ಬುಧವಾರ, ಮೇ 12, 2021
24 °C

ಕರ್ನಾಟಕ ಕರ್ನಾಟಕವೇ...

ಸಾಮಗ ದತ್ತಾತ್ರಿ, ಬೆಂಗಳೂರು Updated:

ಅಕ್ಷರ ಗಾತ್ರ : | |

`ನನಗೂ ಮೋದಿ ಅವರೇ ಮಾದರಿ~ ಎಂದಿದ್ದಾರೆ ಮುಖ್ಯಮಂತ್ರಿ ಸದಾನಂದಗೌಡರು (ಪ್ರ.ವಾ. ಸೆ. 19). ಅಧಿಕಾರದ ಶಿಖರದಲ್ಲಿರುವ ವ್ಯಕ್ತಿಗೆ `ಸ್ವಂತಿಕೆ~ ಇರಬೇಕು. ಆತ ಅನುಕರಿಸುವ ಅಗತ್ಯ ಒದಗಿದಾಗ ಮಾತ್ರ ಬೇರೆಡೆಗೆ ಗಮನಹರಿಸಬೇಕು.ಮೋದಿ ಅವರು ಗುಜರಾತಿನ ಅಭಿವೃದ್ಧಿಯನ್ನು ಇತರರು ಕರುಬುವಂತೆ ಮಾಡಿರಬಹುದು. ಆ ನಿಟ್ಟಿನಲ್ಲಿ ಅವರೇನೂ ಮಂತ್ರದಂಡವನ್ನು ಉಪಯೋಗ ಮಾಡಿಕೊಂಡಿಲ್ಲ.ರಾಜ್ಯದ ಅಭಿವೃದ್ಧಿಗೆ ಹಮ್ಮಿಕೊಳ್ಳಬೇಕಾದ ಕಾರ್ಯಕ್ರಮಗಳೇನು, ನಿಗದಿತ ಅವಧಿಯೊಳಗೆ ಅವನ್ನು ಸಾಧಿಸುವುದು ಹೇಗೆ, ಅಗತ್ಯವಾದ ಸಿಬ್ಬಂದಿ ಮತ್ತು ಅವರ ಅರ್ಹತಾನರ್ಹತೆಗಳು, ಹಣ ಪೂರೈಕೆ, ಸೂಕ್ತ ಮೇಲ್ವಿಚಾರಣೆ, ಲೋಪ-ದೋಷಗಳು ಆಗದಂತೆ ಎಚ್ಚರಿಕೆ,

ಹಾಗೂ ಅವು ಸಂಭವಿಸಿದಾಗ ತುರ್ತಾಗಿ ಅವುಗಳ ನಿವಾರಣೆಗೆ ಕ್ರಮ, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳುವಲ್ಲಿ ತನ್ನವರು-ಇತರರು ಎಂಬ ತಾರತಮ್ಯ ಮಾಡದಿರುವುದು ಈ ಮುಂತಾದ ಅಪೇಕ್ಷಣೀಯ ನಡವಳಿಕೆಗಳನ್ನು ನಮ್ಮ ಗೌಡರು ಮೋದಿಯವರಿಂದ ಕಲಿಯಬೇಕೆ? `ಕರ್ನಾಟಕವನ್ನು ಗುಜರಾತ್ ಮಾದರಿಯಲ್ಲಿ ಅಭಿವೃದ್ಧಿಪಡಿಸುತ್ತೇನೆ~ ಎಂದು ಬೀಗುತ್ತಿದ್ದ ಯಡಿಯೂರಪ್ಪನವರು ಬರೀ ಮಾತಿನಮಲ್ಲರಾಗುಳಿದರು. ಸದಾನಂದಗೌಡರೇ, ಕರ್ನಾಟಕದ ಹಿಂದಿನ ಮಹನೀಯರುಗಳು ಅದೆಷ್ಟೋ ಇದ್ದಾರೆ, ನಿಮಗೆ `ಮಾದರಿ~ಯಾಗಲು.ಸರ್. ಎಂ.ವಿ. ಅವರ ಬಗ್ಗೆ ಪ್ರಾಮಾಣಿಕವಾಗಿ ಯೋಚಿಸಿ. ಅಧಿಕಾರಸ್ಥರ ನಡೆ-ನುಡಿಗಳು, ಅಭಿವೃದ್ಧಿಯ ಬಗೆಗೆ ಕಳಕಳಿ ಗೊತ್ತಾಗುತ್ತದೆ. ಇಂತಹ ಮಹನೀಯರಿಗಿಂತ ಬೇರೆ ಬೇಕೆ? ಒಂದು ಮಾತು ಸ್ಪಷ್ಟ: ಗುಜರಾತ್ ಗುಜರಾತೇ; ಕರ್ನಾಟಕ ಕರ್ನಾಟಕವೇ. ಒಳ್ಳೆಯದನ್ನು ಪಡೆಯಬಾರದೆಂದಲ್ಲ. ಅದು ನಮ್ಮಲ್ಲೇ ಧಂಡಿಯಾಗಿರುವಾಗ ಯಾಕೆ ಸಲ್ಲದ ಗಿಮಿಕ್?

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.