ಬುಧವಾರ, ಜೂನ್ 23, 2021
29 °C
ಲೋಕ ಚರಿತ್ರೆ

ಕರಾವಳಿಯಲ್ಲೂ ಕಾಂಗ್ರೆಸ್‌ಗೆ ಬಂಡಾಯದ ಬಿಸಿ

ಪ್ರಜಾವಾಣಿ ವಾರ್ತೆ/ ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಮಂಗಳೂರು: ಮೊದಲ ಎರಡು ಮಹಾಚುನಾವಣೆಗಳಿಗೆ ಹೋಲಿಸಿದರೆ, 1962ರಲ್ಲಿ ನಡೆದ ಮೂರನೇ ಲೋಕಸಭಾ ಚುನಾವಣೆ ಸಂಪೂರ್ಣ ವಿಭಿನ್ನ. ಅಚ್ಚರಿ ಎಂದರೆ ಜವಾಹರಲಾಲ್‌ ನೆಹರೂ ಆಧಿಪತ್ಯದಲ್ಲಿ ದಶಕಗಳ ಕಾಲ ಏಕಮೇವಾದ್ವಿತೀಯ ಎಂಬಂತೆ ಮೆರೆದಿದ್ದ ಕಾಂಗ್ರೆಸ್‌ ಪಕ್ಷ ಈ ಚುನಾವಣೆಯಲ್ಲಿ ಮೊದಲ ಬಾರಿ ಬಂಡಾಯದ ಬಿಸಿಯನ್ನು ಎದುರಿಸಿತು. ಕರಾವಳಿಯಲ್ಲೂ ಈ ಬಂಡಾಯದ ಬಿಸಿ ಜೋರಾಗಿಯೇ ಇತ್ತು.ಪ್ರಧಾನಿ ನೆಹರೂ ಅನುಸರಿಸಿದ ಸಮಾಜವಾದಿ ಸಿದ್ಧಾಂತ ಕಾಂಗ್ರೆಸ್‌ನ ಕೆಲವು ಹಿರಿಯ ಧುರೀಣರಿಗೆ ಸರಿಬರಲಿಲ್ಲ. ಚಕ್ರವರ್ತಿ ರಾಜಗೋಪಾಲಾಚಾರಿ (ರಾಜಾಜಿ) ಹಾಗೂ ಎನ್‌.ಜಿ.ರಂಗ ಅವರಂತಹ ಮುಖಂಡರು ಸೇರಿಕೊಂಡು 1959ರ ಆಗಸ್ಟ್‌ನಲ್ಲಿ ಸ್ವತಂತ್ರ ಪಾರ್ಟಿಯನ್ನು ರಚಿಸಿದರು. ಮುಕ್ತ ವ್ಯಾಪಾರ ನೀತಿಯನ್ನು ಬಯಸಿದ್ದ ಅವರಿಗೆ ನೆಹರು ಆರಂಭಿಸಿದ ‘ಪರ್ಮಿಟ್‌ ರಾಜ್‌’ ಇಷ್ಟವಾಗಲಿಲ್ಲ. ದೇಶದ ಭಾರಿ ಉದ್ಯಮಿಗಳು, ರಾಜರು ಕಾಂಗ್ರೆಸ್‌ನ ಬದಲು ಸ್ವತಂತ್ರ ಪಾರ್ಟಿಯನ್ನು ಬೆಂಬಲಿಸಿದರು. 1962ರ ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿ ದೇಶದಲ್ಲಿ ಶೇ 6.8 ಮತವನ್ನು ಹಾಗೂ 18 ಸ್ಥಾನಗಳನ್ನು ಗೆದ್ದಿತ್ತು. ಈ ಚುನಾವಣೆಯಲ್ಲಿ ಬಿಹಾರ, ರಾಜಸ್ತಾನ, ಗುಜರಾತ್‌, ಒಡಿಶಾ ರಾಜ್ಯಗಳಲ್ಲಿ ಸ್ವತಂತ್ರ ಪಾರ್ಟಿಯೇ ಪ್ರಮುಖ ವಿರೋಧ ಪಕ್ಷವಾಗಿ ಹೊರಹೊಮ್ಮಿತು.ಈ ಚುನಾವಣೆಯಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದಲ್ಲೂ ಕಾಂಗ್ರೆಸ್‌ಗೆ ಪ್ರಬಲ ಎದುರಾಳಿಯಾಗಿದ್ದುದು ಸ್ವತಂತ್ರ ಪಾರ್ಟಿ.

‘ಕಾಂಗ್ರೆಸ್‌ ಪಕ್ಷವು 1962ರ ಚುನಾವಣೆಯಲ್ಲಿ ಸಂಸದ ಕೆ.ಆರ್‌.ಆಚಾರ್‌ ಬದಲು ಸ್ವಾತಂತ್ರ್ಯ ಹೋರಾಟಗಾರ ಎ.ಶಂಕರ ಆಳ್ವ ಅವರನ್ನು ಕಣಕ್ಕಿಳಿಸಿತು. ಕೆ.ಆರ್‌.ಆಚಾರ್‌ ಸಜ್ಜನ ವ್ಯಕ್ತಿ. ಆದರೆ, ರಾಜಕೀಯ ಚಾಣಾಕ್ಷತನ ಅವರಲ್ಲಿ ಇರಲಿಲ್ಲ. ಹಾಗಾಗಿ ಶ್ರೀನಿವಾಸ ಮಲ್ಯ ಅವರೇ ಆಚಾರ್‌ ಬದಲು ಪ್ರಸಿದ್ಧ ವಕೀಲರೂ ಆಗಿದ್ದ ಶಂಕರ ಆಳ್ವ ಅವರಿಗೆ ಟಿಕೆಟ್‌ ನೀಡಲು ಶಿಫಾರಸು ಮಾಡಿದ್ದರು.  ಆಗಲೇ ವ್ಯಾಪಾರ ವಹಿವಾಟಿನಲ್ಲಿ ಮುಂದಿದ್ದ ಕರಾವಳಿಯಲ್ಲೂ ಸ್ವತಂತ್ರ ಪಾರ್ಟಿಯ ಅಬ್ಬರ ಜೋರಾಗಿತ್ತು. ಆ ಪಾರ್ಟಿಯಿಂದ ಜೆ.ಎಂ.ಲೋಬೊ ಪ್ರಭು ಅವರು ಕಣಕ್ಕಿಳಿದರು. ಲೋಬೋ ಪ್ರಭು ಅವರು ಭಾರತೀಯ ನಾಗರಿಕ ಸೇವೆ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದ ಮೇಧಾವಿ. ಬ್ರಿಟಿಷ್‌ ಸರ್ಕಾರವಿದ್ದಾಗ ಮದ್ರಾಸ್‌ ಪ್ರಾಂತ್ಯದಲ್ಲಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದವರು. ಇನ್ನೊಂದೆಡೆ, ಕರಾವಳಿಯಲ್ಲಿ ಆಗಲೇ ಪ್ರಭಾವಶಾಲಿಯಾಗಿದ್ದ ಕಮ್ಯುನಿಸ್ಟ್‌ ಪಕ್ಷವು ಯುವ ತರುಣ ಬಿ.ವಿ.ಕಕ್ಕಿಲ್ಲಾಯ ಅವರನ್ನು ಚುನಾವಣೆಗೆ ನಿಲ್ಲಿಸಿತು. ಬೀಡಿ ಉದ್ಯಮಿ ಎಂ.ಗೋವಿಂದ ರಾವ್‌ ಅವರು ಜನಸಂಘದಿಂದ ಕಣಕ್ಕಿಳಿದರು’ ಎಂದು ಸ್ಮರಿಸುತ್ತಾರೆ ಬಸ್ತಿ ವಾಮನ ಶೆಣೈ.1962ರಲ್ಲಿ ಕರಾವಳಿಯಲ್ಲಿ ಜನಸಂಘ ಇನ್ನೂ ಪ್ರಭಾವಶಾಲಿಯಾಗಿ ಬೆಳೆದಿರಲಿಲ್ಲ. ಆಗ ಇಲ್ಲಿದ್ದುದು ಎರಡೇ ಪಕ್ಷಗಳು– ಒಂದು ಕಾಂಗ್ರೆಸ್‌ ಇನ್ನೊಂದು ಕಮ್ಯುನಿಸ್ಟ್‌. ಜನಸಂಘ ಜಿಲ್ಲೆಗೆ ಹೊಸದು. ಸ್ವತಂತ್ರ ಪಾರ್ಟಿ ಕಾಂಗ್ರೆಸ್‌ನದೇ ಭಾಗ. ಆದರೆ, ಈ ಬಾರಿ ಅವರವರೇ ಹೊಡೆದಾಡಿಕೊಳ್ಳುತ್ತಿದ್ದುದರಿಂದ ಕಮ್ಯುನಿಸ್ಟರಿಗೆ ಅವಕಾಶ ಹೆಚ್ಚು ಇದೆ ಎಂದು ಅನ್ನಿಸಿತ್ತು. ಇದರ ಲಾಭ ಪಡೆಯುವ ಸಲುವಾಗಿಯೇ ಬಿ.ವಿ.ಕಕ್ಕಿಲ್ಲಾಯ ಅವರಂಥಹ ತರುಣರನ್ನು ಪಕ್ಷವು ಕಣಕ್ಕಿಳಿಸಿತ್ತು. ಬಿ.ವಿ.ಕಕ್ಕಿಲ್ಲಾಯ ಅವರು ಸೇಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ವಿದ್ಯಾರ್ಥಿಯಾಗಿದ್ದಾಗಲೇ ಸುಭಾಷ್‌ಚಂದ್ರ ಬೋಸ್‌ ಚಿಂತನೆಗಳಿಂದ ಪ್ರಭಾವಿತರಾಗಿ ಸ್ವಾತಂತ್ರ್ಯ ಚಳವಳಿಗೆ ಧುಮುಕಿದವರು. ಬಳಿಕ ಕಾಲೇಜಿನಲ್ಲಿದ್ದ ಕೇರಳದ ಸಹಪಾಠಿಗಳ ಸಹವಾಸದಿಂದಾಗಿ ಕಮ್ಯುನಿಸ್ಟ್‌ ಸಿದ್ಧಾಂತದಲ್ಲಿ ಒಲವು ತಳೆದವರು. ಮಂಗಳೂರು ಮದ್ರಾಸ್‌ ಪ್ರಾಂತ್ಯಕ್ಕೆ ಸೇರಿದ್ದಾಗ ಅವರು ಎರಡು ವರ್ಷ ರಾಜ್ಯಸಭಾ ಸದಸ್ಯರಾಗಿದ್ದರು. ಜನಸಂಘದಿಂದ ಕಣಕ್ಕಿಳಿದ ಗೋವಿಂದ ರಾವ್‌ ಅವರು ಗಣೇಶ್‌ ಬೀಡಿಯ ಮಾಲೀಕರಾಗಿದ್ದ  ರಘುರಾಮ್‌ ಪ್ರಭು ಅವರ ಅಳಿಯ. ನಾಲ್ಕೂ ಅಭ್ಯರ್ಥಿಗಳು ಘಟಾನುಘಟಿಗಳೇ. ಹಾಗಾಗಿ 1962ರ ಚುನಾವಣೆ ಸಹಜವಾಗಿಯೇ ಕುತೂಹಲ ಕೆರಳಿಸಿತ್ತು’ ಎಂದು ಸ್ಮರಿಸುತ್ತಾರೆ ಸಿಪಿಎಂ ನ ಹಿರಿಯ ಮುಖಂಡ ಕೆ.ಆರ್‌.ಶ್ರಿಯಾನ್‌.ಈ ಚುನಾವಣೆಯಲ್ಲಿ 4,49,154 ಮಂದಿಗೆ ಮತದಾನದ ಅವಕಾಶವಿತ್ತು. ಚಲಾವಣೆಯಾಗಿದ್ದು 289533 ಮತಗಳು. ಈ ಪೈಕಿ 9455 ಮತಗಳು ಅಸಿಂಧುಗೊಂಡವು. 1,18,102 ಮತಗಳನ್ನು ಪಡೆದ ಕಾಂಗ್ರೆಸ್‌ನ ಶಂಕರ ಆಳ್ವ ಅವರು  33,756 ಮತಗಳ ಅಂತರದಿಂದ ಸ್ವತಂತ್ರ ಪಕ್ಷದ ಜೆ.ಎಂ.ಲೋಬೊ ಪ್ರಭು (84,346 ಮತ)  ಅವರನ್ನು ಸೋಲಿಸಿದರು. ಈ ಚುನಾವಣೆಯಲ್ಲಿ ಸ್ವತಂತ್ರ ಪಾರ್ಟಿಗೆ ಗೆಲ್ಲುವುದು ಸಾಧ್ಯವಾಗದಿದ್ದರೂ, ಕಾಂಗ್ರೆಸ್‌ಗೆ ಪ್ರಬಲ ಪೈಪೋಟಿಯನ್ನೇ ಒಡ್ಡಿತು. ಸ್ವತಂತ್ರ ಪಾರ್ಟಿಯು ಪ್ರವರ್ಧಮಾನಕ್ಕೆ ಬಂದಿದ್ದರಿಂದ, ಎರಡನೇ ಚುನಾವಣೆಯಲ್ಲಿ ದ್ವಿತೀಯ ಸ್ಥಾನದಲ್ಲಿದ್ದ ಕಮ್ಯುನಿಸ್ಟ್‌ ಪಕ್ಷವು ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಯಿತು.ಬಿ.ವಿ.ಕಕ್ಕಿಲ್ಲಾಯ ಅವರಂಥಹ ಪ್ರಭಾವಿ ಯುವ ಅಭ್ಯರ್ಥಿಯನ್ನು ಕಣಕ್ಕಿಳಿಸಿದ ಹೊರತಾಗಿಯೂ ಕಮ್ಯುನಿಸ್ಟರು ಬಲ ವರ್ಧಿಸಿಕೊಳ್ಳುವುದು ಸಾಧ್ಯವಾಗಲಿಲ್ಲ. ಕಕ್ಕಿಲ್ಲಾಯರು 59,656 ಮತಗಳನ್ನು ಪಡೆದರು. ಜನಸಂಘದ ಅಭ್ಯರ್ಥಿ ಎಂ.ಗೋವಿಂದ ಅವರು 17,974 ಮತಗಳನ್ನು ಮಾತ್ರ ಪಡೆದರು. ಗೋವಿಂದ ರಾವ್‌ ಅವರು ಚುನಾವಣೆಯಲ್ಲಿ ಸ್ಪರ್ಧಿಸುವುದು ಸ್ವತಃ ಅವರ ಮಾವ ರಘುರಾಮ ಪ್ರಭು ಅವರಿಗೆ ಇಷ್ಟವಿರಲಿಲ್ಲ. ಹಾಗಾಗಿ ಅವರು ಗಣೇಶ್‌ ಬೀಡಿ ಕಂಪೆನಿಯ ಕಾರ್ಮಿಕರನ್ನು ಚುನಾವಣೆಗೆ ಬಳಸಿಕೊಳ್ಳುವುದಕ್ಕೆ ಅವಕಾಶ ನೀಡಲಿಲ್ಲ ಎಂದು ಆಗಿನ ಚುನಾವಣೆಯನ್ನು ಹತ್ತಿರದಿಂದ ಬಲ್ಲವರು ಹೇಳುತ್ತಾರೆ.ಈ ಚುನಾವಣೆಯಲ್ಲಿ ಕಾಂಗ್ರೆಸ್‌ನ ನಾಗಾಲೋಟಕ್ಕೆ ಕಡಿವಾಣ ಬೀಳಲಿಲ್ಲ. ಆದರೆ, ಕಾಂಗ್ರೆಸ್‌ ವಿರೋಧಿ ಮತಗಳು ಮೂವರು ಅಭ್ಯರ್ಥಿಗಳ ನಡುವೆ ಹಂಚಿ ಹೋಗದೆ ಇರುತ್ತಿದ್ದರೆ, ಆ ಪಕ್ಷದ ಅಭ್ಯರ್ಥಿ ಸೋಲುವುದು ಖಚಿತವಾಗಿತ್ತು ಎಂದು ವಿಶ್ಲೇಷಿಸುತ್ತಾರೆ ಹಿರಿಯರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.