ಗುರುವಾರ , ಆಗಸ್ಟ್ 13, 2020
27 °C

ಕನ್ನಡ ಸಾರ್ವಭೌಮ ಭಾಷೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕನ್ನಡ ಸಾರ್ವಭೌಮ ಭಾಷೆಯಾಗಲಿ

ಬೆಳಗಾವಿ: “ಕನ್ನಡ ನಾಡಿನಲ್ಲಿ ಕನ್ನಡ ಭಾಷೆಯು ಸಾರ್ವಭೌಮತ್ವ ಪಡೆದುಕೊಳ್ಳಬೇಕು. ನಮ್ಮ ಭಾಷೆಯನ್ನು ಉಸಿರನ್ನಾಗಿಸಿಕೊಂಡರೆ ಬದುಕೂ ಹಸಿರಾಗುತ್ತದೆ” ಎಂದು ಹಿರಿಯ ಕವಿ, ವಿಧಾನ ಪರಿಷತ್ ಸದಸ್ಯ ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರ ಅಧಿಕಾರ ಹಸ್ತಾಂತರ ಹಾಗೂ ಚಟುವಟಿಕೆಗಳ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಅವರು ಮಾತನಾಡಿದರು.“ನಗರಗಳಲ್ಲಿ ಜಾಗತೀಕರಣದ ಪ್ರಭಾವದಿಂದ ಆಂಗ್ಲ ಭಾಷೆ ಕಲಿತರೆ ಮಾತ್ರ ಏಳ್ಗೆಯಾಗುತ್ತದೆ ಎಂಬ ಭ್ರಮೆ ನಿರ್ಮಾಣವಾಗಿದೆ. ಫ್ರಾನ್ಸ್‌ನಲ್ಲಿ ಜನರ ನಾಲಿಗೆ ಮೇಲೆ `ಫ್ರೆಂಚ್~ ನಲಿದಾಡುತ್ತಿದೆ. ಅಲ್ಲಿ `ಫ್ರೆಂಚ್~ ಸಾರ್ವಭೌಮ ಭಾಷೆಯಾಗಿದೆ. ಅಲ್ಲಿ ಸಾಧ್ಯವಾಗುವುದು ನಮ್ಮಲ್ಲಿ ಏಕೆ ಸಾಧ್ಯವಾಗುತ್ತಿಲ್ಲ?” ಎಂದು ಅವರು ಪ್ರಶ್ನಿಸಿದರು.“ಕನ್ನಡ ನಾಡಿನಲ್ಲಿ ಕನ್ನಡವೇ ಆಡಳಿತ ಭಾಷೆಯಾಗಬೇಕು. ನಾನು ಭಾಷೆ ವಿರೋಧಿಯಲ್ಲ. ನಮ್ಮ ವ್ಯಾಪ್ತಿಯನ್ನು ಹೆಚ್ಚಿಸಿಕೊಳ್ಳಲು ಇಂಗ್ಲಿಷ್, ಮರಾಠಿ, ಫ್ರೆಂಚ್, ಲ್ಯಾಟಿನ್ ಹೀಗೆ ಹಲವು ಭಾಷೆಗಳನ್ನು ಕಲಿಯಬಹುದು. ನಮ್ಮಲ್ಲಿ ಕನ್ನಡಕ್ಕೆ ಸ್ಥಾನಮಾನ ಸಿಗದಿದ್ದರೆ, ಇನ್ನು ಇಂಗ್ಲೆಂಡ್‌ನಲ್ಲಿ ಸಿಗಲು ಸಾಧ್ಯವೇ? ಅಲೆಗ್ಸಾಂಡರ್ ಕಾಲದಲ್ಲಿ ಗ್ರೀಸ್‌ನಲ್ಲೂ ಕನ್ನಡದ ಪದಗಳು ಬಳಕೆಯಾಗುತ್ತಿದ್ದವು. ಅಲ್ಲಿನ ಪ್ರಾಚೀನ ಗೋಡೆಯ ಮೇಲೆ `ಊರಲ್ಲಿ~ ಎಂಬ ಕನ್ನಡ ಪದವನ್ನು ಕೆತ್ತಲಾಗಿತ್ತು” ಎಂದು ವಿವರಿಸಿದರು.“ಇಂದು ಅಮೌಲ್ಯವೇ ಮೌಲ್ಯ, ಅಕ್ರಮವೇ ಕ್ರಮವಾಗಿರುವ ಸಾಮಾಜಿಕ ವಿಷಮ ಸ್ಥಿತಿಯಲ್ಲಿ ನಾವಿದ್ದೇವೆ. ಇಂಥ ಸ್ಥಿತಿಯಲ್ಲಿ ಕನ್ನಡದ ಜ್ಯೋತಿಯನ್ನು ಬೆಳಗಬೇಕಾದ ಸವಾಲು ನಮ್ಮೆದುರಿಗಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು ಹೋಬಳಿ ಮಟ್ಟದಲ್ಲೂ ಸ್ಥಾಪನೆಯಾಗಬೇಕು. ಹಳ್ಳಿ, ಹೋಬಳಿಗಳಲ್ಲೂ ಕನ್ನಡ ಉಳಿಸುವ ಕಾರ್ಯ ನಡೆಯಬೇಕು” ಎಂದು ದೊಡ್ಡರಂಗೇಗೌಡ ಅಭಿಪ್ರಾಯಪಟ್ಟರು.ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಪ್ರಾಸಾರಾಂಗ ವಿಭಾಗದ ಮುಖ್ಯಸ್ಥೆ ಮೈತ್ರೇಯಿಣಿ ಗದಿಗೆಪ್ಪಗೌಡರ, “ಬೆಳಗಾವಿ ಪರಿಸರದ ಲೇಖಕಿಯರ ಸ್ಮರಣ ಸಂಚಿಕೆಯನ್ನು ತರಬೇಕು. ಮಹಿಳಾ ಸಾಹಿತಿಗಳನ್ನು ಪರಿಚಯಿಸಬೇಕು. ಕನ್ನಡ ಸಾಹಿತ್ಯ ಪರಿಷತ್ತಿನ ಪ್ರತಿಯೊಬ್ಬ ಸದಸ್ಯರು ಕನಿಷ್ಠ ಇನ್ನೊಬ್ಬರನ್ನು ಸದಸ್ಯರನ್ನಾಗಿ ಮಾಡಬೇಕು” ಎಂದು ಹೇಳಿದರು.ಅಧಿಕಾರವನ್ನು ಹಸ್ತಾಂತರಿಸಿದ ಕಸಾಪ ತಾಲ್ಲೂಕು ಘಟಕದ ಮಾಜಿ ಅಧ್ಯಕ್ಷ, ಜಿಲ್ಲಾ ಘಟಕದ ಅಧ್ಯಕ್ಷ ಯ.ರು. ಪಾಟೀಲ, “ತಾಲ್ಲೂಕು ಘಟಕಗಳಿಗೆ ಆರ್ಥಿಕವಾಗಿ ತಳವೇ ಇರಲಿಲ್ಲ. ಹೀಗಿದ್ದರೂ ಸಹ 13 ವರ್ಷಗಳ ಬಳಿಕ ನಾನು ತಾಲ್ಲೂಕು ಸಾಹಿತ್ಯ ಸಮ್ಮೇಳನವನ್ನು ಯಶಸ್ವಿಯಾಗಿ ನಡೆಸಿದೆ. ಶ್ರಾವಣ ಮಾಸದಲ್ಲಿ ಒಂದು ತಿಂಗಳ ಕಾಲ ಸಾಹಿತ್ಯ ಚಟುವಟಿಕೆ ನಡೆಸಿದ್ದೇವೆ. ಇಚ್ಛಾಶಕ್ತಿ ಇದ್ದರೆ, ಸಾಧಿಸಬಹುದು ಎಂಬುದನ್ನು ಮನಗಂಡಿದ್ದೇವೆ” ಎಂದು ಹೇಳಿದರು.“6ನೇ ತರಗತಿಯಿಂದ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸುತ್ತಿರುವುದನ್ನು ಖಂಡಿಸಿ ಜುಲೈ 21ರಂದು ಎಲ್ಲ ತಾಲ್ಲೂಕು ಘಟಕಗಳಿಂದ ಸಾಂಕೇತಿಕವಾಗಿ ಮುಷ್ಕರ ನಡೆಸಲಾಗುವುದು. ಮಹಿಳೆಯರ ಸಮಸ್ಯೆಗಳ ಬಗ್ಗೆ ಚರ್ಚಿಸಲು ವೇದಿಕೆ ಕಲ್ಪಿಸಲು ರಾಜ್ಯಮಟ್ಟದ `ಮಹಿಳಾ ಸಾಹಿತ್ಯ ಸಮ್ಮೇಳನ~ವನ್ನು ಬೆಳಗಾವಿಯಲ್ಲಿ ಹಮ್ಮಿಕೊಳ್ಳಲಾಗುವುದು” ಎಂದು ಅವರು ತಿಳಿಸಿದರು.ಸಮಾರಂಭದ ಅಧ್ಯಕ್ಷತೆಯನ್ನು ಹಿರಯ ಸಾಹಿತಿ ಜಿನದತ್ತ ದೇಸಾಯಿ ವಹಿಸಿದ್ದರು. ಮಹಾಂತ ದೇವರು ಸಾನ್ನಿಧ್ಯ ವಹಿಸಿದ್ದರು. ಕಸಾಪ ತಾಲ್ಲೂಕು ಘಟಕದ ಅಧ್ಯಕ್ಷ ಬಸವರಾಜ ಎಸ್. ಸಸಾಲಟ್ಟಿ ಸ್ವಾಗತಿಸಿದರು. ರುದ್ರಮ್ಮ ಯಾಳಗಿ ಪ್ರಾರ್ಥಿಸಿದರು. ಸಿದ್ಧಾರ್ಥ ಸಂತಾಗೋಳ ನಿರೂಪಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.