕ ಡಾ.ಆರ್‌.ಜಿ.ಗೊಲ್ಲರ್‌ ಮಾಹಿತಿ ನೀಡಿದರು.

ಪ್ರತಿಕ್ರಿಯಿಸಿ (+)