ಗುರುವಾರ , ಜೂನ್ 17, 2021
21 °C

ಕಮದಾಳದಲ್ಲಿ ಭರ್ಜರಿ ದನಗಳ ಜಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆಲಮಟ್ಟಿ: ಕಮದಾಳ ಪುನರ್ವಸತಿ ಕೇಂದ್ರದಲ್ಲಿ ಜರುಗುತ್ತಿರುವ ಮುದ್ದೇಶ ಪ್ರಭುಗಳ ಜಾತ್ರೆಯ ಅಂಗವಾಗಿ ದನಗಳ ಜಾತ್ರೆ  ಸಂಭ್ರಮದಿಂದ ನಡೆಯುತ್ತಿದೆ.ಎಲ್ಲಿ ನೋಡಿದರಲ್ಲಿ ರಾಸುಗಳೆ, ಆರೋಗ್ಯವಂತ, ಉತ್ತಮ ದನಗಳು ಪ್ರದರ್ಶನ ಹಾಗೂ ಮಾರಾಟ ಇಲ್ಲಿದೆ.ಈ ಬಾರಿ ಅವಳಿ ಜಿಲ್ಲೆಯ ಅನೇಕ ಗ್ರಾಮಗಳ ನೂರಾರು ದನಗಳು ಜಾತ್ರೆ ಆಗಮಿಸಿವೆ. ಎತ್ತುಗಳಿಗೆ ಬೇಕಾದ ಪದಾರ್ಥಗಳ, ಪರಿಕರಗಳ ಮಾರಾಟದ ಹತ್ತಾರು ಅಂಗಡಿಗಳಿಗೆ ಭರ್ಜರಿ ವ್ಯಾಪಾರವೂ ನಡೆಯುತ್ತಿವೆ. ಇಲ್ಲಿಯವರೆಗೆ ಹತ್ತು ಲಕ್ಷ ರೂಪಾಯಿಗೆ ಅಧಿಕ ದನಗಳ ವ್ಯಾಪಾರ ವಹಿವಾಟು ನಡೆದಿವೆ.  ಈ ಬಾರಿ ಮಾತ್ರ ಅತ್ಯಂತ ಹೆಚ್ಚಿನ ಸಂಖ್ಯೆಯಲ್ಲಿ ದನಗಳು ಆಗಮಿಸಿದ್ದು ವಿಶೇಷವಾಗಿದೆ.ಈ ಬಾರಿ ಜಾತ್ರಾ ಸಮಿತಿಯವರು ಸುಮಾರು 20 ಎಕರೆ ವಿಶಾಲ ಪ್ರದೇಶದಲ್ಲಿ ದನಗಳ ಜಾತ್ರೆಗಾಗಿ ಎಲ್ಲಾ ರೀತಿಯ ವ್ಯವಸ್ಥೆ ಮಾಡಿದ್ದಾರೆ. ನಿಡಗುಂದಿಯ ಸುತ್ತಮುತ್ತಲಿನ ಗ್ರಾಮಗಳಲ್ಲದೆ ನೆರೆಯ ಬಾಗಲಕೋಟೆ, ಧಾರವಾಡ, ಕಲಬುರ್ಗಿ ಜಿಲ್ಲೆಗಳ ಭಕ್ತರು ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡಿದ್ದಾರೆ.ಈ ಜಾತ್ರೆಯಲ್ಲಿ ಬಾಗಲಕೋಟೆ ಜಿಲ್ಲೆಯ ಶಿರೂರ, ಬೇವೂರ, ಕಮತಗಿ, ಭಗವತಿ ಅಲ್ಲದೇ ಜಿಲ್ಲೆಯ ಎಲ್ಲ ಗ್ರಾಮಗಳಿಂದ ರೈತರು ತಮ್ಮ ಕರು, ಹೋರಿ,ಎತ್ತುಗಳೊಂದಿಗೆ ಇಲ್ಲಿ ಮಾರಾಟ ಮಾಡಲು ಬಂದಿದ್ದಾರೆ. ಜೊತೆಗೆ ಜಾನುವಾರು ಖರೀದಿಸಲು ಕೂಡ ರೈತರು ಇಲ್ಲಿಗೆ ಬಂದಿದ್ದಾರೆ. ವಿವಿಧ ತಳಿಯ ರಾಸುಗಳು ಇಲ್ಲಿ ಮಾರಾಟಕ್ಕೆ ಬಂದಿದ್ದು, ಕಳೆದ ವರ್ಷಕ್ಕಿಂತ ಈ ವರ್ಷ ಹೆಚ್ಚು ರಾಸುಗಳು ಬಂದಿವೆ ಎನ್ನುತ್ತಾರೆ ಜಾತ್ರಾ ಕಮಿಟಿಯ ಮುದ್ದಪ್ಪ ಯಳ್ಳಿಗುತ್ತಿ ಮತ್ತು ಸಂಗಪ್ಪ ವಂದಾಲ.ಇಲ್ಲಿ ಈಗ 40 ಸಾವಿರ ರೂಪಾಯಿಗಳಿಂದ 1 ಲಕ್ಷ ರೂಪಾಯಿಗೂ ಹೆಚ್ಚಿನ ಮೌಲ್ಯದ ರಾಸುಗಳು ಬಂದಿದ್ದು, ಖರೀದಿಗೆ ಬಂದಿರುವ ರೈತರು ಮಾರಾಟ ಮಾಡಲು ಬಂದಿರುವ ರೈತರ ಜೊತೆಗೆ  ವ್ಯಾಪಾರ ಮಾಡಲು ಚೌಕಾಸಿ ಮಾಡುತ್ತಿರುವ ದೃಶ್ಯ ಸಾಮಾನ್ಯವಾಗಿದೆ.

 

ಜೊತೆಗೆ ವ್ಯಾಪಾರ ಕುದುರಿಸುವ ದಲ್ಲಾಳಿಗಳು ಅಲ್ಲಲ್ಲಿ ವ್ಯಾಪಾರ ಮಾಡಿಸುವ ಕಾಯಕದಲ್ಲಿ ತೊಡಗಿದ್ದರು. ಎರಡು ಹಲ್ಲು ಹೊಂದಿರುವ ಹೋರಿಗೆ ಹೆಚ್ಚು ಬೆಲೆಯಲ್ಲಿ ಅಂದರೆ 50 ಸಾವಿರ ದಿಂದ 1 ಲಕ್ಷ ರೂಪಾಯಿ ವರೆಗೆ ಮಾರಾಟವಾಗುತ್ತದೆ ಎನ್ನುತ್ತಾರೆ ಬೂದಿಹಾಳ ಗ್ರಾಮದ ಬಿ.ಟಿ. ಗೌಡರ ಅವರು. ಹಲ್ಲು ಮೂಡುವಕ್ಕಿಂತ ಮುಂಚಿನ ಕರುವಿಗೂ ಹೆಚ್ಚು ಕಿಮ್ಮತ್ತು. ಹಲ್ಲು ಬೆಳೆದಂತೆ ಅಂದರೆ ನಾಲ್ಕು, ಆರು, ಎಂಟು ಹಲ್ಲು ಮೂಡಿದ ಹಾಗೇ ಹೋರಿ ಎತ್ತಾಗುತ್ತದೆ. ಅಂದರೆ ಜಾನುವಾರಿಗೆ ವಯಸ್ಸು ಆದಂತೆ. ಇನ್ನೊಂದು ಭಾಷೆಯಲ್ಲಿ ಹೇಳುವುದಾ ದರೆ ರಾಸು ಬಾಯಿ ಮಾಡಿದರೆ ಅದರ ಸಾಮರ್ಥ್ಯ ಕಡಿಮೆಯಾದಂತೆ.ಜಾನುವಾರುಗಳ ಮಾರಾಟದ ಜೊತೆಗೆ ರೈತರಿಗೆ ಉಪಯೋಗಿಸುವ ಬಾರು, ಮಕಾಡ, ಸರಪಣಿ, ಬಾರುಕೊಲು ಮೂಗದಾರ ಮುಂತಾದ ಪರಿಕರಗಳ ಮಾರಾಟ ನಡೆದಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.