ಬುಧವಾರ, ಜನವರಿ 22, 2020
21 °C

ಕಬ್ಬು ಬೆಳೆಗಾರ ಆತ್ಮಹತ್ಯೆಗೆ ಯತ್ನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ದಾವಣಗೆರೆ:ಕಬ್ಬು ಕಟಾವು ಮಾಡಲು ಸಕ್ಕರೆ ಕಾರ್ಖಾನೆಯಿಂದ ಅನುಮತಿ ದೊರೆಯಲಿಲ್ಲ ಎಂದು ಬೇಸರಗೊಂಡ ಕಬ್ಬು ಬೆಳೆಗಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಹರಿಹರ ತಾಲ್ಲೂಕಿನ ನಂದಿಗಾವಿಯಲ್ಲಿ ಮಂಗಳವಾರ ನಡೆದಿದೆ.

ಹಾಲನಗೌಡ ಆತ್ಮಹತ್ಯೆಗೆ ಯತ್ನಿಸಿದ ಬೆಳೆಗಾರ. ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಆತನ ಸ್ಥಿತಿ ಗಂಭೀರವಾಗಿದೆ. ಸೋಮವಾರ ರಾತ್ರಿಯೂ ಕೂಡ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ಕುಟುಂಬದ ಸದಸ್ಯರು ತಿಳಿಸಿದ್ದಾರೆ.‘ಸುಮಾರು ಎರಡೂವರೆ ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಕಟಾವಿಗೆ ಸಕ್ಕರೆ ಕಾರ್ಖಾನೆಯಿಂದ ಅನುಮತಿ ದೊರೆತಿರಲಿಲ್ಲ. ಕಬ್ಬು ನಾಟಿ ಮಾಡಿ 16 ತಿಂಗಳು ಕಳೆದಿದ್ದು, ಕಬ್ಬು ಗದ್ದೆಯಲ್ಲಿಯೇ ಒಣಗುತ್ತಿದೆ. ಇದರಿಂದ ಮನನೊಂದು ವಿಷ ಸೇವಿಸಿದ್ದಾರೆ’ ಎಂದು ಹಾಲೇಶಪ್ಪ ಅವರ ಸಹೋದರ ಕೊಟ್ರೇಶ್‌ ತಿಳಿಸಿದರು.‘ಬ್ಯಾಂಕ್‌ ಹಾಗೂ ಖಾಸಗಿಯವರಿಂದ ಸುಮಾರು ₨ 2 ಲಕ್ಷದಷ್ಟು ಸಾಲ ಪಡೆದಿದ್ದರು. ಮರುಪಾವತಿ ಮಾಡುವಂತೆ ಸಾಲಗಾರರು ಕೇಳುತ್ತಿದ್ದರು. ದಾವಣಗೆರೆ ಜಿಲ್ಲೆಯ ಶಾಮನೂರು ಸಕ್ಕರೆ ಕಾರ್ಖಾನೆ ಹಾಗೂ ದಾವಣಗೆರೆ ಸಕ್ಕರೆ ಕಾರ್ಖಾನೆಗಳಿಗೆ ಮಾತ್ರ ಕಬ್ಬು ಪೂರೈಕೆ ಮಾಡಬೇಕು ಎಂದು ಸರ್ಕಾರ ಆದೇಶ ನೀಡಿದೆ. ಆ ಕಾರ್ಖಾನೆಗಳು ಕಬ್ಬು ಕಟಾವು ಮಾಡಲು ಇದುವರೆಗೂ ಅನುಮತಿ ನೀಡಿಲ್ಲ. ಮುಂಡರಗಿ ಹಾಗೂ ಸಂಗೂರು ಸಕ್ಕರೆ ಕಾರ್ಖಾನೆಗಳಿಗೆ ಕಬ್ಬು ಪೂರೈಕೆ ಮಾಡಲೂ ಅನುಮತಿ ನೀಡುತ್ತಿಲ್ಲ’ ಎಂದು ಕೊಟ್ರೇಶ್‌ ಆರೋಪಿಸಿದರು.

ಪ್ರತಿಕ್ರಿಯಿಸಿ (+)