ಶುಕ್ರವಾರ, ಜೂನ್ 18, 2021
28 °C
ಕಾಂಗ್ರೆಸ್‌ ಮೂರನೇ ಪಟ್ಟಿ ಪ್ರಕಟ

ಕಲ್ಮಾ ಡಿಗೆ ಟಿಕೆಟ್‌ ನಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ (ಪಿಟಿಐ): ಲೋಕಸಭಾ ಚುನಾವಣೆಗೆ ಕಾಂಗ್ರೆಸ್‌ ಪಕ್ಷವು ಮಂಗಳವಾರ 58 ಅಭ್ಯರ್ಥಿಗಳ ಹೆಸರನ್ನೊಳಗೊಂಡ ಮೂರನೇ ಪಟ್ಟಿ ಬಿಡುಗಡೆ ಮಾಡಿದ್ದು, ‘ಕಳಂಕಿತ’ ಸುರೇಶ್‌ ಕಲ್ಮಾಡಿ ಅವರಿಗೆ ಟಿಕೆಟ್‌ ನಿರಾಕರಿಸಿದೆ. ಮಹಾರಾಷ್ಟ್ರದ ಪುಣೆ ಲೋಕಸಭಾ ಕ್ಷೇತ್ರದ ಸಂಸದ­ರಾಗಿರುವ ಕಲ್ಮಾಡಿ ಸ್ಥಾನದಲ್ಲಿ ಯುವನಾಯಕ ವಿಶ್ವಜೀತ್‌ ಕದಂ ಅವರಿಗೆ ಕಾಂಗ್ರೆಸ್‌ ಅವಕಾಶ ನೀಡಿದೆ.ಇದರ ಹೊರತಾಗಿ, ಕಪಿಲ್‌ ಸಿಬಲ್‌ ಸೇರಿದಂತೆ ಹಲವು ಕೇಂದ್ರ ಸಚಿವರು ಹಾಗೂ ಹಿರಿಯ ಮುಖಂಡರಿಗೆ ಟಿಕೆಟ್‌ ನೀಡಿದೆ. ಭಾರತ ಕ್ರಿಕೆಟ್‌ ತಂಡದ ಮಾಜಿ ನಾಯಕ, ಉತ್ತರ ಪ್ರದೇಶದ ಮೊರದಾ­ಬಾದ್‌ ಕ್ಷೇತ್ರದ ಸಂಸದ ಮೊಹಮ್ಮದ್‌ ಅಜರುದ್ದೀನ್‌ ಅವರನ್ನು ಅಲ್ಪ­ಸಂಖ್ಯಾತರ ಪ್ರಾಬಲ್ಯವಿರುವ ರಾಜ­ಸ್ತಾನದ ಮಾಧೋಪುರದ ಟೊಂಕ್‌–ಸವಾಯಿ ಕ್ಷೇತ್ರದಿಂದ ಕಣಕ್ಕಿಳಿಸಲಾಗಿದೆ.ಛತ್ತೀಸಗಡದ ಮಾಜಿ ಮುಖ್ಯಮಂತ್ರಿ ಅಜಿತ್‌ ಜೋಗಿ ಅವರಿಗೆ ಮೊಹಸ­ಮುಂದ್‌ನಿಂದ ಟಿಕೆಟ್‌ ನೀಡಲಾಗಿದೆ. ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್‌ ಸಿಂಗ್‌  ಅವರ ಅಳಿಯ ಪಂರಂಜಯಾದಿತ್ಯ ಅವರನ್ನು ಗುಜ­ರಾತ್‌ನ ಪಂಚಮಹಲ್‌ ಕ್ಷೇತ್ರಕ್ಕೆ ನಾಮಕರಣ ಮಾಡಲಾಗಿದೆ. ಯುವ ಮುಖಂಡ, ಸಚಿನ್‌ ಪೈಲಟ್‌ ಅವರಿಗೆ ಅಜ್ಮೇರ್‌ ಕ್ಷೇತ್ರದಿಂದ ಟಿಕೆಟ್‌ ನೀಡಲಾಗಿದೆ. ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ಸಿ.ಪಿ. ಜೋಶಿ ಅವರ ಕ್ಷೇತ್ರವನ್ನು ಭಿಲ್ವಾರಾ­ದಿಂದ ಜೈಪುರ ಗ್ರಾಮೀಣ ಕ್ಷೇತ್ರಕ್ಕೆ ಸ್ಥಳಾಂತರಿಸಲಾಗಿದೆ.ದೆಹಲಿಯ ಐವರು ಹಾಲಿ ಸಂಸದ­ರಾದ ಕಪಿಲ್‌ ಸಿಬಲ್‌ (ಚಾಂದಿನಿ ಚೌಕ್‌), ಕೃಷ್ಣ ತೀರಥ್‌ (ವಾಯವ್ಯ ದೆಹಲಿ), ಸಂದೀಪ್‌ ದೀಕ್ಷಿತ್‌ (ಪೂರ್ವ ದೆಹಲಿ), ಜೈಪ್ರಕಾಶ್‌ ಅಗರ್‌ವಾಲ್‌ (ಈಶಾನ್ಯ ದೆಹಲಿ) ಮತ್ತು ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಅಜಯ್‌ ಮಾಕನ್‌ ಅವರನ್ನು ನವದೆಹಲಿ ಕ್ಷೇತ್ರ­ದಿಂದ ಮರುನಾಮಕರಣ ಮಾಡ­ಲಾಗಿದೆ.ಮೂರನೇ ಅಭ್ಯರ್ಥಿಗಳ ಪಟ್ಟಿ ಪ್ರಕಟ­ಗೊಳ್ಳುವುದರೊಂದಿಗೆ ಕಾಂಗ್ರೆಸ್‌ ಈವ­ರೆಗೆ 318 ಹುರಿಯಾಳುಗಳನ್ನು ಚುನಾ­ವಣಾ ಅಖಾಡಕ್ಕೆ ಇಳಿಸಿ­ದಂತಾ­ಗಿದೆ. ಆದರೆ, ಉತ್ತರ ಪ್ರದೇಶದ ವಾರಾಣಸಿ ಕ್ಷೇತ್ರದಲ್ಲಿ ನರೇಂದ್ರ ಮೋದಿ ವಿರುದ್ಧ ಯಾರನ್ನು ನಿಲ್ಲಿಸಲಾಗುತ್ತಿದೆ ಎಂಬ ಬಗ್ಗೆ ಕಾಂಗ್ರೆಸ್‌ ಗುಟ್ಟು ಬಿಟ್ಟುಕೊಟ್ಟಿಲ್ಲ.ಈ ಕ್ಷೇತ್ರದಲ್ಲಿ ಅಭ್ಯರ್ಥಿ ಹೆಸರನ್ನು ಅಚ್ಚರಿಯಾಗಿ ಘೋಷಿಸುವ ಬಗ್ಗೆ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಮಧು­ಸೂದನ್‌ ಮಿಸ್ತ್ರಿ ಸುಳಿವು ನೀಡಿ­ದ್ದಾರೆ. ಮೋದಿ ವಿರುದ್ಧ ‘ಅಸಾಧಾರಣ’ ಅಭ್ಯರ್ಥಿಯನ್ನೇ ಕಣಕ್ಕಿಳಿಸಲಾಗುವುದು ಎಂದು ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ ಹೇಳಿದ್ದಾರೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.