ಭಾನುವಾರ, ಜೂನ್ 20, 2021
28 °C

ಕಲೆಯಲ್ಲಿ ಹರಿದ ನೀರು...

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಅರ್ಘ್ಯಂ ಸಂಸ್ಥೆ ವಿಶ್ವ ಜಲ ದಿನದ ಅಂಗವಾಗಿ ಚಿತ್ರಕಲಾ ಪರಿಷತ್ತಿನಲ್ಲಿ ಕಲಾಕೃತಿಗಳ ಪ್ರದರ್ಶನ ಏರ್ಪಡಿಸಿದೆ. ದೇಶದ ಏಳು ಮಂದಿ ಖ್ಯಾತ ಕಲಾವಿದರು ನೀರನ್ನು ಕುರಿತು ಚಿತ್ರಿಸಿರುವ ಅಪರೂಪದ ಕಲಾಕೃತಿಗಳು ಇಲ್ಲಿ ಪ್ರದರ್ಶನಕ್ಕಿವೆ. ಹಾಗಾಗಿ ಇದೊಂದು ವಿಶಿಷ್ಟ ಕಾರ್ಯಕ್ರಮ. ಪಂಚಭೂತಗಳಲ್ಲಿ ಒಂದಾದ ನೀರಿನ ಹಲವು ಆಯಾಮಗಳನ್ನು ಕುರಿತಂತೆ ಏಳು ಮಂದಿ ಕಲಾವಿದರು ಕಲಾಕೃತಿಗಳನ್ನು ರಚಿಸಿದ್ದಾರೆ. ಇವರ ಕಲಾಕೃತಿಗಳಲ್ಲಿ ನೀರಿನ ಮಹತ್ವ, ಮೌಲ್ಯ, ನೀರಿನ ಬಳಕೆಯಲ್ಲಿ ಇರಬಹುದಾದ ರಾಜಕಾರಣ, ಮಾನವನಿಂದ ವಸಾಹತೀಕೃತಗೊಂಡ ನಂತರ ನೀರಿನ ಸ್ಥಿತಿ ಮೊದಲಾದ ಸಾಮಾಜಿಕ-ರಾಜಕೀಯ-ಸೌಂದರ್ಯಾತ್ಮಕ ಆಯಾಮಗಳನ್ನು ತಮ್ಮ ಕುಂಚಗಳ ಮೂಲಕ ಕಲಾವಿದರು ಅನಾವರಣಗೊಳಿಸಿದ್ದಾರೆ.ಅಂದಹಾಗೆ, ಆಲ್ಫಾನ್ಸೊ ದಾಸ್, ಜೆ.ಎಂ.ಎಸ್.ಮಣಿ, ರೇಖಾ ರಾವ್, ಬಿ.ಓ.ಶೈಲೇಶ್, ಎಸ್.ಜಯರಾಜ್, ಆಸ್ಮಾ ಮೆನನ್ ಮತ್ತು ಜಿ.ಜಯಕುಮಾರ್ ಈ ಪ್ರದರ್ಶನದಲ್ಲಿ ಭಾಗವಹಿಸಿರುವ ಏಳು ಮಂದಿ ಕಲಾವಿದರು.ದೃಶ್ಯಕಲೆಯಲ್ಲಿ ಈ ಕಲಾವಿದರು ಅಪಾರ ಖ್ಯಾತಿ ಗಳಿಸಿದ್ದಾರೆ. ಇವರು ಕೇವಲ ಕಲಾವಿದರಾಗಿ ಹೆಸರು ಗಳಿಸದೆ ಕಲಾಚಳವಳಿಯ ಹರಿಕಾರರಾಗಿಯೂ ಹೆಸರಾಗಿದ್ದಾರೆ. ಕಲಾ ಬೋಧನೆ, ಕಲಾ ಚಳವಳಿ, ಕಲಾ ವಿಮರ್ಶೆ ಮೊದಲಾದವುಗಳಲ್ಲಿ ತೊಡಗಿದ್ದಾರೆ. ಪ್ರಸ್ತುತ ಪ್ರದರ್ಶನದಲ್ಲಿ ಈ ಕಲಾವಿದರು ರಚಿಸಿರುವ ಕಲಾಕೃತಿಗಳೇ ಇದಕ್ಕೆ ಸಾಕ್ಷಿ. ದೃಶ್ಯಕಲೆಗೆ ನಿರ್ದಿಷ್ಟವಾದ ಭಾಷೆಯೊಂದನ್ನು ಬಳಸಿ ಇವರು ನೀರಿನ ಕುರಿತಾದ ಒಳನೋಟಗಳನ್ನು ಬಿಚ್ಚಿಟ್ಟಿದ್ದಾರೆ.ಈ ಕಲಾವಿದರು ತಮ್ಮ ಕಲಾಕೃತಿಯಲ್ಲಿ ನೀರನ್ನು ಲಿಂಗರಾಜಕಾರಣಕ್ಕೆ ತಾಳೆ ಹಾಕಿದ್ದಾರೆ. ಹಾಗೆಯೇ ನಗರ ಮತ್ತು ಗ್ರಾಮೀಣ ಪ್ರದೇಶಗಳನ್ನು ನೀರು ವಿಭಜಿಸುತ್ತದೆ. ಇದನ್ನಷ್ಟೇ ಅಲ್ಲದೆ ಜಲದ ಅನಿವಾರ್ಯತೆ ಹಾಗೂ ಸರ್ವಾಂತರ್ಯಾಮಿ ಗುಣವನ್ನು ಕಲಾವಿದರು ಚಿತ್ರಿಸಿದ್ದಾರೆ.ನೀರಿನ ಸಾಮಾಜಿಕ-ರಾಜಕೀಯ-ಸಾಂಸ್ಕೃತಿಕ ಆಯಾಮದ ವಿಶೇಷ ಮೆರುಗಿರುವ ಈ ಪ್ರದರ್ಶನವನ್ನು ರೋಹಿಣಿ ನೀಲೇಕಣಿ ಬುಧವಾರ ಬೆಳಿಗ್ಗೆ 11ಕ್ಕೆ ಉದ್ಘಾಟಿಸಲಿದ್ದಾರೆ. ಹೆಸರಾಂತ ಕಲಾವಿದರಾದ ಎಸ್.ಜಿ.ವಾಸುದೇವ್ ಈ ಸಂದರ್ಭದಲ್ಲಿ ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದಾರೆ.  ಈ ಕಲಾಕೃತಿಗಳು ಮಾರ್ಚ್ 30ರವರೆಗೆ ಪ್ರದರ್ಶನಗೊಳ್ಳಲಿವೆ.ಸಂಸ್ಕೃತದಲ್ಲಿ ಅರ್ಘ್ಯಂ ಎಂದರೆ ಅರ್ಪಣೆ ಎಂದರ್ಥ. ಅರ್ಘ್ಯಂ ಸಂಸ್ಥೆ ಕುಡಿವ ನೀರು ಹಾಗೂ ಶೌಚಾಲಯ ವ್ಯವಸ್ಥೆಯ ಪೂರೈಕೆಗಾಗಿ ಕಾರ್ಯನಿರ್ವಹಿಸುತ್ತಿರುವ ಸಂಸ್ಥೆ. ದೇಶದಲ್ಲಿ ಈ ರಂಗದಲ್ಲಿ ಇಷ್ಟೊಂದು ವಿಸ್ತೃತವಾಗಿ ಕಾರ್ಯನಿರ್ವಹಿಸುತ್ತಿರುವ ಏಕೈಕ ಸಂಸ್ಥೆ ಅರ್ಘ್ಯಂ. ಇದರ ಗಮನವು ಕುಡಿಯುವ ನೀರಿನ ಬಗ್ಗೆ ಕೇಂದ್ರೀಕೃತವಾಗಿದೆ.ಜಲದ ಗುಣಮಟ್ಟ, ಅಗತ್ಯ ಪ್ರಮಾಣ ಮತ್ತು ಅದರ ಲಭ್ಯತೆಯನ್ನು ಸಮಾಜ, ಸಾಂಸ್ಥೀಕರಣ, ತಾಂತ್ರೀಕರಣ, ಪರಿಸರ ಹಾಗೂ ಆರ್ಥಿಕ ಆಯಾಮಗಳ ಅಧ್ಯಯನದ ಮೂಲಕ ಅರಿಯುವುದು ಅದರ ಉದ್ದೇಶ. ಮನೆ, ವಸತಿ ಸಮುಚ್ಚಯಗಳ ಬಳಿ ನೀರಿನ ಉಳಿತಾಯ, ಶೇಖರಣೆ ಮತ್ತು ಶೌಚ-ಶುಚಿತ್ವದೆಡೆ ಜನ ಗಮನಹರಿಸಿ, ಆ ನಿಟ್ಟಿನಲ್ಲಿ ಸೂಕ್ತ ವ್ಯವಸ್ಥೆ ಕೈಗೊಳ್ಳುವ ಅನೇಕ ಸಂಸ್ಥೆಗಳ ಜೊತೆ ಅರ್ಘ್ಯಂ ಒಡನಾಟವಿಟ್ಟುಕೊಂಡಿದೆ.  

 

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.