ಭಾನುವಾರ, ಜನವರಿ 19, 2020
24 °C

ಕಲಾ ಮನೋಭೂಮಿಕೆಯಿಂದ ವ್ಯಕ್ತಿತ್ವ ವಿಕಸನ: ಸಚಿವ ಮೊಯಿಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳ್ತಂಗಡಿ: ಭೌತಿಕ ಶ್ರೀಮಂತಿಕೆಗಿಂತಲೂ ಹೆಚ್ಚು ಹೃದಯ ಶ್ರೀಮಂತಿಕೆಯನ್ನು ಬೆಳೆಸಿಕೊಳ್ಳಬೇಕು. ಮನೋ ವಿಕಲ್ಪಗಳನ್ನು ದೂರ ಮಾಡಿ ಕಲೆ ಮತ್ತು ಸಾಂಸ್ಕೃತಿಕ ಮನೋಭೂಮಿಕೆಯನ್ನು ಹೊಂದಿದಾಗ ನವ ಚೈತನ್ಯ ಮೂಡಿ ಆದರ್ಶ ವ್ಯಕ್ತಿತ್ವ ನಿರ್ಮಾಣವಾಗುತ್ತದೆ. ಸಂಘರ್ಷ ಕಡಿಮೆಯಾಗಿ ಸಮನ್ವಯತೆ, ಸಾಮರಸ್ಯ ಮೂಡಿ ಬರುತ್ತದೆ ಎಂದು ಕೇಂದ್ರ ಸರ್ಕಾರದ ಕಾರ್ಪೊರೆಟ್ ವ್ಯವಹಾರಗಳ ಸಚಿವ ಎಂ. ವೀರಪ್ಪ ಮೊಯಿಲಿ ಇಲ್ಲಿ ಹೇಳಿದರು.ಧರ್ಮಸ್ಥಳದ ಶಾಂತಿವನ ಟ್ರಸ್ಟ್ ಆಶ್ರಯದಲ್ಲಿ ಬೆಳ್ತಂಗಡಿಯಲ್ಲಿ ರೂ.3ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ ಧರ್ಮಸ್ಥಳ ಮಂಜುನಾಥ ಸ್ವಾಮಿ ಕಲಾ ಭವನವನ್ನು ಗುರುವಾರ ಉದ್ಘಾಟಿಸಿ ಅವರು ಮಾತನಾಡಿದರು.ರಾಜಕಾರಣಿಗಳು ಕಲೆ ಮತ್ತು ಸಂಸ್ಕೃತಿ ಬಗ್ಗೆ ಆಸಕ್ತಿ, ಅಭಿರುಚಿ ಹೊಂದಿರಬೇಕು. ಸಾಂಸ್ಕೃತಿಕ ಚಟುವಟಿಕೆಗಳು ಬದುಕಿನ ಅವಿಭಾಜ್ಯ ಅಂಗವಾಗಬೇಕು. ಮೂಡುಬಿದಿರೆಯ ಜೈನ್ ಹೈಸ್ಕೂಲಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಕನ್ನಡ ಪಂಡಿತರಾಗಿದ್ದ ಟಿ. ರಘುಚಂದ್ರ ಶೆಟ್ಟಿ ಸಾಹಿತ್ಯಾಭಿರುಚಿ ಬೆಳೆಸಿ ಪ್ರೋತ್ಸಾಹಿಸಿದ್ದರು ಎಂದು ಮೊಯಿಲಿ ಕೃತಜ್ಞತೆಸಲ್ಲಿಸಿದರು.ಅಧ್ಯಕ್ಷತೆ ವಹಿಸಿದ್ದ ಧರ್ಮಸ್ಥಳ ಧರ್ಮಾಧಿಕಾರಿ ಡಾ. ಡಿ.ವೀರೇಂದ್ರ ಹೆಗ್ಗಡೆ ಮಾತನಾಡಿ, ಸಾರ್ವಜನಿಕರು ಕಲಾಭವನದ ಸದುಪಯೋಗ ಪಡೆಯಬೇಕು. ಕಲೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಂದ ಸಂಕುಚಿತ ಮನೋಭಾವ ದೂರವಾಗಿ ಮಧುರ ಬಾಂಧವ್ಯ ಬೆಳೆಯುತ್ತದೆ ಎಂದರು.ಕಲಾಭವನದ ಬಳಿ ಬಯಲು ರಂಗಮಂಟಪ ನಿರ್ಮಿಸಲಾಗುವುದು. ಬೆಳ್ತಂಗಡಿಯಲ್ಲಿ ಸದ್ಯದಲ್ಲೇ ಆಂಗ್ಲ ಮಾಧ್ಯಮ ಶಾಲೆಗೆ ನೂತನ ಕಟ್ಟಡ ನಿರ್ಮಿಸಲಾಗುವುದು ಎಂದು ಡಾ.ಹೆಗ್ಗಡೆ ತಿಳಿಸಿದರು.ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಪಾಲೆಮಾರ್,  ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಕೆ. ಅಭಯಚಂದ್ರ ಜೈನ್, ಕೆ.ವಸಂತ ಬಂಗೇರ, ನಗರ ಪಂಚಾಯಿತಿ ಅಧ್ಯಕ್ಷ ಮುಗುಳಿ ನಾರಾಯಣ ರಾವ್,  ಹೇಮಾವತಿ ವಿ.ಹೆಗ್ಗಡೆ, ಡಿ. ಹರ್ಷೇಂದ್ರ ಕುಮಾರ್, ಪ್ರೊ.ಎಸ್.ಪ್ರಭಾಕರ್, ಡಾ. ಬಿ. ಯಶೋವರ್ಮ ಮತ್ತಿತರರು ಇದ್ದರು.ಮೊಯಿಲಿ ಜನ್ಮ ದಿನಾಚರಣೆ: ಸಚಿವ ಎಂ.ವೀರಪ್ಪ ಮೊಯಿಲಿ ಅವರ 71ನೇ ಜನ್ಮ ದಿನವನ್ನು ಇದೇ ಸಂದರ್ಭ ಆಚರಿಸಲಾಯಿತು. ವೀರೇಂದ್ರ ಹೆಗ್ಗಡೆ ಸಚಿವ ವೊಯಿಲಿ ಅವರನ್ನು ಸನ್ಮಾನಿಸಿದರು.ಅನುದಾನ ಬಳಕೆ- ರಾಜ್ಯ ಸರ್ಕಾರದ ಜವಾಬ್ದಾರಿ: ಕೇಂದ್ರ ಸರ್ಕಾರದಿಂದ ರಾಜೀವ್ ಗಾಂಧಿ ವಿದ್ಯುತ್ ಪೂರೈಕೆ ಯೋಜನೆಗಾಗಿ ದಕ್ಷಿಣ ಕನ್ನಡ ಜಿಲ್ಲೆಗೆ ರೂ.65 ಕೋಟಿ ಮಂಜೂರಾಗಿದ್ದು ಪರಿಕರಗಳ ಕೊರತೆಯಿಂದ ಯೋಜನೆ ಅನುಷ್ಠಾನಗೊಳ್ಳದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು  ಕೇಂದ್ರ ಸರ್ಕಾರದ ಅನುದಾನವನ್ನು ಸದುಪಯೋಗ ಪಡಿಸಿ ಯೋಜನೆಯನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸುವುದು ರಾಜ್ಯ ಸರ್ಕಾರದ ಜವಾಬ್ದಾರಿ ಎಂದರು.

ಪ್ರತಿಕ್ರಿಯಿಸಿ (+)