ಭಾನುವಾರ, ಮೇ 16, 2021
22 °C

`ಕಲಿಗಾಲ'ಕೆ ಸಾಯಿ ತಂತ್ರ!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನೂರು ಚಿತ್ರಗಳ ಹೊಸ್ತಿಲಲ್ಲಿರುವ ನಿರ್ದೇಶಕ ಸಾಯಿಪ್ರಕಾಶ್ ಅಪರಾಧದ ಜಾಡು ಹಿಡಿದು ಹೊರಟಿದ್ದಾರೆ. ಅತ್ಯಾಚಾರ ಸೇರಿದಂತೆ ವಿವಿಧ ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡ ಕಥೆಯನ್ನು ಅವರು ಹೆಣೆದಿದ್ದಾರೆ. ಸಮಾಜದಲ್ಲಿ ಘಟಿಸುತ್ತಿರುವ ಅನೀತಿ, ಅನ್ಯಾಯ, ಅಕ್ರಮಗಳಿಗೆ ಅವರು ಕಾಲವನ್ನೇ ಹೊಣೆಯಾಗಿಸಿದ್ದಾರೆ. ಚಿತ್ರದ ಶೀರ್ಷಿಕೆ `ಕಲಿಗಾಲ'. ಇದು ಅವರ 97ನೇ ಸಿನಿಮಾ.ಅವರ ಚಿತ್ರದಲ್ಲಿ ಪ್ರಚಲಿತ ಸಾಮಾಜಿಕ ತಲ್ಲಣಗಳಿಗೆ ಪರಿಹಾರವೂ ಇದೆಯಂತೆ. ಆ ಪರಿಹಾರ ಸಮಾಜದಿಂದಲೇ ಸಾಧ್ಯ ಎನ್ನುವುದನ್ನು ಪ್ರತಿಬಿಂಬಿಸುವಲ್ಲಿ ಸಿನಿಮಾದ ಆಶಯ ಅಡಗಿದೆಯಂತೆ. ವಯಸ್ಕನೊಬ್ಬ ಯುವತಿಯ ಮೇಲೆ ಕೆಟ್ಟದೃಷ್ಟಿ ಬೀರಿದಾಗ, ಆತನ ಪತ್ನಿಯೇ ಆತನನ್ನು ಸಾಯಿಸುವ ಕಥೆ ಚಿತ್ರದಲ್ಲಿದೆ. ಸಮಾಜವೂ ಹೀಗೆ ಬದಲಾಗಬೇಕು.ಅಪರಾಧ ಎಸಗುವವರಿಗೆ ಭಯ ಹುಟ್ಟಿಸುವ ಸಮಾಜ ನಿರ್ಮಾಣವಾದರೆ ಅಪರಾಧಗಳು ಸಹಜವಾಗಿಯೇ ಕಡಿಮೆಯಾಗುತ್ತದೆ ಎನ್ನುವುದು ಅವರ ವಾದ. ಸಾಯಿಪ್ರಕಾಶ್ ಅವರ ಸ್ನೇಹಿತ ಆಂಧ್ರಪ್ರದೇಶ ಮೂಲದ ರಾಯಣ್ಣ `ಕಲಿಗಾಲ'ದ ನಿರ್ಮಾಪಕರು. `ಕಲಿಗಾಲ'ದ ಬಳಗ ಹಿರಿದಾಗಿದೆ. ಕಥೆ ಮೂರು ಯುವ ಜೋಡಿಗಳ ಮೇಲೆ ಕೇಂದ್ರಿತ. ರೂಪಿಕಾ, ಕ್ಷಮಾ ಸಿಂಗ್ ಮತ್ತು ಪಾವನಿ ನಾಯಕಿಯರು. ಆನಂದ್, ದರ್ಶನ್ ಮತ್ತು ಸಂದೀಪ್ ಎಂಬ ನಟರು ಪ್ರಮುಖ ಪಾತ್ರದಲ್ಲಿದ್ದಾರೆ. ಸಾಯಿಕುಮಾರ್ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.ಶ್ರೀನಿವಾಸಮೂರ್ತಿ, ಲಕ್ಷ್ಮೀದೇವಿ, ರಮೇಶ್ ಭಟ್, ಸುಮನ್ ರಾಯ್, ಪದ್ಮಾ ವಾಸಂತಿ, ಸಾಧು ಕೋಕಿಲ ಮುಂತಾದವರು ಚಿತ್ರದಲ್ಲಿದ್ದಾರೆ. ವಕೀಲರ ಪೋಷಾಕು ಧರಿಸುತ್ತಿರುವ ಶ್ರೀನಿವಾಸಮೂರ್ತಿ ಅವರ ಪ್ರಕಾರ ಇದು `ಬ್ರಿಡ್ಜ್' ಚಿತ್ರ. ಈಗಿನ ದಿನಗಳಲ್ಲಿ ಸ್ವರಕ್ಷಣೆಯೇ ಮುಖ್ಯ ಎನ್ನುವುದನ್ನು ಚಿತ್ರ ಬಿಂಬಿಸುತ್ತದೆಯಂತೆ. ಕರಾಟೆ, ಕಲರಿಪಯಟ್ಟು, ಭರತನಾಟ್ಯ ಇತ್ಯಾದಿ ಕಲೆಗಳಲ್ಲಿ ಜಾಣೆಯಾಗಿರುವ ನಟಿ ಕ್ಷಮಾಸಿಂಗ್ ಮೂಲತಃ ಯೋಗ ಶಿಕ್ಷಕಿ. ಚಿತ್ರದಲ್ಲಿ ಕಾಲೇಜು ವಿದ್ಯಾರ್ಥಿನಿಯಾಗಿ ಕಾಣಿಸಿಕೊಳ್ಳುತ್ತಿರುವ ಅವರು ತಮ್ಮ ಸ್ನೇಹಿತೆಯರಿಗೆ ಕರಾಟೆ ಕಲಿಸಿಕೊಡಲಿದ್ದಾರಂತೆ. `ಗೊಂಬೆಗಳ ಲವ್' ಖ್ಯಾತಿಯ ಪಾವನಿ ನ್ಯಾಯಕ್ಕಾಗಿ ಹೋರಾಡುವ ಪಾತ್ರ ನಿರ್ವಹಿಸುತ್ತಿದ್ದಾರೆ.ಇನ್ನೂ ನಾಲ್ಕು ಚಿತ್ರಗಳು...

ಒಂದರ ಹಿಂದೊಂದು ಸರಣಿ ಚಿತ್ರಗಳಿಗೆ ಕೈಹಾಕಿರುವ ಸಾಯಿಪ್ರಕಾಶ್ ಒಂದರ್ಥದಲ್ಲಿ ಈಗಾಗಲೇ ನೂರು ಚಿತ್ರಗಳ ಗಡಿ ದಾಟಿದ್ದಾರೆ. `ಕಲಿಗಾಲ'ದ ಹಿಂದೆಯೇ ಅವರ ನಾಲ್ಕು ಚಿತ್ರಗಳು ಸಿದ್ಧಗೊಳ್ಳಲಿವೆ. ಕಥೆ ಮಾತ್ರವಲ್ಲ ತಾರಾಬಳಗವನ್ನೂ ಸಾಯಿಪ್ರಕಾಶ್ ಸಿದ್ಧಪಡಿಸಿಕೊಂಡಿದ್ದಾರೆ.ಅವರ 98ನೇ ಸಿನಿಮಾದಲ್ಲಿ ಶಿವರಾಜ್‌ಕುಮಾರ್ ಮತ್ತು ರಾಧಿಕಾ ಮತ್ತೆ ಜೊತೆಗೂಡುತ್ತಿದ್ದಾರೆ. ಶಮಿಕಾ ಪ್ರೊಡಕ್ಷನ್ ನಿರ್ಮಾಣದ ಈ ಚಿತ್ರಕ್ಕೆ `ರಾಜವಂಶ' ಎಂಬ ಶೀರ್ಷಿಕೆಯಿಡುವ ಉದ್ದೇಶ ಅವರದ್ದು. ಅದರ ನಂತರ ಉಪೇಂದ್ರ, ಪರೂಲ್ ಮತ್ತು ಐಂದ್ರಿತಾ ರೇ ಅಭಿನಯದ `ಗೌರಿ'ಯ ಸರದಿ. ತೆಲುಗಿನ `ಲಕ್ಷ್ಮೀ' ಚಿತ್ರದ ಕನ್ನಡ ಅವತರಣಿಕೆಯಿದು. 100ನೇ ಚಿತ್ರ ಬಿ. ವಿಜಯಕುಮಾರ್ ನಿರ್ಮಾಣದ್ದು. ಅದರ ಶೀರ್ಷಿಕೆಯಿನ್ನೂ ಅಂತಿಮಗೊಂಡಿಲ್ಲ. 101ನೇ ಚಿತ್ರಕ್ಕೆ 101 ಕಲಾವಿದರನ್ನು ಬಳಸಿಕೊಳ್ಳುವ ಉದ್ದೇಶ ಸಾಯಿಪ್ರಕಾಶ್ ಅವರದ್ದು. ಚಿತ್ರದ ಹೆಸರು `ಸಾಯಿ ಅವತಾರ'. ತಮ್ಮ 100 ಚಿತ್ರಗಳಲ್ಲಿ ನಟಿಸಿದ ಪ್ರಮುಖ ಕಲಾವಿದರೆಲ್ಲರನ್ನೂ ಈ ಚಿತ್ರದಲ್ಲಿ ಸೇರಿಸುವುದು ಅವರ ಗುರಿ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.