ಶುಕ್ರವಾರ, ಮೇ 14, 2021
31 °C

`ಕಲಾಪ 24ರಿಂದ ಆರಂಭ'

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಹಾವೇರಿ: ಜಿಲ್ಲಾ ನೂತನ ನ್ಯಾಯಾಲಯ ಸಂಕೀರ್ಣ ಕಟ್ಟಡ ಶನಿವಾರ ಉದ್ಘಾಟನೆಯಾಗಲಿದ್ದು, ಸೋಮವಾರದಿಂದ ನ್ಯಾಯಾಲಯದ ಎಲ್ಲ ಕಾರ್ಯ ಕಲಾಪಗಳು ನೂತನ ನ್ಯಾಯಾಲಯ ಕಟ್ಟಡದಲ್ಲಿ ಆರಂಭವಾಗಲಿವೆ ಎಂದು ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶ ಎಚ್.ಪಿ.ಸಂದೇಶ ತಿಳಿಸಿದರು.ಗುರುವಾರ ತಮ್ಮ ಕಚೇರಿಯಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿಲ್ಲಾ ನ್ಯಾಯಾಲಯದಲ್ಲಿ ಇಲ್ಲಿವರೆಗೆ ಆರು ನ್ಯಾಯಾಲಯಗಳು ಕಾರ್ಯನಿರ್ವಹಿಸುತ್ತಿದ್ದವು. ಜೂ.1 ರಿಂದ ಹೆಚ್ಚುವರಿ ನ್ಯಾಯಾಲಯ ಆರಂಭವಾಗಿದೆ. ಈ ಏಳು ನ್ಯಾಯಾಲಯಗಳು ಏಕಕಾಲಕ್ಕೆ ಹೊಸ ಕಟ್ಟಡದಲ್ಲಿ ಕಾರ್ಯ ಕಲಾಪಗಳನ್ನು ಆರಂಭಿಸಲಿವೆ ಎಂದರು.ಈಗಾಗಲೇ ಹಳೆ ಕಟ್ಟಡಗಳಲ್ಲಿದ್ದ ಎಲ್ಲ ಸಾಮಾನು ಸರಂಜಾಮುಗಳನ್ನು ಹಾಗೂ ದಾಖಲೆಗಳನ್ನು ಹೊಸ ಕಟ್ಟಡಕ್ಕೆ ಸ್ಥಳಾಂತರಿಸುವ ಕಾರ್ಯ ಆರಂಭವಾಗಿದೆ. ಶುಕ್ರವಾರ ಸಂಜೆ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಹೇಳಿದರು.ಜಿಲ್ಲೆಯಲ್ಲಿ 23 ಸಾವಿರ ಪ್ರಕರಣಗಳು ಬಾಕಿ ಇವೆ. ಅವುಗಳಲ್ಲಿ 16 ಸಾವಿರ ಸಿವಿಲ್, 7 ಸಾವಿರ ಅಪರಾಧ ಹಾಗೂ 40 ಲೋಕಾಯುಕ್ತ ಪ್ರಕರಣಗಳ ಬಾಕಿಯಿವೆ. ಈ ಎಲ್ಲ ಪ್ರಕರಣಗಳ ತ್ವರಿತ ವಿಲೇವಾರಿಗೆ ನೂತನ ನ್ಯಾಯಾಲಯ ಕಟ್ಟಡ ಅನುಕೂಲವಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.ವಿಶೇಷ ನ್ಯಾಯಲಯಕ್ಕೆ ಪ್ರಸ್ತಾವನೆ: ಜಿಲ್ಲೆಯಲ್ಲಿ ಈಗಿರುವ ನ್ಯಾಯಾಲಯಗಳು ಹಾಗೂ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಹಿನ್ನೆಲೆಯಲ್ಲಿ ವಿಶೇಷ ನ್ಯಾಯಾಲಯವೊಂದನ್ನು ಜಿಲ್ಲೆಗೆ ನೀಡುವಂತೆ ಹೈಕೋರ್ಟ್‌ಗೆ ಪತ್ರ ಬರೆಯಲಾಗಿದೆ. ಈ ನ್ಯಾಯಾಲಯದಲ್ಲಿ ಎಸ್‌ಸಿ. ಎಸ್‌ಟಿ ಹಾಗೂ ಎಲೆಕ್ಟ್ರಿಸಿಟಿ ಆ್ಯಕ್ಟ್ ಪ್ರಕರಣಗಳನ್ನು ವರ್ಗಾಯಿಸಲು ಕೋರಲಾಗಿದೆ. ಹೈಕೋರ್ಟ್ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ ಮಂಜೂರು ಮಾಡಿಸುವ ಪ್ರಕ್ರಿಯೆ ಬಾಕಿಯಿದೆ ಎಂದು ಹೇಳಿದರು.ವೆಬ್‌ಸೈಟ್‌ನಲ್ಲಿ ತೀರ್ಪು: ಹೊಸ ನ್ಯಾಯಾಲಯದಲ್ಲಿ ಇಲಾಖೆಯ ಎಲ್ಲ ಕೆಲಸ ಕಾರ್ಯಗಳನ್ನು ಕಂಪ್ಯೂಟೀಕರಣ ಮಾಡಲಾಗಿದ್ದು, ಅದನ್ನು ಸದುಪಯೋಗಪಡಿಸಿಕೊಂಡು ಶೀಘ್ರದಲ್ಲಿಯೇ ನ್ಯಾಯಾಲಯದ ಎಲ್ಲ ತೀರ್ಪುಗಳನ್ನು ವೆಬ್‌ಸೈಟ್‌ಗೆ ಹಾಕುವ ವ್ಯವಸ್ಥೆಯನ್ನು ಶೀಘ್ರವೇ ಜಾರಿಗೊಳಿಸಲಾಗುವುದು ಎಂದು ತಿಳಿಸಿದರು.ರೂ 17 ಕೋಟಿ ಖರ್ಚು: ನೂತನ ಜಿಲ್ಲಾ ನ್ಯಾಯಾಲಯ ಸಂಕೀರ್ಣ ಕಟ್ಟಡದಲ್ಲಿ ರೂ 9.55 ಕೋಟಿ ಖರ್ಚು ಮಾಡಿ ನ್ಯಾಯಾಲಯ ಕಟ್ಟಡ ನಿರ್ಮಿಸಿದರೆ, ಸಿಬ್ಬಂದಿ ವಸತಿ ಗೃಹ ಸೇರಿದಂತೆ ಇತರ ಕಟ್ಟಡಗಳಿಗೆ ಏಳು ಕೋಟಿ ರೂಪಾಯಿ ಸೇರಿದಂತೆ ಒಟ್ಟು ರೂ 17 ಕೋಟಿ ಖರ್ಚು ಮಾಡಲಾಗಿದೆ ಎಂದು ತಿಳಿಸಿದರಲ್ಲದೇ, ಇದೊಂದು ರಾಜ್ಯದಲ್ಲಿಯೇ ಮಾದರಿ ನ್ಯಾಯಾಲಯ ಕಟ್ಟಡವಾಗಲಿದೆ ಎಂದು ಅಭಿಪ್ರಾಯಪಟ್ಟರು.ಸಾರ್ವಜನಿಕರಿಗೆ ಮುಕ್ತ: ಜಿಲ್ಲಾ ನ್ಯಾಯಾಲಯದ ನ್ಯಾಯಾಂಗ ಇಲಾಖೆಗೆ ಸಂಬಂಧಿಸಿದ್ದಾಗಿದ್ದರೂ, ಅದು ಸಾರ್ವಜನಿಕರ ಬಳಕೆಗೆ ಅನುಕೂಲವಾಗಲಿ ಎಂಬ ಸದುದ್ದೇಶದಿಂದ ನ್ಯಾಯಾಲಯ ಆವರಣದಲ್ಲಿ 600ಕ್ಕೂ ಹೆಚ್ಚು ಗಿಡಗಳನ್ನು ನೆಡಲಾಗಿದೆ. ನಗರಸಭೆ ಸಹಯೋಗದಲ್ಲಿ ಒಂದೂವರೆ ಎಕರೆ ಜಾಗದಲ್ಲಿ ಉದ್ಯಾನ ನಿರ್ಮಿಸಲಾಗುತ್ತದೆ. ಅಲ್ಲದೇ ಆವರಣದ ಸುತ್ತಲೂ ವಾಕಿಂಗ್ ಟ್ರ್ಯಾಕ್ ನಿರ್ಮಿಸಲಾಗಿದೆ ಎಂದು ಹೇಳಿದರು.ಸಾರ್ವಜನಿಕರು ಬಳಕೆ ಮಾಡಿಕೊಳ್ಳಲು ಮುಕ್ತ ಅವಕಾಶವಿದ್ದರೂ ಯಾವುದೇ ಅಹಿತಕರ ಹಾಗೂ ಅನೈತಿಕೆ ಚಟುವಟಿಕೆಗಳಿಗೆ ಅವಕಾಶವಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಅದಕ್ಕೆ ಕಾರಣರಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.ಇದೇ ಸಂದರ್ಭದಲ್ಲಿ ಸುಸಜ್ಜಿತ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಲೋಕೋಪಯೋಗಿ ಇಲಾಖೆ, ತೋಟಗಾರಿಕೆ ಇಲಾಖೆ, ಅರಣ್ಯ ಇಲಾಖೆ, ಜಿಲ್ಲಾ ವಕೀಲರ ಸಂಘ ಸಹಕಾರ ನೀಡಿವೆ ಎಂದು ಸ್ಮರಿಸಿದ ಜಿಲ್ಲಾ ಸೆಷೆನ್ಸ್ ನ್ಯಾಯಾಲಯದ ನ್ಯಾಯಾಧೀಶರು, ಈ ಎಲ್ಲ ಇಲಾಖೆ ಹಾಗೂ ಸಂಘ ಸಂಸ್ಥೆಗಳಿಗೆ ನ್ಯಾಯಂಗ ಇಲಾಖೆ ಪರವಾಗಿ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು.ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಸ್.ಎ.ಹುದ್ದಾರ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಎಂಜಿನಿಯರ್ ಕೆ.ಶಿವಣ್ಣ ಮತ್ತಿತರರು ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.