ಮಂಗಳವಾರ, ಏಪ್ರಿಲ್ 20, 2021
24 °C

ಕರೆಂಟೇ ಇಲ್ಲದ ಆಸ್ಪತ್ರೆಗಳಿಗೆ ಫ್ರಿಜ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಲಿಂಗಸುಗೂರ(ಮುದಗಲ್ಲ): ಸರ್ಕಾರದ ಕೆಲಸ ದೇವರ ಕೆಲಸ. ಸರ್ಕಾರ ಎಂಬ ದೇವರು ಒಮ್ಮಮ್ಮೆ ವಿಚಿತ್ರ ವರಗಳನ್ನು ನೀಡುತ್ತದೆ. ಲಿಂಗಸುಗೂರ ತಾಲ್ಲೂಕಿನಾದ್ಯಂತ ಪಶು ಸಂಗೋಪನಾ ಇಲಾಖೆಗೆ ಸರ್ಕಾರ ನೀಡಿದ ವರ ಅಚ್ಚರಿ ಮೂಡಿಸುವಂತಹದ್ದು. ತಾಲ್ಲೂಕಿನಾದ್ಯಂತ ವಿದ್ಯುತ್ ಸಂಪರ್ಕವೆ ಇಲ್ಲದ ಆಸ್ಪತ್ರೆಗಳಿಗೆ ಫ್ರಿಜ್ ಪೂರೈಸಿ ಹೊಸ ಪವಾಡವನ್ನೆ ಸೃಷ್ಟಿಸಿದೆ.ಗ್ರಾಮೀಣಾಭಿವೃದ್ಧಿಗೆ ಸರ್ಕಾರಗಳು ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಲೆ ಬಂದಿವೆ. ಆದರೆ, ಮೇಲುಸ್ತುವಾರಿ ಮತ್ತು ನಿರ್ವಹಣೆ ಜವಾಬ್ದಾರಿ ಹೊಂದಿರುವ ಅಧಿಕಾರಿಗಳ ನಿರ್ಲಕ್ಷ್ಯತನದಿಂದ ಯೋಜನೆಗಳು ವಿಫಲವಾಗುತ್ತಿವೆ ಎಂಬುದಕ್ಕೆ ಪಶು ಪಾಲನ ಮತ್ತು ಪಶು ಸಂಗೋಪನಾ ಇಲಾಖೆಯ ಕರೆಂಟೇ ಇಲ್ಲದ ಆಸ್ಪತ್ರೆಗಳಿಗೆ ಫ್ರಿಜ್ ಪೂರೈಕೆ ಮಾಡಿರುವುದು ಜೀವಂತ ನಿದರ್ಶನವಾಗಿದೆ.ತಾಲ್ಲೂಕಿನ ಪಶು ಆಸ್ಪತ್ರೆ, ಪ್ರಾಥಮಿಕ ಪಶು ಚಿಕಿತ್ಸಾಲಯ, ಕೃತಕ ಗರ್ಭಧಾರಣ ಉಪಕೇಂದ್ರ, ಪಶು ಚಿಕಿತ್ಸಾಲಯಗಳು ಸೇರಿದಂತೆ ಒಟ್ಟು 24 ಆಸ್ಪತ್ರೆಗಳ ಪೈಕಿ 16ಕ್ಕೂ ಹೆಚ್ಚು ಆಸ್ಪತ್ರೆಗಳಿಗೆ ವಿದ್ಯುತ್ ಸಂಪರ್ಕವೆ ಇಲ್ಲದಿರುವುದು ವಿಪರ್ಯಾಸ. ಮುದಗಲ್ಲ ಆಸ್ಪತ್ರೆ 1971ರಲ್ಲಿ ಆರಂಭಗೊಂಡಿದೆ. 1988ರಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಇಂದಿಗೂ ಮರು ಸಂಪರ್ಕಕ್ಕೆ ಪ್ರಯತ್ನ ನಡೆಯದೆ ಹೋಗಿರುವುದು ಸಿಬ್ಬಂದಿಗಳನ್ನು ಬೆಚ್ಚಿ ಬೀಳಿಸಿದೆ.ಮುದಗಲ್ಲ ಪಶು ಆಸ್ಪತ್ರೆ ವಿದ್ಯುತ್ ಸಂಪರ್ಕ ಕಡಿತಗೊಂಡಿರುವ ಬಗ್ಗೆ ಜೆಸ್ಕಾಂ ಕಚೇರಿಗೆ ಸಿಬ್ಬಂದಿ ಭೇಟಿ ನೀಡಿದರೆ, ತಮ್ಮ ಕಚೇರಿಯಲ್ಲಿರುವ ಮೀಟರ್ ನಂಬರ 518 ನಿಮ್ಮ ಆಸ್ಪತ್ರೆ ಹೆಸರಿನದ್ದು ಅಲ್ಲ. ಆ ನಂಬರ ಪೊಲೀಸ್ ಠಾಣೆಗೆ ಸಂಬಂಧಿಸಿದ್ದು ಎಂದು ಜೆಸ್ಕಾಂ ಸಿಬ್ಬಂದಿ ಮಾಹಿತಿ ನೀಡುವ ಮೂಲಕ ಕೈತೊಳೆದುಕೊಂಡಿದ್ದಾರೆ. ಹಾಗಾದರೆ, ಪಶು ಆಸ್ಪತ್ರೆಯಲ್ಲಿನ ಮೀಟರ್ ಹಿಂದಿರುವ ವಾಸ್ತವಾಂಶ ಏನು ಎಂಬುದು ಪಶು ಆಸ್ಪತ್ರೆ ಸಿಬ್ಬಂದಿಗೆ ಸವಾಲಾಗಿ ಪರಿಣಮಿಸಿದೆ.ಜಿಲ್ಲಾ ಪಶು ಆಸ್ಪತ್ರೆ ಮಾಹಿತಿ ಪ್ರಕಾರ ತಾಲ್ಲೂಕಿಗೆ ಈಗಾಗಲೆ 15ಕ್ಕೂ ಹೆಚ್ಚು ಫ್ರಿಜ್‌ಗಳನ್ನು ಪೂರೈಸಲಾಗಿದೆ. ಅದರ ಬಳಕೆ ಬಗ್ಗೆ ತಮಗೆ ಮಾಹಿತಿ ಇಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ. ಈಗ ಪುನಃ ಮತ್ತೆರೆಡು ಫ್ರಿಜ್‌ಗಳನ್ನು ಪೂರೈಸಲಾಗಿದ್ದು ಔಷಧಿಗಳ ಸಂರಕ್ಷಣೆ ಹೊಣೆ ಆಯಾ ಆಸ್ಪತ್ರೆಗಳಿಗೆ ಬಿಟ್ಟುಕೊಟ್ಟಿರುವ ಸಂಗತಿ ಎಂದು ಹೇಳಿಕೊಂಡಿದ್ದಾರೆ. ತಾಲ್ಲೂಕಿನ ಪಶು ವೈದ್ಯರು ಮತ್ತು ಪಶು ವೈದ್ಯಕೀಯ ನಿರೀಕ್ಷಕರನ್ನು ಸಂಪರ್ಕಿಸಿದರೆ ತಮ್ಮ ಆಸ್ಪತ್ರೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವುದನ್ನು ಒಪ್ಪಿಕೊಂಡಿದ್ದಾರೆ.ತಾಲ್ಲೂಕಿನ ಬಹುತೇಕ ಆಸ್ಪತ್ರೆಗಳಿಗೆ ವಿದ್ಯುತ್ ಸಂಪರ್ಕ ಇಲ್ಲದಿರುವ ಬಗ್ಗೆ ಸಹಾಯಕ ನಿರ್ದೇಶಕ ಡಾ. ರಾಚಪ್ಪ ಅವರನ್ನು ಸಂಪರ್ಕಿಸಿದಾಗ ಆಯಾ ಆಸ್ಪತ್ರೆಗಳ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳು ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುವುದು ಕಡ್ಡಾಯ. ಎಲ್ಲಾ ಗ್ರಾಮ ಪಂಚಾಯಿತಿಗಳಿಗೆ ಪತ್ರ ಬರೆದಿದ್ದರು ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಮುಂದಾಗದಿರುವ ಅಸಹಾಯಕತೆ ವ್ಯಕ್ತಪಡಿಸಿದರು. ಸಿಬ್ಬಂದಿ ಪರ್ಯಾಯ ವ್ಯವಸ್ಥೆ ಮೂಲಕ ಫ್ರಿಜ್ ಬಳಕೆ ಮಾಡುತ್ತಿದ್ದಾರೆ ಎಂದು ಸಮರ್ಥಿಸಿಕೊಂಡರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.