ಭಾನುವಾರ, ಫೆಬ್ರವರಿ 28, 2021
31 °C

ಕಳೆಗಟ್ಟಿದ್ದ ಸುಗ್ಗಿ ಹಬ್ಬದ ಸಂಭ್ರಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಳೆಗಟ್ಟಿದ್ದ ಸುಗ್ಗಿ ಹಬ್ಬದ ಸಂಭ್ರಮ

ಕೋಲಾರ: ಸುಗ್ಗಿಯ ಹಬ್ಬ ಮಕರ ಸಂಕ್ರಾಂತಿಯನ್ನು ನಗರದಲ್ಲಿ ಶುಕ್ರವಾರ ಸಂಭ್ರಮದಿಂದ ಆಚರಿಸಲಾಯಿತು. ನಗರವು ಸೇರಿದಂತೆ ಗ್ರಾಮೀಣ ಭಾಗದಲ್ಲಿ ಹಬ್ಬದ ಸಂಭ್ರಮ ಹೆಚ್ಚು ಕಳೆಗಟ್ಟಿತ್ತು.ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ಮಾರುಕಟ್ಟೆಯಲ್ಲಿ ಎಳ್ಳು, ಬೆಲ್ಲ, ಕಬ್ಬು ಮತ್ತಿತರ ಹಬ್ಬದ ಸಾಮಗ್ರಿಗಳ ಖರೀದಿ ಜೋರಾಗಿತ್ತು. ಮಹಿಳೆಯರು ನಸುಕಿನಲ್ಲೇ ಮನೆಗಳ ಮುಂದೆ ಬಣ್ಣ ಬಣ್ಣದ ರಂಗೋಲಿ ಬಿಡಿಸಿ ಸುಗ್ಗಿ ಹಬ್ಬವನ್ನು ಸಂತಸದಿಂದ ಬರ ಮಾಡಿಕೊಂಡರು.ಸಂಕ್ರಾಂತಿ ಪ್ರಯುಕ್ತ ದೇವಾಲಯಗಳನ್ನು ತಳಿರು ತೋರಣಗಳಿಂದ ಸಿಂಗರಿಸಲಾಗಿತ್ತು. ಕೋಲಾರಮ್ಮ ದೇವಸ್ಥಾನ, ಸೋಮೇಶ್ವರ ದೇವಸ್ಥಾನ, ಕೆಇಬಿ ಗಣೇಶ ದೇವಸ್ಥಾನ ಹಾಗೂ ವೆಂಕಟರಮಣಸ್ವಾಮಿ ದೇವಸ್ಥಾನದಲ್ಲಿ ದೇವರ ಮೂರ್ತಿಗಳಿಗೆ ವಿಶೇಷ ಅಲಂಕಾರ ಮಾಡಿ ಪೂಜೆ ಸಲ್ಲಿಸಲಾಯಿತು. ದೇವಸ್ಥಾನಗಳಲ್ಲಿ ಸಾರ್ವಜನಿಕರು ದೇವರ ದರ್ಶನಕ್ಕೆ ಬೆಳಿಗ್ಗೆಯಿಂದಲೇ ಸಾಲುಗಟ್ಟಿ ನಿಂತಿದ್ದರು.ಹೆಣ್ಣು ಮಕ್ಕಳು ಹೊಸ ಬಟ್ಟೆ ತೊಟ್ಟು ಮನೆ ಮನೆಗಳಿಗೆ ತೆರಳಿ ಎಳ್ಳು, ಬೆಲ್ಲ, ಸಕ್ಕರೆ ಅಚ್ಚು, ಕಬ್ಬು ಹಂಚುತ್ತಿದ್ದ ದೃಶ್ಯ ಎಲ್ಲೆಡೆ ಸಾಮಾನ್ಯವಾಗಿತ್ತು. ಹಬ್ಬಕ್ಕಾಗಿ ಮನೆಗಳಲ್ಲಿ ಸಿಹಿ ಪೊಂಗಲ್‌, ಪಾಯಸ, ಅವರೆಕಾಳು ಸಾಂಬಾರು ಸೇರಿದಂತೆ ವಿಶೇಷ ಭಕ್ಷ್ಯಗಳನ್ನು ಸಿದ್ಧಪಡಿಸಲಾಗಿತ್ತು. ಶಾಂತಿ ಸಮಿತಿ ಸದಸ್ಯರು ಗಾಂಧಿವನದ ಬಳಿ ಸಾರ್ವಜನಿಕರಿಗೆ ಎಳ್ಳು, ಬೆಲ್ಲ ಹಂಚಿ ಹಬ್ಬದ ಶುಭಾಶಯ ಕೋರಿದರು.ಸಂಕ್ರಾಂತಿ ಹಬ್ಬದ ಅಂಗವಾಗಿ ಜಿಲ್ಲಾ ಭೋವಿ ಸಂಘವು ಟಿ.ಚನ್ನಯ್ಯ ರಂಗಮಂದಿರದ ಆವರಣದಲ್ಲಿ ರಂಗೋಲಿ ಸ್ಪರ್ಧೆ ಆಯೋಜಿಸಿತ್ತು. ಸ್ಪರ್ಧೆಯಲ್ಲಿ ಮಹಿಳೆಯರು ಚಿತ್ತಾಕರ್ಷಕ ರಂಗೋಲಿ ಬಿಡಿಸಿ ಸಂಭ್ರಮಿಸಿದರು. ಸ್ಪರ್ಧೆಯಲ್ಲಿ ಜಯ ಗಳಿಸಿದವರಿಗೆ ಬಹುಮಾನ ನೀಡಲಾಯಿತು.ನಗರದ ಕಿಲಾರಿಪೇಟೆ, ಕುರುಬರಪೇಟೆ, ಕನಕನಪಾಳ್ಯ, ಕಾರಂಜಿಕಟ್ಟೆ, ಗಾಂಧಿನಗರ ಸೇರಿದಂತೆ ರೈತಾಪಿ ವರ್ಗ ಹೆಚ್ಚಿನ ಸಂಖ್ಯೆಯಲ್ಲಿ ವಾಸವಿರುವ ಬಡಾವಣೆಗಳಲ್ಲಿ ರಾಸುಗಳ ಮೈ ತೊಳೆದು ವಿಶೇಷ ಅಲಂಕಾರ ಮಾಡಿ ಮೆರವಣಿಗೆ ಮಾಡಲಾಯಿತು. ಬಳಿಕ ರಾಸುಗಳಿಗೆ ಪೂಜೆ ಸಲ್ಲಿಸಿ, ಉಪ್ಪು ಹಾಗೂ ಸಿಹಿ ತಿನಿಸುಗಳನ್ನು ನೀಡಲಾಯಿತು. ನಗರದ ಹೊರವಲಯದ ಗದ್ದೆಕಣ್ಣೂರು, ತೊಟ್ಲಿ, ಸುಗಟೂರು ಮತ್ತಿತರ ಗ್ರಾಮಗಳಲ್ಲಿ ಸಂಜೆ ರಾಸುಗಳನ್ನು ಕಿಚ್ಚು ಹಾಯಿಸಲಾಯಿತು.

*

ಸಾಮೂಹಿಕ ಪೊಂಗಲ್ ಆಚರಣೆ


ಕೆಜಿಎಫ್: ನಗರದೆಲ್ಲೆಡೆ ಪೊಂಗಲ್ ಮತ್ತು ಸಂಕ್ರಾಂತಿ ಹಬ್ಬವನ್ನು ಶುಕ್ರವಾರ ಸಂಭ್ರಮದಿಂದ ಆಚರಣೆ ಮಾಡಲಾಯಿತು. ತಮಿಳು ಸಮುದಾಯದವರು ಪೊಂಗಲ್ ಹಬ್ಬವನ್ನಾಗಿ ಆಚರಣೆ ಮಾಡಿದರೆ, ಉಳಿದ ಸಮುದಾಯದವರು ಸಂಕ್ರಾಂತಿಯನ್ನು ಶೃದ್ಧಾಪೂರ್ವಕವಾಗಿ ಆಚರಿಸಿದರು.

ಬಿಜೆಪಿ ಬೆಂಬಲಿಗರು ಮಲೆಯಾಳಿ ಮೈದಾನದಲ್ಲಿ ಸಾಮೂಹಿಕ ಪೊಂಗಲ್ ಆಚರಣೆ ಕಾರ್ಯಕ್ರಮ ಏರ್ಪಡಿಸಿದ್ದರು. ಕಬ್ಬಿನ ಜಲ್ಲೆಗಳ ನಡುವೆ ಮಡಿಕೆ ಇಟ್ಟು ಅದರಲ್ಲಿ ಪೊಂಗಲ್ ತಯಾರು ಮಾಡುವ ಸಾಂಕೇತಿಕ ಆಚಚರಣೆ ನಡೆಯಿತು. ನೂರಾರು ಮಹಿಳೆಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.ಶಾಸಕಿ ವೈ.ರಾಮಕ್ಕ, ಮಾಜಿ ಶಾಸಕ ವೈ.ಸಂಪಂಗಿ, ಬಿಜೆಪಿ ನಗರ ಘಟಕದ ಅಧ್ಯಕ್ಷ ಸುರೇಶ್‌ನಾರಾಯಣಕುಟ್ಟಿ, ನಗರಸಭೆ ಸದಸ್ಯ ವಿಜಯಕುಮಾರ್, ರವಿ, ನಯನರವಿ, ಬಾಟಾ ಗೋಪಾಲ್ ಮತ್ತಿತರರು ಹಾಜರಿದ್ದರು. ತಮಿಳು ಸಂಘದ ವತಿಯಿಂದ ಕೂಡ ಪೊಂಗಲ್ ಹಬ್ಬದ ಪ್ರಯುಕ್ತ ತಿರುವಳ್ಳವರ್ ಭಾವಚಿತ್ರದ ಮೆರವಣಿಗೆ ನಡೆಯಿತು.ಈ ಮುನ್ನ ತಮಿಳು ಸಂಘದ ಆವರಣದಲ್ಲಿ ನಡೆದ ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷ ಕೆ.ಸಿ.ಮುರಳಿ, ಉಪಾಧ್ಯಕ್ಷ ದಾಸ್ ಚಿನ್ನಸವರಿ, ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಪ್ರೊ.ಕೃಷ್ಣಕುಮಾರ್, ಮುಖಂಡ ಕಲೈರಸನ್, ಅರ್ಜುನನ್, ಎ.ಆರ್.ಬಾಬು ಮೊದಲಾದವರು ಭಾಗವಹಿಸಿದ್ದರು. ಪೊಲೀಸರು ಅನುಮತಿ ನಿರಾಕರಿಸಿದ ಕಾರಣದಿಂದಾಗಿ ಎತ್ತುಗಳ ಓಟದ ಸ್ಪರ್ಧೆಯನ್ನು ಎಲ್ಲೂ ನಡೆಸಲಿಲ್ಲ.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.