ಕವಿತೆ:ಯಯಾತಿಯ ಇತ್ತ ಕಳುಹಿ

ಕನಸ ಕಗ್ಗಾಡಿನಲ್ಲಿಯೂ ನಾ
ತೆನೆತುಂಬಿ ಕಂಗೊಳಿಪ ಮಾಮರ
ಕೆಂದಳಿರು ತಂಬೆಲರು
ಸೋನೆಮಿಡಿ ಸಿಹಿಗಾಯಿ
ಜೀರುಂಡೆ ಗಿಳಿವಿಂಡು
ಗೂಡು ನೂರಾ ಒಂದು
ಎಲ್ಲ ಸರಿ! ಸಾಲದು ಕಣೆ
ಚಿತ್ತಾಪಹಾರಿ ಮಾವೆ!
ಮಾಗು... ಮಾಗು... ಮಾಗು...
ನೆಟ್ಟು ನೀರೆರೆದವರ ತಲೆ
ಹತ್ತಿರ ಹತ್ತಿರ ನೂರಾಎಂಟು ಡಿಗ್ರಿ
ತುಡುಗುದನ ಪಿಂಜಾರುಪೋಲಿ
ಬೇಲಿದಾಟಿಯು ಬಂದು
ಜೋತು ಬೀಳುತ್ತಲ್ಲ,
ಹಾಳಾದ ಬಾವಲಿ!
ಅದು ಬೆಳಕ ಬಿಂದು
ಸೆರಗಸುಡುವ ಕಿಡಿಯಾಗುವ ಕ್ಷಣ.
ಕನಸುಗಳ ಕಣ್ಣೆವೆಯೊಳಗೇ
ಬಚ್ಚಿಟ್ಟು ಹೇಳುತ್ತಿದ್ದೇನೆ
ಯಯಾತಿ ಏನಾದರೂ ಅತ್ತ
ಬಂದರೆ
ಕೊಟ್ಟು ಕಳುಹಿ ನನ್ನ ವಿಳಾಸ
ನಾನವನನ್ನು ಖಂಡಿತ
ನಿರಾಸೆಗೊಳಿಸಲಾರೆ.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್ಬುಕ್ ಪುಟವನ್ನುಫಾಲೋ ಮಾಡಿ.