ಶನಿವಾರ, ಮೇ 28, 2022
26 °C
ಅರಣ್ಯ ಪ್ರದೇಶದಲ್ಲಿ ಗಣಿಗಾರಿಕೆ- ಸ್ಥಳಕ್ಕೆ ತಹಶೀಲ್ದಾರ್ ಭೇಟಿ

ಕಲ್ಲು ಗಣಿಗಾರಿಕೆ ಸ್ಫೋಟಕ್ಕೆ ನಿವಾಸಿಗಳು ತತ್ತರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಳ್ಳಕೆರೆ: ಪಟ್ಟಣದ ಹೊರವಲಯದಲ್ಲಿ ಇರುವ ಅರಣ್ಯ ಪ್ರದೇಶಕ್ಕೆ ಹೊಂದಿಕೊಂಡಿರುವ ಮಲೆ ಬೆಟ್ಟದಲ್ಲಿ ನಡೆಯುತ್ತಿರುವ ಅವ್ಯಾಹತ ಗಣಿಗಾರಿಕೆಯ ಸ್ಫೋಟಕ್ಕೆ ಆಸುಪಾಸಿನ ಗ್ರಾಮಗಳ ಜನರು ಹಾಗೂ ವಿಠಲ ನಗರದ ನಿವಾಸಿಗಳು ನಲುಗಿ ಹೋಗಿದ್ದಾರೆ.ಬುಧವಾರ ಸಂಜೆ ಗಣಿಗಾರಿಕೆಗೆ ಬಳಸಿದ ಸ್ಫೋಟಕಕ್ಕೆ ವಿಠಲ ನಗರದ ನಿವಾಸಿ ವಕೀಲ ಜಗದೀಶ್ ರೆಡ್ಡಿ ಅವರ ಮನೆಯ ಕಿಟಕಿಯ ಗಾಜು ಸಿಡಿದಿರುವ ಘಟನೆ ಜರುಗಿದ ಹಿನ್ನೆಲೆಯಲ್ಲಿ ನಿವಾಸಿಗಳು ತಹಶೀಲ್ದಾರ್ ವಿಜಯರಾಜು ಜತೆ ಗಣಿಗಾರಿಕೆ ನಡೆಯುವ ಪ್ರದೇಶಕ್ಕೆ ಸಂಜೆ ಭೇಟಿ ನೀಡಿ ತಮಗಾಗುತ್ತಿರುವ ತೊಂದರೆ ಕುರಿತು ವಿವರಿಸಿದರು.ಬೃಹದಾಕಾರವಾಗಿ ಹರಡಿಕೊಂಡಿದ್ದ ಮಲೆ ಬೆಟ್ಟ ಸಂಪೂರ್ಣ ಗಣಿಗಾರಿಕೆಮಯ ಆಗಿರುವುದು ಕಂಡು ಬಂದಿತು. ಬೆಳಿಗ್ಗೆ ಮತ್ತು ಸಂಜೆ ಸಮಯದಲ್ಲಿ ಸ್ಪೋಟಕಗಳನ್ನು ಸಿಡಿಸುವುದರಿಂದ ಆಸುಪಾಸಿನ ಗ್ರಾಮಗಳಲ್ಲಿ ಕಲ್ಲುಗಳು ಬೀಳುವುದು, ಅರಣ್ಯ ಪ್ರದೇಶದಲ್ಲಿ ಗಿಡಗಳು ಬಿಳಿ ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ.ಅಧಿಕಾರಿಗಳು ಅರಣ್ಯ ವ್ಯಾಪ್ತಿಗೆ ಹೊಂದಿಕೊಂಡಿರುವ ಬೆಟ್ಟವನ್ನು ಕೆಂಪು ಬಣ್ಣದಲ್ಲಿ ಗುರುತಿಸಿದ್ದಾರೆ. ಆದರೆ, ಗುತ್ತಿಗೆ ಪಡೆದಿರುವ ಬೆಟ್ಟ ಹಾಗೂ ಅರಣ್ಯ ಪ್ರದೇಶಕ್ಕೆ ಸೇರಿದ ಬೆಟ್ಟದಲ್ಲೂ ಗಣಿಗಾರಿಕೆ ನಡೆಸುತ್ತಿರುವುದು ಕಂಡು ಬಂದಿದೆ.ಇಲ್ಲಿ ಬೆಟ್ಟವನ್ನು ಸ್ಫೋಟಿಸಿ ಸಿಡಿಸಿದ ಬಂಡೆಯನ್ನು ಬೃಹದಾಕಾರದ ಯಂತ್ರಗಳನ್ನು ಬಳಸಿ ಜಲ್ಲಿಯನ್ನಾಗಿ ಮಾಡಲು ದೊಡ್ಡ ಯಂತ್ರಗಳು ತನ್ನ ಸಾಮ್ರಾಜ್ಯವನ್ನು ನಿರ್ಮಿಸಿವೆ. ಈ ಪ್ರದೇಶದ ಆಸುಪಾಸಿನ ಗ್ರಾಮಗಳ ಮಕ್ಕಳೂ ಕೂಡ ಗಣಿಗಾರಿಕೆಯಲ್ಲಿ ದುಡಿಯುತ್ತಿರುವ ಸಂಗತಿ ಸ್ಥಳೀಯರಿಂದಲೇ ಲಭ್ಯವಾಗುತ್ತದೆ.ತಹಶೀಲ್ದಾರ್ ಹಾಗೂ ವಿಠ್ಠಲ ನಗರದ ನಿವಾಸಿಗಳು ಬುಧವಾರ ಸಂಜೆ ಸ್ಥಳಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಉಸ್ತುವಾರಿ ನೋಡಿಕೊಳ್ಳುವ ವ್ಯಕ್ತಿಯೊಬ್ಬರು ಸ್ಫೋಟಕ ಬಳಸುತ್ತಿರುವುದನ್ನು ಸ್ವತಃ ಒಪ್ಪಿಕೊಂಡರು. ಈ ಪ್ರದೇಶದಲ್ಲಿ ಸ್ಫೋಟಕ ಬಳಸುವುದರಿಂದ 2ಕಿ.ಮೀಗಳವರೆಗೆ ಕಲ್ಲುಗಳ ಚೂರುಗಳು ಬಿದ್ದಿರುವುದು ಕಂಡುಬಂದವು.ಪ್ರತಿಕ್ರಿಯಿಸಿದ ತಹಶೀಲ್ದಾರ್ ವಿಜಯರಾಜು, ಗುರುವಾರ ಬೆಳಿಗ್ಗೆ ಮತ್ತೊಮ್ಮೆ ಇಲ್ಲಿಗೆ ಭೇಟಿ ನೀಡಿ ಕೂಲಂಕುಷವಾಗಿ ಪರಿಶೀಲಿಸ ಲಾಗುವುದು. ನಿವಾಸಿಗಳಿಗೆ ತೊಂದರೆ ಆಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.ಈ ಸಂದರ್ಭದಲ್ಲಿ ಚಕ್ರವರ್ತಿ ಶಿವಕುಮಾರ್, ರುದ್ರಮೂರ್ತಿ, ವಕೀಲ ಜಗದೀಶ ರೆಡ್ಡಿ, ವಿರುಪಾಕ್ಷ ಮತ್ತಿತರರು ಹಾಜರಿದ್ದರು. ಕಾರ್ಮಿಕ ಇಲಾಖೆ ಕ್ರಮ ಕೈಗೊಳ್ಳುವುದೇ?

ಕಲ್ಲುಗಣಿಗಾರಿಕೆಯಲ್ಲಿ ಮಕ್ಕಳು ದುಡಿಯುತ್ತಿದ್ದಾರೆ ಎಂಬ ಮಾಹಿತಿ ಕೆಲ ಸ್ಥಳೀಯರಿಂದಲೇ ಲಭ್ಯ ಆಗಿದೆ. ಬೇರೆ ಕಡೆಗಳಿಂದ ವಲಸೆ ಬಂದಿರುವ ಕಾರ್ಮಿಕರು ಇಲ್ಲಿ ಇದ್ದಾರೆ ಎನ್ನಲಾಗಿದೆ. ಆದ್ದರಿಂದ, ಅವರ ಮಕ್ಕಳೂ ಸಹ ಇಲ್ಲಿ ದುಡಿಯುತ್ತಿದ್ದಾರೆ ಎಂಬ ಅಂಶ ಬೆಳಕಿಗೆ ಬಂದಿದೆ.ಇಂತಹ ಅಪಾಯಕಾರಿ ಪ್ರದೇಶದಲ್ಲಿ ಮಕ್ಕಳ ದುಡಿಮೆ ಕಾನೂನುಬಾಹಿರ. ಆದರೆ, ಇಂತಹ ಗಣಿಗಾರಿಕೆ ಪ್ರದೇಶಕ್ಕೆ ಕಾರ್ಮಿಕ ಇಲಾಖೆ ಅಧಿಕಾರಿಗಳು ಒಮ್ಮೆಯಾದರೂ ಭೇಟಿ ನೀಡಿದರೆ ಸತ್ಯಾಂಶ ಹೊರಬರಲಿದೆ ಎನ್ನುತ್ತಾರೆ ಸ್ಥಳೀಯರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.