ಭಾನುವಾರ, ಏಪ್ರಿಲ್ 18, 2021
29 °C

ಕಲಾಪ ನುಂಗಿದ ಓಟಿಗಾಗಿ ನೋಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ವಿಕಿಲೀಕ್ಸ್ ಬಹಿರಂಗ ಪಡಿಸಿದ ‘ಓಟಿಗಾಗಿ ನೋಟು’ ಆರೋಪವನ್ನು ತಳ್ಳಿಹಾಕಿರುವ ಪ್ರಧಾನಿಯವರ ವಿರುದ್ಧ ಹಕ್ಕುಚ್ಯುತಿ ಮಂಡನೆಗೆ ನೀಡಲಾಗಿರುವ ನೋಟಿಸ್ ಮೇಲೆ ಚರ್ಚೆ ಕೈಗೆತ್ತಿಕೊಳ್ಳಬೇಕು ಎಂದು ಪ್ರತಿಪಕ್ಷಗಳು ಪಟ್ಟು ಹಿಡಿದರೆ, ಹಣಕಾಸು ಮಸೂದೆಯ ಮೇಲೆ ಮೊದಲು ಚರ್ಚೆ ನಡೆಯಬೇಕು ಎಂದು ಸರ್ಕಾರ ಹಠ ಹಿಡಿಯಿತು ಇದರಿಂದ ಮಂಗಳವಾರ ಸಂಸತ್ ಕಲಾಪಕ್ಕೆ ಅಡಚಣೆಯಾಯಿತು.

 

ಮೊದಲು ಹಣಕಾಸು ಮಸೂದೆ ಮೇಲೆ ಚರ್ಚೆ ಆಗಬೇಕೇ ಅಥವಾ ಪ್ರಧಾನಿ ಅವರ ವಿರುದ್ಧ ನೀಡಿರುವ ಹಕ್ಕುಚ್ಯುತಿ ಮಂಡನೆ ನೋಟಿಸ್ ಮೇಲೆ ಚರ್ಚೆಯಾಗಬೇಕೇ ಎನ್ನುವ ವಿಚಾರವಾಗಿಯೇ ಲೋಕಸಭೆಯಲ್ಲಿ ಸುಮಾರು ಎರಡೂವರೆ ತಾಸುಗಳ ಕಾಲ ಕಾವೇರಿದ ಮಾತುಕತೆ ನಡೆದು ಕಡೆಗೆ ಪ್ರತಿಪಕ್ಷಗಳ ಸಭಾತ್ಯಾಗದೊಂದಿಗೆ ಈ ವಿಚಾರ ಅಂತ್ಯವಾಯಿತು.ಲೋಕಸಭೆ ಕಲಾಪ ಆರಂಭವಾಗುತ್ತಿದ್ದಂತೆಯೇ ವಿರೋಧ ಪಕ್ಷಗಳು ನೇರವಾಗಿ ಪ್ರಧಾನಿ ವಿರುದ್ಧ ಹಕ್ಕುಚ್ಯುತಿ ಮಂಡನೆ ವಿಚಾರವಾಗಿ ಚರ್ಚೆ ನಡೆಸಲು ಸಿದ್ಧವಾದವು. ಈ ವಿಚಾರವಾಗಿ (ಹಕ್ಕುಚ್ಯುತಿ ಮಂಡಿಸಲು ಅವಕಾಶ) ಪ್ರತಿಪಕ್ಷದ ನಾಯಕಿ ನೀಡಿರುವ ನೋಟಿಸನ್ನು ತಾವು ಇನ್ನು ಪರಿಶೀಲಿಸಬೇಕಿದೆ. ಆದ್ದರಿಂದ ಕಲಾಪ ಸುಗಮವಾಗಿ ನಡೆಸಲು ಅನುವು ಮಾಡಿಕೊಡಿ ಎಂದು ಸ್ಪೀಕರ್ ಮೀರಾ ಕುಮಾರ್ ಕೋರಿದರು.ಸ್ಪೀಕರ್ ಅವರ ಈ ಹೇಳಿಕೆಯಿಂದ ಕೆರಳಿದ ಸುಷ್ಮಾ ಸ್ವರಾಜ್, 2008ರಲ್ಲಿ ಸರ್ಕಾರ ವಿಶ್ವಾಸ ಮತ ಸಾಬೀತು ಪಡಿಸಲು ಸಂಸದರಿಗೆ ಲಂಚ ಕೊಟ್ಟಿಲ್ಲ ಎಂದು ‘ಓಟಿಗಾಗಿ ನೋಟು’ ಆರೋಪವನ್ನು ಅಲ್ಲಗಳೆದಿರುವ  ಪ್ರಧಾನಿಯವರ ಹೇಳಿಕೆ ಬಗ್ಗೆಯೇ ಮೊದಲು ಚರ್ಚೆ ನಡೆಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಜೆಡಿಯುನ ಶರದ್ ಯಾದವ್, ಮತ್ತು ಬಿಜೆಪಿಯ ಯಶವಂತ್ ಸಿನ್ಹಾ ಬೆಂಬಲ ನೀಡಿದರು.

 

ಆದರೆ ಹಣಕಾಸು ಸಚಿವ ಪ್ರಣವ್ ಮುಖರ್ಜಿ, ‘ಮೊದಲು ಹಣಕಾಸು ಮಸೂದೆಯನ್ನು ಚರ್ಚೆಗೆ ತೆಗೆದುಕೊಂಡರೆ ಸ್ವರ್ಗವೇನು ಕಳಚಿ ಬೀಳುವುದಿಲ್ಲ. ಮೊದಲು ಈ ಬಗ್ಗೆ ಚರ್ಚೆ ನಡೆಯಲಿ ನಂತರ ಪ್ರಧಾನಿ ಅವರ ಹೇಳಿಕೆಯ ಮೇಲಿನ ಚರ್ಚೆಗೆ ಖಂಡಿತ ಅವಕಾಶವಿರುತ್ತದೆ’ ಎಂದರು.

 

ಕಾಂಗ್ರೆಸ್‌ನ ಜಗದಾಂಬಿಕಾ ಪಾಲ್, ‘ಪ್ರತಿಪಕ್ಷದ ನಾಯಕಿ ಹಕ್ಕುಚ್ಯುತಿ ಮಂಡಿಸುತ್ತಿರುವ ಉದ್ದೇಶವನ್ನು ಈಗಾಗಲೇ ಪ್ರಚುರ ಪಡಿಸಿದ್ದಾರೆ. ಇದು ನಿಯಮ ಬಾಹಿರ’ ಎಂದು ಆಕ್ಷೇಪಿಸಿದರು.ಇದಕ್ಕೆ ಪ್ರತಿಹೇಳಿದ ಸ್ಪೀಕರ್, ಹಕ್ಕುಚ್ಯುತಿ ಮಂಡನೆಗೆ ಅವಕಾಶ ನೀಡುವ ಮೊದಲು ಈ ವಿಚಾರವನ್ನು ಗಮನದಲ್ಲಿಟ್ಟುಕೊಳ್ಳುವುದಾಗಿ ತಿಳಿಸಿದರು.

 

ಈ ಮಧ್ಯೆ ಮಾತನಾಡಿದ ಬಿಜೆಪಿ ಹಿರಿಯ ಮುಖಂಡ ಎಲ್.ಕೆ ಅಡ್ವಾಣಿ, ‘ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಲಿಲ್ಲ ಎಂಬ ಒಂದೇ ಕಾರಣಕ್ಕೆ ಇಡೀ ಒಂದು ಅಧಿವೇಶನ ಪರಿಪೂರ್ಣವಾಗಿ ನಡೆಯಲಿಲ್ಲ ಎನ್ನುವುದು ಸಂಸತ್‌ನ ಇತಿಹಾಸದಲ್ಲಿ ಹಿಂದೆಂದೂ ನಡೆದಿಲ್ಲ. ಇಂತಹ ಸನ್ನಿವೇಶಕ್ಕೆ ಆಸ್ಪದ ನೀಡುವುದೂ ಬೇಡ. ಪ್ರತಿಪಕ್ಷದ ನಾಯಕರಿಗೆ ಮಾತನಾಡಲು ಅವಕಾಶ ನೀಡಿ’ ಎಂದು ಸ್ಪೀಕರ್ ಅವರನ್ನು ಕೋರಿದರು.ಇದಕ್ಕೆ ಪ್ರತಿಕ್ರಿಯಿಸಿದ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಪವನ್ ಕುಮಾರ್ ಬನ್ಸಲ್, ‘ಅಡ್ವಾಣಿ ಅವರ ಈ ಹೇಳಿಕೆಯನ್ನು ನಂಬುವುದಾದರೆ ಪ್ರತಿಪಕ್ಷದ ನಾಯಕರು ಹಠಕ್ಕೆ ಬಿದ್ದವರಂತೆ ಕಲಾಪ ನಡೆಸಲು ಬಿಡದ ಕಾರಣ ಇಡೀ ಚಳಿಗಾಲದ ಅಧಿವೇಶನ ಮಣ್ಣುಪಾಲಾಯಿತು. ಹಾಗಾಗಿ ಅಡ್ವಾಣಿ ಅವರ ಹೇಳಿಕೆ ಸರಿಯಾದುದಲ್ಲ’ ಎಂದರು.

 

‘ನಾವು ಈ ವಿಚಾರವಾಗಿ ಸಾಂವಿಧಾನಿಕ ಬಿಕಟ್ಟು ಸೃಷ್ಟಿಸಲು ಇಷ್ಟ ಪಡುವುದಿಲ್ಲ. ಹಕ್ಕುಚ್ಯುತಿ ಮಂಡನೆ ನೋಟಿಸ್ ಮೇಲೆ ಚರ್ಚೆ ನಡೆಸಲು ಮೊದಲು ಅವಕಾಶ ಕೊಟ್ಟರೆ ಹಣಕಾಸು ಮಸೂದೆ ಅಂಗೀಕರಿಸಲು ಸಹಕಾರ ನೀಡುವೆವು’ ಎಂದು ಸುಷ್ಮಾ ಸ್ವರಾಜ್ ಭರವಸೆ ನೀಡಿದರು. ಇದಕ್ಕೆ ಸಿಪಿಐನ ಗುರುದಾಸ್ ದಾಸ್‌ಗುಪ್ತ ಕೂಡ ಧ್ವನಿಗೂಡಿಸಿದರು. ‘ಸರ್ಕಾರ ಕೂಡ ಹಠ ಹಿಡಿಯುವುದಾದರೆ ನಾವು (ಪ್ರತಿಪಕ್ಷಗಳು) ಸಭಾತ್ಯಾಗ ಮಾಡುತ್ತವೆ’ ಎಂದು ಸುಷ್ಮಾ ಸ್ವರಾಜ್ ಸದನದಿಂದ ಹೊರನಡೆದರು. ನಂತರ ಹಣಕಾಸು ಮಸೂದೆಯನ್ನು ಚರ್ಚೆಗೆ ತೆಗೆದುಕೊಳ್ಳಲಾಯಿತು.

 

ರಾಜ್ಯಸಭೆ 3 ಸಾರಿ ಮುಂದೂಡಿಕೆ:ಇದೇ ವಿಚಾರವಾಗಿ ರಾಜ್ಯಸಭೆಯಲ್ಲಿ ಗದ್ದಲ ಉಂಟಾಗಿದ್ದರಿಂದ ಕಲಾಪವನ್ನು ಮೂರು ಸಾರಿ ಮುಂದೂಡಬೇಕಾಯಿತು.ಪ್ರತಿಪಕ್ಷದ ನಾಯಕ ಅರುಣ್ ಜೇಟ್ಲಿ ಮಾತನಾಡಿ, ‘ಪ್ರಧಾನಿ ಅವರ ವಿರುದ್ಧ ಹಕ್ಕುಚ್ಯುತಿ ಮಂಡಿಸುವ ಬಗ್ಗೆ ಎರಡು ನೋಟಿಸ್ ಕೊಟ್ಟಿದ್ದೇನೆ. ಹಾಗೆಯೇ ಇತರ ಸಂಸದರು ಈ ವಿಚಾರವಾಗಿ ನಿಯಮ 176 ಅಡಿಯಲ್ಲಿ ಚರ್ಚೆ ನಡೆಸಲು ಅವಕಾಶ ಕೋರಿದ್ದಾರೆ ಆದರೆ ಇದಕ್ಕೆ ಅವಕಾಶ ನೀಡಿಲ್ಲ ಎಂದು ದೂರಿದರು.

ಇದಕ್ಕೆ ಪ್ರತಿ ಹೇಳಿದ ರಾಜ್ಯಸಭೆ ಉಪಾಧ್ಯಕ್ಷ ಕೆ. ರೆಹಮಾನ್ ಖಾನ್, ‘ಈ ನೋಟಿಸ್‌ಗಳು ರಾಜ್ಯಸಭಾಧ್ಯಕ್ಷರ ವಶದಲ್ಲಿ ಇವೆ. ಆದ್ದರಿಂದ ಈ ಬಗ್ಗೆ ನಂತರದಲ್ಲಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದರು. ಈ ಮಧ್ಯೆ ಕಾಂಗ್ರೆಸ್ ಸದಸ್ಯರು ಅರುಣ್ ಶೌರಿಯವರು ಸಚಿವರಾಗಿದ್ದ ಅವಧಿಯಲ್ಲಿ ಷೇರು ವಿಕ್ರಯದಲ್ಲಿ ನಡೆದ ಅವ್ಯವಹಾರದ ಬಗ್ಗೆ ವರದಿ ಪ್ರಕಟಿಸಿರುವ ನಿಯತಕಾಲಿಕೆಯೊಂದನ್ನು ಪ್ರದರ್ಶಿಸ ತೊಡಗಿದರು.ಈಗ ಗದ್ದಲ ಉಂಟಾದ ಕಾರಣ ರೆಹಮಾನ್ ಖಾನ್ ಸದನವನ್ನು 15 ನಿಮಿಷಗಳ ಕಾಲ ಮುಂದೂಡಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.