ಶನಿವಾರ, ಮೇ 28, 2022
29 °C

ಕಲ್ಲು ಕ್ವಾರಿ ಬಂದ್: ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರವಾರ: ಜಿಲ್ಲೆಯ ಬೇರೆ ತಾಲ್ಲೂಕುಗಳನ್ನು ಹೊರತುಪಡಿಸಿ ಕೇವಲ ಕಾರವಾರ ಹಾಗೂ ಅಂಕೋಲಾ ತಾಲ್ಲೂಕಿನಲ್ಲಿ ಮಾತ್ರ ಕಲ್ಲು ಕ್ವಾರಿಗಳನ್ನು ಬಂದ್ ಮಾಡಿರುವ ಅರಣ್ಯ ಇಲಾಖೆಯ ಕ್ರಮದ ವಿರುದ್ಧ ಕಲ್ಲು ಕ್ವಾರಿ ಗುತ್ತಿಗೆದಾರರು, ಕ್ರಶರ್ ಮಾಲೀಕರು ಆಕ್ರೋಶ ವ್ಯಕ್ತಪಡಿಸಿದರು.ನಗರದ ಕೋಡಿಭಾಗ್‌ನಲ್ಲಿರುವ ಉಜ್ವಲ ಲಕ್ಷ್ಮಿ ಸಭಾಂಗಣದಲ್ಲಿ ಶನಿವಾರ ನಡೆದ ಕಲ್ಲುಕ್ವಾರಿ ಗುತ್ತಿಗೆದಾರರ, ಕ್ರಶರ್ ಮಾಲೀಕರ ಹಾಗೂ ಸಾರ್ವಜನಿಕರ ಸಭೆಯಲ್ಲಿ ಮಾತನಾಡಿದ ವಕೀಲ ಕೆ.ಆರ್. ದೇಸಾಯಿ ಮಾತನಾಡಿ, ಅರಣ್ಯ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಾಗೂ ಸಾರ್ವಜನಿಕರ ಸಭೆ ಕರೆದು ಕಲ್ಲು ಕ್ವಾರಿಗಳನ್ನು ಮತ್ತೆ ಪ್ರಾರಂಭ ಮಾಡಲು ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು ಎಂದರು.ಕಲ್ಲು ಕ್ವಾರಿಗಳನ್ನು ಪುನರಾರಂಭಿಸುವುದರ ಬಗ್ಗೆ ಸರಕಾರದ ಮೇಲೆ ಒತ್ತಡ ಹೇರುತ್ತಿಲ್ಲ. ಸರಕಾರ ಆದೇಶದಂತೆ ಅರಣ್ಯ ಇಲಾಖೆ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ವಾರಿ ಸ್ಥಗಿತಗೊಳಿಸುವ ಕಾನೂನು ರಾಜ್ಯದ ಎಲ್ಲ ಜಿಲ್ಲೆ ತಾಲ್ಲೂಕುಗಳಿಗೆ ಅನ್ವಯಿಸುತ್ತದೆ ಹೊರತು ಕಾರವಾರ ಅಂಕೋಲಾ ತಾಲ್ಲೂಕಿಗಷ್ಟೇ ಅಲ್ಲ. ಬೇರೆ ತಾಲ್ಲೂಕುಗಳಲ್ಲಿ ಕಲ್ಲು ಕ್ವಾರಿ ರಾಜಾರೋಷವಾಗಿ ನಡೆಯುತ್ತಿದೆ ಎಂದರು.ರಾಜ್ಯ, ಕೇಂದ್ರ ಸರಕಾರಗಳು ಜಿಲ್ಲೆಯ ಅಭಿವೃದ್ಧಿ ಕಾರ್ಯಕ್ಕೆ ಕೋಟಿಗಟ್ಟಲೇ ಹಣ ಬಿಡುಗಡೆಗೊಳಿಸಿದೆ. ಆದರೆ ಕಲ್ಲು, ಉಸುಕು, ಕಡಿ ಇಲ್ಲದಿರುವುದರಿಂದ ಯಾವುದೇ ಕಾರ್ಯಗಳು ನಡೆಯುತ್ತಿಲ್ಲ. ಜಿಲ್ಲೆಯಲ್ಲಿ ಅನೇಕರು ಕೆಲಸವಿಲ್ಲದೇ ಕಂಗಾಲಾಗಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.ಕಲ್ಲುಕ್ವಾರಿ ಗುತ್ತಿಗೆದಾರರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿ, ಅಭಿವೃದ್ಧಿಯಲ್ಲಿ ಕಾರವಾರ ಹಾಗೂ ಅಂಕೋಲಾ ಹಿಂದುಳಿಯಬೇಕು ಎನ್ನುವ ದೃಷ್ಟಿಯಿಂದ ಜಿಲ್ಲಾ ಉಸ್ತುವಾರಿ ಸಚಿವರು ಕಾರವಾರ ಹಾಗೂ ಅಂಕೋಲಾ ತಾಲ್ಲೂಕಿನ ಕಲ್ಲುಕ್ವಾರಿಗಳನ್ನು ಸ್ಥಗಿತಗೊಳಿಸಿದ್ದಾರೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.ಜನಶಕ್ತಿ ವೇದಿಕೆ ಅಧ್ಯಕ್ಷ ಮಾಧವ ನಾಯಕ, ಸಂತೋಷ ಫಳ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ದೀಪಕ ವೈಂಗಣಕರ್, ಅಗ್ರ ನಾಯಕ, ಶಿವಪ್ರಸಾದ, ಕೃಷ್ಣ ಕೆಲ್ವೆಕರ, ಅಲ್‌ಬರ್ಟ್ ಡಯಾಸ್, ಸುಭಾಷ ಪೆಡ್ನೇಕರ್, ಸಮೀರ ನಾಯ್ಕ, ಸಂದೀಪ ನಾಯಕ ಸಭೆಯಲ್ಲಿ ಪಾಲ್ಗೊಂಡು ಅಭಿಪ್ರಾಯ ವ್ಯಕ್ತಪಡಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.