ಗುರುವಾರ , ಆಗಸ್ಟ್ 5, 2021
24 °C

ಕಲ್ಮಾಡಿ ಮನೆ ಶೋಧ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ/ ಮುಂಬೈ/ ಪುಣೆ (ಐಎಎನ್‌ಎಸ್): ಕಾಮನ್‌ವೆಲ್ತ್ ಹಗರಣಕ್ಕೆ ಸಂಬಂಧಿಸಿದಂತೆ ಕ್ರೀಡಾಕೂಟದ ಸಂಘಟನಾ ಸಮಿತಿಯ ಮುಖ್ಯಸ್ಥ ಹಾಗೂ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಸುರೇಶ್ ಕಲ್ಮಾಡಿ ಅವರ ಪುಣೆ, ಮುಂಬೈ, ನವದೆಹಲಿಗಳಲ್ಲಿನ ಮನೆಗಳ ಮೇಲೆ ಸಿಬಿಐ ಶುಕ್ರವಾರ ದಾಳಿ ನಡೆಸಿದೆ. ಅಲ್ಲದೆ ಅವರನ್ನು 8ಗಂಟೆಗಳ ಕಾಲ ವಿಚಾರಣೆಗೆ ಗುರಿಪಡಿಸಿದೆ.ಕಲ್ಮಾಡಿ ಅವರಿಗೆ ಸೇರಿದ, ಆದರೆ ಅವರ ಸಹೋದರ ಮುಖೇಶ್ ಅವರು ವಾಸಿಸುತ್ತಿರುವ ಮುಂಬೈನಲ್ಲಿನ ಮನೆ ಮತ್ತು ನವದೆಹಲಿಯಲ್ಲಿರುವ ಸಮಿತಿಯ ಕಚೇರಿಗಳೂ ದಾಳಿಗೆ ಒಳಗಾಗಿವೆ.ಬಹುಕೋಟಿ ವೆಚ್ಚದ ಈ ಹಗರಣ ಸ್ಫೋಟಗೊಂಡು ಜಗತ್ತಿನೆದುರು ದೇಶದ ಮಾನ ಹರಾಜಾದ ಸರಿಸುಮಾರು ನಾಲ್ಕು ತಿಂಗಳ ಬಳಿಕ ಸಂಸ್ಥೆ ತನಿಖೆಯನ್ನು ಚುರುಕುಗೊಳಿಸಿದೆ. ಕಲ್ಮಾಡಿ ಅವರ ಆಸ್ತಿಪಾಸ್ತಿಗೆ ಸಂಬಂಧಿಸಿದಂತೆ ಸಂಸ್ಥೆ ಅಧಿಕೃತವಾಗಿ ತನಿಖೆ ಕೈಗೊಂಡಿರುವುದು ಇದೇ ಮೊದಲು.ಹಗರಣದ ಮೇಲೆ ಬೆಳಕು ಚೆಲ್ಲಲಿದ್ದ ಕೆಲ ನಿರ್ಣಾಯಕ ದಾಖಲೆಗಳು ಕಾಣೆಯಾಗಿದ್ದು, ಅವುಗಳನ್ನು ನಾಶಪಡಿಸಿರುವ ಅಥವಾ ಅಡಗಿಸಿಟ್ಟಿರುವ ಸಾಧ್ಯತೆ ಇದೆ ಎಂದು ಸಿಬಿಐ ಹೇಳಿದ್ದ ಕೆಲವೇ ದಿನಗಳಲ್ಲಿ ಈ ಬೆಳವಣಿಗೆ ನಡೆದಿದೆ.ಪುಣೆಯಲ್ಲಿರುವ ಅವರ ಒಡೆತನದ ಎರಡು ಮನೆಗಳು, ಹೊರವಲಯ ಖಡಕ್‌ವಾಸ್ಲ ಎಂಬಲ್ಲಿರುವ ತೋಟದ ಮನೆ, ಮಾರುತಿ ಕಾರುಗಳ ಬೃಹತ್ ವಿತರಕ ‘ಸಾಯಿ ಸರ್ವೀಸಸ್’ ಮತ್ತು ‘ಸಾಯಿ ಪೆಟ್ರೋಲ್ ಬಂಕ್’, ಅವರ ಆಪ್ತ ಕಾರ್ಯದರ್ಶಿ ಮನೋಜ್ ಭೂರೆ ಅವರ ಮನೆಯನ್ನು ಶೋಧಿಸಿದ್ದಾಗಿ ಸಂಸ್ಥೆಯ ವಕ್ತಾರೆ ವಿನೀತಾ ಠಾಕೂರ್ ತಿಳಿಸಿದ್ದಾರೆ.11 ದಿನಗಳ ಕ್ರೀಡಾಕೂಟಕ್ಕೆ ಸಂಬಂಧಿಸಿದ 11 ಗುತ್ತಿಗೆಗಳ ಮಂಜೂರಿಗೆ ಸಂಬಂಧಿಸಿದಂತೆ ಕಲ್ಮಾಡಿ ಅವರನ್ನು ಪ್ರಶ್ನಿಸಿರುವ ಸಂಸ್ಥೆ, ಅವರ ಸಹಚರ ಶೇಖರ್ ಅವರನ್ನು ಮುಖ್ಯ ಕಚೇರಿಗೆ ಕರೆಸಿಕೊಂಡು ವಿಚಾರಣೆ ನಡೆಸಿತು.40 ಅಧಿಕಾರಿಗಳ ಸಮ್ಮುಖದಲ್ಲಿ ಬೆಳಿಗ್ಗೆ 7 ಗಂಟೆಗೆ ಮೂರೂ ನಗರಗಳಲ್ಲಿ ಏಕಕಾಲಕ್ಕೆ ಆರಂಭವಾದ ದಾಳಿ, ಸ್ಥಳೀಯ ಪೊಲೀಸರ ನೆರವಿನೊಂದಿಗೆ ಮಧ್ಯಾಹ್ನದವರೆಗೂ ಮುಂದುವರಿಯಿತು.ಅಧಿಕಾರಿಗಳು ಮಾಧ್ಯಮಗಳ ಎದುರು ತುಟಿ ಬಿಚ್ಚಲಿಲ್ಲ.ಪುಣೆಯಲ್ಲಿ ಸಂಚಲನ: ದಾಳಿ ಘಟನೆ ಪುಣೆಯಲ್ಲಿ ಸಂಚಲನ ಸೃಷ್ಟಿಸಿತ್ತು. ತೋಟದ ಮನೆಗೆ ಅಧಿಕಾರಿಗಳು ಬಂದಾಗ ಕಲ್ಮಾಡಿ ಅವರ ಪತ್ನಿ ಮೀರಾ ಇದ್ದರು. ಸಾರ್ವಜನಿಕರು ಕುತೂಹಲದಿಂದ ರಸ್ತೆ ಬದಿ ನೆರೆದಿದ್ದರು. ಮನೆಯ ಎಲ್ಲ ಕಿಟಕಿ, ಬಾಗಿಲುಗಳನ್ನೂ ಮುಚ್ಚಲಾಗಿತ್ತು. ಸಂಸದರ ಖಾಸಗಿ ಭದ್ರತಾ ಸಿಬ್ಬಂದಿ ಮತ್ತು ಪೊಲೀಸರು ಮಾತ್ರ ಪ್ರತಿಷ್ಠಿತ ನಿವಾಸದ ಕಾಂಪೌಂಡ್‌ನಲ್ಲಿ ಕಾಣುತ್ತಿದ್ದರು.‘ಎಲ್ಲ ನಿರ್ಧಾರಗಳನ್ನು ಸಿಡಬ್ಲುಜಿ ಆಡಳಿತ ಕೈಗೊಂಡಿದ್ದರೂ ಈಗ ಕಲ್ಮಾಡಿ ಅವರನ್ನು ಏಕಾಂಗಿಯನ್ನಾಗಿ ಮಾಡಲಾಗಿದೆ’ ಎಂದು ಅವರ ನಿಕಟವರ್ತಿಗಳು ದೂರಿದರು.‘ಅವರು ಕೆಲ ದಾಖಲೆಗಳಿಗಾಗಿ ಹುಡುಕಾಡಿದರು. ಸಿಕ್ಕಿತೋ ಇಲ್ಲವೋ ತಿಳಿಯದು’ ಎಂದು ಕಾರ್ವ್ ರಸ್ತೆಗೆ ಸಮೀಪ ಇರುವ ‘ಕಲ್ಮಾಡಿ ಹೌಸ್’ನ ಹೊರಗೆ ನೆರೆದಿದ್ದ ಸುದ್ದಿಗಾರರಿಗೆ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.