ಭಾನುವಾರ, ಜನವರಿ 19, 2020
20 °C

ಕಳ್ಳನ ಕೈಗೇ ಕೀ ಕೊಟ್ಟ ಕೆಪಿಎಸ್‌ಸಿ!

ಪ್ರಜಾವಾಣಿ ವಾರ್ತೆ/ ರವೀಂದ್ರ ಭಟ್ಟ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸರ್ಕಾರ ಮತ್ತು ಲೆಕ್ಕ ಪರಿಶೋಧಕರ ತೀವ್ರ ಆಕ್ಷೇಪ ಕಡೆಗಣಿಸಿ­ದ ಕರ್ನಾಟಕ ಲೋಕಸೇವಾ ಆಯೋಗ  (ಕೆಪಿಎಸ್‌ಸಿ), 5 ವರ್ಷಗಳಿಂದ ನಿವೃತ್ತ ಅಧಿಕಾರಿಯೊಬ್ಬರನ್ನು ಸೇವೆಯಲ್ಲಿ ಮುಂದು­­ವರಿಸಿ ರಹಸ್ಯ ವಿಭಾಗದ ಮೇಲ್ವಿ­­ಚಾರಣೆ  ಹೊಣೆಯನ್ನೂ ನೀಡಿ­ರುವ ಬಗ್ಗೆ ಸಿಐಡಿ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ.ಆಯೋಗದಲ್ಲಿ ವಿಶೇಷ ಅಧಿಕಾರಿ­ಯಾಗಿದ್ದ  ಅರುಣಾಚಲಂ 2008ರ ಜ. 31ರಂದು ನಿವೃತ್ತರಾದರು. ಅವರನ್ನು ಮತ್ತೆ 2008ರ ಫೆ.1ರಿಂದಲೇ ಗುತ್ತಿಗೆ ಆಧಾರದಲ್ಲಿ ಪುನರ್‌ ನೇಮಕ ಮಾಡಿ­ಕೊಳ್ಳಲಾಗಿದೆ. ಜೊತೆಗೆ ಅವರನ್ನು ಕೆಪಿಎಸ್‌ಸಿಯ ರಹಸ್ಯ ವಿಭಾಗದ ಮೇಲ್ವಿಚಾರ­ಕ­­ರನ್ನಾಗಿ ಮಾಡಲಾಗಿದೆ. ಇದು ಕೆಪಿಎಸ್‌ಸಿ ನಿಯಮಾವಳಿಯ ಸ್ಪಷ್ಟ ಉಲ್ಲಂಘನೆ ಎಂದು ಸಿಐಡಿ ಹೇಳಿದೆ.ನಿಯಮಾವಳಿ ಪ್ರಕಾರ ಯಾವುದೇ ಸಿಬ್ಬಂದಿ ನಿವೃತ್ತರಾದರೆ ಅವರ ಸೇವೆ­ಯನ್ನು 3 ತಿಂಗಳಿಗಿಂತ ಹೆಚ್ಚಾಗಿ ಮುಂದು­­ವರಿಸು­ವಂತಿಲ್ಲ. ನಿವೃತ್ತ ಅಧಿಕಾರಿ­ಯೊಬ್ಬರ ಸೇವೆ ಅಗತ್ಯ­ವಾಗಿದ್ದರೆ ರಾಜ್ಯಪಾಲರ ಅನುಮತಿ­ಯನ್ನು ಪಡೆದು 3 ತಿಂಗಳವರೆಗೆ ಅವರ ಸೇವೆಯನ್ನು ವಿಸ್ತರಿಸಬಹುದು.3 ತಿಂಗಳ ನಂತರ ಅವರನ್ನು ನಿವೃತ್ತಗೊಳಿಸಿ ಆ ವಿಚಾರ­ವನ್ನು ಒಂದು ತಿಂಗಳ ಒಳಗಾಗಿ ರಾಜ್ಯಪಾಲರಿಗೆ ತಿಳಿಸಬೇಕು. ಆದರೆ ಅರುಣಾಚಲಂ ಅವರನ್ನು ಮರು ನೇಮಕ ಮಾಡಿಕೊಳ್ಳುವಾಗ ಎಲ್ಲ ರೀತಿಯ ನೀತಿ, ನಿಯಮಾವಳಿಗಳನ್ನು ಉಲ್ಲಂಘಿಸಲಾಗಿದೆ ಹಾಗೂ ಕಾನೂನು ಬಾಹೀರವಾಗಿ ಅವರನ್ನು 5 ವರ್ಷಗಳ ಕಾಲ ಸೇವೆ­ಯಲ್ಲಿ ಮುಂದುವರಿಸಲಾಗಿದೆ.2012ರಲ್ಲಿ ಕೆಪಿಎಸ್‌ಸಿ ಲೆಕ್ಕ ಪರಿಶೋಧನೆ ಮಾಡುವ ಸಂದರ್ಭದಲ್ಲಿ ರಾಜ್ಯ ಲೆಕ್ಕಪತ್ರ ಅಧಿಕಾರಿಗಳು ಅರುಣಾಚಲಂ ಅವರ ಮರು ನೇಮ­ಕಾತಿ ಹಾಗೂ ಗುತ್ತಿಗೆ ಆಧಾರದಲ್ಲಿ ಅವರ ಸೇವೆಯನ್ನು 4 ವರ್ಷ ಮುಂದು­ವರಿಸಿದ್ದನ್ನು ಪ್ರಶ್ನೆ ಮಾಡಿದ್ದರು. ಅಲ್ಲದೆ ‘ಅರುಣಾಚಲಂ ಅವರಿಗೆ 4 ವರ್ಷ­ಗಳಲ್ಲಿ ನೀಡಿದ ಒಟ್ಟು  ₨ 13.77 ಲಕ್ಷ ವೇತನ ಆಯೋಗಕ್ಕೆ  ಆದ ನಷ್ಟ’ ಎಂದು ಕಟುವಾಗಿ ಟೀಕಿಸಿದ್ದರು.ನೇಮಕಾತಿ ಪ್ರಕ್ರಿಯೆಯಲ್ಲಿ ಅಕ್ರಮ­ಗಳನ್ನು ನಡೆಸುವುದಕ್ಕಾಗಿಯೇ ಕೆಪಿ­ಎಸ್‌ಸಿ ಅಧ್ಯಕ್ಷರು, ಸದಸ್ಯರು ಮತ್ತು ಕಾರ್ಯ­ದರ್ಶಿ ಅವರು ಕಾನೂನು ಬಾಹಿರ­­ವಾಗಿ ಅರುಣಾಚಲಂ ಸೇವೆ­ಯನ್ನು ಮುಂದುವರಿಸಿ ಅವರಿಗೆ ಅತ್ಯಂತ ಮಹತ್ವವಾದ ಹುದ್ದೆಯನ್ನು ನೀಡಿದ್ದಾರೆ ಎಂದು ಸಿಐಡಿ ವರದಿಯಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.ಅರುಣಾಚಲಂ ಅವರ ಸೇವೆಯನ್ನು ಮುಂದುವರಿಸಬೇಕು ಎನ್ನುವ ಕೆಪಿಎಸ್‌ಸಿ ಮನವಿಯನ್ನು 2012ರ ನ.21ರಂದು ಡಿಪಿಎಆರ್‌ ಪ್ರಧಾನ ಕಾರ್ಯದರ್ಶಿ ತಿರಸ್ಕರಿಸಿದ್ದರು. ‘ಈ ಸಂದರ್ಭದಲ್ಲಿ ನಡೆಯುತ್ತಿದ್ದ ಮುಖ್ಯ ಪರೀಕ್ಷೆ ಮೌಲ್ಯ­ಮಾಪನ ಕ್ರಿಯೆಯಲ್ಲಿ ಅಕ್ರಮಗಳನ್ನು ನಡೆಸಲು ಅರುಣಾಚಲಂ ಅವರ ಸೇವೆ ಅಗತ್ಯವಾಗಿದ್ದರಿಂದ ಸರ್ಕಾರದ ನಿರ್ದೇ­ಶನ­ವನ್ನೂ ತಿರಸ್ಕರಿಸಿ ಅವರನ್ನು ಸೇವೆಯಲ್ಲಿ ಮುಂದುವರಿಸಲಾಗಿತ್ತು’ ಎಂದು ಸಿಐಡಿ ಹೇಳಿದೆ.2011ರ ಕೆಪಿಎಸ್‌ಸಿ ನೇಮಕಾತಿ ಅಕ್ರಮಗಳಿಗೆ ಸಂಬಂಧಿಸಿದಂತೆ ಎಫ್‌ಐ­ಆರ್‌ ದಾಖಲಾದ ತಕ್ಷಣ ಎಫ್‌ಐ-ಆರ್‌ನಲ್ಲಿ ನಮೂದಿಸಲಾದ ಎಲ್ಲ ಆರೋಪಿಗಳ ಮನೆ, ಕಚೇರಿ, ಕೆಪಿಎಸ್‌ಸಿ­ಯಲ್ಲಿರುವ ಅವರ ಕೋಣೆ ಮುಂತಾದ ಕಡೆ ಸಿಐಡಿ ಪೊಲೀಸರು ಹುಡುಕಾಟ ನಡೆಸಿದರು. ಆದರೆ ಅರುಣಾಚಲಂ ಮತ್ತು ಸುಂದರ್‌ ಅವರನ್ನು ಬಿಟ್ಟರೆ ಉಳಿದ ಎಲ್ಲ ಆರೋಪಿಗಳೂ ಬಂಧನದ ಭೀತಿಯಲ್ಲಿ ನಾಪತ್ತೆಯಾಗಿಬಿಟ್ಟರು. ಹೀಗೆ ನಾಪತ್ತೆಯಾಗುವಾಗ ಪ್ರಕರಣಕ್ಕೆ ಸಂಬಂಧಿಸಿದ ಸಾಕ್ಷ್ಯಗಳನ್ನೂ ತಮ್ಮ ಜೊತೆಗೇ ತೆಗೆದುಕೊಂಡು ಹೋಗಿದ್ದರು.ನಸುಕಿನಲ್ಲಿಯೇ ಆರೋಪಿಗಳ ಹುಡು­ಕಾಟ ಆರಂಭವಾಗಿದ್ದರೂ ಆಯೋಗದ ಆಗಿನ ಅಧ್ಯಕ್ಷ ಗೋನಾಳ ಭೀಮಪ್ಪ ಅವರು ಮನೆಯಲ್ಲಿ ಇರಲಿಲ್ಲ.  ಹೈ­ಕೋರ್ಟ್‌ನಲ್ಲಿ ಜಾಮೀನು ದೊರಕಿದ ನಂತರವೇ ಅವರು ಮನೆಯಲ್ಲಿ ಪ್ರತ್ಯಕ್ಷ­ರಾದರು. ಅವರು ಮನೆಗೆ ಬರುವುದಕ್ಕೆ ಮುನ್ನ ಉದ್ದೇಶಪೂರ್ವಕವಾಗಿಯೇ ತಮ್ಮ ಐ–ಫೋನ್‌ ಮೊಬೈಲನ್ನು ತಮ್ಮ ವಕೀಲರ ಬಳಿ ಇಟ್ಟು ಬಂದಿದ್ದರು.ನಂತರ ಅದನ್ನು ವಶಪಡಿಸಿಕೊಂಡರೂ ಅದರಲ್ಲಿ ಇರುವ ಎಲ್ಲ ಸಾಕ್ಷ್ಯಗಳನ್ನು ಅಷ್ಟ­ರಲ್ಲಾಗಲೇ ನಾಶ ಮಾಡಲಾಗಿತ್ತು. ಇದಲ್ಲದೆ ತಮ್ಮ ಇತರ ಐ–ಫೋನ್‌­ಗಳನ್ನೂ ಕೂಡ ಅವರು ರಹಸ್ಯ ಸ್ಥಳದಲ್ಲಿ ಬಚ್ಚಿಟ್ಟಿದ್ದರು. ಅವರ ಮನೆಯನ್ನು ತಪಾಸಣೆ ನಡೆಸಿದರೂ ಅವು ಸಿಕ್ಕಿರಲಿಲ್ಲ. ತಕ್ಷಣವೇ ಇನ್ನೊಂದು ಐ–ಫೋನ್‌ ತಂದು ಒಪ್ಪಿಸಬೇಕು ಎಂದು ತನಿಖಾ­ಧಿಕಾರಿ­­­ಗಳು ಗೋನಾಳ ಭೀಮಪ್ಪ ಅವರಿಗೆ ನೋಟಿಸ್‌ ನೀಡಿದರು. ಬಳಿಕ ಜುಲೈ 24ರಂದು ಅವರು ಸಿಐಡಿಗೆ ತಮ್ಮ ಮತ್ತೊಂದು ಐ–ಫೋನ್‌ ನೀಡಿದರು. ಆದರೆ ಅದರಲ್ಲಿಯೂ ಯಾವುದೇ ಸಾಕ್ಷ್ಯ ಇರಲಿಲ್ಲ. ಎಲ್ಲವನ್ನೂ ನಾಶ­ಪಡಿಸಲಾಗಿತ್ತು ಎಂದು ವರದಿ­ಯಲ್ಲಿ ಹೇಳಲಾಗಿದೆ.ತನಿಖೆ ಸಂದರ್ಭದಲ್ಲಿ ಎಲ್ಲ ಆರೋಪಿಗಳ ಆಸ್ತಿ, ಬ್ಯಾಂಕ್‌ ಖಾತೆಗಳು, ಹಣಕಾಸು ವಹಿವಾಟು, ಬ್ಯಾಂಕ್‌ ಲಾಕರ್‌­­­ಗಳನ್ನೂ ಸಿಐಡಿ ಪೊಲೀಸರು ತಪಾಸಣೆ­ ಮಾಡಿದ್ದಾರೆ. ಇದಲ್ಲದೆ ತೆರಿಗೆ ಇಲಾಖೆ ಮತ್ತು ಕಂದಾಯ ಇಲಾಖೆ­ಗಳಿಂದ ವಿವರಗಳನ್ನೂ ಪಡೆದು­ಕೊಳ್ಳ­ಲಾಗಿದೆ.ಪ್ರತಿಯೊಂದು ಹುದ್ದೆಗೂ ‘ಕನಿಷ್ಠ ಇಂತಿಷ್ಟು ಹಣ’ ಎಂದು ಮೊದಲೇ ನಿಗದಿ ಮಾಡಲಾಗಿತ್ತು ಹಾಗೂ ಅಷ್ಟು ಹಣ­ವನ್ನು ಕೊಟ್ಟ ಅಭ್ಯರ್ಥಿಗಳಿಗೆ ಮುಖ್ಯ ಪರೀಕ್ಷೆ, ಸಂದರ್ಶನದಲ್ಲಿ ಹೆಚ್ಚಿನ  ಅಂಕ ನೀಡಿ ಅವರ ಹೆಸರು ನೇಮಕಾತಿ ಪಟ್ಟಿಯಲ್ಲಿ ಬರುವಂತೆ ನೋಡಿಕೊಳ್ಳ­ಲಾಗಿತ್ತು ಎಂದು ಸಿಐಡಿ ಅಭಿಪ್ರಾಯ­ಪಟ್ಟಿದೆ. ಬಹುತೇಕ ಸಂದರ್ಭದಲ್ಲಿ ನಗದು ಅಥವಾ ಯಾವುದಾದರೂ ವಸ್ತು ರೂಪದಲ್ಲಿ ಪಡೆಯಲಾಗಿತ್ತು. ಅಭ್ಯರ್ಥಿಗಳ ಜೊತೆ ಹಣಕಾಸು ವ್ಯವಹಾರ ನಡೆಸುವಾಗಲೂ ಕೂಡ ಆರೋಪಿಗಳು ಸಾಕಷ್ಟು ಎಚ್ಚರಿಕೆಯನ್ನು ವಹಿಸಿದ್ದರು. ಈ ಬಗ್ಗೆ ಹೆಚ್ಚಿನ ವಿಚಾರಣೆ ನಡೆಯುತ್ತಿದೆ.ಆದರೂ, ಸಿಐಡಿ ತನ್ನ ಮಧ್ಯಂತರ ವರದಿಯಲ್ಲಿಯೇ ಗೋನಾಳ ಭೀಮಪ್ಪ, ಅವರ ಪತ್ನಿ, ಪುತ್ರನ ಹೆಸರಿನಲ್ಲಿರುವ ಆಸ್ತಿ, ಬ್ಯಾಂಕ್‌ ಖಾತೆ, ಲಾಕರ್‌, ಕಟ್ಟಡಗಳು, ವಾಹನಗಳ ಮಾಹಿತಿ­ಯನ್ನು ನಮೂದಿಸಿದೆ. ಕೆಪಿಎಸ್‌ಸಿ ಹಗರಣದ ಬಗ್ಗೆ ಪ್ರಕರಣ ದಾಖಲಾದ ನಂತರ ಬ್ಯಾಂಕ್‌ ಲಾಕರ್‌ನಲ್ಲಿರುವ ವಸ್ತುಗಳನ್ನು ತೆಗೆದುಕೊಂಡು ಹೋಗಿ­ದ್ದನ್ನೂ ಪತ್ತೆ ಮಾಡಲಾಗಿದೆ. ಇದರಿಂದಾ­ಗಿ ಲಾಕರ್‌ನಲ್ಲಿ ಅತ್ಯಂತ ಬೆಲೆಬಾಳುವ ವಸ್ತುಗಳು, ದಾಖಲೆಗಳು ಇದ್ದವು ಎನ್ನುವ ಅನುಮಾನ ಸಹಜವಾಗಿಯೇ ಬರುತ್ತದೆ ಎಂದು ವರದಿಯಲ್ಲಿ ಹೇಳಲಾಗಿದೆ. ಇನ್ನೊಬ್ಬ ಆರೋಪಿ ಸುಧೀರ್‌ ಆಸ್ತಿಪಾಸ್ತಿಯ ವಿವರಗಳೂ ಸಿಐಡಿ ವರದಿಯಲ್ಲಿ ಇದೆ.ಈ ಎಲ್ಲದರ ಹಿನ್ನೆಲೆಯಲ್ಲಿ 2011 ನೇ ಸಾಲಿನ ಕೆಪಿಎಸ್‌ಸಿ ಮುಖ್ಯ ಪರೀಕ್ಷೆಯ ಮರು ಮೌಲ್ಯಮಾಪನ ಮತ್ತು ಮರು ಸಂದರ್ಶನಕ್ಕೆ ಸಿಐಡಿ ಶಿಫಾರಸು ಮಾಡಿದೆ.

(ಕೆಪಿಎಸ್‌ಸಿ ಸಿಸಿಟಿವಿಗೇ ಕಣ್‌ಕಟ್‌: ನಾಳಿನ ಸಂಚಿಕೆಯಲ್ಲಿ)

ಪ್ರತಿಕ್ರಿಯಿಸಿ (+)