ಭಾನುವಾರ, ಮೇ 9, 2021
25 °C
ರಾಷ್ಟ್ರೀಯ ಸಬ್ ಜೂನಿಯರ್ ಈಜು: ವಾನಿಯಾಗೆ ಮತ್ತೊಂದು ಚಿನ್ನ

ಕರ್ನಾಟಕದ ಶ್ರೀಹರಿ ನೂತನ ದಾಖಲೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪಣಜಿ (ಪಿಟಿಐ): ಕರ್ನಾಟಕದ ಎನ್. ಶ್ರೀಹರಿ ಮತ್ತು ತಮಿಳುನಾಡಿನ ಪಿ. ವಿಕಾಸ್ ಇಲ್ಲಿ ನಡೆಯುತ್ತಿರುವ 30ನೇ ರಾಷ್ಟ್ರೀಯ ಸಬ್ ಜೂನಿಯರ್ ಈಜು ಚಾಂಪಿಯನ್‌ಷಿಪ್‌ನಲ್ಲಿ ನೂತನ ರಾಷ್ಟ್ರೀಯ ದಾಖಲೆಯೊಂದಿಗೆ ಬಂಗಾರ ಜಯಿಸಿದರು.ಶನಿವಾರ ನಡೆದ ಸ್ಪರ್ಧೆಯಲ್ಲಿ ಶ್ರೀಹರಿ ಬಾಲಕರ ಗುಂಪು-3 ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ 1:11.59 ಸೆಕೆಂಡ್‌ಗಳಲ್ಲಿ ಗುರಿ ತಲುಪಿದರು. ಈ ಮೂಲಕ ಉತ್ತರ ಪ್ರದೇಶದ ಸೋನು ಯಾದವ್ (1:12.09) 2007 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು. ಬಾಲಕರ ಗುಂಪು-4ರ 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ ವಿಕಾಸ್ 2:46.61 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ಮುಟ್ಟಿದರು. ಮಾತ್ರವಲ್ಲ, ಎಂ.ಎಸ್. ಧನುಷ್ (2:49.15 ಸೆ.) 2010 ರಲ್ಲಿ ಸ್ಥಾಪಿಸಿದ್ದ ದಾಖಲೆಯನ್ನು ಮುರಿದರು.ಕಂಪಾಲದ ಎಸ್‌ಎಜಿ ಈಜುಕೊಳದಲ್ಲಿ ನಡೆಯುತ್ತಿರುವ ಚಾಂಪಿಯನ್‌ಷಿಪ್‌ನ ಮೂರನೇ ದಿನವೂ ಪ್ರಾಬಲ್ಯ ಮೆರೆದ ಮಹಾರಾಷ್ಟ್ರ ಸ್ಪರ್ಧಿಗಳು ನಾಲ್ಕು ಚಿನ್ನ, ಆರು ಬೆಳ್ಳಿ ಹಾಗೂ ಐದು ಕಂಚಿನ ಪದಕ ಗೆದ್ದುಕೊಂಡರು.ವಾನಿಯಾಗೆ ಮತ್ತೊಂದು ಬಂಗಾರ: ಶುಕ್ರವಾರ ಎರಡು ರಾಷ್ಟ್ರೀಯ ದಾಖಲೆಗಳೊಂದಿಗೆ ಚಿನ್ನ ಜಯಿಸಿದ್ದ ಕರ್ನಾಟಕದ ವಾನಿಯಾ ಕಪೂರ್ ಶನಿವಾರ ಮತ್ತೊಂದು ಬಂಗಾರ ಗೆದ್ದುಕೊಂಡರು. ಬಾಲಕಿಯರ ಗುಂಪು-3 ವಿಭಾಗದ 100 ಮೀ. ಬ್ಯಾಕ್‌ಸ್ಟ್ರೋಕ್ ಸ್ಪರ್ಧೆಯಲ್ಲಿ ವಾನಿಯಾ 1:14.48 ಸೆಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನ ಗೆದ್ದರು.ಕರ್ನಾಟಕದ ಸಿ.ಜೆ. ಸಂಜಯ್ ಚಾಂಪಿಯನ್‌ಷಿಪ್‌ನಲ್ಲಿ ತಮ್ಮ ಮೂರನೇ ಬಂಗಾರ ಜಯಿಸಿದರು. ಬಾಲಕರ ಗುಂಪು-3 ವಿಭಾಗದ 50 ಮೀ. ಬಟರ್‌ಫ್ಲೈ ಸ್ಪರ್ಧೆಯಲ್ಲಿ ಅವರು 30.27 ಸೆಕೆಂಡ್‌ಗಳಲ್ಲಿ ಮೊದಲಿಗರಾಗಿ ಗುರಿ ತಲುಪಿದರು. ಕರ್ನಾಟಕದ ರಾಜ್ ವಿನಾಯಕ್ ಬಾಲಕರ ಗುಂಪು-4ರ 50 ಮೀ. ಫ್ರೀಸ್ಟೈಲ್‌ನಲ್ಲಿ (31.32 ಸೆ.) ಚಿನ್ನ ಗೆದ್ದರೆ, 200 ಮೀ. ವೈಯಕ್ತಿಕ ಮೆಡ್ಲೆ ಸ್ಪರ್ಧೆಯಲ್ಲಿ (ಕಾಲ: 2:50.29) ಕಂಚಿನ ಪದಕ ಪಡೆದರು. ಹರ್ಷಿತಾ ಜಯರಾಮ್ ಬಾಲಕಿಯರ ಗುಂಪು-3ರ 50 ಮೀ. ಬ್ರೆಸ್ಟ್‌ಸ್ಟ್ರೋಕ್ ಸ್ಪರ್ಧೆಯಲ್ಲಿ (39.74 ಸೆ.) ಬೆಳ್ಳಿ ಗೆದ್ದುಕೊಂಡರು.

ಮಹಾರಾಷ್ಟ್ರ ಒಟ್ಟು 20 ಚಿನ್ನ, 13 ಬೆಳ್ಳಿ ಹಾಗೂ 12 ಕಂಚಿನ ಪದಕಗಳೊಂದಿಗೆ ಅಗ್ರಸ್ಥಾನದಲ್ಲಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.