ಸೋಮವಾರ, ಮೇ 25, 2020
27 °C

ಕಳಪೆ ಕಾಮಗಾರಿ: ಕಟ್ಟಡ ಉದ್ಘಾಟನೆ ರದ್ದು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಶ್ರೀರಂಗಪಟ್ಟಣ: ಆರ್‌ಐಡಿಎಫ್-13 (ನಬಾರ್ಡ್) ಯೋಜನೆಯಡಿ 2008 -09ನೇ ಸಾಲಿನ ಅನುದಾನದಲ್ಲಿ ತಾಲ್ಲೂಕಿನ ದೊಡ್ಡಪಾಳ್ಯದಲ್ಲಿ ನಿರ್ಮಿಸಿರುವ ಸರ್ಕಾರಿ ಪ್ರೌಢಶಾಲೆ ಕಟ್ಟಡ ಕಳಪೆಯಿಂದ ಕೂಡಿದೆ ಎಂದು ಗ್ರಾಮಸ್ಥರು ಆರೋಪಿಸಿದ ಹಿನ್ನೆಲೆಯಲ್ಲಿ ಶಾಲಾ ಕಟ್ಟಡ ಉದ್ಘಾಟನಾ ಕಾರ್ಯಕ್ರಮ ರದ್ದುಗೊಂಡು ಘಟನೆ ಬುಧವಾರ ನಡೆಯಿತು.ಶಾಲಾ ಕಟ್ಟಡ ಉದ್ಘಾಟನೆ ಕಾರಣಕ್ಕೆ ಕಟ್ಟಿದ್ದ ತಳಿರು, ತೋರಣವನ್ನು ಗ್ರಾಮಸ್ಥರು ಕಿತ್ತೊಗೆದರು. ಸ್ಥಳಕ್ಕೆ ಆಗಮಿಸಿದ ಶಾಸಕ ರಮೇಶ ಬಂಡಿಸಿದ್ದೇಗೌಡ, ತಾ.ಪಂ. ಅಧ್ಯಕ್ಷೆ ಪದ್ಮಾ ವಿಜೇಂದ್ರು, ಜಿ.ಪಂ. ಸದಸ್ಯ ಎಸ್.ಎಲ್.ಲಿಂಗರಾಜು, ಬಿಇಓ ಕೆ.ಜಗದೀಶ್ ಅವರಿಗೆ ಪರಿಸ್ಥಿತಿ ವಿವರಿಸಿದರು. ಕಾರ್ಯಕ್ರಮಕ್ಕೆ ಎಸ್‌ಡಿಎಂಸಿ ಸದಸ್ಯರು, ಪೋಷಕರನ್ನು ಕರೆಯದೆ ಲೋಪ ಎಸಗಿದ್ದಾರೆ. ರಾತ್ರೋರಾತ್ರಿ ಆಹ್ವಾನ ಪತ್ರಿಕೆ ಹಂಚಿದ್ದಾರೆ ಎಂದು ದೂರಿದರು.ಗ್ರಾಮಸ್ಥರಿಂದ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದು ಪಡಿಸುವಂತೆ ಶಾಸಕರು ಸೂಚಿಸಿದರು. ‘ಕೆಆರ್‌ಬಿಸಿ ಹಾಗೂ ಭೂ ಸೇನಾ ನಿಗಮ ಸಂಸ್ಥೆಗಳು ನಿರ್ಮಿಸಿರುವ ಕಟ್ಟಡಗಳ ಗುಣಮಟ್ಟದ ಬಗ್ಗೆ ವ್ಯಾಪಕ ದೂರುಗಳು ಬರುತ್ತಿವೆ. ಈ ಕುರಿತು ಸಂಬಂಧಿಸಿದವರ ಜತೆ ಚರ್ಚಿಸುತ್ತೇನೆ’ ಎಂದು ಶಾಸಕರು ಹೇಳಿ ಹೊರ ನಡೆದರು.ಜಿಪಂ ಸದಸ್ಯ ಎಸ್.ಎಲ್. ಲಿಂಗರಾಜು ಮಾತನಾಡಿ, ‘ಕೆಆರ್‌ಬಿಸಿ ಹಾಗೂ ಭೂ ಸೇನಾ ನಿಗಮ ನಿರ್ಮಾಣದ ಕಟ್ಟಡಗಳು ಕಳಪೆಯಿಂದ ಕೂಡಿವೆ ಎಂಬ ಕಾರಣಕ್ಕೆ ಈ ಎರಡು ಸಂಸ್ಥೆಗಳನ್ನು ಜಿ.ಪಂ. ಈಗಾಗಲೇ ಕಪ್ಪುಪಟ್ಟಿಗೆ ಸೇರಿಸಿದೆ. ಆದರೂ ಮೇಲಧಿಕಾರಿಗಳು ತಮ್ಮದೇ ಕಾರಣಕ್ಕೆ ಗುತ್ತಿಗೆ ನೀಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.‘ಕೆಆರ್‌ಬಿಸಿ ದೊಡ್ಡಪಾಳ್ಯದಲ್ಲಿ ನಿರ್ಮಿಸಿರುವ ಶಾಲಾ ಕಟ್ಟಡದ ಅಡಿಪಾಯದಲ್ಲಿ ಬಿರುಕುಗಳು ಮೂಡಿವೆ. ಉದ್ಘಾಟನೆಗೆ ಮುನ್ನ ಬಿರುಕು ಕಾಣಿಸಿಕೊಂಡಿದೆ. ಕಟ್ಟಡದ ಮೇಲಿರುವ ಮರಗಳನ್ನು ತೆಗೆಯದೆ ಹಾಗೇ ಬಿಟ್ಟಿದ್ದು ಮಳೆ, ಗಾಳಿಗೆ ಇವು ಬೀಳುವ ಸಂಭವವಿದ್ದು, ಅನಾಹುತ ಘಟಿಸುವ ಅಪಾಯವಿದೆ. ಕಳಪೆ ಕಾಮಗಾರಿ ನಡೆಸಿರುವವರ ವಿರುದ್ಧ ಕ್ರಮ ಕೈಗೊಳ್ಳಬೇಕು’ ಎಂದು ಎಸ್‌ಡಿಎಂಸಿ ಮಾಜಿ ಅಧ್ಯಕ್ಷ ಡಿ.ಎಂ.ರವಿ, ಡಿ.ಕೆ.ನಾಗರಾಜು, ಗ್ರಾ.ಪಂ. ಸದಸ್ಯ ದಿನೇಶ್, ಗೋವಿಂದೇಗೌಡ ಒತ್ತಾಯಿಸಿದರು. ಎಸ್‌ಡಿಎಂಸಿ ಅಧ್ಯಕ್ಷ ಎಂ.ಆರ್.ಶಂಕರ್, ಪುಟ್ಟೇಗೌಡ, ನಾಗರಾಜು, ಗಂಗಾಧರ್ ಇದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.