ಗುರುವಾರ , ಮೇ 19, 2022
21 °C

ಕಪ್ಪು ಹಣದ ಚೆಲ್ಲಾಟ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭಾರತದ ರೂಪಾಯಿ ಮೌಲ್ಯ ಕುಸಿಯುತ್ತಿರುವ ಸಂದರ್ಭದಲ್ಲೇ ಕೇಂದ್ರ ಸರ್ಕಾರ ಕಪ್ಪುಹಣದ ಕುರಿತಂತೆ ಸಂಸತ್ತಿನಲ್ಲಿ ಶ್ವೇತಪತ್ರ ಮಂಡಿಸಿದೆ. ಮೇಲ್ನೋಟಕ್ಕೆ ಇದು ಸರ್ಕಾರದ ಕಾಳಜಿಗೆ ಸಂಬಂಧಿಸಿದ ಅಂಶ ಎನಿಸಿದರೂ ಇದೊಂದು ವ್ಯರ್ಥ ಕಸರತ್ತು ಎಂಬುದರಲ್ಲಿ ಎರಡು ಮಾತಿಲ್ಲ.ಕಪ್ಪುಹಣದ ಸಂಗ್ರಹ ಮತ್ತು ಅದರ ಚಲಾವಣೆಯಲ್ಲಿ ಭಾರತ ವಿಶ್ವದಲ್ಲೇ ಮೊದಲ ಸ್ಥಾನದಲ್ಲಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ವ್ಯವಹಾರಗಳಲ್ಲಿ ಕಪ್ಪುಹಣದ ವಹಿವಾಟು ನಿರ್ಭಿಡೆಯಿಂದ ಚಾಲ್ತಿಯಲ್ಲಿದೆ. ಅಲಿಖಿತವಾಗಿ ಕೊಡುಕೊಳ್ಳುವ ವ್ಯಕ್ತಿಗಳಿಬ್ಬರಲ್ಲೂ ಅದೊಂದು ಒಪ್ಪಿತ ವಿಧಾನವಾಗಿ ಮಾರ್ಪಟ್ಟಿದೆ.ಭಾರತೀಯರು ಸ್ವಿಸ್ ಬ್ಯಾಂಕಿನಲ್ಲಿ ಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿ ಕಪ್ಪುಹಣ ಇಟ್ಟಿದ್ದಾರೆ ಎಂದು ಒಂದು ಸಮೀಕ್ಷೆ ಹೇಳುತ್ತದೆ. ಸಿಬಿಐ ಅಂದಾಜಿನ ಪ್ರಕಾರ 84 ಲಕ್ಷ ಕೋಟಿ ರೂಪಾಯಿ ಭಾರತೀಯರ ಕಪ್ಪುಹಣ ಅಲ್ಲಿ ಕೊಳೆಯುತ್ತಿದೆ ಎಂದು ಹೇಳಲಾಗಿದೆ.

 

ಈ ಅಂದಾಜುಗಳನ್ನು ನಾಚಿಸುವಂತೆ ದೇಶದೊಳಗೆ ಸರಿಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿಗಳಷ್ಟು ಪ್ರಮಾಣದ ಕಪ್ಪುಹಣ ಪರ್ಯಾಯ ರೂಪದಲ್ಲಿ ಚಲಾವಣೆಯಲ್ಲಿದೆ ಎನ್ನಲಾಗುತ್ತಿದೆ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಕಪ್ಪುಹಣ ಹೇಗೆ ಹುಟ್ಟುತ್ತದೆ? ಅದನ್ನು ಹೇಗೆ ಬಳಸಲಾಗುತ್ತದೆ? ಈ ಹಣವೆಲ್ಲಾ ಎಲ್ಲಿ ಹೋಗುತ್ತದೆ ಮತ್ತು ಇದನ್ನು ಹೇಗೆ ತಡೆಗಟ್ಟಬಹುದು ಎನ್ನುವ ಪ್ರಶ್ನೆಗಳಿಗೆ ಶಾಶ್ವತ ಪರಿಹಾರ ಕಂಡುಹಿಡಿಯುವ ಬಗ್ಗೆ ಯಾರೂ ಅಷ್ಟಾಗಿ ಚಿಂತಿಸುತ್ತಿಲ್ಲ.ವಿಕಿಲೀಕ್ಸ್ ಭಾರತೀಯರ ಕಪ್ಪುಹಣದ ಕುರಿತಂತೆ ವಿವರಿಸುವ ಮುನ್ನ ರಾಜಕಾರಣಿಗಳ ಪಾಲಿಗೂ ಇದು ಗಂಭೀರ ಎನಿಸಿರಲೇ ಇಲ್ಲ. ಎಲ್ಲರೂ ಬೊಬ್ಬೆ ಹೊಡೆಯಲು ಶುರುಮಾಡಿದ ಮೇಲೆಯೇ ಕೇಂದ್ರ ಸರ್ಕಾರ ಶ್ವೇತಪತ್ರ ಮಂಡಿಸಿದೆ. ಈ ಮೂಲಕ ಟೀಕೆಗಳಿಗೆ ಪ್ರತ್ಯುತ್ತರ ಎಂಬಂತೆ ಔಪಚಾರಿಕ ಪ್ರಕ್ರಿಯೆಯೊಂದನ್ನು ಪೂರೈಸಿದೆಯೇ ಹೊರತಾಗಿ ಇದಕ್ಕೊಂದು  ತಾರ್ಕಿಕ ಅಂತ್ಯವನ್ನು ಕಾಣಿಸುವ ಪ್ರಾಮಾಣಿಕ ಪ್ರಯತ್ನವನ್ನೇನೂ ಮಾಡಿಲ್ಲ.ಸಾಮಾನ್ಯವಾಗಿ ಕಪ್ಪುಹಣ ಎಂದರೆ ಲೆಕ್ಕಕ್ಕೆ ತೋರಿಸದೇ ಶೇಖರಿಸಿಟ್ಟ ಹಣ. ರಾಜಕಾರಣಿಗಳು ಹಾಗೂ ಅಧಿಕಾರಿಗಳು ಪಡೆಯುವ ಲಂಚ, ತೆರಿಗೆಗಳ್ಳತನ ಮತ್ತು ದೊಡ್ಡ ಪ್ರಮಾಣದ ದುಡ್ಡಿನ ಹಗರಣಗಳು ಕಪ್ಪುಹಣದ ಮೂಲ ಎನಿಸಿವೆ.ಭಾರತದಲ್ಲಿ ಕಪ್ಪುಹಣವು ಲಂಚದ ಮುಖಾಂತರವೇ ಹುಟ್ಟುತ್ತದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಬಹುತೇಕ ಜನಪ್ರತಿನಿಧಿಗಳು ಇವತ್ತು ಲಂಚ ಪಡೆಯುವವರೇ ಆಗಿದ್ದಾರೆ. ಈ ರೀತಿಯಾಗಿ ಪಡೆದ ಲಂಚದ ಹಣವನ್ನು ಇವರು ಆದಾಯ ತೆರಿಗೆಯಲ್ಲಿ ತೋರಿಸುವುದೇ ಇಲ್ಲ ಮತ್ತು ಇದನ್ನು ತೋರಿಸಲು ಬರುವುದೂ ಇಲ್ಲ.ಈ ರೀತಿ ಮೋಸದಿಂದ ಶೇಖರಣೆಯಾದ ಹಣ ಕಪ್ಪುಹಣದ ಗುಡ್ಡೆಯಾಗಿ ಪರಿವರ್ತನೆಯಾಗುತ್ತದೆ. ಅಂತೆಯೇ ಅಧಿಕಾರಶಾಹಿ ಪಡೆಯುವ ಲಂಚದ ಹಣವೂ ಕಪ್ಪುಹಣದ ಮತ್ತೊಂದು ಪ್ರಬಲ ಉಗಮಸ್ಥಾನ.ವ್ಯವಹಾರಸ್ಥರು, ರಿಯಲ್ ಎಸ್ಟೇಟ್, ಉತ್ಪಾದನಾ ವಲಯ, ಚಿಲ್ಲರೆ ವ್ಯಾಪಾರ...ಹೀಗೆ ಸಾಮಾನ್ಯ ಜನಜೀವನಕ್ಕೆ ಅನಿವಾರ್ಯವಾದ ಎಲ್ಲ ದೊಡ್ಡ ಮತ್ತು ಸಣ್ಣ ಕ್ಷೇತ್ರಗಳಲ್ಲಿನ ಕೊಡುಕೊಳ್ಳುವಿಕೆಯಲ್ಲಿ ಆದಾಯ ತೆರಿಗೆಯನ್ನು ಉದ್ದೇಶಪೂರ್ವಕವಾಗಿಯೇ ತಪ್ಪಿಸಲಾಗುತ್ತದೆ. ಸರ್ಕಾರಕ್ಕೆ ತೋರಿಸುವ ಮತ್ತು ಬಚ್ಚಿಡುವ ಅಂದರೆ ರಾಮನ ಲೆಕ್ಕ ಮತ್ತು ಕೃಷ್ಣನ ಲೆಕ್ಕಗಳನ್ನು ಇವರೆಲ್ಲರೂ ಬೇಕೆಂದೇ ಸೃಷ್ಟಿಸುತ್ತಾರೆ.

 

ಇದಕ್ಕೆ ಲೆಕ್ಕ ಪರಿಣತರೇ ಖುದ್ದು ಸಹಕರಿಸಿ ಎಲ್ಲೆಲ್ಲಿ ಲೆಕ್ಕ ತಪ್ಪಿಸಬೇಕೆಂಬುದನ್ನು ಹೇಳಿಕೊಡುತ್ತಾರೆ. ಯಾವಾಗ ಒಬ್ಬ ವ್ಯಾಪಾರಸ್ಥ ಅಥವಾ ಉದ್ದಿಮೆದಾರ ತಾನು ಗಳಿಸಿದ ಆದಾಯಕ್ಕೆ ಲೆಕ್ಕ ತೋರಿಸದೇ ವ್ಯಾಪಾರ ಮಾಡುತ್ತಾನೆಯೋ ಆ ಕ್ಷಣದಲ್ಲೇ ಕಪ್ಪುಹಣ ಜನ್ಮ ತಾಳುತ್ತದೆ. ಹೀಗಾಗಿ ಶ್ರೀಸಾಮಾನ್ಯರಾದಿಯಾಗಿ ಎಲ್ಲ ವರ್ಗದ ವ್ಯಾಪಾರಿಗಳು, ಮಾರಾಟಗಾರರು, ಹಂಚಿಕೆದಾರರು, ವ್ಯವಹಾರಸ್ಥರು ಇವತ್ತು ಕಪ್ಪುಹಣ ಎಂಬ ಅನಿಷ್ಟದ ಹುಟ್ಟಿಗೆ ಕಾರಣರಾಗಿದ್ದಾರೆ.ರಾಜಕಾರಣಿಗಳು ಹಾಗೂ ಕಂಪೆನಿಗಳ ಹಗರಣದ ಸರಮಾಲೆಗಳಂತೂ ಲೆಕ್ಕಕ್ಕೇ ಇಲ್ಲ. ನೆಹರೂ ಕಾಲದಿಂದಲೂ ಇದ್ದ ಇಂತಹ ಹಗರಣಗಳ ಸರಮಾಲೆ ಈಗ ಅಗಣಿತ ಸ್ವರೂಪ ಪಡೆದುಕೊಂಡಿದೆ. ಅದರಲ್ಲೂ  2ಜಿ ರೇಡಿಯೊ ತರಂಗಾಂತರ ಪರವಾನಗಿ ಹಂಚಿಕೆ ಹಗರಣ, ಗಣಿ ಹಗರಣ, ನಕಲಿ ಛಾಪಾ ಕಾಗದ ಹಗರಣಗಳಂತಹ ಪ್ರಸಂಗಗಳು ಎಷ್ಟೊಂದು ದೊಡ್ಡ ಮೊತ್ತದ ಹಗರಣಗಳು ಎಂಬುದಕ್ಕೆ ಸಾಂಕೇತಿಕವಾಗಿವೆ.ತೆರಿಗೆ ತಪ್ಪಿಸುವವರು ಹೇಗಿರುತ್ತಾರೆ ಎಂಬುದಕ್ಕೆ ಪುಣೆಯ ಹಸನ್ ಅಲಿಯಂಥವರು ನಮ್ಮ ಕಣ್ಣಿಗೆ ಗೋಚರಿಸುತ್ತಾರೆ. ರಾಜಕಾರಣಿಗಳು ತಾವು ಗಳಿಸಿದ ಮೋಸದ ಹಣವನ್ನೆಲ್ಲಾ ಸುರಕ್ಷಿತವಾಗಿ ಇಡಲು ಆರಿಸಿಕೊಳ್ಳುವುದು ಸ್ವಿಸ್ ಬ್ಯಾಂಕ್ ಅನ್ನೇ. ಅಲ್ಲಿನ ಬ್ಯಾಂಕುಗಳು ಇವರ ಪಾಲಿಗೆ ಸ್ವರ್ಗ ಸಮಾನ. ಹೀಗಾಗಿ ಸರಿ ಸುಮಾರು 30 ಸಾವಿರ ಲಕ್ಷ ಕೋಟಿ ರೂಪಾಯಿಗಳನ್ನು ಭಾರತೀಯರು ಸ್ವಿಸ್ ಬ್ಯಾಂಕ್‌ನಲ್ಲಿ ಇರಿಸಿದ್ದಾರೆ ಎಂದು ಅಂದಾಜಿಸಲಾಗಿದೆ.ಈ ಬೃಹತ್ ಮೊತ್ತವು ಭಾರತದ ಪ್ರತಿಯೊಬ್ಬ ಪ್ರಜೆಯ ಹಣ. ಇದನ್ನು ಭಾರತಕ್ಕೆ ವಾಪಸು ತರುವುದು ಯಾವುದೇ ಸರ್ಕಾರದ ಆದ್ಯ ಕರ್ತವ್ಯ. ಆದರೇನು ಮಾಡುವುದು? ಈ ಕಪ್ಪು ಹಣವೆಲ್ಲಾ ಆಳುವ ಪ್ರತಿನಿಧಿಗಳದ್ದೇ ಆಗಿರುವುದರಿಂದ ಅವರ‌್ಯಾರಿಗೂ ಇದನ್ನು ವಾಪಸು ತರುವ ಆಲೋಚನೆ ಸುಲಭಕ್ಕೆ ರುಚಿಸುತ್ತಿಲ್ಲ. ಆದಾಗ್ಯೂ ಒಂದೊಮ್ಮೆ ಈ ಹಣವನ್ನು ರಾಷ್ಟ್ರೀಯ ಸಂಪತ್ತು ಎಂದು ಘೋಷಿಸಿ ಅದನ್ನು ರಾಷ್ಟ್ರದ ಅಭ್ಯುದಯಕ್ಕೆ ಬಳಸಿದ್ದೇ ಆದರೆ ಬಹುಶಃ ಯಾರೂ ಇದಕ್ಕೆ ತಕರಾರು ಒಡ್ಡುವುದಿಲ್ಲ ಎಂದೆನಿಸುತ್ತದೆ.ಕಪ್ಪುಹಣವನ್ನು ಹೇಗೆ ತಪ್ಪಿಸಬಹುದು?

ಲಂಚದ ಹಾವಳಿಯನ್ನು ತಪ್ಪಿಸುವಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರದ ಅಧೀನ ಲಂಚ ನಿರೋಧಕ ಸಂಸ್ಥೆಗಳು ನಿರತವಾಗಿದ್ದರೂ ಲಂಚವನ್ನು ತಪ್ಪಿಸುವುದು ಸಾಧ್ಯವಾಗಿಲ್ಲ. ಕೆಳದರ್ಜೆಯ ಸಾಮಾನ್ಯರ ಲಂಚಗುಳಿತನವನ್ನು ತಪ್ಪಿಸಲು ಮುಂದುವರೆದ ದೇಶಗಳಲ್ಲಿ ಇರುವಂತಹ `ಕನ್ಸಲ್ಟಿಂಗ್ ಸರ್ವೀಸ್ ಏಜೆನ್ಸೀಸ್~ ಅಥವಾ ಹೊರಗುತ್ತಿಗೆ ಪದ್ಧತಿಯನ್ನು ಪರಿಚಯ ಮಾಡುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ ಲಂಚವನ್ನು ತಪ್ಪಿಸಬಹುದಾಗಿದೆ.ಉದಾಹರಣೆಗೆ ಮೊದಲು ನಾವು ಒಂದು ಪಾಸ್‌ಪೋರ್ಟ್ ಪಡೆಯಲು ಅಥವಾ ನವೀಕರಿಸಲು ಕಚೇರಿಗಳಲ್ಲಿ ಲಂಚ ಕೊಡುತ್ತಿದ್ದೆವು. ಇದೊಂದು ಪದ್ಧತಿಯಾಗಿಯೇ ಇತ್ತು. ಈಗ ಪಾಸ್  ಪೋರ್ಟ್ ಲೈಸೆನ್ಸ್ ನವೀಕರಣದಂತಹ ಪ್ರಕ್ರಿಯೆಗಳನ್ನು `ಬ್ಯಾಂಗಲೋರ್ ಒನ್~ ಎನ್ನುವ ಹೊರಗುತ್ತಿಗೆ ಸಂಸ್ಥೆಗೆ ವಹಿಸಿರುವುದರಿಂದ `ಬ್ಯಾಂಗಲೋರ್ ಒನ್~ ಕರಾರುವಾಕ್ಕು ಸಮಯದಲ್ಲಿ ಪಾಸ್‌ಪೋರ್ಟ್ ವಿತರಣೆ ಮಾಡುತ್ತದೆ. ಆದರೆ ಈ ಪ್ರಕ್ರಿಯೆಗೆ ಪ್ರೊಸೆಸ್ ಛಾರ್ಜ್ ಅಥವಾ ಫೀ ಎಂದು 500 ರೂಪಾಯಿಗಳನ್ನು ಪಡೆಯಲಾಗುತ್ತದೆ.ಒಂದು ವೇಳೆ ನಾವು ಇದನ್ನು ಲಂಚದ ಹಣ ಎಂದೇನಾದರೂ ಕೊಟ್ಟಿದ್ದರೆ ಅದು ಕಪ್ಪಹಣದ ಸೃಷ್ಟಿಗೆ ಕಾರಣವಾಗುತ್ತಿತ್ತು. ಅದನ್ನೇ ಹೊರಗುತ್ತಿಗೆ ಏಜೆನ್ಸಿಗೆ ನೀಡಿದಾಗ ಅವರು ಇದಕ್ಕೆ ರಸೀದಿ ಕೊಡುತ್ತಾರೆ. ಆಗ ಇದು ಲಂಚದ ಹಣವಾಗಿ ಕಪ್ಪು ಪಟ್ಟಿಗೆ ಸೇರದೆ ಹೊರಗುಳಿಯುತ್ತದೆ.ಯಾವುದಾದರೂ ನ್ಯಾಷನಲ್ ಬ್ಯಾಂಕಿನಲ್ಲಿ ನೀವು ಸಾಲ ಪಡೆಯಬೇಕೆಂದು ಅರ್ಜಿ ಹಾಕಿದರೆ ಅಂತಹ ಅರ್ಜಿಯ ಪ್ರೊಸೆಸ್ಸಿಂಗ್‌ಗೆ ಕನಿಷ್ಠ ಒಂದು ತಿಂಗಳಾದರೂ ಹಿಡಿಯುತ್ತದೆ. ಅದೇ ಐಸಿಐಸಿಐನಂತಹ ಖಾಸಗಿ ಬ್ಯಾಂಕಿನಲ್ಲಿ ಅರ್ಜಿ ಸಲ್ಲಿಸಿದಾಗ ಅದು ಕೇವಲ 2-3 ದಿನಗಳಲ್ಲೇ ಮುಗಿದುಹೋಗುತ್ತದೆ. ಈ ಪ್ರೊಸೆಸ್ಸಿಂಗ್ ಪರಿಶೀಲನೆಗೆ ಖಾಸಗಿ ಬ್ಯಾಂಕುಗಳು ಹೊರಗುತ್ತಿಗೆ ಸೇವೆಯನ್ನು ಆಧರಿಸುತ್ತವೆ ಮತ್ತು ಅದಕ್ಕಾಗಿ ಪ್ರತ್ಯೇಕ ಶುಲ್ಕ ವಿಧಿಸುತ್ತವೆ. ಈ ಶುಲ್ಕಕ್ಕೆ ಅವು ರಸೀದಿಯನ್ನೂ ನೀಡುವುದರಿಂದ ಅದು ಲೆಕ್ಕದಲ್ಲಿಯೇ ಸೇರುತ್ತದೆ. ಲೆಕ್ಕ ತಪ್ಪಿಸಿಕೊಳ್ಳಲು ಬರುವುದಿಲ್ಲ.ಈ ರೀತಿಯಾಗಿ ಸಂಘ ಸಂಸ್ಥೆಗಳು ತಮ್ಮ ಕೆಲಸಗಳನ್ನು ಒಂದೊಂದಾಗಿ ಹೊರಗುತ್ತಿಗೆ ಸಂಸ್ಥೆಗಳಿಗೆ ಅಥವಾ `ಕನ್ಸಲ್ಟಿಂಗ್ ಸರ್ವೀಸ್ ಏಜೆನ್ಸೀಸ್~ಗಳಿಗೆ ಕೊಡುವುದರಿಂದ ಲಂಚ ಎನ್ನುವ ಶಬ್ದವನ್ನು ದುರ್ಬಲಗೊಳಿಸಿ `ಪ್ರೊಸೆಸ್ ಛಾರ್ಜ್~ ಅಂತಾ ಮಾರ್ಪಡಿಸಬಹುದು. ಇದನ್ನು ಸಣ್ಣಪುಟ್ಟ ಸರ್ಕಾರಿ ಕೆಲಸಗಳಿಗೂ ಅನ್ವಯಿಸಬಹುದಾಗಿದೆ.ಇನ್ನು ಸರ್ಕಾರಿ ಕಚೇರಿಗಳನ್ನು ಬ್ಯಾಂಕುಗಳ ತರಹ ಕಾರ್ಪೊರೇಟ್ ಪದ್ಧತಿಗೆ ಒಳಪಡಿಸುವ ಮೂಲಕ ಕರಾರುವಕ್ಕಾಗಿ ಕೆಲಸ ಮಾಡುವ ಹಾಗೆ ಮಾಡಿದರೆ ಅಲ್ಲೂ ಕೂಡಾ ಲಂಚವನ್ನು ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಕರ್ನಾಟಕ ಸರ್ಕಾರ ಈಗ `ಸಕಾಲ~ವನ್ನು ಪರಿಚಯಿಸಿದೆ. ಅಂದರೆ ಸಲಹಾ ಪದ್ಧತಿಯನ್ನು ಅಳವಡಿಸುವುದರಿಂದ ಲಂಚದ ಪದ್ಧತಿಯನ್ನು ಮತ್ತು ಇದರ ವ್ಯಾಖ್ಯಾನವನ್ನು ಧಾರಾಳವಾಗಿ ಬದಲಿಸಬಹುದು. ಆದರೆ ಇದು ಎಷ್ಟರಮಟ್ಟಿಗೆ ಫಲಿತಾಂಶ ನೀಡುತ್ತದೆ ಎಂಬುದೇ ನಮ್ಮೆದುರು ಇರುವ ಬಹು ದೊಡ್ಡ ಪ್ರಶ್ನೆ.ತೆರಿಗೆಗಳ್ಳತನ ತಪ್ಪಿಸುವವರು

ಶೇಕಡ 99ರಷ್ಟು ಜನರು ಪ್ರತ್ಯಕ್ಷವಾಗಿಯೋ ಅಥವಾ ಅಪ್ರತ್ಯಕ್ಷವಾಗಿಯೋ ಕಪ್ಪುಹಣದ ಉತ್ಪಾದಕರೇ ಆಗಿದ್ದಾರೆ. ತೆರಿಗೆಗಳ್ಳತನದಿಂದ ತಪ್ಪಿಸಿಕೊಳ್ಳುವವರಲ್ಲಿ ಕೇವಲ ಹಣವಂತರೇ ಸೇರಿಲ್ಲ.ಸಾಮಾನ್ಯರೂ ತಮಗೆ ಅರಿವಿಲ್ಲದೆ ಈ ವಿಷವರ್ತುಲದಲ್ಲಿ ಭಾಗಿಯಾಗುತ್ತಿದ್ದಾರೆ. ಆದ್ದರಿಂದ ಸರ್ಕಾರ ಈ ನಿಟ್ಟಿನಲ್ಲಿ ಭಿನ್ನ ಚಿಂತನೆಗಳನ್ನು ಅಳವಡಿಸಿಕೊಳ್ಳುವ ಮೂಲಕ ಆದಾಯ ತೆರಿಗೆಯನ್ನು ಅಪ್ರತ್ಯಕ್ಷ ರೂಪದಲ್ಲಿ ಹೇರುವ ಚಿಂತನೆ ನಡೆಸಬಹುದು.ಭಾರತದಲ್ಲಿ 2011-12ರಲ್ಲಿ 1.69 ಲಕ್ಷ ಕೋಟಿ ರೂಪಾಯಿಗಳ ವೈಯಕ್ತಿಕ ಆದಾಯ ತೆರಿಗೆಯನ್ನು ಸಂಗ್ರಹಿಸಲಾಗಿದೆ. ಒಂದು ವೇಳೆ ವೈಯಕ್ತಿಕ ಆದಾಯ ತೆರಿಗೆಯನ್ನು ರದ್ದುಗೊಳಿಸಿ ಅದನ್ನೇ ಅಪ್ರತ್ಯಕ್ಷವಾಗಿ ಆಸ್ತಿ ನೋಂದಣಿ ತೆರಿಗೆ ಎಂದು ವಿಧಿಸಿದರೆ ಅಂದಾಜು ಶೇಕಡ 6ರಂತೆ 1.8 ಲಕ್ಷ ಕೋಟಿ ಸಂಗ್ರಹಿಸಬಹುದು.ಇದನ್ನು ಮೂಲದಲ್ಲಿಯೇ ಅಂದರೆ ನೋಂದಣಿ ಸಮಯದಲ್ಲಿಯೇ ಸಂಗ್ರಹಿಸುವುದರಿಂದ ಮತ್ತು ಆಸ್ತಿಗಳ ಬೆಲೆಯನ್ನು ಸರ್ಕಾರದವರೇ ನಿಗದಿಪಡಿಸುವುದರಿಂದ ಆಸ್ತಿ ತೆರಿಗೆಯನ್ನು ತಪ್ಪಿಸುವ ಪ್ರಮೇಯವೇ ಇರುವುದಿಲ್ಲ. ಈ ಆಸ್ತಿ ನೋಂದಾವಣಿ ಸಮಯದಲ್ಲಿ ಕಡಿಮೆ ಬೆಲೆಯಲ್ಲಿ ತೋರಿಸುವುದು ಆದಾಯ ತೆರಿಗೆಯನ್ನು ತಪ್ಪಿಸುವುದಕ್ಕಾಗಿಯೇ ಹೊರತು ಸ್ಟ್ಯಾಂಪ್ ಡ್ಯೂಟಿ ತಪ್ಪಿಸುವುದಕ್ಕಂತೂ ಅಲ್ಲ.

 

ಇದೇ ರೀತಿಯಾಗಿ ನಮ್ಮಲ್ಲಿ ಬಳಕೆಯಾದ ವಾಹನಗಳನ್ನು ಮಾಲೀಕತ್ವದ ಹೆಸರು ಬದಲಾಯಿಸುವಾಗ ಶೇಕಡ 10ರಷ್ಟು ತೆರಿಗೆ ವಿಧಿಸಿದರೆ ಇಷ್ಟೇ ಮೊತ್ತವನ್ನು `ಹಸ್ತಾಂತರ ತೆರಿಗೆ~ ಎಂದು ಸಂಗ್ರಹ ಮಾಡಬಹುದು. ಇಲ್ಲಿಯೂ ಕೂಡಾ ಮೂಲದಲ್ಲಿಯೇ ತೆರಿಗೆಯನ್ನು ಸಂಗ್ರಹಿಸುವುದರಿಂದ ತೆರಿಗೆಗಳ್ಳತನದ ಪ್ರಶ್ನೆಯೇ ಉದ್ಭವಿಸುವುದಿಲ್ಲ.ತೆರಿಗೆಗಳ್ಳತನ ಇಲ್ಲವೆಂದ ಮೇಲೆ ಕಪ್ಪುಹಣದ ಪ್ರಶ್ನೆಯೇ ಇರುವುದಿಲ್ಲ. ಇವೆರಡೂ ಸಣ್ಣ ಉದಾಹರಣೆಯಷ್ಟೇ. ಸರ್ಕಾರವು ಈ ನಿಟ್ಟಿನಲ್ಲಿ ಚಿಂತಿಸಿ ಆದಾಯ ತೆರಿಗೆಯನ್ನು ಹಂಚುವಾಗ ಅಂದರೆ ಮೊದಲು ವೈಯಕ್ತಿಕ ಆದಾಯ ತೆರಿಗೆಯನ್ನು ಅನಂತರ ಕಾರ್ಪೋರೇಟ್ ತೆರಿಗೆಯನ್ನು ರದ್ದುಗೊಳಿಸಿ ಅಷ್ಟೇ ಸಮಾನವಾದ ಅಪ್ರತ್ಯಕ್ಷ ತೆರಿಗೆಯನ್ನು ವಿಧಿಸಿ ಕಪ್ಪುಹಣ ತಡೆಗೆ ನಾಂದಿ ಹಾಡಬಹುದು.ಭಾರತವು ಅಮೆರಿಕ ಸರ್ಕಾರದಿಂದ ಏನಾದರೂ ಲಾಭ ಪಡೆಯಬೇಕೆಂದರೆ ಅಲ್ಲಿರುವ ಕನ್ಸಲ್ಟಿಂಗ್ ಫರ್ಮ್ಸಗಳ ಉಪಯೋಗದಿಂದ ತಮ್ಮ ಕೆಲಸಗಳನ್ನು ಮಾಡಿಸಿಕೊಳ್ಳುತ್ತದೆ ಮತ್ತು ಅದಕ್ಕೆ ಕನ್ಸಲ್ಟಿಂಗ್ ಫೀ ಎಂದು ಶುಲ್ಕ ಭರಿಸುತ್ತದೆ. ಇದಕ್ಕಾಗಿಯೇ ಅಲ್ಲಿ ಅಧಿಕೃತ ಕನ್ಸಲ್ಟಿಂಗ್ ಸಂಸ್ಥೆಗಳಿವೆ. ಅಮೆರಿಕ ಸರ್ಕಾರ ಇವುಗಳಿಗೆ ಅಧಿಕೃತ ಮಾನ್ಯತೆಯನ್ನೂ ನೀಡಿದೆ. ಹೀಗಾಗಿ ಇವುಗಳನ್ನು ಅಲ್ಲಿ `ಲಾಬಿಯಿಂಗ್ ಫರ್ಮ್ಸ~ ಎಂದೇ ಕರೆಯಲಾಗುತ್ತದೆ.ನೀರಾ ರಾಡಿಯಾ ಹಗರಣದಲ್ಲಿ ಆದದ್ದು ಇಂತಹುದೇ ಪ್ರಕ್ರಿಯೆ. ಆದರೆ ಭಾರತದಲ್ಲಿ ಈ ಪ್ರಕ್ರಿಯೆಗೆ ಮಾನ್ಯತೆ ಇಲ್ಲವಾದ್ದರಿಂದ ಅದು ಲಂಚದ ಹಗರಣ ಎನಿಸಿಕೊಂಡಿತು.

ಭಾರತ ಮತ್ತು ಅಮೆರಿಕ ನಡುವಣ ನಾಗರಿಕ ಪರಮಾಣು ಒಪ್ಪಂದದ ಪ್ರಕ್ರಿಯೆಯಲ್ಲಿ ಭಾರತ ಅಮೆರಿಕದ ಬಾರ್ಬರ್ ಗ್ರಿಫಿತ್ ಅಂಡ್ ರೋಜರ್ಸ್‌ ಎಂಬ ಸಂಸ್ಥೆಯ ಮುಖಾಂತರ (ಬಿಜಿಆರ್) ವ್ಯವಹರಿಸಿತ್ತು.ಬಿಜಿಆರ್ ಅಮೆರಿಕ ಸರ್ಕಾರಕ್ಕೆ ಭಾರತದ ಪರ ಮಧ್ಯಸ್ಥಗಾರನಾಗಿ ವ್ಯವಹಾರ ನಡೆಸಿತು. ಇದಕ್ಕಾಗಿ ಭಾರತ ಬಿಜಿಆರ್ ಸಂಸ್ಥೆಗೆ ವರ್ಷವೊಂದಕ್ಕೆ 3.4 ಕೋಟಿ ರೂಪಾಯಿಗಳನ್ನು ನೀಡಿದೆ. ಇದನ್ನು ಅಮೆರಿಕದ `ಮೇಲ್ ಟುಡೆ~ ಪತ್ರಿಕೆಯೇ ವಿವರಿಸಿದೆ.

 

ಅಂದರೆ ಇಂತಹ ಕನ್ಸಲ್ಟಿಂಗ್ ಸಂಸ್ಥೆಗಳು ಪ್ರೊಸೆಸ್ಸಿಂಗ್ ಕಾರ್ಯವನ್ನು ನಡೆಸಿ ಅದಕ್ಕೆ ಶುಲ್ಕ ಪಡೆದಾಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆಯೇನೂ ಆಗುವುದಿಲ್ಲ. ಪರಿಶೀಲನೆ, ಪರವಾನಗಿ ಅಥವಾ ರದ್ದುಗೊಳಿಸುವ ಅಂತಿಮ ಅಧಿಕಾರ ಮೂಲ ಸಂಸ್ಥೆಯಾದ ಸರ್ಕಾರದ ಬಳಿಯೇ ಇರುತ್ತದೆ. ಈ ದಿಸೆಯಲ್ಲಿ ಗಂಭೀರ ಚಿಂತನೆ ನಡೆಯಬೇಕಷ್ಟೇ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.