ಮಂಗಳವಾರ, ಜೂನ್ 22, 2021
23 °C

ಕಳ್ಳಿ ಎಲ್ಲರನ್ನೂ ಸೆಳೆಯುವ ಮಳ್ಳಿ..!

ಗೀತಸದಾ, ಮೋಂತಿಮಾರು Updated:

ಅಕ್ಷರ ಗಾತ್ರ : | |

ಅಂದದ ಮನೆಗೆ ಸುಂದರ ಹೂತೋಟ ಪ್ರತಿಯೊಬ್ಬರ ಕನಸು. ಗಾರ್ಡನ್ ನಿರ್ಮಿಸುವುದೂ ಒಂದು ಕಲೆ. ಯಾವ ಯಾವ ಸಮಯದಲ್ಲಿ ಗಿಡಗಳನ್ನು ನಾಟಿಮಾಡಬೇಕು? ಯಾವುದನ್ನು ಎಲ್ಲಿ ಹೇಗೆ ನೆಡಬಹುದು? ಕುಂಡಗಳ ಆಯ್ಕೆ ಮತ್ತು ಮಣ್ಣಿನ  ಮಿಶ್ರಣ ಯಾವ ರೀತಿ? ಯಾವುದಕ್ಕೆ ಎಷ್ಟು ಬಿಸಿಲು ಸೂಕ್ತ? ಮುಂತಾದ ವಿವರಗಳನ್ನು ನೀವು ಮೊದಲೇ ಕಲೆಹಾಕಿದರೆ ನಿಮ್ಮ ಹೂವಿನ ತೋಟದ ನಿರ್ವಹಣೆ ಬಹಳ ಸುಲಭ.ಈ ಆಧುನಿಕ ಯುಗದಲ್ಲಿ ಸ್ಥಳ ಹಾಗೂ ಸಮಯದ ಅಭಾವದ ಪರಿಸ್ಥಿತಿಯಲ್ಲಿ- ಸುಲಭ ನಿರ್ವಹಣೆಯ ಸುಂದರ ಹೂದೋಟ ನಿಮ್ಮದಾಗಬೇಕೇ? ಹಾಗಾದರೆ ನೀವು ನಿರ್ಮಿಸಿ ಕ್ಯಾಕ್ಟಸ್ ಗಾರ್ಡನ್.ಕಡಿಮೆ ನೀರು ಬಯಸುವ ಈ ಕಳ್ಳಿ ಗಿಡಗಳ ಪಾಲನೆ ಬಹಳ ಸುಲಭ. ವಾರಕ್ಕೊಮ್ಮೆ ನೀರು ಉಣಿಸಿದರೂ ಸಾಕು. ಬರಗಾಲದಂತಹ ಸಮಯದಲ್ಲೂ ಅಲ್ಪ ಪ್ರಮಾಣದ ನೀರಿನಲ್ಲಿ ಹಚ್ಚಹಸಿರಾಗಿ ಕಂಗೊಳಿಸುವುದೇ ಇದರ ವಿಶೇಷತೆ.       ಹದ ಬಿಸಿಲು ಬೀಳುವ ಮೂಲೆ, ಮೂಲೆಗಳಲ್ಲಿ ಗೋಡೆಗಳ ಬದಿಯಲ್ಲಿ ಸ್ಟ್ಯಾಂಡ್ ಇಟ್ಟು, ತೆರೆದ ಸ್ಥಳಗಳಲ್ಲಿ ಇತರ ಸಸ್ಯಗಳ ನಡುವೆ ಅಂದ ಹೆಚ್ಚಿಸಲು ಈ ಕಳ್ಳಿ ಗಿಡಗಳನ್ನು ಜೋಡಿಸಿ ಮನೆಯ ಅಂದ ಹೆಚ್ಚಿಸಬಹುದು. ಹದ ಬಿಸಿಲು ಬೀಳುವ ಮನೆಯ ಹಜಾರದಲ್ಲಿ ಒಳಾಂಗಣ ಸಸ್ಯವಾಗಿ, ಮನೆಯ ಬಾಲ್ಕನಿಯ ಶೇಡ್‌ಗಳಡಿಯಲ್ಲಿ... ಹೀಗೆ ಎಲ್ಲೆಂದರಲ್ಲಿ ಜೀವಿಸಬಲ್ಲ ಈ ಪಾಪಸ್ ಕಳ್ಳಿಯು ಯಾವುದೇ ವಾತಾವರಣದಲ್ಲೂ ಬಹಳ ಸುಲಭವಾಗಿ ಹೊಂದಿಕೊಳ್ಳಬಲ್ಲುದು.ತನ್ನಲ್ಲಿರುವ  ನೀರನ್ನು ಹಿಡಿದಿಟ್ಟುಕೊಳ್ಳವುದೇ ಇದರ ವಿಶೇಷ. ಇದರ ಎಲೆಗಳು ಮುಳ್ಳುಗಳಿಂದ ಕೂಡಿದ್ದು ನೀರು ಆವಿಯಾಗದಂತೆ ತಡೆಯುತ್ತದೆ. ಸದಾ ಹಚ್ಚಹಸಿರಾಗಿದ್ದು ಮೃದುವಾಗಿ ರಸಭರಿತವಾಗಿರುವ ಕಾಂಡವನ್ನು ಹೊಂದಿರುವ ಈ ಸಸ್ಯದ ಬೇರುಗಳು ಸಾಮಾನ್ಯವಾಗಿ ಹೆಚ್ಚು ಆಳಕ್ಕೆ ಇಳಿಯುವುದಿಲ್ಲ.

 

ಹೆಚ್ಚುವರಿ ನೀರು ಹರಿದು ಹೋಗಲು ಅನುಕೂಲವಿರುವ ಹೆಚ್ಚು ಆಳವಿಲ್ಲದ ಮಣ್ಣಿನ ಕುಂಡಗಳು, ಅಗಲ ಪಾತ್ರೆಗಳು, ಬಳಸಿ ಬೀಸಾಕಿದ ಪ್ಲಾಸ್ಟಿಕ್ ಬಕೆಟ್, ಡಬ್ಬಗಳು, ಹಳೆಯ ಶೂಸ್‌ಗಳಲ್ಲಿ ಅಥವಾ ಕಲ್ಲುಗಳಿಂದ ನೀವೇ ನಿರ್ಮಿಸಿದ ಕುಂಡಗಳು ಇತ್ಯಾದಿಗಳಲ್ಲಿ ಬಹಳ ಸುಲಭವಾಗಿ ಬೆಳೆಸಬಹುದು.ಬೆಳೆಸುವ ವಿಧಾನ

ಒಂದು ಬುಟ್ಟಿ ಮಣ್ಣು ಹಾಗೂ ಮೂರು ಬುಟ್ಟಿ ಮರಳು ಇವನ್ನು ಚೆನ್ನಾಗಿ ಮಿಶ್ರಮಾಡಿಟ್ಟುಕೊಳ್ಳಿ. ಒಂದು ಪಾಟ್‌ನಲ್ಲಿ ಮೊದಲು ಸಣ್ಣಕಲ್ಲುಗಳಿಂದ ಮಿಶ್ರಿತವಾದ ತೆಳು ಪದರವನ್ನು ಹಾಕಿ ಅದರ ಮೇಲೆ ಮೊದಲೇ ಮಿಶ್ರಣ ಮಾಡಿಟ್ಟುಕೊಂಡ ಮರಳು ಮಿಶ್ರಿತ ಮಣ್ಣನ್ನು ಹಾಕಿ ಸಸ್ಯ  ನೆಡಬಹುದು.

 

ಇನ್ನೊಂದು ಸುಲಭ ವಿಧಾನವೆಂದರೆ ಒಂದು ಬುಟ್ಟಿ ಹಟ್ಟಿಗೊಬ್ಬರ, ಒಂದು ಬುಟ್ಟಿ ಮಣ್ಣು ಹಾಗೂ ಎರಡು ಬುಟ್ಟಿ ಮರಳು ಮಿಶ್ರಮಾಡಿ ಕುಂಡಗಳಲ್ಲಿ ತುಂಬಿಸಿ ಇವುಗಳನ್ನು ಬೆಳೆಸಬಹುದು.  ನೆಟ್ಟ ಕ್ಯಾಕ್ಟಸ್‌ಗಳ ಬುಡದಲ್ಲಿ ಹಲವಾರು ಪಿಳ್ಳೆಗಳು ಹುಟ್ಟಿಕೊಳ್ಳುತ್ತದೆ. ಪಿಳ್ಳೆಗಳು ಹುಟ್ಟದೆ ಇರಬೇಕಾದರೆ ಕುಂಡದಲ್ಲಿ ಸಸ್ಯ ನೆಟ್ಟಮೇಲೆ ಅದರ ಸುತ್ತಲೂ ಸಣ್ಣ ಜಲ್ಲಿ ಕಲ್ಲುಗಳನ್ನು ಪದರವಾಗಿ ಹರಡಬೇಕು. ಇದರಿಂದ ನೆಟ್ಟಗಿಡವು ಬಹಳ ಸೊಗಸಾಗಿ ಬೆಳೆಯಬಲ್ಲದು.ಆರೈಕೆ ಹಾಗೂ ಪಾಲನೆ


ಹಲವು ನಮೂನೆಯ ಆಕರ್ಷಕ ವಿನ್ಯಾಸಗಳ ಈ ಕ್ಯಾಕ್ಟಸ್‌ಗಳನ್ನು ಹದ ಬಿಸಿಲಿರುವಲ್ಲಿ ಜೋಡಿಸಿಟ್ಟರೆ ನೋಡಲು ಕಣ್ಣಿಗೆ ಹಬ್ಬ. ಇವುಗಳಿಗೆ ರೋಗ ಕೀಟಗಳ ಬಾಧೆ ಕಡಿಮೆ. ವಾರಕ್ಕೊಮ್ಮೆ ಅಥವಾ ಎರಡು ವಾರಕ್ಕೊಮ್ಮೆ ನೀರುಣಿಸಿದರೂ ಸಾಕು. ಬಹಳ ಸುಲಭವಾಗಿ ಬೆಳೆಸಬಹುದಾದ ಈ ಸಸ್ಯಗಳನ್ನು ರೀಪಾಟ್ ಮಾಡುವ ಅವಶ್ಯಕತೆಗಳಿಲ್ಲ. ಕುಂಡಗಳ ಮಣ್ಣು ಬಿಗಿಯಾಗಲು ಬಿಡಬಾರದು. ಕೆಲವು ಜಾತಿಯ ಕ್ಯಾಕ್ಟಸ್‌ಗಳನ್ನು ಬೋನ್ಸಾಯ್ ಮಾಡಿಯೂ ಬೆಳೆಸಬಹುದು.ಸಿಮೆಂಟ್ ಕುಂಡಗಳು ಅಥವಾ ಕಲ್ಲಿನ ಕುಂಡಗಳಲ್ಲಿ ನೆಟ್ಟ ಸಸ್ಯಗಳೂ ಚೆನ್ನಾಗಿ ಬರುತ್ತವೆ. ಮುಖ್ಯವಾಗಿ ಕುಂಡಗಳಲ್ಲಿ ನೀರು ನಿಲ್ಲಬಾರದು. ಮಳೆಗಾಲದಲ್ಲಿ ನೀರು ಬೀಳದಂತೆ ನೋಡಿಕೊಳ್ಳಬೇಕು. ನೀರು ಹೆಚ್ಚಾದರೆ ಗಿಡ ಕೊಳೆತು ಹೋಗುತ್ತದೆ ಎಂದು ಅತ್ಯಂತ ಆಸಕ್ತಿಯಿಂದ ಕ್ಯಾಕ್ಟಸ್ ಬೆಳೆಸಿರುವ ಸುಮನ ಕೃಷ್ಣಮೂರ್ತಿ ಅವರು ಹೇಳುತ್ತಾರೆ. ಬುಡದಲ್ಲಿ ಹುಟ್ಟಿಕೊಳ್ಳುವ ಪಿಳ್ಳೆಗಳಿಂದ, ಕಾಂಡಗಳಿಂದ ಮತ್ತು ಎಲೆಗಳಿಂದಲೂ ಸಸ್ಯಾಭಿವೃದ್ಧಿ ಮಾಡಬಹುದು. ಮಳೆಗಾಲದಲ್ಲಿ ಸಸ್ಯಗಳು ಕೊಳೆತು ಹೋಗುವ ಸಾದ್ಯತೆ ಹೆಚ್ಚಿರುವುದರಿಂದ ಬೇಸಿಗೆಯಲ್ಲಿ ಹಾಗೂ ಚಳಿಗಾಲದಲ್ಲಿ ಸಸ್ಯಾಭಿವೃದ್ಧಿಗೆ ಸೂಕ್ತ ಸಮಯ.ಈ ಕಳ್ಳಿ ಗಿಡದಲ್ಲಿ ಸೂಕ್ಷ್ಮವಾದ ನಂಜುಂಟುಮಾಡುವ ಹಳದಿಬಣ್ಣದ ಸಣ್ಣ ಮುಳ್ಳುಗಳಿರುವುದರಿಂದ ಸಸ್ಯಗಳನ್ನು ಕೀಳುವಾಗ ಕೈಕವಚ ಉಪಯೋಗಿಸಿದರೆ ಒಳಿತು. ಸೂಕ್ಷ್ಮ ಮುಳ್ಳುಗಳಿರುವ ಈ ಸಸ್ಯವನ್ನು ಮಕ್ಕಳು ಮುಟ್ಟದಂತೆ ನೋಡಿಕೊಳ್ಳಬೇಕು. ಮುಳ್ಳು ಚುಚ್ಚಿದರೆ ನಂಜುಂಟಾಗಿ ನವೆ ತುರಿಕೆಯಾಗುವ ಸಾದ್ಯತೆಯಿದೆ.ಕಳ್ಳಿಗಿಡಗಳಲ್ಲಿ ಹಲವು ನಮೂನೆಯ ವಿವಿಧ ತಳಿಗಳನ್ನು ಕಾಣಬಹುದು. ಇವುಗಳಲ್ಲಿ ಕೆಲವಂತೂ ಬಣ್ಣಬಣ್ಣದ ಹೂವನ್ನು ಬಿಟ್ಟು ಮನಸೂರೆಗೊಳ್ಳುವಂತಿದೆ. ಹೂದೋಟವು ಕೇವಲ ಹೂವುಬಿಡುವ ಸಸ್ಯಗಳಿಂದ ತುಂಬಿದರೆ ಸಾಲದು, ಹಲವು ನಮೂನೆಯ ಸಸ್ಯಗಳು, ವಿನ್ಯಾಸದ ಎಲೆಗಳು,  ಕ್ಯಾಕ್ಟಸ್‌ನಂತಹ ವೈವಿಧ್ಯಮಯ ಸಸ್ಯಗಳಿಂದ ತುಂಬಿದರೆ ನೋಡಲು ಆಕರ್ಷಕವಾಗಿದ್ದು ಹೊಸ ಕಳೆ ತರಬಲ್ಲದು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.