ಮಂಗಳವಾರ, ಮೇ 11, 2021
20 °C
ಶ್ರೀನಿವಾಸಪುರ ಸಮ್ಮೇಳನಾಧ್ಯಕ್ಷ ರಾಮಪ್ಪ ನುಡಿ

ಕನ್ನಡ ಮಾತಿಗೆ ಅಳಿವಿಲ್ಲ

ಪ್ರಜಾವಾಣಿ ವಾರ್ತೆ/ -ಆರ್.ಚೌಡರೆಡ್ಡಿ Updated:

ಅಕ್ಷರ ಗಾತ್ರ : | |

ಶ್ರೀನಿವಾಸಪುರ: ಇಂದು ಮಾವಿನ ಪಟ್ಟಣದಲ್ಲಿ ತಾಲ್ಲೂಕು ಮಟ್ಟದ ಸಾಹಿತ್ಯ ಸಮ್ಮೇಳನದ ಸಂಭ್ರಮ. ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹಾಡುಗಾರ ಗಡಿ ಗ್ರಾಮ ರಾಯಲ್ಪಾಡ್‌ನ ಪಿ.ರಾಮಪ್ಪ ನಾಯ್ಡು ಸಮ್ಮೇಳನದ ಅಧ್ಯಕ್ಷರು. ಅವರು `ಪ್ರಜಾವಾಣಿ'ಗೆ ನೀಡಿದ ಸಂದರ್ಶನದಲ್ಲಿ ಕನ್ನಡ ಭಾಷೆ, ಸಂಸ್ಕೃತಿ ಕುರಿತು ಮಾತನಾಡಿದ್ದಾರೆ.ನೀವು ಹುಡುಗರಾಗಿದ್ದಾಗ ಗಡಿ ಭಾಗದಲ್ಲಿ ಕನ್ನಡ ಭಾಷೆಯ ಸ್ಥಿತಿ ಹೇಗಿತ್ತು? ಈಗ ಹೇಗಿದೆ?

  ನಾನು ಹುಡುಗನಾಗಿದ್ದಾಗ ಗಡಿ ಪ್ರದೇಶದಲ್ಲಿ ಕನ್ನಡ ಭಾಷೆ ಮಾತನಾಡುವುದು ಅಪರೂಪವಾಗಿತ್ತು. ಈ ಪ್ರದೇಶ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡಿದ್ದರಿಂದ ತೆಲುಗು ಭಾಷೆಯ ಪ್ರಭಾವ ಹೆಚ್ಚಾಗಿತ್ತು. ನಾನು ಮತ್ತು ನನ್ನ ಸ್ನೇಹಿತರು ಗ್ರಾಮಗಳಿಗೆ ತೆರಳಿ ತೆಲುಗು ಭಾಷೆಯಲ್ಲಿಯೇ ದೇಶಭಕ್ತಿ ಗೀತೆಗಳನ್ನು ಹಾಡಿ ಜನರನ್ನು ಸ್ವಾತಂತ್ರ್ಯ ಚಳುವಳಿಗೆ ಪ್ರೇರೇಪಿಸುತ್ತಿದ್ದೆವು. ಅಪರೂಪಕ್ಕೆ ಕನ್ನಡ ಗೀತೆಗಳನ್ನೂ ಹಾಡುತ್ತಿದ್ದೆವು. ಆದರೆ ಈಗ ಅಂದಿನ ಪರಿಸ್ಥಿತಿ ಇಲ್ಲ. ಗಡಿ ಗ್ರಾಮಗಳಲ್ಲಿ ಕನ್ನಡ ಶಾಲೆಗಳು ಸ್ಥಾಪನೆ ಆದಂತೆ, ಕನ್ನಡ ಭಾಷೆ ಬೆಳೆಯತೊಡಗಿತು. ಶೇ.95 ರಷ್ಟು ಜನಕ್ಕೆ ಭಾಷೆ ಬರುತ್ತದೆ. ಆದರೆ ದಿನನಿತ್ಯದ ವ್ಯವಹಾರದಲ್ಲಿ  ತೆಲುಗು ಭಾಷೆ ವಾಡಿಕೆಯಲ್ಲಿದೆ. ಕನ್ನಡ ಇಲ್ಲಿನ ಜನರ ಹೃದಯದ ಭಾಷೆಯಾಗಿದೆ. ಕನ್ನಡ ಪ್ರೀತಿಗೆ ಕೊರತೆ ಇಲ್ಲ. ಗಡಿ ಭಾಗದ ಜನರ ಹೃದಯದ ಭಾಷೆಯಾಗಿರುವ ಕನ್ನಡ ಬಾಯಿಗೆ ಬರಬೇಕಾದರೆ ಏನು ಮಾಡಬೇಕು?

  ನೋಡಿ, ಇಲ್ಲಿನ ಜನರ ದೃಷ್ಟಿಯಲ್ಲಿ ಕನ್ನಡ ಬೇರೆಯಲ್ಲ,  ತೆಲುಗು ಬೇರೆಯಲ್ಲ. ಈ ಎರಡೂ ಭಾಷೆಗಳು ತಮ್ಮವೆಂಬ ಹೆಮ್ಮೆ ಅವರಿಗಿದೆ. ರಾಜ್ಯ ಭಾಷೆಯಾದ ಕನ್ನಡಕ್ಕೆ ಅಗ್ರಸ್ಥಾನ ನೀಡಿರುವುದು ಇಲ್ಲಿನ ವಿಶೇಷ. ಇಲ್ಲಿನ ಬಹಳಷ್ಟು ಪೋಷಕರು ತೆಲುಗು ಭಾಷೆಗೆ ಒಗ್ಗಿಹೋಗಿರುವುದರಿಂದ, ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವ ಮತ್ತು ಕನ್ನಡ ಬಳಸುವ ಪ್ರಕ್ರಿಯೆ ಏಕಕಾಲದಲ್ಲಿ ನಡೆಯಬೇಕು. ಕನ್ನಡ ಭಾಷೆ ತರಗತಿ ಕೊಠಡಿಗೆ ಸೀಮಿತವಾಗದಂತೆ ನೋಡಿಕೊಳ್ಳಬೇಕು. ನಿತ್ಯ ವ್ಯವಹಾರದಲ್ಲಿ ಕನ್ನಡ ಬಳಸುವಂತೆ ಪ್ರೋತ್ಸಾಹಿಸಬೇಕು. ಮೊದಲು ಇಲ್ಲಿನ ಶಿಕ್ಷಕರು ಶಾಲೆಯ ಹೊರಗೆ ಕನ್ನಡ ಮಾತನಾಡುವುದನ್ನು ರೂಢಿಸಿಕೊಳ್ಳಬೇಕು. ಗ್ರಾಮೀಣ ಪ್ರದೇಶದಲ್ಲೂ ಇಂಗ್ಲೀಷ್ ಮಾಧ್ಯಮದ ಖಾಸಗಿ ಶಾಲೆಗಳ ಪ್ರಭಾವ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಕನ್ನಡ ಭಾಷೆಯನ್ನು ಉಳಿಸಿಕೊಳ್ಳುವುದು ಹೇಗೆ?

  ಒಂದನ್ನು ಗಮನಿಸಬೇಕು, ಮಕ್ಕಳು ಇಂಗ್ಲೀಷ್ ಮಾಧ್ಯಮದಲ್ಲಿ ಓದಿದ ಮಾತ್ರಕ್ಕೆ ಕನ್ನಡ ಭಾಷೆಗೆ ಬೆನ್ನು ತೋರಿಸುತ್ತಾರೆ ಎಂದು ತಿಳಿಯಬೇಗಾಗಿಲ್ಲ. ಕನ್ನಡ ಭಾಷೆ ಉಳಿಯುವುದು ಜನರ ಬಾಯಲ್ಲಿ. ವಿಶ್ವವಿದ್ಯಾಲಯಗಳಿಂದ ಅಲ್ಲ. ಎಲ್ಲಿಯವರೆಗೆ ಕನ್ನಡ ಜನರ ಆಡುಭಾಷೆಯಾಗಿ ಮುಂದುವರಿಯುತ್ತದೆಯೋ ಅಲ್ಲಿಯವರೆಗೆ ಅದಕ್ಕೆ ಅಳಿವಿಲ್ಲ.  ಕನ್ನಡ ಪರ ಸಾಹಿತಿಗಳು ಏನೇ ಹೇಳಲಿ, ಜಾಗತೀಕರಣದ ಸಂದರ್ಭದಲ್ಲಿ ಕನ್ನಡಿಗರು ಉದ್ಯೋಗಾವಕಾಶ ಪಡೆಯಬೇಕಾದರೆ ಇಂಗ್ಲಿಷ್ ಭಾಷೆಯ ಅಗತ್ಯವಿದೆ. ಆದರೆ ಕನ್ನಡ ಮನೆ ಮಾತಾಗಿ ಉಳಿಯಬೇಕು. ಬಹು ಭಾಷೀಯರು ವಾಸಿಸುವ ನಗರಗಳಲ್ಲಿ ಕನ್ನಡ ಭಾಷೆಯ ಬಳಕೆ ಸಹಜವಾಗಿಯೇ ಕಡಿಮೆಯಾದಂತೆ ಕಾಣುತ್ತದೆ. ಅದರೆ ಕನ್ನಡ ಉಳಿದಿರುವುದು ನಗರಗಳ ಆಚೆ ಎಂಬುದನ್ನು ಮರೆಯಬಾರದು. ನೀವು ಆಧ್ಯಾತ್ಮದ ಬಗ್ಗೆ ಹೆಚ್ಚು ಒಲವು ತೋರುತ್ತೀರಿ. ವೈಜ್ಞಾನಿಕ ಯುಗದಲ್ಲಿ  ಆಧ್ಯಾತ್ಮದ ಸ್ಥಾನವೇನು?

  ಮಾನವೀಯತೆ ಮರೆತ ವಿಜ್ಞಾನದಿಂದ ಜನರಿಗೆ ಶಾಂತಿ, ನೆಮ್ಮದಿ ಸಿಗುವುದಿಲ್ಲ. ಪಾಪ ಪ್ರಜ್ಞೆ ಒಂದು ಸಾಮಾಜಿಕ ನಿಯಂತ್ರಣ. ಅದರ ಕೊರತೆಯಿಂದಾಗಿ ಸಮಾಜದಲ್ಲಿ ಅನೇಕ ಅನಾಚಾರಗಳು ನಡೆಯುತ್ತಿವೆ. ಆಧ್ಯಾತ್ಮಿಕ ಚಿಂತನೆ ವ್ಯಕ್ತಿಯನ್ನು ನೈತಿಕವಾಗಿ ಬೆಳೆಸುತ್ತದೆ. ಆದ್ದರಿಂದ ಶಾಲಾ ಕಾಲೇಜು ಪಠ್ಯ ಪುಸ್ತಕಗಳಲ್ಲಿ ಆಧ್ಯಾತ್ಮಿಕ ಹಿನ್ನೆಲೆಯಲ್ಲಿ ಬೆಳೆದ ಬುದ್ಧ, ಬಸವಣ್ಣ, ಕನಕದಾಸರು, ಪುರಂದರ ದಾಸರು, ರಾಮಕೃಷ್ಣ ಪರಮಹಂಸ, ಸ್ವಾಮಿ ವಿವೇಕಾನಂದ ಮುಂತಾದ ವ್ಯಕ್ತಿಗಳ ಜೀವನ ಪಾಠಗಳನ್ನು ಇಡಬೇಕು. ಸಮಾಜದ ಆರೋಗ್ಯದ ದೃಷ್ಟಿಯಿಂದ ಆಧ್ಯಾತ್ಮಿಕ ಕೇಂದ್ರಗಳ ಅಭಿವೃದ್ದಿ ಆಗಬೇಕು.ಗುಡ್ಡಗಾಡು ಪ್ರದೇಶದಲ್ಲಿ ಹುಟ್ಟಿ ಬೆಳೆದ ನೀವು ಅಲ್ಲಿನ ಪರಿಸರದ ಬಗ್ಗೆ ಏನು ಹೇಳುತ್ತೀರಿ?

  ಕನ್ನಡ ಭಾಷೆಗಾಗಿ ನಡೆದಿರುವಷ್ಟು ಹೋರಾಟ ಕನ್ನಡಿಗರ ಬದುಕಿಗಾಗಿ ನಡೆದಿಲ್ಲ. ಬದುಕು ಉಳಿದರೆ ಮಾತ್ರ ಭಾಷೆ ಉಳಿಯುತ್ತದೆ. ಕಾಡು ಮೇಡು ಮನುಷ್ಯನ ಸ್ವಾರ್ಥಕ್ಕೆ ತುತ್ತಾಗಿ ಹೋಗಿದೆ. ಗಿಡಮರ ಮಾಯವಾಗಿದೆ. ಕಾಡು ಪ್ರಾಣಿಗಳಿಗೆ ರಕ್ಷಣೆ ಇಲ್ಲದೆ ಅಳಿವಿನ ಹಾದಿ ಹಿಡಿದಿವೆ. ಮರಳಿಗೂ ಸಂಚಕಾರ ಬಂದಿದೆ. ಕುಡಿಯುವ ನೀರಿನ ಸಮಸ್ಯೆ ಕಾಣಿಸಿಕೊಂಡಿದೆ. ಮಳೆ ನೀರಿನ ಸಂರಕ್ಷಣೆ ಪರಿಣಾಮಕಾರಿಯಾಗಿ ಆಗುತ್ತಿಲ್ಲ. ಇದೆಲ್ಲದರ ರಕ್ಷಣೆಗೆ ಜನರು ಮನಸ್ಸು ಮಾಡಬೇಕು.  ಟಿವಿ ಗ್ರಾಮೀಣ ಕಲೆ ಮತ್ತು ಸಾಹಿತ್ಯಕ್ಕೆ ಮುಳುವಾಗಿ ಪರಿಣಮಿಸಿದೆ. ಹಿಂದೆ ಜಾನಪದ ಕಲೆಗಳು ಗ್ರಾಮೀಣ ಜನರನ್ನು ಒಗ್ಗೂಡಿಸುತ್ತಿದ್ದವು. ಆದರೆ ಇಂದು ಟಿವಿ ಮನರಂಜನೆಯ ಏಕೈಕ ಮಾಧ್ಯಮವಾಗಿದೆ. ಡಾಬಾ ಸಂಸ್ಕೃತಿ ಯುವ ಸಮುದಾಯವನ್ನು ಅನೈತಿಕ ಹಾದಿಗೆ ಎಳೆಯುತ್ತಿದೆ. ನಾವು ಕನ್ನಡ ಸಂಸ್ಕೃತಿಯೊಂದಿಗೆ ಭಾರತ ಸಂಸ್ಕೃತಿಯನ್ನು ಮೈಗೂಡಿಸಿಕೊಳ್ಳಬೇಕು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.