ಮಂಗಳವಾರ, ಜನವರಿ 28, 2020
19 °C

ಕರಿಷ್ಮಾ ಹೊಳಪು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರಿಷ್ಮಾ ಹೊಳಪು

‘ಊರಿಗೆ ಬಂದೋಳು, ನೀರಿಗೆ ಬರದೇ ಇರ್ತಾಳಾ’ ಅನ್ನೋ ಗಾದೆ ಮಾತನ್ನು ಈಗ, ‘ಬಾಲಿವುಡ್‌ಗೆ ಬಂದೋಳು ಬೆಂಗಳೂರಿಗೆ ಬರದೇ ಇರ್ತಾಳಾ?’ ಅಂತಲೂ  ಹೇಳಬಹುದು. ಮೊನ್ನೆ ಮೊನ್ನೆ ತಾನೇ ‘ನೀಲಿ’ತಾರೆ ಸನ್ನಿ ಲಿಯೋನ್‌ ನಗರದ ಇನಾರ್ಬಿಟ್‌ ಮಾಲ್‌, ಒನ್‌ ಎಂ.ಜಿ. ಮಾಲ್‌ನಲ್ಲಿ ಕಾಣಿಸಿಕೊಂಡು ಪಡ್ಡೆಗಳಿಗೆ ದರ್ಶನ ಭಾಗ್ಯ ನೀಡಿ ಅವರ ಹೃದಯಕ್ಕೆ ಕಿಚ್ಚು ಹಚ್ಚಿ ಹೋಗಿದ್ದರು.

ಆದಾದ ಮೇಲೆ ಬೆಕ್ಕಿನ ಕಣ್ಣಿನ ನಟಿ ಕರಿಷ್ಮಾ ಕಪೂರ್‌ ಕೋರಮಂಗಲದಲ್ಲಿರುವ ಫೋರಂ ಮಾಲ್‌ನಲ್ಲಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಹೆಲ್ತ್‌ ಅಂಡ್‌ ಗ್ಲೋ ಮಳಿಗೆ ಆಯೋಜಿಸಿದ್ದ ಕಾರ್ಯಕ್ರಮವದು. ಇದಕ್ಕೆ ಪಾಂಡ್ಸ್‌ ಗೋಲ್ಡ್‌ ರೇಡಿಯನ್ಸ್‌ನ ಸಹಯೋಗವಿತ್ತು. ‘ಹೆಲ್ತ್‌ ಅಂಡ್‌ ಗ್ಲೋ ಸ್ಪರ್ಧೆ’ಯಲ್ಲಿ ವಿಜೇತರನ್ನು ಭೇಟಿ ಮಾಡಲು ಕರಿಷ್ಮಾ ನಗರಕ್ಕೆ ಬಂದಿದ್ದರು.ವೃತ್ತಾಕಾರವಾಗಿ ಮೈದಳೆದಿರುವ ಫೋರಂ ಮಾಲ್‌ನ ಒಳಭಾಗದ ಪ್ರತಿ ಮಹಡಿಯ ಬಾಲ್ಕನಿಯೂ ಆವತ್ತು ಜನರಿಂದ ತುಂಬಿ ತುಳುಕುತ್ತಿತ್ತು. ನಿರೂಪಕಿಯ ಧ್ವನಿ ಕೇಳಿ ಒಂದೆಡೆ ಜಮಾಯಿಸಿದ್ದ ಯುವಜನತೆ ತಮ್ಮ ನೆಚ್ಚಿನ ನಟಿಯನ್ನು ಕಣ್ತುಂಬಿಕೊಳ್ಳಲು ಅರ್ಧ ಗಂಟೆಯಿಂದ ಕಾಯುತ್ತಿದ್ದರು. ಕರಿಷ್ಮಾ ಅವರ ಮಾಲ್‌ ಭೇಟಿ ಮಧ್ಯಾಹ್ನ ಎರಡೂವರೆಗೆ ನಿಗದಿಯಾಗಿತ್ತು. ಗಂಟೆ ಮೂರು ಆದರೂ ಕರಿಷ್ಮಾ ಕಾಣಿಸಿಕೊಳ್ಳಲಿಲ್ಲ. ಇತ್ತ ಅಭಿಮಾನಿಗಳ ಅಬ್ಬರ ಜಾಸ್ತಿಯಾಗಿತ್ತು. ಅವರನ್ನು ನಿಯಂತ್ರಿಸಲು ಪೊಲೀಸರು ಹೆಣಗುತ್ತಿದ್ದರು.

ಅಷ್ಟರಲ್ಲಿ ನಿರೂಪಕಿ ಕರಿಷ್ಮಾ ಆಗಮಿಸುವ ಸುದ್ದಿ ತಿಳಿಸಿದರು. ಬರುವಿಕೆಯ ಸುದ್ದಿ ಕಿವಿ ಮೇಲೆ ಬಿದ್ದ ತಕ್ಷಣ ಅನೇಕರು ತಮ್ಮ ಕಿಸೆಯಲ್ಲಿದ್ದ ಮೊಬೈಲ್‌ಗಳನ್ನು ಕೈಗೆತ್ತಿಕೊಂಡರು.  ಚಿನ್ನದ ಬಣ್ಣದ ದಿರಿಸಿನಲ್ಲಿ ಕಂಗೊಳಿಸುತ್ತಿದ್ದ ಕರಿಷ್ಮಾ ಬೌನ್ಸರ್‌ಗಳ ರಕ್ಷಣೆಯಲ್ಲಿ ವೇದಿಕೆ ಏರಿದರು. ಆಗ ಕ್ಯಾಮೆರಾ ಮತ್ತು ಮೊಬೈಲ್‌ ಫ್ಲಾಷ್ಗಳ ಸದ್ದು ಕೇಳತೊಡಗಿತು. ಕ್ಯಾಮೆರಾಗೆ ಪೋಸು ನೀಡಿದ ನಂತರ ಮೈಕ್‌ ಕೈಗೆತ್ತಿಕೊಂಡ ಕರಿಷ್ಮಾ ‘ಹಲೋ ಬೆಂಗಳೂರು’ ಅಂದಾಗ ಸೇರಿದ್ದವರೆಲ್ಲಾ ‘ಹೋ’ ಎಂದು ಜೋರಾಗಿ ಕಿರುಚಿ ತಮ್ಮ ಅಭಿಮಾನ ವ್ಯಕ್ತಪಡಿಸಿದರು. ನಟಿಯನ್ನು ಕಣ್ತುಂಬಿಕೊಂಡವರೆಲ್ಲರೂ ಆಮೇಲೆ ಆಕೆಯ ಧ್ವನಿ ಕೇಳಲು ಕಾತರರಾದರು.‘ಹೆಲ್ತ್‌ ಅಂಡ್‌ ಗ್ಲೋ’ ಸ್ಪರ್ಧೆಯಲ್ಲಿ ಗೆದ್ದ ರಮ್ಯಾ ಸುಂದರ್‌ರಾಜ್‌, ನೀತಾ ಮಲ್ಲಿಕ್‌, ಮೌನಿಕಾ ವರ್ಧನ್‌, ಶೀತಲ್‌, ರೇವತಿ, ಪುಷ್ಪ, ಶ್ವೇತಾ, ಗೀತ ಪ್ರಿಯ, ಜಯಂತಿ, ನಳಿನಿ ಅವರಿಗೆ  ಕರಿಷ್ಮಾ ಅಭಿನಂದನೆ ಹೇಳಿದರು.  ಅವರಿಗೆ ಹೂಗುಚ್ಛ ಕೊಟ್ಟು ತಮ್ಮ ಪಕ್ಕ ನಿಲ್ಲಿಸಿಕೊಂಡು ಫೋಟೊ ತೆಗೆಸಿಕೊಂಡರು. ಗೆದ್ದವರೊಂದಿಗೆ ಹರಟಿದರು. ಅಂದಹಾಗೆ, ಸ್ಪರ್ಧೆಯಲ್ಲಿ ಗೆದ್ದ ಇಬ್ಬರು ಅದೃಷ್ಟಶಾಲಿಗಳು (ರಮ್ಯಾ ಸುಂದರ್‌ರಾಜ್‌ ಮತ್ತು ಮೌನಿಕಾ ವರ್ಧನ್‌) ಡಿಸೈನರ್‌ ಉಡುಪನ್ನು ಬಹುಮಾನವಾಗಿ  ಪಡೆಯುವ ಅವಕಾಶ ಪಡೆದುಕೊಂಡರು.ಈ ನಡುವೆ ನಿರೂಪಕಿ, ಕರಿಷ್ಮಾ ಅಭಿಮಾನಿಗಳು ಅವರ ಬಗ್ಗೆ ಎಷ್ಟು ತಿಳಿದುಕೊಂಡಿದ್ದಾರೆ ಎಂಬುದನ್ನು ಪರೀಕ್ಷಿಸುವ ಸಲುವಾಗಿ ‘ಕರಿಷ್ಮಾ ಅಭಿನಯಿಸಿದ ಮೊದಲ ಚಿತ್ರ ಯಾವುದು?’, ‘ಆಕೆ ಹುಟ್ಟಿದ ದಿನ ಯಾವುದು?’ ಎಂಬ ಪ್ರಶ್ನೆ ಕೇಳಿದರು. ಮೊದಲ ಪ್ರಶ್ನೆಗೆ ಸರಿಯುತ್ತರ ನೀಡಿದ ವ್ಯಕ್ತಿಯೊಬ್ಬರಿಗೆ ಆಕರ್ಷಕ ಉಡುಗೊರೆ ಸಿಕ್ಕಿತು. ತನ್ನ ಸ್ಮಾರ್ಟ್‌ ಫೋನಿನಲ್ಲಿ ಗೂಗ್ಲಿಂಗ್‌ ಮಾಡಿ ಕರಿಷ್ಮಾ ಹುಟ್ಟಿದ ದಿನವನ್ನು ಹೇಳಿದ ವ್ಯಕ್ತಿಯನ್ನು ನಿರೂಪಕಿ ವೇದಿಕೆ ಮೇಲೆ ಕರೆದರು.ಆತ ಬಂದವರೇ ಕರಿಷ್ಮಾ ಕೈ ಕುಲುಕಲು ಹೋದರು. ಈತ ಕೈ ಕೊಡಲು ಮುಂದಾದಾಗ, ಆಕೆ ಕೈ ಮುಗಿದು ನಮಸ್ಕರಿಸಿದರು. ಕರಿಷ್ಮಾ ಕೈ ಮುಗಿದು ನಮಸ್ಕರಿಸಿದ್ದನ್ನು ಕಂಡು ಆತ ಪೆಚ್ಚು ನಗು ನಕ್ಕು ಕೈ ಮುಗಿದು ಇಳಿದು ಹೋದರು. ಇಂಥದ್ದೊಂದು ತಮಾಷೆ ನೋಡಿದ ಕರಿಷ್ಮಾ ಅಭಿಮಾನಿಗಳು ನಕ್ಕು ಚದುರಿ ಹೋದರು.

ರ್ಜಾಪುರ ರಸ್ತೆಯ ಟೋಟಲ್ ಮಾಲ್‌ನ ಮಾರ್ಕೆಟ್ ಸ್ಕ್ವೇರ್‌ನಲ್ಲಿ ವಿಶಿಷ್ಟ ಶಾಪಿಂಗ್ ಅನುಭವ ನೀಡುವ ‘ಫ್ಲೀ ಮಾರ್ಕೆಟ್ 080’ಗೆ ಚಿತ್ರನಟಿ ರಾಗಿಣಿ ದ್ವಿವೇದಿ ಶುಕ್ರವಾರ ಚಾಲನೆ ನೀಡಿದರು. ಇಲ್ಲಿ ಶಾಪಿಂಗ್‌ ಮಾಡುವ ವೇಳೆ ಗೇಮ್ ಸ್ಟಾಲ್ಸ್, ಲೈವ್ ಬ್ಯಾಂಡ್ಸ್, ಪಪೆಟ್ ಶೋ, ಮಡಕೆ ತಯಾರಿ ಮತ್ತಿತರ ವೈವಿಧ್ಯಮಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬಹುದು ಇಲ್ಲವೇ ವೀಕ್ಷಿಸುತ್ತಾ ಶಾಪಿಂಗ್‌ನ್ನು ಅನುಭವಿಸಬಹುದು.

ಇಲ್ಲಿನ ಮಳಿಗೆಗಳಲ್ಲಿ ಲಭ್ಯವಿರುವ ಉಡುಪುಗಳು ಮತ್ತು ಆಕ್ಸೆಸರಿಗಳನ್ನು  ಧರಿಸಿದ ರೂಪದರ್ಶಿಯರು ಫ್ಯಾಷನ್ ಶೋ ಮಾಡುವುದನ್ನೂ ಗ್ರಾಹಕರು ವೀಕ್ಷಿಸಬಹುದು. ಕಪ್‌ಕೇಕ್‌, ಚಾಟ್ಸ್, ಬಿಸಿ ಜಿಲೇಬಿಯೂ ಸವಿಯಲು ಇಲ್ಲಿ ಲಭ್ಯ. ಟಾರೊಟ್ ಕಾರ್ನರ್‌ನಲ್ಲಿ ನಿಮ್ಮ ಭವಿಷ್ಯವನ್ನು ತಿಳಿದುಕೊಳ್ಳಬಹುದು. ಡಿ. 22ರವರೆಗೂ ಈ ಶಾಪಿಂಗ್ ಅವಕಾಶ ತೆರೆದಿರುತ್ತದೆ.

ಪ್ರತಿಕ್ರಿಯಿಸಿ (+)