ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕರೆವಲ್ಲಿಯೇ ತೊರೆವ ಇಚ್ಛೆಯೂ ಇದೆ!

ಪು:80 ರೂ. 100
Last Updated 4 ಜುಲೈ 2015, 19:30 IST
ಅಕ್ಷರ ಗಾತ್ರ

ಅವನು ಮಧು ಸಾವು
ಲೇ: ಎಚ್. ಎಸ್. ಮುಕ್ತಾಯಕ್ಕ
ಪ್ರ: ಸಂಕ್ರಮಣ ಪ್ರಕಾಶನ, ನಂ. 15, ಜ್ಯೋತಿ ಲೇಔಟ್, 2ನೇ ಮೇನ್, ಯಲಚೇನಹಳ್ಳಿ, ಜೆ.ಪಿ.ನಗರ,
ಬೆಂಗಳೂರು- 560 078


ನಾನು ಹೆಚ್ಚೋ ಮಧು ಹೆಚ್ಚೋ ಎಂದವನ ಕೇಳಿದೆ
ಬಟ್ಟಲು ಎತ್ತುತ್ತಲೆ ಹೇಳಿದ ನೀನು ಎಂದು

ಒಂದು ಸಾಲಲ್ಲಿ ಆಹ್ವಾನಿಸಿ ಮರು ಸಾಲಿನಲ್ಲಿಯೇ ಅದನ್ನು ವಿಸರ್ಜಿಸಿ ಮತ್ತೆ ಆಹ್ವಾನಕ್ಕೆ ಸಿದ್ಧವಾಗುವ ದೋಹಾಕ್ರಮ ನಮ್ಮ ಉಸಿರಾಟದಷ್ಟೇ ಸಹಜವಾದುದು. ಎರಡು ಸಾಲಿನ ರಚನೆಗಳಾದ ದೋಹೆಗಳು ಭಾರತದ ಅನೇಕ ದೇಶಭಾಷೆಗಳಲ್ಲಿನ ಕಾವ್ಯಾಭಿವ್ಯಕ್ತಿಯ ಪ್ರಧಾನ ಮಾರ್ಗ. ಕಬೀರ, ಸರಹ ಅವರಂತರ ನೂರಾರು ಕವಿ ಸಂತರ ದೋಹೆಗಳು ಅಲ್ಲಿನ ನಾಡಿಮಿಡಿತದಲ್ಲಿ ಒಂದಾಗಿವೆ. ಇಲ್ಲಿ ಹೆಸರಿಸಬಹುದಾದ ಕನ್ನಡದ ಪ್ರಾಚೀನ ದೋಹಾ ಕಾವ್ಯವೆಂದರೆ ಶಾಂತರಸರು ಸಂಪಾದಿಸಿಕೊಟ್ಟ ಲಿಂಗಣ್ಣ ಕವಿಯ ‘ಬಾರಮಾಸ’.

ಅದು, ನಿರಂತರ ಪ್ರೇಮವೇ ಲೌಕಿಕ ಮತ್ತು ಪಾರಲೌಕಿಕದ ತುತ್ತತುದಿ ಎನ್ನುವುದನ್ನು ಪ್ರತಿಪಾದಿಸಲೋಸುಗವೇ ಕಟ್ಟಿದ ಕಾವ್ಯದಂತಿದೆ. ಪ್ರಸ್ತುತ ಎಚ್.ಎಸ್. ಮುಕ್ತಾಯಕ್ಕನವರ ಈ ದೋಹಾ ಸಂಕಲನ, ಕನ್ನಡದ ಕೆಲವೇ ಕವಿಗಳು ದಕ್ಕಿಸಿಕೊಂಡಿರುವ ಮಾರ್ಗ. ಈ ದ್ವಿಪದಿಗಳಲ್ಲಿ ಅಲ್ಲಲ್ಲಿ ಸೂಫಿ ಪ್ರೇಮದ, ಗಜಲ್‌ನ ಜೀವಪ್ರೀತಿಯ, ಉರ್ದು ಕಾವ್ಯ ಮತ್ತು ಭಾಷೆಯ ಸೂಕ್ಷ್ಮ ಮಾಧುರ್ಯದ ಅನೇಕ ಹೊಳಹುಗಳು ಮಿಂಚುತ್ತವೆ. ಲೌಕಿಕವನ್ನು ಸಂಭ್ರಮದಿಂದ ಬಾಳಲಾರದವನಿಗೆ ಅದರಾಚೆಗಿನದು ದಕ್ಕಲಾರದು ಎಂಬ ನಿಲುವು ಇಲ್ಲಿ ಅನುರಣಿತವಾಗುತ್ತಿರುತ್ತದೆ. ಪ್ರೀತಿ ಪ್ರೇಮದ ತೀವ್ರತೆಯನ್ನು ಇಲ್ಲಿಯ ವಿಷಾದ ಹೆಚ್ಚಿಸುತ್ತಿರುತ್ತದೆ.

ನೀನು ನನ್ನ ಪ್ರೀತಿಯನು ತಿರಸ್ಕರಿಸಿದೆ ಓ! ಇರಲಿ ಬಿಡು
ತಿರಸ್ಕೃತ ಪ್ರೇಮದಲ್ಲಿ ಸುಖವಿದೆಯೆಂದು ನೀನೇನು ಬಲ್ಲೆ

ನೀನು ನನ್ನವನೆ ಎಂಬ ಸುಂದರ ಭ್ರಮೆಯೊಳು ನಾನಿದ್ದೇನೆ
ಭ್ರಮೆಯೆ ಆದರೂ ಅದು ಬದುಕಿಸುತ್ತದೆ ಇರಲಿ ಬಿಡು

ಮುಕ್ತಾಯಕ್ಕನವರ ಈ  ದೋಹೆಗಳು ಬಿಡಿ ರಚನೆಗಳಾಗಿ ಕಂಡರೂ ಇಲ್ಲೊಂದು ಗಮನಿಸಬೇಕಾದ ಅಂಶವಿದೆ. ಇವು ಅಲಾಯಿದ ನಿಲ್ಲಬಲ್ಲ ಬಿಡಿ ರಚನೆಗಳೂ ಹೌದು, ಒಂದೇ ಆಗಿ ಕೂಡಬಲ್ಲ ಕಾವ್ಯದ ಭಾಗಗಳೂ ಹೌದು. ಅನೇಕ ದ್ವಿಪದಿಗಳು ಬೇರೆ ಬೇರೆ ಗಜಲ್‌ಗಳಿಂದ ಕಳಚಿಕೊಂಡು ತೇಲುತ್ತ ಬಂದ ಎಕ್ಕದ ಹೂಬೀಜಗಳಂತೆ ಕಾಣುತ್ತವೆ. ತೀರಾ ಹಗುರ ಸಾಲುಗಳಂತೆ ತೋರಿದರೂ ಅಗಾಧ ನೆನಪಿನ ಸಾಗರವನ್ನೇ ಹೊತ್ತು ತಂದಿರುತ್ತವೆ. ದುಃಖದ ಅನುಸಂಧಾನವನ್ನು ತನ್ನ ಪ್ರಧಾನ ಉದ್ಯೋಗವಾಗಿರಿಸಿಕೊಂಡಿರುವ ಈ ದ್ವಿಪದಿಗಳು ತಾವು ಸಾಗಿಬಂದ ಈವರೆಗಿನ ಅನುಕ್ತ ಲೋಕವೊಂದನ್ನು ತಟಕ್ಕನೆ ಅನಾವರಣ ಮಾಡಿಬಿಡುತ್ತವೆ.

ಮಧುಶಾಲೆಯಲ್ಲಿ ಯಾರೋ ನಿನ್ನ ಪ್ರಸ್ತಾಪವ ಮಾಡಿದರು
ಆಗಷ್ಟೇ ಎತ್ತಿದ ಬಟ್ಟಲು ಜಾರಿ ನುಚ್ಚು ನೂರಾಯಿತು

ಈ ದ್ವಿಪದಿಗಳುದ್ದಕ್ಕೂ ಅನುರಣಿತವಾಗುವ ಪ್ರಿಯತಮ/ಪ್ರಿಯತಮೆ, ಅಧರ, ಮದಿರೆ, ಪಾನಬಟ್ಟಲು, ಸಾಕಿ, ಸಾವು ಇತ್ಯಾದಿಗಳನ್ನು ಕಂಡು ಇವುಗಳನ್ನು ಗಜಲ್, ಮುಷಾಯಿರಾ ಸಂವೇದನೆಯ ಭಾಗವಾಗಿಯೋ, ಉರ್ದು ಭಾಷೆಯ ಒಂದು ಕಾವ್ಯ ಪ್ರಕಾರವಾಗಿಯೋ ನೋಡಿದರೆ ನಮಗೆ ಸಿಗುವುದು ‘ಹುಣ್ಣಿಮೆ ಚಂದಿರನ ಹೆಣ’ ಮಾತ್ರ. ಧರ್ಮ, ತತ್ವ,  ಭಾಷೆ, ಸಂಸ್ಕೃತಿ, ಭೌಗೋಳಿಕ ಗಡಿಗಳನ್ನು ದಾಟಿದ ಕೆಲವೇ ಮಟ್ಟುಗಳಲ್ಲಿ ದ್ವಿಪದಿಗಳು ಕೂಡ ಒಂದು ಎಂದು ನೋಡಿದಾಗ ಮಾತ್ರ ನಾವು ಈ ಕಾವ್ಯದ ಒಂದು ಸಹಪ್ರಯಾಣಕ್ಕೆ ಸಿದ್ಧರಾದೆವೆಂದು ನನಗನ್ನಿಸುತ್ತದೆ.

ಯಾವ ಸಂಗತಿಗಳು ನಮಗೆ ಬಿಡುಗಡೆಯ ಮಾರ್ಗವನ್ನೊದಗಿಸುತ್ತವೆ ಎಂದು ಆತುಕೊಳ್ಳುತ್ತೇವೆಯೋ ಅವೇ ನಮ್ಮನ್ನು ಬಂಧಿಸುವ ಸಂಗತಿಗಳಾಗುತ್ತವೆ ಎಂಬುದು ಅರಿವಾದ ತಕ್ಷಣ ಆತಂಕವಾಗುತ್ತದೆ. ಹಾಗಾಗಿ ಅಂತಹ ಎಲ್ಲವನ್ನೂ ಅನುಭವಿಸುತ್ತಲೇ ದಾಟಿಸಲು ಇಂತಹ ಕೆಲವೇ ನಾವೆಗಳಿಗೆ ಸಾಧ್ಯ. ಮುಖ್ಯ, ದಾಟಲು ನಮಗೆ ಮನಸ್ಸಿರಬೇಕು ಅಷ್ಟೆ ಅಥವಾ ಅದಕ್ಕೆ ಅಡ್ಡಿಯಾಗುವ ನಮ್ಮ ಮನಸ್ಸನ್ನು ನಿರಸನಗೊಳಿಸಬೇಕು. ದ್ವಿಪದಿ ಬದುಕಿನ ಸಹಜಲಯ. ಉಸಿರನ್ನು ತೆಗೆದುಕೊಂಡ ಮರು ಗಳಿಗೆಯೇ ಅದನ್ನು ಹೊರಹಾಕುವ ಈ ಸಹಜಲಯದಲ್ಲಿ ಜೀವಮಾನ ಕಳೆದರೂ ಅದನ್ನು ಲೋಕಗ್ರಹಿಕೆಯ ವಿಧಾನವಾಗಿಸಿಕೊಳ್ಳುವುದು ಸುಲಭವಲ್ಲ.  ಅದು ಕಲಿತು ಬರುವುದೂ ಅಲ್ಲ.

ಪ್ರೀತಿಸಬೇಕೆನಿಸಿದಾಗ ಪ್ರೀತಿಸಿದೆ, ಬೇಡವಾದಾಗ ಅಲ್ಲಗಳೆದು
ಎಂಥ ವಿಕ್ಷಿಪ್ತ ಪ್ರೇಮಿಯೆಂದು ಜನ ನಕ್ಕದ್ದು ಏನು ಸೋಜಿಗ!

ಈ ದ್ವಿಪದಿಗಳಲ್ಲಿ ಅನೇಕ ಗಜಲ್, ಸೂಫಿ ಕವಿಗಳು ಪಿಸುನುಡಿಯುತ್ತಿರುವಂತೆ ಅನ್ನಿಸುವುದು ಸಹಜವೇ ಇದೆ. ಈ ಕಾವ್ಯವನ್ನು ತುಂಬಿಕೊಂಡಿರುವ ಅವನು/ಅವಳು, ಮಧು, ತುಂಬುವ ಬಟ್ಟಲು, ತುಂಬುವ ಸಾಕಿ ಇವರೆಲ್ಲ ಜೀವಚೈತನ್ಯವನ್ನು ಮರುಪೂರಣ ಮಾಡುವ ರಸದ ಆಕರಗಳಷ್ಟೇ ಅಲ್ಲ, ಲೋಕವನ್ನು ಆವರಿಸಿಕೊಳ್ಳಲು ಹೊಂಚುಹಾಕುತ್ತಲೇ ಇರುವ ಮೂಲಭೂತವಾದಿ ಧಾರ್ಮಿಕ ಕ್ರೌರ್ಯಕ್ಕೆ ಇದಿರು ನಿಲ್ಲುವ ಲೋಕ ಮಂಗಳ ತತ್ವಗಳೂ ಹೌದು. ತತ್ವಪದಕಾರರು ಎಲ್ಲರೂ ಒಟ್ಟಾಗಿ ಸ್ವೀಕರಿಸುವ ‘ಆನಂದ’ವೂ ಇದೇ ಮಾದರಿಯ ಮಂಗಳ ವಸ್ತು. ಅದು ನಮ್ಮ ನಿತ್ಯ ಬದುಕಿನ ಲಯವನ್ನು ಬದಲಿಸಿ ಲೋಕವನ್ನೊಮ್ಮೆ ನೋಡಲು ಅನುವು ಮಾಡಿಕೊಡುವ ಮತ್ತೊಂದು ತುದಿ. ಒಂದೇ ಕಡೆ ನಿಂತು ಲೋಕವನ್ನು ಕಾಣುವವನಿಗೆ ಸಿಕ್ಕುವುದೇನಿದ್ದರೂ ಪಾರ್ಶ್ವ ನೋಟ ಮಾತ್ರ.

ತನ್ನನ್ನೇ ಒಮ್ಮೆ ಕದಲಿಸಿಕೊಂಡು ಲೋಕವನ್ನು ಕಂಡರೆ ಹಾಗೆ ಕಂಡ ಯಾವ ನೋಟವೂ ಪೂರ್ಣವಲ್ಲವೆಂಬ ನಿಜದ ಅರಿವಾಗುತ್ತದೆ. ಪ್ರೀತಿ ಪ್ರೇಮಗಳು ಲೋಕದ ಸಾಮರಸ್ಯಕ್ಕೆ ದುಡಿವ ಸಂಗತಿಗಳಾಗಿವೆ.  ಲೋಕಕ್ಕೆ ನಾನಾ ರೀತಿಯ ಕೇಡನ್ನು ತುಂಬುತ್ತಿರುವ ಧಾರ್ಮಿಕರು, ವರ್ತಕರು, ದಾರ್ಶನಿಕರು, ಮಾಧ್ಯಮದವರು, ಅಧಿಕಾರಿಗಳಿಂದ ತುಂಬಿ ಹೋಗಿರುವ ಲೋಕದಲ್ಲಿ ದೊಡ್ಡ ಕೊರತೆಯೆಂದರೆ ಪ್ರೀತಿಸುವವರದ್ದು. ಪ್ರೀತಿಸ ಬಲ್ಲ ಜೀವವು ಮಾತ್ರ ಪ್ರತಿಫಲಾಪೇಕ್ಷೆ ಇಲ್ಲದೆ ಲೋಕಕ್ಕೆ ಒಳಿತನ್ನು ನೀಡಬಲ್ಲದು ಎಂಬ ನಂಬಿಕೆಯೊಂದು ಈ ಕಾವ್ಯದ ಬೆನ್ನಿಗಿದೆ. ಅದಕ್ಕೆ ಭಂಗ ಉಂಟುಮಾಡುವ ಎಲ್ಲವನ್ನೂ ಅದು ಧಿಕ್ಕರಿಸುತ್ತದೆ.

ಅನುಭಾವಕ್ಕೂ ಧಾರ್ಮಿಕತೆಗೂ ಇರುವ ಅಗಾಧ ಅಂತರವನ್ನು ಇಲ್ಲಿ ಗುರುತಿಸಬಹುದು. ಉಸಿರಾಡುವುದನ್ನು ಕಲಿಸಿಕೊಡುವೆನೆನ್ನುತ್ತ ಸಾವಿರಾರು ಕೋಟಿ ಹಣಮಾಡುವ ಧಾರ್ಮಿಕ ದಂಧೆಯ ನಡುವೆ ನಾವಿದ್ದೇವೆ. ಈ ಧಾರ್ಮಿಕತೆಯ ಮಾರಾಟವನ್ನು ಅನುಭಾವವು ಪ್ರತಿರೋಧಿಸುತ್ತಲೇ ಬಂದಿದೆ. ಅಂತಹ ಪ್ರತಿರೋಧದ ಒಂದು ಮುಖವೇ ಈ ಮದಿರೆ, ಮಾನಿನಿ, ಸಾಕಿ ಮತ್ತು ಬಟ್ಟಲು.

ನೀನು ಮೈಮುರಿಯುವುದು ಕಂಡು ಯಾವುದೋ ಬಿರುಗಾಳಿ ಬೀಸಿತು
ಹೃದಯ ಬಾಯಿಗೆ ಬಂದಿತು, ಕಷ್ಟವಾಯಿತು ಜೀವ ಉಳಿಸಿಕೊಳ್ಳುವುದು

ಏಕೆ ಕುಡಿಯುತ್ತಿ ಎಂದು ಹೀಗಳೆಯುವರು ಎಲ್ಲರೂ
ಅಯ್ಯೋ ಅಧರ ಪಾನದ ಭಾಗ್ಯ ಎಷ್ಟು ಜನಕ್ಕೆ ಉಂಟು

ಮಧುಶಾಲೆಯ ಮುಂದೆಯೆ ನಮ್ಮ ಸಮಾಧಿ ಮಾಡಿರಿ
ಅದನು ನೋಡುತ್ತಲೆ ಆ ಲೋಕದಲ್ಲಿ ಬದುಕು ಕಳೆಯುವೆನು

ಯಾವುದನ್ನು ತುದಿಗಳೆಂದು ಲೋಕ ಭ್ರಮಿಸಿದೆಯೋ ಅವುಗಳನ್ನೇ ಇದಿರಾಗಿಸಿ, ತುದಿಗಳೆಂಬ ಭ್ರಮೆಯನ್ನು ಕಳಚುವ, ಎರಡೂ ಇಲ್ಲವೆಂಬ ನಿಜವನ್ನು ಕಾಣಿಸಿಕೊಡುವ ಕೆಲಸವನ್ನು ಈ ದ್ವಿಪದಿಗಳು ಅನೇಕ ಕಡೆ ಮಾಡಿವೆ. ಬದುಕಿನ ಆ ಮುಖವನ್ನು ಕಾಣಲು ಇನ್ನೊಂದು ಬದಿಗೆ ಹೋಗಬೇಕಲ್ಲ, ಹಾಗೆ ಆ ಬದಿಗೆ ಹೋದಾಗ ನಿಜವಾಗಿ ಈ ಬದಿಯ ನಿಜ ಗೊತ್ತಾಗುತ್ತದೆ! ಗ್ರೀಸಿನ ‘ಡೆಲ್ಫಿ’ ದೇವಸ್ಥಾನದಲ್ಲಿ ತೂಗುಹಾಕಿರುವ ನಾಣ್ಯದಲ್ಲಿ ಒಂದು ಬದಿಯಲ್ಲಿ ‘ಈ ನಾಣ್ಯದ ಆ ಬದಿಯಲ್ಲಿರುವು ನಿಜ’ ಎಂದೂ ಇನ್ನೊಂದು ಬದಿಯಲ್ಲಿ ‘ಈ ನಾಣ್ಯದ ಆ ಬದಿಯಲ್ಲಿರುವುದು ಸುಳ್ಳು’ ಎಂದೂ ಬರೆದಿದೆಯೆಂತೆ. ಈ ಸಾಲುಗಳೂ ಹಾಗೇ ಇವೆ:

ಎಂಥ ಊರಿದು ಮದ್ಯವಿಲ್ಲ, ಸಾಕಿಯಿಲ್ಲ, ಮಧುಶಾಲೆಯಿಲ್ಲ
ಅಯ್ಯೋ ದೇವರೆ ಇಂಥಲ್ಲಿ ನಮಗೆ ಸಾಯಲೂ ಮನಸ್ಸಿಲ್ಲ

ನೀನು ನನ್ನ ಪ್ರೀತಿಯನ್ನು ತಿರಸ್ಕರಿಸಿದೆ ಓ! ಇರಲಿ ಬಿಡು
ತಿರಸ್ಕೃತ ಪ್ರೇಮದಲ್ಲಿ ಸುಖವಿದೆಯೆಂದು ನೀನೇನು ಬಲ್ಲೆ

ಸಾವು ಬರುವುದೆಂದು ಏತಕ್ಕೆ ಚಿಂತಿಸುವುದು
ಅದಿರದಿದ್ದರೆ ಬದುಕು ಏನೆಂಬುದೆ ತಿಳಿಯುತ್ತಿರಲಿಲ್ಲ

ಈ ಸಂಕಲನದ ಅನೇಕ ದ್ವಿಪದಿಗಳು ಆ ಇನ್ನೊಂದು ತುದಿಯನ್ನು ಮುಟ್ಟಲಾರದೆ ಅಲ್ಲೇ ನಿಸ್ತೇಜಗೊಳ್ಳುತ್ತವೆ. ದ್ವಿಪದಿಗಳನ್ನು, ಗಜಲ್‌ಗಳನ್ನು ಕನ್ನಡಕ್ಕೆ ಪರಿಚಯಿಸಿಕೊಡುವ ಗಂಭೀರ ಪ್ರಯತ್ನವನ್ನು ಮೊದಲು ಮಾಡಿದವರು ಶಾಂತರಸರು. ಅವರ ಒಂದು ದ್ವಿಪದಿ:

ಜಿಗಿದು ಹೋದವು ತಾರೆಗಳು ಎಂದೋ ನೀಲಾಂಬರಕೆ
ಯಾರು ಕರೆತರುವರು ಅವುಗಳನು ರಂಗೋಲಿ ಹಾಕಲಿಕೆ

ಅವರ ದಾರಿಯಲ್ಲಿ ಮುಂದೆ ನಡೆದ ಅನೇಕ ಕವಿಗಳಿದ್ದಾರೆ. ಅವರಲ್ಲಿ ಮುಕ್ತಾಯಕ್ಕನವರೂ ಒಬ್ಬರು. ಶಾಂತರಸರಿಗೆ ಉತ್ತರಿಸುವಂತೆ ಮುಕ್ತಾಯಕ್ಕ ನುಡಿದಿದ್ದಾರೆ:

ಮೋಡದಂಚಿನಲ್ಲಿ ಅಪ್ಪ ನೀ ಕಾಯುತಿರು ನಾ ಬರುವವರೆಗೆ
ಮತ್ತೆ ಪುಟ್ಟ ಮಗುವಾಗಿ ನಿನ್ನ ಕೈ ಹಿಡಿದು ಸಾಗುವೆ ಚುಕ್ಕೆಗಳ ನಡುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT