ಸೋಮವಾರ, ಮೇ 23, 2022
24 °C

ಕಬ್ಬು ಕಟಾವಿಗೆ ಬಂದ ಯಂತ್ರಗಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಜಮಖಂಡಿ: ಕೃಷಿಯಿಂದ ವಿಮುಕ್ತರಾದ ಕೃಷಿ ಕಾರ್ಮಿಕರ ಕೊರತೆಯಿಂದ ಉಂಟಾಗುತ್ತಿರುವ ಕೂಲಿ ಆಳುಗಳ ಸಮಸ್ಯೆಗಳನ್ನು ಸಮರ್ಥವಾಗಿ ನಿಭಾಯಿಸಿ ಕೃಷಿ ಕ್ಷೇತ್ರವನ್ನು ಉಳಿಸಲು ಯಂತ್ರೋಪಕರಣಗಳ ಬಳಕೆ ಇಂದು ಅನಿವಾರ್ಯ ಆಗಿದೆ. ಅಂತೆಯೇ ಕಬ್ಬು ಕಟಾವು ಮಾಡುವ ಯಂತ್ರಗಳಾದ ಹಾರ್ವೆಸ್ಟರ್ ಮತ್ತು ಇನ್‌ಫೀಲ್ಡರ್ ಇಂದು ಕಬ್ಬಿನ ತೋಟಕ್ಕೆ ಇಳಿದಿವೆ. ಕಬ್ಬು ಕಟಾವು ಮಾಡುವ ಗ್ಯಾಂಗ್‌ಗಳು ಸೃಷ್ಟಿಸಿದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಭರವಸೆ ಮೂಡಿಸಿವೆ.ಬ್ರೆಜಿಲ್ ದೇಶದಿಂದ ಸಕ್ಕರೆ ಕಾರ್ಖಾನೆಗಳು ಖರೀದಿಸಿರುವ ‘ನ್ಯೂ ಹಾಲೆಂಡ್’ ಕಂಪೆನಿಯ ಹಾರ್ವೆಸ್ಟರ್ ಮತ್ತು ಇನ್‌ಫೀಲ್ಡರ್ ಯಂತ್ರಗಳು ಜಮಖಂಡಿ ಭಾಗದಲ್ಲಿ ಕಬ್ಬು ಕಟಾವು ಕೆಲಸದಲ್ಲಿ ತೊಡಗಿವೆ. ಆದರೆ ಸಾಲಿನಿಂದ ಸಾಲಿಗೆ ಕನಿಷ್ಠ 4 ಅಡಿ ಅಂತರದಲ್ಲಿ ನಾಟಿ ಮಾಡಿದ ಕಬ್ಬಿನ ತೋಟದ ಕಟಾವು ಮಾತ್ರ ಈ ಯಂತ್ರಗಳಿಂದ ಸಾಧ್ಯ.ಪ್ರತಿ ಗಂಟೆಗೆ ಸುಮಾರು 15-16 ಟನ್ ಕಬ್ಬು ಕಟಾವು ಮಾಡುವ ಸಾಮರ್ಥ್ಯ ಹೊಂದಿರುವ ಈ ಯಂತ್ರಗಳು ಕಬ್ಬು ಕಟಾವು ಗ್ಯಾಂಗ್‌ಗಳು 15 ದಿನಗಳಲ್ಲಿ ಮಾಡುವ ಕೆಲಸವನ್ನು 2-3 ದಿನಗಳಲ್ಲಿ ಮಾಡಿ ಮುಗಿಸುತ್ತವೆ. ಆದರೆ ಕಬ್ಬಿನ ತೋಟದ ಬದಿಗೆ ಇರುವ ತಗ್ಗು ಅಥವಾ ಗಟಾರ್ ಭಾಗದಲ್ಲಿ ಯಂತ್ರದಿಂದ ಕಟಾವು ಸಾಧ್ಯವಿಲ್ಲ ಎನ್ನುವುದು ಯಂತ್ರದ ಇತಿಮಿತಿ ಆಗಿದೆ.ಹಾರ್ವೆಸ್ಟರ್ ಯಂತ್ರ ಒಂದು ಸಲಕ್ಕೆ ಒಂದು ಸಾಲು ಕಬ್ಬನ್ನು ಕಟಾವು ಮಾಡಿ ಒಂದು ಅಡಿ ಉದ್ದದಂತೆ ತುಂಡರಿಸುತ್ತದೆ. ರವದಿ ಮತ್ತು ವಾಡಿಯನ್ನು ಪುಡಿ ಮಾಡಿ ನೆಲಕ್ಕೆ ತೂರುತ್ತದೆ. ತುಂಡಾದ ಕಬ್ಬಿನ ತುಣುಕುಗಳನ್ನು ಅದರ ಪಕ್ಕದಲ್ಲಿ ಸಾಗುವ ಇನ್‌ಫೀಲ್ಡರ್‌ಗೆ ಸತತವಾಗಿ ವರ್ಗಾಯಿಸುತ್ತದೆ. ಇನ್‌ಫೀಲ್ಡರ್‌ನಲ್ಲಿ ಸಂಗ್ರಹವಾದ ಕಬ್ಬಿನ ತುಣುಕುಗಳನ್ನು ತೋಟದಿಂದ ಹೊರಗಡೆ ನಿಲ್ಲುವ ಲಾರಿ ಅಥವಾ ಟ್ರ್ಯಾಕ್ಟರ್ ಟ್ರೇಲರ್‌ಗೆ ತುಂಬಲಾಗುತ್ತದೆ.ಗ್ಯಾಂಗುಗಳು ಕಟಾವು ಮಾಡಿದ ಕಬ್ಬು ಸಾಗಿಸುವ ಲಾರಿ, ಟ್ರ್ಯಾಕ್ಟರ್‌ಗಳು ಗಂಟೆಗಟ್ಟಲೆ, ದಿನಗಟ್ಟಲೆ ಸಕ್ಕರೆ ಕಾರ್ಖಾನೆಗಳ ಆವರಣದಲ್ಲಿ ಸರತಿಯಲ್ಲಿ ನಿಂತು ಕಬ್ಬು ಇಳಿಸಬೇಕಾಗುತ್ತದೆ. ಆದರೆ ಯಂತ್ರಗಳಿಂದ ಕಟಾವು ಮಾಡಿದ ಕಬ್ಬು ಸಾಗಿಸುವ ಲಾರಿ, ಟ್ರ್ಯಾಕ್ಟರ್‌ಗಳು ಸರತಿಯಲ್ಲಿ ನಿಲ್ಲಬೇಕಾದ ಅಗತ್ಯವಿಲ್ಲ. ಕಾರ್ಖಾನೆಗಳ ಆವರಣಕ್ಕೆ ಹೋಗುತ್ತಿದ್ದಂತಯೇ ಖಾಲಿ ಮಾಡಿ ಹೊರಬರುತ್ತವೆ.‘ನೆಲದ ಆಳಕ್ಕೆ ಇಳಿದು ಕಬ್ಬು ಕಟಾವು ಮಾಡುತ್ತವೆ.ಹಾಗಾಗಿ ‘ಮಡ್ಡು’ ಉಳಿಯುವುದಿಲ್ಲ. ಆದ್ದರಿಂದ ಕಬ್ಬು ಇಳುವರಿ ಹೆಚ್ಚುತ್ತದೆ. ಮಡ್ಡು ತೆಗೆಯುವ ಕೆಲಸ ಕೈಕೊಳ್ಳಬೇಕಾಗಿಲ್ಲ. ಕಬ್ಬಿನ ರವದಿ ಮತ್ತು ವಾಡಿ ಕೂಡ ಪುಡಿಯಾಗಿ ನೆಲಕ್ಕೆ ಬಿದ್ದು ಚನ್ನಾಗಿ ಕಳೆತು ಉತ್ತಮ ಗುಣಮಟ್ಟದ ಸಾವಯವ ಗೊಬ್ಬರ ಒದಗಿಸುತ್ತವೆ’ ಎನ್ನುತ್ತಾರೆ ರೈತ ಈಶ್ವರ ಮುಧೋಳೆ.ಪುಡಿಯಾಗಿ ಬೀಳುವ ರವದಿಯಿಂದ ನೆಲ ಮುಚ್ಚಿಕೊಂಡು ಕಳೆ(ಕಸ) ಕೂಡ ಬೆಳೆಯುವುದಿಲ್ಲ. ಈ ಹಿಂದೆ ರವದಿ ಪುಡಿ ಮಾಡಲು ತಗಲುತ್ತಿದ್ದ ಎಕರೆಗೆ ಅಂದಾಜು ರೂ.2 ಸಾವಿರ ಖರ್ಚು ಕೂಡ ಈಗ ಉಳಿತಾಯ ಆಗುತ್ತದೆ ಎನ್ನುತ್ತಾರೆ ನಿವೃತ್ತ ಕೃಷಿ ಅಧಿಕಾರಿ ಎಲ್.ಎ.ಉದಗಟ್ಟಿ.ಕಬ್ಬು ಕಟಾವು ಗ್ಯಾಂಗುಗಳ ಕಟಾವು ಸಾಮರ್ಥ್ಯ ಬೇಸಿಗೆಯ ದಿನಗಳಲ್ಲಿ ಕುಂಠಿತವಾಗುತ್ತದೆ. ಅದೇ ವೇಳೆಗೆ ಬರುವ ಜೋಳ ಮತ್ತು ಇತರೆ ಬೆಳೆಗಳ ಸುಗ್ಗಿಯಿಂದಾಗಿ ಕುಡುಗೋಲು ಗ್ಯಾಂಗ್‌ಗಳು ಕಟಾವು ಬಂದ್ ಮಾಡುತ್ತವೆ. ಆ ಅವಧಿಯಲ್ಲಿ ಕಾರ್ಖಾನೆಗಳಿಗೆ ಬೇಕಾಗುವ ಅಗತ್ಯ ಪ್ರಮಾಣದಲ್ಲಿ ಕಬ್ಬು ಪೂರೈಸಲು ಯಂತ್ರಗಳು ತುಂಬಾ ಸಹಾಯಕ ಎನ್ನುತ್ತಾರೆ ಯಂತ್ರ ಚಾಲಕ ಬಸವರಾಜ ಹಿಪ್ಪರಗಿ.ಕಬ್ಬು ಕಟಾವು ಯಂತ್ರಗಳ ಬಳಕೆ ಇದೀಗ ಆರಂಭವಾಗಿದೆ. ಯಂತ್ರಗಳ ಬಳಕೆಯಲ್ಲಿ ದಿನ ಕಳೆದಂತೆ ಗೊತ್ತಾಗುವ ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮತ್ತು ರೈತರ ಸಮಸ್ಯೆಗಳಿಗೆ ಸ್ಪಂದಿಸುವ ಕಾರ್ಯ ನಿರಂತರವಾಗಿ ಸಾಗುವ ಸ್ಪಷ್ಟ ಸೂಚನೆಗಳು ಗೋಚರಿಸುತ್ತಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.