ಮಂಗಳವಾರ, ಏಪ್ರಿಲ್ 13, 2021
32 °C

ಕಲ್ಲಿದ್ದಲ ಮಸಿ ಅಳಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

 ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆ, ವಿದ್ಯುತ್ ಯೋಜನೆಗಳು ಹಾಗೂ ದೆಹಲಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಗಳಿಗೆ ಸಂಬಂಧಿಸಿದ ಬಹು ನಿರೀಕ್ಷಿತ ಮಹಾಲೇಖಪಾಲರ (ಸಿಎಜಿ) ವರದಿ ಕಳೆದ ವಾರ ರಾಜ್ಯಸಭೆಯಲ್ಲಿ ಮಂಡಿತವಾಗಿ, ಹೊಸದೊಂದು ಹಗರಣದ ಅಲೆಗೆ ಕಾರಣವಾಗಿದೆ.ಸಿಎಜಿಯ `ಕರಡು ವರದಿ~ಗಳಲ್ಲಿ ವ್ಯಕ್ತವಾಗಿದ್ದಂತಹ ನಿಲುವುಗಳು ಈ ವರದಿಯಲ್ಲೂ ವ್ಯಕ್ತವಾಗಿವೆ. ಮಾರುಕಟ್ಟೆ ಬೆಲೆಗಳಿಗಿಂತ ಅತಿ ಕಡಿಮೆ ಬೆಲೆಗೆ ಕಲ್ಲಿದ್ದಲು ನಿಕ್ಷೇಪಗಳು, ವಿದ್ಯುತ್ ಯೋಜನೆಗಳು ಹಾಗೂ ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಹಂಚಿಕೆ ಮಾಡಿದ್ದರಿಂದ ರಾಷ್ಟ್ರದ ಬೊಕ್ಕಸಕ್ಕೆ ಅಪಾರ ಹಾನಿಯಾಗಿದೆ ಎಂಬುದನ್ನು ಸಿಎಜಿ ವರದಿ ಬಯಲುಮಾಡಿದೆ.

 

ಈ ಹಗರಣಗಳಿಂದ ರಾಷ್ಟ್ರದ ಬೊಕ್ಕಸಕ್ಕೆ ಆಗಿರುವ ಒಟ್ಟು ನಷ್ಟ ರೂ.3.06 ಲಕ್ಷ ಕೋಟಿಗೂ ಅಧಿಕ. ಅದರಲ್ಲೂ 2005ರಿಂದ 2009ರವರೆಗಿನ ಅವಧಿಯಲ್ಲಿ ಕಲ್ಲಿದ್ದಲು ನಿಕ್ಷೇಪಗಳ ಹಂಚಿಕೆಗಳಲ್ಲಿ `ತಪ್ಪು~ ನೀತಿಯಿಂದಾಗಿ ಬೊಕ್ಕಸಕ್ಕೆ ಆದ ನಷ್ಟ ರೂ 1.86ಲಕ್ಷ ಕೋಟಿಯಷ್ಟು ಅಧಿಕವಿದೆ.ಹೀಗಾಗಿ ಇದು 2ಜಿ ಹಗರಣಕ್ಕಿಂತಲೂ ದೊಡ್ಡದು ಎಂಬುದರಲ್ಲಿ ಸಂಶಯವಿಲ್ಲ. ರಾಜಕೀಯವಾಗಿಯೂ 2ಜಿ ವಂಚನೆಗಿಂತ ಕಲ್ಲಿದ್ದಲು ನಿಕ್ಷೇಪ ಹಗರಣ ಹೆಚ್ಚಿನ ಪರಿಣಾಮಗಳನ್ನು ಬೀರುವಂತಹದ್ದು. ಏಕೆಂದರೆ ಆ ಸಂದರ್ಭದಲ್ಲಿ ಮೂರೂವರೆ ವರ್ಷ ಪ್ರಧಾನಿ ಮನಮೋಹನ್ ಸಿಂಗ್ ಅವರೇ ನೇರವಾಗಿ ಕಲ್ಲಿದ್ದಲು ಸಚಿವ ಖಾತೆ ಹೊಂದಿದ್ದರು.

ಇದರಿಂದ ಪ್ರಧಾನಿಯವರ ವಿವರಣೆ ಹಾಗೂ ಸ್ವತಂತ್ರ ತನಿಖೆಗಾಗಿ ಪ್ರತಿಪಕ್ಷಗಳು ಒತ್ತಾಯಿಸುತ್ತಿರುವುದು ಸಹಜವಾದದ್ದೆ. ಇದನ್ನು ಎದುರಿಸಲು ಆಡಳಿತ ಪಕ್ಷ ಅನುಸರಿಸುತ್ತಿರುವ ತಂತ್ರವೂ ಹಳತಾದದ್ದೆ. ವರದಿಗಳ ಅಧಿಕೃತತೆ ಹಾಗೂ ವಿಶ್ವಾಸಾರ್ಹತೆಗಳನ್ನೆ ಪ್ರಶ್ನಿಸಲು ಸರ್ಕಾರ ಯತ್ನಿಸುತ್ತಿದೆ.  ಕಲ್ಲಿದ್ದಲು ವಲಯದಲ್ಲಿನ ಅವ್ಯವಸ್ಥೆಗಳನ್ನು ಈ ವರದಿ ಎತ್ತಿಹಿಡಿದಂತಾಗಿದೆ. ನೈಸರ್ಗಿಕ ಸಂಪನ್ಮೂಲಗಳ ಹಂಚಿಕೆಯ ವಿಚಾರ ಯಾವಾಗಲೂ ಭ್ರಷ್ಟಾಚಾರ ಚರ್ಚೆಗಳ ಕೇಂದ್ರಬಿಂದುವಾಗಿರುವುದನ್ನು ನೋಡುತ್ತಲೇ ಬಂದಿದ್ದೇವೆ. ವರದಿಯ ಗುಣಾವಗುಣಗಳು ಏನೇ ಇರಬಹುದು. ಕಾಮನ್‌ವೆಲ್ತ್ ಕ್ರೀಡಾಕೂಟ ಹಾಗೂ 2ಜಿ ಹಗರಣಗಳ ನಂತರ ಬರುತ್ತಿರುವ ಮಹಾಲೇಖಪಾಲರ ಈ ವರದಿ ಸರ್ಕಾರದ ವಿಶ್ವಾಸಾರ್ಹತೆಯನ್ನು ಮತ್ತಷ್ಟು ತಗ್ಗಿಸುವಂತಹದ್ದು.ಯುಪಿಎ ಆಡಳಿತದ ಮೊದಲ ಅವಧಿಯಲ್ಲಿ ಮನಮೋಹನ್ ಸಿಂಗ್ ಅವರು ಪ್ರಧಾನಿಯಾದ ಆರು ತಿಂಗಳಿಗೇ ಕಲ್ಲಿದ್ದಲು ನಿಕ್ಷೇಪ ಹಂಚಿಕೆಗೆ `ಸ್ಪರ್ಧಾತ್ಮಕ ಹರಾಜು ನೀತಿ~ ಅಳವಡಿಸಲು ತಾತ್ವಿಕ ಒಪ್ಪಿಗೆ ನೀಡಿದ್ದರು ನಿಜ.  ಆದರೆ ಅದನ್ನು ಜಾರಿಗೆ ತರುವಲ್ಲಿ ವಿಫಲರಾದರು. ಈ ದಿಸೆಯಲ್ಲಿನ ಅದಕ್ಷತೆ ಹಾಗೂ ನಿರ್ಧಾರ ಕೈಗೊಳ್ಳದ ಅಸಾಮರ್ಥ್ಯ ರಾಷ್ಟ್ರಕ್ಕೆ ಹಾನಿಕರ.ಈ ಹರಾಜು ನೀತಿಯನ್ನು ಆಗ ವಿರೋಧಿಸಿದವರಲ್ಲಿ ಬಿಜೆಪಿ ಆಡಳಿತದ ರಾಜಸ್ತಾನ, ಛತ್ತೀಸ್‌ಗಢ ಹಾಗೂ ಸಿಪಿಎಂ ಆಡಳಿತವಿದ್ದ ಪಶ್ಚಿಮ ಬಂಗಾಳವೂ ಸೇರಿತ್ತು ಎಂಬುದನ್ನು ಗಮನಿಸಬೇಕು.  ಆಡಳಿತಾತ್ಮಕ ದೋಷಗಳನ್ನು ಸರಿಪಡಿಸಲು ಸಕಾಲದ, ವಿಶ್ವಾಸಾರ್ಹ ಕ್ರಮಗಳನ್ನು ಕೈಗೊಳ್ಳದಿರುವ ಪರಿಣಾಮದಿಂದ ಖಾಸಗಿ ಲಾಭಕೋರತನ ಹಾಗೂ ಬಂಡವಾಳಶಾಹಿ ಪರ ಪಕ್ಷಪಾತದ ನಿಲುವುಗಳ ಬೆಳವಣಿಗೆಗಳಿಗೆ ಕಾರಣವಾಗುತ್ತಿದೆ. ಈ ಬಗೆಯಲ್ಲಿ ಸರ್ಕಾರದ ಅಧಿಕಾರ ದುರುಪಯೋಗವಾಗದಂತೆ ತಡೆಯುವ ನಿಯಂತ್ರಣ ವ್ಯವಸ್ಥೆ ರೂಪುಗೊಳ್ಳಬೇಕಾದುದು ಅಗತ್ಯ. ಮಹಾಲೇಖಪಾಲ ವ್ಯವಸ್ಥೆಯಂತಹ ಸಾಂವಿಧಾನಿಕ ಅಧಿಕಾರಕ್ಕೆ ಸವಾಲು ಎಸೆಯುವ ಬದಲಿಗೆ ಲೆಕ್ಕಪರಿಶೋಧಕ ವರದಿಗಳಲ್ಲಿನ ಶಿಫಾರಸುಗಳನ್ನು ಅಂಗೀಕರಿಸಬೇಕು, ಜೊತೆಗೆ ಮುಂದಿನ ಕ್ರಮಗಳನ್ನೂ ಕೈಗೊಳ್ಳಬೇಕು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.