ಶನಿವಾರ, ಮೇ 15, 2021
24 °C
ಮುಖ್ಯಮಂತ್ರಿಗೆ ನಿಯೋಗದ ಮನವಿ

ಕಪ್ಪತ್ತಗುಡ್ಡ: ವ್ಯನ್ಯಜೀವಿ ಧಾಮ ಘೋಷಣೆ ಬೇಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಗದಗ ಜಿಲ್ಲೆಯ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸದಂತೆ ಒತ್ತಾಯಿಸಿ ಜಿಲ್ಲೆಯ ದಲಿತ, ಅಲ್ಪಸಂಖ್ಯಾತ ಮತ್ತು ಕುರುಬ ಸಮುದಾಯದ ಜನರ ನಿಯೋಗವು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ನಗರದಲ್ಲಿ ಶುಕ್ರವಾರ ಮನವಿ ಸಲ್ಲಿಸಿತು.ಮುಖ್ಯಮಂತ್ರಿಗಳೊಂದಿಗೆ ಮಾತನಾಡಿದ ಅಖಿಲ ಭಾರತ ಬಂಜಾರ ಸೇವಾ ಸಂಘದ ಗದಗ ತಾಲ್ಲೂಕು ಘಟಕದ ಅಧ್ಯಕ್ಷ ಮೋತಿಲಾಲ ಚನ್ನಪ್ಪ ಮಾಳಗಿಮನಿ, `ಶಿರಹಟ್ಟಿ, ಮುಂಡರಗಿ ತಾಲ್ಲೂಕಿನಲ್ಲಿ ಹಲವು ವರ್ಷಗಳಿಂದ ಬರದ ಸ್ಥಿತಿ ಇದೆ. ಈ ಭಾಗದ ಜನರು ತಮ್ಮ ಜಾನುವಾರುಗಳ ಮೇವಿಗೆ ಕಪ್ಪತ್ತಗುಡ್ಡದಲ್ಲಿ ಬೆಳೆಯುವ ಹುಲ್ಲನ್ನು ಅವಲಂಬಿಸಿದ್ದಾರೆ. ಸರ್ಕಾರ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿದರೆ ಸ್ಥಳೀಯರಿಗೆ ತೊಂದರೆಯಾಗಲಿದೆ' ಎಂದು ಅಳಲು ತೋಡಿಕೊಂಡರು.`ಕಪ್ಪತ್ತಗುಡ್ಡದಲ್ಲಿ ವನ್ಯಜೀವಿಗಳೇ ಇಲ್ಲ. ಆದರೂ ಕೆಲ ಡೋಂಗಿ ಪರಿಸರವಾದಿಗಳು ರಾಜಕೀಯ ಉದ್ದೇಶಕ್ಕಾಗಿ ಈ ಪ್ರದೇಶವನ್ನು ವನ್ಯಜೀವಿ ಧಾಮ ಮಾಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಆ ಮೂಲಕ ಈ ಭಾಗದಲ್ಲಿರುವ ಲಂಬಾಣಿ, ಕುರುಬ, ದಲಿತ ಸಮುದಾಯದ ಜನರನ್ನು ಒಕ್ಕಲೆಬ್ಬಿಸಲು ಪ್ರಯತ್ನಿಸುತ್ತಿದ್ದಾರೆ' ಎಂದು ಅವರು ದೂರಿದರು.ಸ್ಥಳೀಯರ ಬದುಕಿಗೆ ಆಸರೆಯಾಗಿರುವ ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಘೋಷಿಸಿದರೆ ವಿಧಾನಸೌಧದ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸುತ್ತೇವೆ ಎಂದು ಗದಗ ಜಿಲ್ಲಾ ಬಂಜಾರ ರೈತ ವೇದಿಕೆ ಸಂಚಾಲಕ ಸಿ.ಲಕ್ಷ್ಮಣ ಹೇಳಿದರು.`ಹಿಂದುಳಿದ ವರ್ಗದವರಿಗೆ ಹಾಗೂ ದಲಿತರಿಗೆ ಅನ್ಯಾಯವಾಗಲು ಅವಕಾಶ ನೀಡುವುದಿಲ್ಲ. ಕಪ್ಪತ್ತಗುಡ್ಡವನ್ನು ವನ್ಯಜೀವಿ ಧಾಮವನ್ನಾಗಿ ಮಾಡುವ ಪ್ರಸ್ತಾವವನ್ನು ಅಂಗೀಕರಿಸುವುದಿಲ್ಲ. ಈ ಸಂಬಂಧ ಅರಣ್ಯ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರೊಂದಿಗೆ ಚರ್ಚಿಸುತ್ತೇನೆ' ಎಂದು ಸಿದ್ದರಾಮಯ್ಯ ನಿಯೋಗಕ್ಕೆ ಭರವಸೆ ನೀಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.