ಶನಿವಾರ, ಏಪ್ರಿಲ್ 17, 2021
31 °C

ಕಪ್ಪತ್ತಗಿರಿ ಗುಡ್ಡಕ್ಕೆ ಬೆಂಕಿ: ಆತಂಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮುಂಡರಗಿ: ಮುಂಡರಗಿ, ಗದಗ ಹಾಗೂ ಶಿರಹಟ್ಟಿ ತಾಲ್ಲೂಕುಗಳಲ್ಲಿ ಹಬ್ಬಿರುವ ಕಪ್ಪತ್ತಗಿರಿಸಾಲಿನ ಕೆಲವು ಗುಡ್ಡಗಳಿಗೆ ಕಳೆದ ನಾಲ್ಕಾರು ದಿನಗಳಿಂದ ಬೆಂಕಿ ಬೀಳುತ್ತಿದ್ದು ಸಾರ್ವಜನಿಕರಲ್ಲಿ ಹಾಗೂ ಪರಿಸರ ಪ್ರೇಮಿಗಳಲ್ಲಿ ತೀವ್ರ ಆತಂಕ ಮೂಡಿಸಿದೆ.ಕಳೆದ ಶುಕ್ರವಾರ ಕಿಡಿಗೇಡಿಗಳು ಹಚ್ಚಿದ ಬೆಂಕಿಯಿಂದಾಗಿ ಕಪ್ಪತ್ತಗುಡ್ಡದ ಕೊನೆಯಲ್ಲಿರುವ ತಾಲ್ಲೂಕಿನ ಶಿಂಗಟಾಲೂರ ಈರಣ್ಣನ ಗುಡ್ಡ ಸಂಪೂರ್ಣವಾಗಿ ಸುಟ್ಟುಹೋಗಿದೆ. ರಾತ್ರಿ ಗುಡ್ಡದ ಹಿಂಬದಿಯಲ್ಲಿ ಕಾಣಿಸಿಕೊಂಡ ಬೆಂಕಿ ಜೋರಾಗಿ ಗಾಳಿ ಬೀಸುತ್ತಿದ್ದರಿಂದ ಕ್ಷಣಾರ್ಧದಲ್ಲಿ ಗುಡ್ಡವನ್ನೆಲ್ಲ ವ್ಯಾಪಿಸಿತು ಎಂದು ಪ್ರತ್ಯಕ್ಷದರ್ಶಿಗಳು ಹೇಳುತ್ತಿದ್ದಾರೆ. ಈರಣ್ಣನ ಗುಡ್ಡಕ್ಕೆ ಅಂಟಿಕೊಂಡಿರುವ ಸಂಜೀವಿನಿ ಹನುಮಪ್ಪನ ಗುಡ್ಡಕ್ಕೂ ಬೆಂಕಿ ವ್ಯಾಪಿಸಿದ್ದರಿಂದ ಎರಡೂ ಗುಡ್ಡಗಳಲ್ಲಿ ಬೆಳೆದಿದ್ದ ವಿವಿಧ ಬಗೆಯ ದೊಡ್ಡದೊಡ್ಡ ಗಿಡಮರಗಳು, ಪೊದೆಗಳು, ಬಳ್ಳಿಗಳು, ನಾನಾರೀತಿಯ ಔಷಧೀಯ ಸಸ್ಯಗಳು ಸಂಪೂರ್ಣವಾಗಿ ಭಸ್ಮವಾಗಿವೆ. ಪ್ರತೀವರ್ಷ ಮಾರ್ಚ್, ಏಪ್ರಿಲ್ ಹಾಗೂ ಮೇ ತಿಂಗಳುಗಳಲ್ಲಿ ವಿಪರೀತ ಬಿಸಿಲಿನಿಂದಾಗಿ ಗುಡ್ಡದಲ್ಲಿ ಬೆಳೆದಿರುವ ಹುಲ್ಲು ಹಾಗೂ ಇನ್ನಿತರೆ ಸಣ್ಣಪುಟ್ಟ ಗಿಡ ಗಂಟಿಗಳು ಒಣಗಿ ನಿಂತಿರುತ್ತವೆ. ಈ ಸಂದರ್ಭದಲ್ಲಿ ಕಪ್ಪತ್ತಗಿರಿಸಾಲಿನ ಗುಡ್ಡಗಳಿಗೆ ಒಂದಿಲ್ಲೊಂದು ರೀತಿ ಬೆಂಕಿ ಬೀಳುತ್ತಲೆ ಇರುತ್ತದೆ. ಗುಡ್ಡಗಳಿಗೆ ಯಾರು ಬೆಂಕಿ ಹಚ್ಚುತ್ತಾರೆ?, ಮತ್ತು ಏಕೆ ಬೆಂಕಿ ಹಚ್ಚುತ್ತಿದ್ದಾರೆ? ಎಂಬುವುದು ತಿಳಿಯದಾಗಿದೆ.ಒಣಗಿದ ಹುಲ್ಲಿಗೆ ಬೆಂಕಿ ಹಚ್ಚುವುದರಿಂದ ಹುಲ್ಲು ಬೇಗನೆ ಚಿಗಿಯುತ್ತದೆ ಎಂದು ಅಪಾರ್ಥ ಮಾಡಿಕೊಂಡಿರುವ ಕೆಲವು ದನಗಾಹಿಗಳು ಹಾಗೂ ಕುರಿಗಾರರು ಪ್ರತೀವರ್ಷ ಗುಡ್ಡಕ್ಕೆ ಬೆಂಕಿ ಹಚ್ಚುತ್ತಿರಬಹುದೆಂದು ಕೆಲವರು ಹೇಳುತ್ತಿದ್ದಾರೆ. ಗುಡ್ಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ವಿವಿಧ ಕಂಪೆನಿಗಳ ಗಾಳಿಯಂತ್ರಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿಯವರು ಗುಡ್ಡಕ್ಕೆ ಬೆಂಕಿ ಹಚ್ಚುತ್ತಿರಬಹುದೆಂದು ಕೆಲವರು ಶಂಕಿಸುತ್ತಿದ್ದಾರೆ.ಒಟ್ಟಿನಲ್ಲಿ ಪ್ರತೀ ವರ್ಷ ಬೇಸಿಗೆಯಲ್ಲಿ ಕಪ್ಪತ್ತಗಿರಿಸಾಲಿನ ವಿವಿಧ ಗುಡ್ಡಗಳಿಗೆ ಬೆಂಕಿ ಬೀಳುತ್ತಿರುವುದು ಸಾಮಾನ್ಯವಾಗಿದ್ದರೂ ಅರಣ್ಯ ಇಲಾಖೆಯು ಈವರೆಗೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಪರಿಸರ ಪ್ರೇಮಿಗಳು ಹಾಗೂ ಕಪ್ಪತ್ತಗಿರಿಸಾಲಿನ ಕೆಳಭಾಗದ ಗ್ರಾಮಗಳಲ್ಲಿ ವಾಸಿಸುತ್ತಿರುವ ಗ್ರಾಮಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅರಣ್ಯ ಇಲಾಖೆಯು ಮನಸ್ಸು ಮಾಡಿದರೆ ಪ್ರತೀವರ್ಷ ಗುಡ್ಡಗಳಿಗೆ ಬೆಂಕಿ ಬೀಳುವುದನ್ನು ತಡೆಗಟ್ಟಬಹುದಾಗಿದ್ದು ಆ ಕುರಿತು ಅರಣ್ಯ ಇಲಾಖೆಯು ಕೆಲವು ಶಾಶ್ವತ ಕ್ರಮಗಳನ್ನು ಕೈಗೊಳ್ಳಬೇಕಿದೆ.  ಯುಗಾದಿ ನಂತರ ಈರಣ್ಣನ ಗುಡ್ಡದಲ್ಲಿರುವ ವೀರಭದ್ರೇಶ್ವರನ ದೊಡ್ಡ ಜಾತ್ರೆ ಜರುಗಲಿದೆ. ಪ್ರತೀವರ್ಷ ಈರಣ್ಣನ ಜಾತ್ರೆಯ ಸಂದರ್ಭದಲ್ಲಿ ಹಸುರಿನಿಂದ ಕಂಗೊಳಿಸುತ್ತಿದ್ದ ಈರಣ್ಣನ ಗುಡ್ಡವು ಈಗ ಬೆಂಕಿಗೆ ಆಹುತಿಯಾಗಿರುವುದರಿಂದ ಗುಡ್ಡವೆಲ್ಲ ಕಪ್ಪು ಬೂದಿಯಿಂದ ಆವೃತ್ತವಾಗಿದ್ದು ಸದಾ ಬಣಗುಡುತ್ತಲಿದೆ.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.