ಶನಿವಾರ, ಮೇ 21, 2022
26 °C

ಕಮಲ ಪಾಳಯಕ್ಕೆ ದಂಡನಾಯಕರು ಬೇಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಆನೇಕಲ್: `ಬಿಜೆಪಿಯಲ್ಲಿ ರಾಷ್ಟ್ರೀಯತೆ, ಹಿಂದುತ್ವ ಹಾಗೂ ಸಂಘಟನಾ ಶಕ್ತಿಯಿದ್ದು, ಕಾರ್ಯಕರ್ತ ಆಧಾರಿತ ಪಕ್ಷವಾಗಿರುವುದರಿಂದ ದಂಡನಾಯಕನ ಅವಶ್ಯಕತೆಯಿಲ್ಲ~ ಎಂದು ಸಮಾಜ ಕಲ್ಯಾಣ ಸಚಿವ ಎ.ನಾರಾಯಣಸ್ವಾಮಿ ನುಡಿದರು.ಅವರು ಬನ್ನೇರುಘಟ್ಟ ಸಮೀಪದ ರೇಡಿಯೆಂಟ್ ಕ್ಲಬ್‌ನಲ್ಲಿ ಆನೇಕಲ್ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಪಕ್ಷದ ಪದಾಧಿಕಾರಿಗಳ ಮಂಡಲ ಪರಿಚಯ ವರ್ಗದ ಉದ್ಘಾಟನೆ ನೆರವೇರಿಸಿ ಮಾತನಾಡಿದರು.`ಪಕ್ಷಕ್ಕೆ ಕಾರ್ಯಕರ್ತರೇ ನಿಜವಾದ ಬಂಡವಾಳ ಹಾಗಾಗಿ ಕ್ಷುಲ್ಲಕ ವಿಷಯಗಳಿಗೆ ಗಮನ ಕೊಡದೇ ಪಕ್ಷದ ಸಂಘಟನೆಯಲ್ಲಿ ಕಾರ್ಯಕರ್ತರು ತೊಡಗಿಕೊಳ್ಳಬೇಕು~ ಎಂದು ನುಡಿದರು. `ಬೇರುಮಟ್ಟದಿಂದ ಪಕ್ಷವನ್ನು ಕಟ್ಟುವ ಕಾರ್ಯ ಮಾಡಬೇಕು~ ಎಂದು ಕರೆ ನೀಡಿದರು. `ಪಕ್ಷಕ್ಕೆ ಸಕ್ರಿಯ ಕಾರ್ಯಕರ್ತರು ಜೀವಾಳವಾಗಿದ್ದು, ದೇಶದ ಮೂಲೆ ಮೂಲೆಗಳಲ್ಲಿ ಸಂಘಟನೆ ಮಾಡುತ್ತಿದ್ದಾರೆ. ಹಾಗಾಗಿ ರಾಜ್ಯದ ಎಲ್ಲ ಸ್ಥರಗಳಲ್ಲೂ ಪಕ್ಷ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಕೆಲವೊಮ್ಮೆ ಪಕ್ಷದ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತನಿಗೆ ಸೂಕ್ತ ಗೌರವ ಸಿಗದಿರುವುದು ವಿಷಾದನೀಯ. ಮತದಾರ ಮತ್ತು ಚುನಾಯಿತ ಪ್ರತಿನಿಧಿಯ ನಡುವಿನ ಪ್ರಮುಖ ಕೊಂಡಿಯಾದ ಕಾರ್ಯಕರ್ತನನ್ನು ಚುನಾವಣೆ ನಂತರ ಮರೆಯಲಾಗುತ್ತದೆ. ಇದರಿಂದ ಪಕ್ಷದ ಸಂಘಟನೆಗೆ ಹೊಡೆತ ಬೀಳುತ್ತದೆ ಎಂಬುದನ್ನು ಚುನಾಯಿತ ಪ್ರತಿನಿಧಿಗಳು ಮರೆಯಬಾರದು~ ಎಂದರು.ಸಂಘಟನೆಯಲ್ಲಿ ಬೆಳೆದುಬಂದ ಸಂಸ್ಕಾರವಂತನಿಗೆ ಅಧಿಕಾರ ದೊರೆಯುತ್ತಿಲ್ಲ. ಎಲ್ಲಿಂದಲೋ ಬಂದವರಿಗೆ ಅವಕಾಶ ನೀಡುವುದರಿಂದ ತೊಂದರೆಗಳು ಹೆಚ್ಚು. ಕಾರ್ಯಕರ್ತರು ಜನ ಪ್ರತಿನಿಧಿಗಳು ಎರಡು ದಿನಗಳ ಶಿಬಿರದಲ್ಲಿ ಈ ಬಗ್ಗೆ ಚಿಂತನೆ ನಡೆಸಬೇಕು ಎಂದು ನುಡಿದರು.ಬಿಜೆಪಿ ಸಿದ್ಧಾಂತವನ್ನು ಒಳಗೊಂಡ ಪಕ್ಷ. ಆದರೆ ಹಲವು ರಾಜಕೀಯ ಪಕ್ಷಗಳಲ್ಲಿ ಸಾಮಾಜಿಕ ಕಳಕಳಿ, ಸೈದ್ಧಾಂತಿಕ ಹಿನ್ನೆಲೆಯಿಲ್ಲ. ಈ ಪಕ್ಷಗಳ ಮುಖಂಡರಿಗೆ ನೈತಿಕತೆ ಸಹ ಇರುವುದಿಲ್ಲ ಎಂದು ಅಭಿಪ್ರಾಯ ಪಟ್ಟರು.  ತಾಲ್ಲೂಕು ಬಿಜೆಪಿ ಅಧ್ಯಕ್ಷ ಎನ್.ಬಸವರಾಜು ಮಾತನಾಡಿ ನಾನೇ ಸುಪ್ರೀಂ ಎನ್ನುವ ಭಾವನೆ ಜನಪ್ರತಿನಿಧಿಗಳಲ್ಲಿ ಹಾಗೂ ನನ್ನಿಂದಲೇ ಎನ್ನುವ ಉದ್ಧಟತನ ಕಾರ್ಯಕರ್ತರಲ್ಲಿ ಬೆಳೆಯಬಾರದು. ಇದರಿಂದ ಪಕ್ಷ ಹಾಗೂ ಸಂಘಟನೆಗೆ ಹೊಡೆತ ಬೀಳಲಿದ್ದು, ಇಬ್ಬರ ನಡುವೆ ಸಾಮರಸ್ಯ ಮೂಡಿಸಿ ಪಕ್ಷ ಸಂಘಟನೆ ಮಾಡುವ ಸಲುವಾಗಿ ಪರಿಚಯ ವರ್ಗ ಶಿಬಿರ ನಡೆಸಲಾಗುತ್ತಿದೆ. ಕ್ಷೇತ್ರದ ಅಭಿವೃದ್ಧಿ, ಕಾರ್ಯಕರ್ತರ ಪರಿಚಯ, ಪರಸ್ಪರ ನಂಬಿಕೆ, ವಿಶ್ವಾಸ, ಸಂಘಟನೆ ಶಿಬಿರದ ಪ್ರಮುಖ ಉದ್ದೇಶವಾಗಿದೆ. ಕಾರ್ಯಕರ್ತರು ಹಾಗೂ ಚುನಾಯಿತ ಪ್ರತಿನಿಧಿಗಳು ಗಾಡಿಯ ಎರಡು ಚಕ್ರಗಳಿದ್ದಂತೆ, ಯಾವ ಚಕ್ರಕ್ಕೆ ಆಪತ್ತಾದರೂ ಗಾಡಿ ಮುಂದೆ ಸಾಗುವುದಿಲ್ಲ. ಶಿಬಿರದಲ್ಲಿ ಕಾರ್ಯಕರ್ತರ ಹಾಗೂ ಚುನಾಯಿತ ಪ್ರತಿನಿಧಿಗಳ ಬಲವರ್ಧನೆಗೆ ಹೆಚ್ಚಿನ ಗಮನ ನೀಡಲಾಗುವುದು ಎಂದರು.ಪ್ರಶಿಕ್ಷಕ ವರ್ಗದ ಜಿಲ್ಲಾ ಪ್ರಮುಖ ಛಾಯಾಪತಿ ಮಾತನಾಡಿ ಯಾರೇ ಭ್ರಷ್ಟಾಚಾರ ಮಾಡಿದರೂ ಅವರ ವಿರುದ್ಧ ದನಿಯೆತ್ತುವ ಕಾರ್ಯಕರ್ತರ ಅವಶ್ಯಕತೆಯಿದೆ ಎಂದರು. ಅಕ್ರಮಗಳ ವಿರುದ್ಧ ಜನಜಾಗೃತಿ ಮೂಡಿಸಬೇಕು ಇದು ಜನಸಂಘದ ಮೂಲ ಉದ್ದೇಶ. ಹಿರಿಯರ ಮಾರ್ಗದರ್ಶನ ಪಾಲಿಸಿ ಯೋಗ್ಯ ಸಮಾಜ ನಿರ್ಮಿಸಲು ಮುಂದಾಗಬೇಕು ಎಂದರು.ಅಧಿಕಾರ ಕಬಳಿಕೆ ಹೇಗೆ, ಟಿಕೆಟ್ ಪಡೆಯುವ ರೀತಿ ಯಾವುದು ಎನ್ನುವುದನ್ನು ಬಿಟ್ಟು ಪಕ್ಷದ ವತಿಯಿಂದ ನಡೆಯುವ ಅಭ್ಯಾಸ ವರ್ಗದಲ್ಲಿನ ಚರ್ಚಾಗೋಷ್ಠಿಗಳ ವಿಷಯ ಮನನ ಮಾಡಿಕೊಳ್ಳಬೇಕು ಎಂದರು. 

ಶಿಬಿರದಲ್ಲಿ ಜಿಲ್ಲಾ ಹಾಗೂ ತಾಲ್ಲೂಕು ಸದಸ್ಯರು, ಗ್ರಾಮ ಪಂಚಾಯಿತಿ ಅಧ್ಯಕ್ಷರು, ಪಕ್ಷದ ಎಲ್ಲ ಹಂತದ ಪದಾಧಿಕಾರಿಗಳು ಭಾಗವಹಿಸಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.