ಮಂಗಳವಾರ, ಮಾರ್ಚ್ 2, 2021
31 °C

ಕರ್ನಾಟಕಕ್ಕೆ ನೀರು- ಹಾವಿಗೆ ಹಾಲೆರೆದಂತೆ: ಠಾಕ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕರ್ನಾಟಕಕ್ಕೆ ನೀರು- ಹಾವಿಗೆ ಹಾಲೆರೆದಂತೆ: ಠಾಕ್ರೆ

ಮುಂಬೈ (ಪಿಟಿಐ): ಕರ್ನಾಟಕದ ಬರ ಪೀಡಿತ ಜಿಲ್ಲೆಗಳಿಗೆ ನೀರು ಬಿಡುವ ಮಹಾರಾಷ್ಟ್ರ ಸರ್ಕಾರದ ನಿರ್ಧಾರ ನಿಜಕ್ಕೂ ಆಘಾತಕಾರಿ ಎಂದು ಶಿವಸೇನಾ ಮುಖ್ಯಸ್ಥ ಬಾಳ ಠಾಕ್ರೆ ಸೋಮವಾರ ಕಟುವಾಗಿ ಟೀಕಿಸಿದ್ದಾರೆ.ಕರ್ನಾಟಕಕ್ಕೆ ನೀರು ಬಿಡುವ ಮೂಲಕ ಕಾಂಗ್ರೆಸ್ ನೇತೃತ್ವದ ಮಹಾರಾಷ್ಟ್ರ ಸರ್ಕಾರ ಮರಾಠಿಗರ ಬೆನ್ನಿಗೆ ಚೂರಿ ಹಾಕಿದೆ ಎಂದು ಅವರು ಶಿವಸೇನಾ ಮುಖವಾಣಿ `ಸಾಮ್ನಾ~ದ ಸಂಪಾದಕೀಯದಲ್ಲಿ ಹರಿಹಾಯ್ದಿದ್ದಾರೆ.`ಮರಾಠಿ ಭಾಷಿಕರ ಮೇಲೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿರುವ ಕನ್ನಡಿಗರಿಗೆ ಒಂದು ಹನಿ ನೀರನ್ನೂ ಕೊಡಬಾರದು. ಅವರಿಗೆ ನೀರು ಕೊಡುವುದು ಹಾವಿಗೆ ಹಾಲೆರೆದಂತೆ. ಆ ಕೆಲಸವನ್ನು ಇಲ್ಲಿಯ ಸರ್ಕಾರ ಗುತ್ತಿಗೆ ಪಡೆದಿದೆ~ ಎಂದು ಕಿಡಿ ಕಾರಿದ್ದಾರೆ. ಮರಾಠಿಗರಿಗೆ ಕರ್ನಾಟಕ ಮಾಡಿರುವ ಅನ್ಯಾಯವನ್ನು ಮರೆತಿರುವ ಸರ್ಕಾರ ನೀರು ಬಿಡಲು ಹೊರಟಿದೆ ಎಂದು ಠಾಕ್ರೆ ವ್ಯಂಗ್ಯವಾಡಿದ್ದಾರೆ.ಗಡಿ ಸಮಸ್ಯೆಯ ಹೊರತಾಗಿಯೂ ಉಭಯ ರಾಜ್ಯಗಳು ಬರ ಪೀಡಿತ ಜಿಲ್ಲೆಗಳಿಗೆ ನೀರು ಬಿಡಲು ಒಪ್ಪಿಕೊಂಡಿವೆ.

 

ದೂಧ್‌ಗಂಗಾ ಮತ್ತು ವರ್ನಾ ನದಿಗಳಿಂದ ಕರ್ನಾಟಕದ ಬರ ಪೀಡಿತ ಗಡಿ ಜಿಲ್ಲೆಗಳಿಗೆ ಮುಂಗಾರು ಆರಂಭವಾಗುವವರೆಗೆ ನೀರು ಬಿಡಲು ಮಹಾರಾಷ್ಟ್ರ ಒಪ್ಪಿಕೊಂಡಿದೆ. ಅದಕ್ಕೆ ಪ್ರತಿಯಾಗಿ ಕರ್ನಾಟಕ ಆಲಮಟ್ಟಿ ಹಿನ್ನೀರನ್ನು ಸಾಂಗ್ಲಿ ಜಿಲ್ಲೆಯ ಬರಪೀಡಿತ ಜತ್ ತಾಲ್ಲೂಕಿಗೆ ಬಿಡಲಿದೆ. ಸಚಿವರಾದ ಉಮೇಶ್ ಕತ್ತಿ, ಬಸವರಾಜ ಬೊಮ್ಮಾಯಿ, ಮುರುಗೇಶ ನಿರಾಣಿ ನೇತೃತ್ವದ ಸಚಿವರ ನಿಯೋಗ ಇತ್ತೀಚೆಗೆ ಮಹಾರಾಷ್ಟ್ರ ಮುಖ್ಯಮಂತ್ರಿ ಪೃಥ್ವಿರಾಜ್ ಚವಾಣ್ ಅವರನ್ನು ಭೇಟಿಯಾಗಿ ನೀರು ಬಿಡುವಂತೆ ಮನವಿ ಮಾಡಿತ್ತು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.