ಶುಕ್ರವಾರ, ಮೇ 14, 2021
31 °C
ಸಮ್ಮೇಳನಕ್ಕೆ ಜನಪ್ರತಿನಿಧಿ ಆಹ್ವಾನಿಸದೆ ಶಿಷ್ಟಚಾರ ಉಲ್ಲಂಘನೆ: ಪಾಟೀಲ ಆಕ್ರೋಶ

`ಕನ್ನಡ ಸಾಹಿತ್ಯ ಪರಿಷತ್‌ಗೆ ಹಣ ಕೊಡಬೇಡಿ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗದಗ: `ಮುಂಡರಗಿಯಲ್ಲಿ ನಡೆದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜನ ಪ್ರತಿನಿಧಿಗಳನ್ನು ಆಹ್ವಾನಿಸದೆ ಅವಮಾನ ಮಾಡಿರುವ ಕನ್ನಡ ಸಾಹಿತ್ಯ ಪರಿಷತ್‌ಗೆ ಅನುದಾನ ಕೊಡಬೇಡಿ' ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಎಸ್. ಪಾಟೀಲ ಆಕ್ರೋಶ ವ್ಯಕ್ತಪಡಿಸಿದರು.ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಅಧ್ಯಕ್ಷ ಎಂ.ಎಸ್. ಪಾಟೀಲ ಅಧ್ಯಕ್ಷತೆಯಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ, ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಆರ್ಥಿಕ ನೆರವು ಕೋರಿ ಕಸಾಪ ಜಿಲ್ಲಾ ಘಟಕ ಮನವಿ ಸಲ್ಲಿಸಿರುವ ವಿಷಯವನ್ನು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಜಿ.ತುರಮರಿ ಪ್ರಸ್ತಾಪಿಸಿದರು.`ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಕ್ಕೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರನ್ನೇ ಆಹ್ವಾನಿಸಿಲ್ಲ. ಶಿಷ್ಟಾಚಾರಕ್ಕೆ ಆಹ್ವಾನ ಪತ್ರಿಕೆಯಲ್ಲಿ ಹೆಸರು ನಮೂದಿಸಿಲ್ಲ, ಹೀಗಿರುವಾಗ ಕನ್ನಡ ಸಾಹಿತ್ಯ ಪರಿಷತ್‌ಗೆ ಏಕೆ ಹಣ ನೀಡಬೇಕು' ಎಂದು ಅಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದರು.

ಇದಕ್ಕೆ ಸದಸ್ಯರಾದ ಎಂ.ಎಸ್. ದೊಡ್ಡಗೌಡರ ಮತ್ತು ಬೀರಪ್ಪ ಬಂಡಿ ಸಹ ದನಿಗೂಡಿಸಿದರು.`ಮುಂಡರಗಿ ಭಾಗದ ಸದಸ್ಯರಾದ ನಮಗೂ ಆಹ್ವಾನ ನೀಡಿಲ್ಲ, ಆಹ್ವಾನ ಪತ್ರಿಕೆಯಲ್ಲೂ ಹೆಸರು ಮುದ್ರಿಸಿಲ್ಲ' ಎಂದು ಆಕ್ಷೇಪ ವ್ಯಕ್ತಪಡಿಸಿದರು. `ಅಲ್ಲದೇ ಸ್ಥಳೀಯ ಕಾರ್ಯಕ್ರಮಗಳಿಗೂ ಜನಪ್ರತಿನಿಧಿಗಳ ಹೆಸರನ್ನು ಆಹ್ವಾನ ಪತ್ರಿಕೆಯಲ್ಲಿ ನಮೂದಿಸಿದೆ ಶಿಷ್ಟಾಚಾರ ಉಲ್ಲಂಘನೆ ಮಾಡಲಾಗುತ್ತಿದೆ' ಎಂದು ಇತರೆ ಸದಸ್ಯರು ಆರೋಪಿಸಿದರು.ಕಸಾಪಗೆ ರೂ. 20 ಸಾವಿರ ನೀಡೋಣ ಎಂದು ಸಿಇಒ ತುರಮರಿ ಹೇಳಿದಾಗ ಅಧ್ಯಕ್ಷರು ಅದಕ್ಕೆ ಸಮ್ಮತಿ ಸೂಚಿಸಲಿಲ್ಲ. ನಮಗೆ ಆಹ್ವಾನ ಬಾರದಿರುವುದಕ್ಕೆ ವಿಷಾದ ವ್ಯಕ್ತಪಡಿಸಿ ಕಸಾಪಗೆ ಪತ್ರ ಬರೆಯುವಂತೆ ಹೇಳಿ ಚರ್ಚೆಗೆ ತೆರೆ ಎಳೆದರು.ಚರ್ಚೆ ನಡೆಯುವ ವೇಳೆಗೆ ಉತ್ತರ ನೀಡಬೇಕಿದ್ದ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿದ್ದ ಶಾಸಕ ರಾಮಕೃಷ್ಣ ದೊಡ್ಡಮನಿ ಸಭೆಯಲ್ಲಿ ಇರಲಿಲ್ಲ.ನರಗುಂದ ಶಾಸಕ ಬಿ.ಆರ್.ಯಾವಗಲ್ ಮಾತನಾಡಿ, ಜಿಲ್ಲೆಯ ಬಹುತೇಕ ಆಸ್ಪತ್ರೆಗಳಲ್ಲಿ ವೈದ್ಯರೇ ಇಲ್ಲ. ಇದರಿಂದ ಜನರಿಗೆ ಸಾಕಷ್ಟು ತೊಂದರೆಯಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಿ.ಬಿ.ಚನ್ನಶೆಟ್ಟಿಗೆ ಅವರ ಗಮನಕ್ಕೆ ತಂದರು.ಶಿರಹಟ್ಟಿ ಶಾಸಕ ರಾಮಕೃಷ್ಣ ದೊಡ್ಡಮನಿ ಮಾತನಾಡಿ, 12 ವರ್ಷದ ಬಾಲಕಿಗೆ ಹಾವು ಕಚ್ಚಿದಾಗ ಆಕೆಯನ್ನು ತಾಲ್ಲೂಕು ಆಸ್ಪತ್ರೆಗೆ ಕರೆತರಲಾಯಿತು. ಔಷಧ ಇದ್ದರೂ ಚುಚ್ಚುಮದ್ದು ನೀಡಲು ಎಂಬಿಬಿಎಸ್ ವೈದ್ಯರು ಇಲ್ಲದ ಕಾರಣ ಆಕೆಯನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಬೇಕಾಯಿತು. ಬಡ ಜನರು ಚಿಕಿತ್ಸೆಗೆ ಎಲ್ಲಿಗೆ ಹೋಗಬೇಕು ಎಂದು ಪ್ರಶ್ನಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಡಿಎಚ್‌ಒ, ಪ್ರಾಥಮಿಕ ಆರೋಗ್ಯ ಕೇಂದ್ರ, ತಾಲ್ಲೂಕು ಮತ್ತು ಜಿಲ್ಲಾ ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದೆ. ಎಂಬಿಬಿಎಸ್ ಪದವೀಧರರು ಯಾವಾಗ ಬೇಕಾದರೂ ಸಂದರ್ಶನಕ್ಕೆ ಹಾಜರಾಗಬಹುದು. ಆದರೆ ಯಾರು ಬರುತ್ತಿಲ್ಲ. ಈ ಬಗ್ಗೆ ಆರೋಗ್ಯ ಸಚಿವರ ಗಮನಕ್ಕೂ ತರಲಾಗಿದೆ. ಮುಂಡರಗಿಗೆ ಮಂಜೂರಾದ ಹತ್ತು ವೈದ್ಯರ ಪೈಕಿ ಎಲ್ಲ ಹುದ್ದೆಗಳು ಖಾಲಿಯಾಗಿವೆ ಎಂದು ಹೇಳಿದರು. ಕೂಡಲೇ ಸರ್ಕಾರಕ್ಕೆ ಪತ್ರ ಬರೆದು ವೈದ್ಯರ ನೇಮಕಕ್ಕೆ ಕ್ರಮ ಕೈಗೊಳ್ಳುವಂತೆ ಅಧ್ಯಕ್ಷರು ಸೂಚಿಸಿದರು.13ನೇ ಹಣಕಾಸು ಆಯೋಗದಲ್ಲಿ ಜಿಲ್ಲೆಯಲ್ಲಿ ರಸ್ತೆ ಕಾಮಗಾರಿಗೆ ರೂ. 2.53 ಕೋಟಿ ಅನುಮೋದನೆ ದೊರೆತಿದೆ. ಗದಗ- ರೂ. 64 ಲಕ್ಷ, ರೋಣ-ರೂ. 63, ಶಿರಹಟ್ಟಿ -ರೂ. 59 ಲಕ್ಷ, ಮುಂಡರಗಿ -ರೂ. 39 ಲಕ್ಷ, ನರಗುಂದ- ರೂ. 26 ಲಕ್ಷ ಮಂಜೂರಾತಿ ದೊರೆತಿದೆ.  ಎಲ್ಲ ಸಹಾಯಕ ಕಾರ್ಯಪಾಲಕ ಅಭಿಯಂತರರು ಯೋಜನೆ ವರದಿ ಸಿದ್ಧಪಡಿಸಿ  ಸಲ್ಲಿಸಬೇಕು ಎಂದು ಸಿಒಇ ನಿರ್ದೇಶನ ನೀಡಿದರು.ಕಬಲಾಯತಕಟ್ಟಿ ಅಂಗನವಾಡಿ ಕಟ್ಟಡ ದುರಸ್ತಿಯಾಗಬೇಕು. ರೋಣ ತಾಲ್ಲೂಕಿನ ಅಂಗನವಾಡಿ ಪಟ್ಟಿ ಮಾಡಿ ಎಷ್ಟು ಅಂಗನವಾಡಿಗಳಿಗೆ ದೀಪ ಹಾಗೂ ಫ್ಯಾನ್ ಅಳವಡಿಸಲಾಗಿದೆ.  ಅಳವಡಿಸದಿದ್ದರೆ ಸಂಬಂಧಪಟ್ಟವರ ವಿರುದ್ಧ ಕ್ರಮ ಜರುಗಿಸಬೇಕು ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗೆ ಅಧ್ಯಕ್ಷರು ತಿಳಿಸಿದರು. ಮಾಗಡಿಯ ಎನ್.ವಿ. ಅಂಗಡಿ ಸರ್ಕಾರಿ ಪ್ರೌಢಶಾಲೆಗೆ `ಎನ್.ವಿ. ಅಂಗಡಿ' ಎಂಬ ಹೆಸರಿಗೆ ಕಪ್ಪು ಮಸಿ ಬಳಿದಿದೆ. ಎನ್.ವಿ. ಅಂಗಡಿ ದಾನ ಕೊಟ್ಟಿದ್ದರಿಂದ ಶಾಲೆಗೆ ಎನ್.ವಿ. ಅಂಗಡಿ ಸರ್ಕಾರಿ ಪ್ರೌಢಶಾಲೆ ಎಂದು ಹೆಸರಿಡಲಾಗಿದೆ. ತಕ್ಷಣ ಅದನ್ನು ಸರಿಪಡಿಸಬೇಕೆಂದು ಸದಸ್ಯ  ದೊಡ್ಡಗೌಡ್ರ ಸಭೆಗೆ ತಿಳಿಸಿದರು. ಜಿಲ್ಲೆಯಲ್ಲಿ ಸಮ್ಮೇಳನ, ಇತರೆ ಪ್ರಮುಖ  ಕಾರ್ಯಕ್ರಮ ಏರ್ಪಡಿಸುವಾಗ ಜಿಲ್ಲಾ ಪಂಚಾಯತ್ ಅಧ್ಯಕ್ಷ, ಉಪಾಧ್ಯಕ್ಷ ಹಾಗೂ ಆಯಾ ಕ್ಷೇತ್ರಗಳ ಜನಪ್ರತಿನಿಧಿಗಳ ಗಮನಕ್ಕೆ ತಂದು ದಿನಾಂಕ ನಿಗದಿಪಡಿಸಬೇಕು ಎಂದು ಅಧ್ಯಕ್ಷ ಎಂ.ಎಸ್. ಪಾಟೀಲ ಅಧಿಕಾರಿಗಳಿಗೆ ತಿಳಿಸಿದರು.  ಸಭೆಯಲ್ಲಿ ರೋಣ ಶಾಸಕ ಜಿ.ಎಸ್. ಪಾಟೀಲ, ಜಿ.ಪಂ. ಉಪಾಧ್ಯಕ್ಷ ರಮೇಶ್ ಮುಂದಿನಮನಿ,  ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.

ಶಿಥಿಲ ಶಾಲೆಗಳ ಪಟ್ಟಿ ಸಿದ್ಧ ಪಡಿಸಲು ಸೂಚನೆ

ಗದಗ: ಜಿಲ್ಲೆಯಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಶಾಲೆಗಳ ಪಟ್ಟಿ ತಯಾ ರಿಸುವಂತೆ  ಡಿಡಿಪಿಐ ರಾಜೀವ್ ನಾಯಕಗೆ ಸಿಇಒ ವಿ.ಜಿ.ತುರಮರಿ ಸೂಚಿಸಿ ದರು. ಜಿಲ್ಲೆಯ ನಾಗಸಮುದ್ರ, ಅಸೂಟಿ, ಸವಡಿ, ಚಿಂಚಲಿ ಶಾಲೆಗಳಲ್ಲಿ ಕೊಠಡಿಗಳು ಶಿಥಿಲಗೊಂಡು ಸೋರುತ್ತಿವೆ. ಕೊಠಡಿಗಳನ್ನು ಕೆಡವಿ ಹೊಸದಾಗಿ ನಿರ್ಮಿಸುವಂತೆ ಸದಸ್ಯರು ಆಗ್ರಹಿಸಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ, ಬಿಇಒಗಳ ಮೂಲಕ ದುರಸ್ತಿ ಕೈಗೊಳ್ಳಬೇಕಾದ ಶಾಲೆಗಳ ವರದಿ ತರಿಸಿಕೊಂಡು ಸರ್ಕಾರಕ್ಕೆ ಪ್ರಸ್ತಾವ ಕಳುಹಿಸಿ, ಹಣ ಬಿಡುಗಡೆಯಾದ ಬಳಿಕ ಆದ್ಯತೆ ಮೇರೆಗೆ ದುರಸ್ತಿ ಕಾರ್ಯ ಕೈಗೊಳ್ಳಲಾಗುವುದು. ಈ ಸಂಬಂಧ ಎಂಜಿನಿಯರ್ ಅವರಿಗೆ ಕೊಠಡಿಗಳ ಪರಿಶೀಲನೆ ನಡೆಸಲು ಸೂಚಿಸಲಾಗುವುದು. ಅಗತ್ಯವಿದ್ದರೆ ಕಟ್ಟಡ ಕೆಡವಿ ಹೊಸದಾಗಿ ನಿರ್ಮಿಸಲಾಗುವುದು ಎಂದು ಉತ್ತರಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.