ಗುರುವಾರ , ಮಾರ್ಚ್ 4, 2021
18 °C

ಕಲುಷಿತ ಕುಡಿವ ನೀರು: ಎಸ್‌ಎಫ್‌ಐ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಲುಷಿತ ಕುಡಿವ ನೀರು: ಎಸ್‌ಎಫ್‌ಐ ಆಕ್ರೋಶ

ಗಂಗಾವತಿ: ಬಿಸಿಯೂಟಕ್ಕೆ ಮತ್ತು ಸಾವಿರಾರು ವಿದ್ಯಾರ್ಥಿಗಳಿಗೆ ಕಲ್ಮಶಯುಕ್ತ ನೀರು ಕುಡಿಯುಲು ಕೊಡುತ್ತಿದ್ದಾರೆ ಎಂದು ಆರೋಪಿಸಿ ಎಸ್‌ಎಫ್‌ಐ ಸಂಘಟನೆಯ ವಿದ್ಯಾರ್ಥಿಗಳು ಮಂಗಳವಾರ ನಗರದ ಎಂಎನ್‌ಎಂ ಕಾಲೇಜಿನ ಶಿಕ್ಷಕರೊಂದಿಗೆ ವಾಗ್ವಾದ ನಡೆಸಿದರು.ಶಾಲೆಯ ಪ್ರವೇಶ ದ್ವಾರದ ಬಲ ಭಾಗದ ನೆಲದಲ್ಲಿ ಅಳವಡಿಸಿರುವ ನೀರಿನ ತೊಟ್ಟಿಯಿಂದ ಕಳೆದ ಎಂಟ್ಹಾರು ದಿನಗಳಿಂದ ಸಹಿಸಲಸಾಧ್ಯ ವಾಸನೆ ಬರುತ್ತಿದೆ ಎಂದು ಆರೋಪಿಸಿ ವಿದ್ಯಾರ್ಥಿನಿಯರು ಎಸ್‌ಎಫ್‌ಐ ಸಂಘಟನೆಯ ಗಮನಕ್ಕೆ ತಂದಿದ್ದರು.ಮಂಗಳವಾರ ಸ್ಥಳಕ್ಕೆ ಆಗಮಿಸಿದ ವಿದ್ಯಾರ್ಥಿ ನಾಯಕರು ಕುಡಿಯುವ ನೀರಿನ ತೊಟ್ಟಿಯ ಮುಚ್ಚಳ ತೆಗೆದು ನೋಡಿದಾಗ ಕಟುವಾಸನೆ ಮೂಗಿಗೆ ರಾಚಿತು. ಹಂದಿಯಂತ ಪ್ರಾಣಿ ಬಿದ್ದು ಮೃತಪಟ್ಟಿದ್ದು ಕಂಡಿತು. ಕೋಲಿನ ಸಹಾಯದಿಂದ ಕದಡಿದಾಗ ಕಸ ಎಂದು ದೃಢಪಟ್ಟಿತ್ತು.ಆದರೆ ಕುಡಿಯುವ ನೀರಿನ ತೊಟ್ಟಿಯಲ್ಲಿ ತೆಲುತ್ತಾ ಗಂಟುಕಟ್ಟಿಕೊಂಡಿದ್ದ ಕಸಕಡ್ಡಿ ಕದಡಿದಾಗ ನಿಧಾನವಾಗಿ ವಿಕೇಂದ್ರಕೃತಗೊಂಡಿತು. ಆದರೆ ತೊಟ್ಟಿಯೊಳಗಿಂದ ಗಬ್ಬುವಾಸನೆ ಬರುತ್ತಿದ್ದದ್ದು ವಿದ್ಯಾರ್ಥಿಗಳ ಪಿತ್ತ ನೆತ್ತಿಗೇರುವಂತೆ ಮಾಡಿತು.ಇದರಿಂದ ತೀವ್ರ ಆಕ್ರೋಶಗೊಂಡ ವಿದ್ಯಾರ್ಥಿಗಳು ಸ್ಥಳಕ್ಕೆ ಆಗಮಿಸಿದ ಮುಖ್ಯಗುರು ಶಿವಶಂಕರ್ ಪಾಟೀಲ್, ಸಹ ಶಿಕ್ಷಕರಾದ ರಾಜೇಶ ರೆಡ್ಡಿ, ಸುರೇಶ ಕುಮಾರ ಅವರನ್ನು ತರಾಟೆಗೆ ತೆಗೆದುಕೊಂಡರು. ತೊಟ್ಟಿ ಸ್ವಚ್ಛಗೊಳಿಸದ್ದರ ಬಗ್ಗೆ ಕಿಡಿಕಾರಿದರು.ಬಿಸಿಯೂಟದವರ ಮೇಲೆ:

`ಮಾಸ್ತಾರರು ಮಕ್ಕಳಿಗೆ ಇಂತಹ ಗಬ್ಬು ನೀರನ್ನು ಕುಡಿಸುತ್ತಾರ. ಮಕ್ಕಳಿಗೆ ಏನಾದರೂ ಹೆಚ್ಚುಕಡಿಮೆ ಆಯಿತು ಅಂದರ ಮಾತ್ರ ಸೀದಾ ಬಿಸಿಯೂಟದವರ ಮೇಲೆ ಬಂದು ಬಿಡತಾರ~ ಎಂದು ಬಿಸಿಯೂಟ ನೌಕರರರ ಸಂಘದ ಜಿಲ್ಲಾಧ್ಯಕ್ಷ ಲಕ್ಷ್ಮಿಸೋನಾರ ಆರೋಪಿಸಿದರು.ಎಸ್‌ಎಫ್‌ಐ ಅಮರೇಶ ಮಾತನಾಡಿ `ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಲ್ಲಿ ಶಾಲೆಗೆ 75 ಸಾವಿರ ಹಣ ಬಂದಿದೆ. ಏನು ಮಾಡಿದ್ದಾರೋ ಗೊತ್ತಿಲ್ಲ. ಮಕ್ಕಳು ಮಾತ್ರ ಕುಡಿಯುವ ನೀರಿಗಾಗಿ ಚರ್ಚ್, ತಾ.ಪಂ. ಮಂಥನ ಸಭಾಂಗಣದವರೆಗೆ ಹೋಗುವ ಸ್ಥಿತಿ ಎದುರಾಗಿದೆ ಎಂದರು.ಮುಖ್ಯಗುರು ಶಿವಶಂಕರ್ ಪಾಟೀಲ್ ಮಾತನಾಡಿ, ತೊಟ್ಟಿಯಲ್ಲಿನ ನೀರು ಕುಡಿಯುಲು ಯೋಗ್ಯವಿಲ್ಲ. ಕುಡಿಯಲು ಬೇರೊಂದು ನಳದ ವ್ಯವಸ್ಥೆಯಿದೆ. ಈ ತೊಟ್ಟಿಯಿಂದ ನೇರ ಶೌಚಾಲಯದ ಸಂಪರ್ಕ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.