ಶನಿವಾರ, ಫೆಬ್ರವರಿ 27, 2021
19 °C
ಆರೋಪ ಮಾಡಿದ ವಿದ್ಯಾರ್ಥಿನಿಗೆ ಬೆದರಿಕೆ

ಕ.ವಿ.ವಿ ಡೀನ್‌ ಪ್ರೊ.ಗಣಿಹಾರ್ ಬಂಧನ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕ.ವಿ.ವಿ ಡೀನ್‌ ಪ್ರೊ.ಗಣಿಹಾರ್ ಬಂಧನ

ಧಾರವಾಡ: ಪಿಎಚ್.ಡಿ ಪೂರ್ಣಗೊಳಿಸಲು ಲಂಚಕ್ಕಾಗಿ ಒತ್ತಾಯಿಸಿದ ಆರೋಪ ಎದುರಿಸುತ್ತಿರುವ, ಕರ್ನಾಟಕ ವಿ.ವಿ ಶಿಕ್ಷಣ ವಿಭಾಗದ ಡೀನ್‌ ಪ್ರೊ. ನೂರ್‌ಜಹಾನ್‌ ಗಣಿಹಾರ್‌ ಅವರನ್ನು ಜೀವ ಬೆದರಿಕೆ ಒಡ್ಡಿರುವ ಆರೋಪದ ಮೇಲೆ ಸೋಮವಾರ ಬಂಧಿಸಲಾಗಿದೆ.ಪ್ರೊ.ಗಣಿಹಾರ್‌ ಅವರು ಪಿಎಚ್.ಡಿ ಕೋರ್ಸ್‌ ಮುಗಿಸಿಕೊಡುವುದಕ್ಕಾಗಿ ಹಣದ ಬೇಡಿಕೆ ಇಟ್ಟಿದ್ದಾರೆ ಎಂದು ಹುಬ್ಬಳ್ಳಿ ಮೂಲದ ಶಬಿಯಾ ಎ.ಎಂ.ಖಾನ್‌ ಸೇರಿದಂತೆ ಇಬ್ಬರು ಕ.ವಿ.ವಿಗೆ ದೂರು ನೀಡಿದ್ದರು. ಅದರ ಆಧಾರದ ಮೇಲೆ ಕುಲಸಚಿವರು ಲೋಕಾಯುಕ್ತ ಪೊಲೀಸರಿಗೆ ದೂರು ನೀಡಿದ್ದರು.‘ಇದೀಗ ದೂರು ಹಿಂಪಡೆಯುವಂತೆ ಒತ್ತಾಯ ಹೇರಿದ್ದಲ್ಲದೇ, ಜೀವ ಬೆದರಿಕೆಯನ್ನೂ ಒಡ್ಡಿದ್ದಾರೆ’ ಎಂದು ಆರೋಪಿಸಿ ವಿದ್ಯಾರ್ಥಿನಿ ಹುಬ್ಬಳ್ಳಿಯ ವಿದ್ಯಾನಗರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಪ್ರೊ.ಗಣಿಹಾರ್‌ ಅವರನ್ನು ಧಾರ ವಾಡದಲ್ಲಿರುವ ಅವರ ನಿವಾಸದಿಂದ ಬಂಧಿಸಿ ಕರೆದೊಯ್ಯಲಾಯಿತು.ಘಟನೆ ವಿವರ: ಹುಬ್ಬಳ್ಳಿಯ ವಿದ್ಯಾನಗರದ ಶಾಲೆಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಶಬಿಯಾ ಅವರನ್ನು ತಮ್ಮ ಪತಿಯೊಂದಿಗೆ ಭೇಟಿ ಮಾಡಿದ ಪ್ರೊ. ಗಣಿಹಾರ್‌, ದೂರು ಹಿಂದಕ್ಕೆ ಪಡೆಯುವಂತೆ ಒತ್ತಾಯಿಸಿದ್ದಾರೆ. ‘ಒಂದೊಮ್ಮೆ ದೂರು ಹಿಂಪಡೆಯದಿದ್ದರೆ ಮುಂದಿನ ದಿನಗಳು ಸರಿ ಇರುವುದಿಲ್ಲ’ ಎಂದೂ ಬೆದರಿಕೆ ಹಾಕಿದ್ದಾರೆ ಎಂದು ತಿಳಿದು ಬಂದಿದೆ.ಇದರಿಂದ ಹೆದರಿದ ಶಬಿಯಾ ತಕ್ಷಣ ವಿದ್ಯಾನಗರ ಠಾಣೆಗೆ ತೆರಳಿ, ‘ನನಗೆ ಪ್ರೊ.ಗಣಿಹಾರ್‌ ಜೀವ ಬೆದರಿಕೆ ಹಾಕಿದ್ದಾರೆ. ಹೀಗಾಗಿ ನನಗೆ ರಕ್ಷಣೆ ನೀಡಬೇಕು’ ಎಂದು ಆಗ್ರಹಿಸಿ ದೂರು ದಾಖಲಿಸಿದ್ದಾರೆ. ಈ ಕುರಿತು ವಿದ್ಯಾನಗರ ಠಾಣೆ ಪೊಲೀಸರು ವಿಚಾರಣೆ ಕೈಗೆತ್ತಿಕೊಂಡಿದ್ದರು.ಪೊಲೀಸರು ಸೋಮವಾರ ಬೆಳಿಗ್ಗೆ ಪ್ರೊ.ಗಣಿಹಾರ್ ಮನೆಗೆ ತೆರಳಿ ಅವರನ್ನು ಬಂಧಿಸಲು ಮುಂದಾದರು. ಆಗ ಪ್ರೊ.ಗಣಿಹಾರ್‌, ಲೋಕಾಯುಕ್ತ ನ್ಯಾಯಾಲಯ ತಮಗೆ ನೀಡಿರುವ ಜಾಮೀನು ಪ್ರತಿಯನ್ನು ತೋರಿಸಿದ್ದಾರೆ. ಜತೆಗೆ ಇಂದು ಲೋಕಾಯುಕ್ತ ಪೊಲೀಸ್‌ ಠಾಣೆಯಲ್ಲಿ ವಿಚಾರಣೆಗೆ ಹಾಜರಾಗಬೇಕಿದೆ ಎಂದೂ ಹೇಳಿದ್ದಾರೆ.ಹೀಗಾಗಿ ವಿದ್ಯಾನಗರ ಪೊಲೀಸರು ಅವರನ್ನು ಲೋಕಾಯುಕ್ತ ಪೊಲೀಸ್‌ ಕಚೇರಿಗೆ ಕರೆತಂದರು. ಅಲ್ಲಿ ವಿಚಾರಣೆ ಹಾಜರಾತಿಗೆ ಸಹಿ ಹಾಕಿಸಿ ನಂತರ ತಮ್ಮ ವಶಕ್ಕೆ ಪಡೆದರು.ಶಬಿಯಾ ಅವರಿಂದ ಪ್ರೊ. ಗಣಿಹಾರ್‌, ದೂರು ಹಿಂಪಡೆದುಕೊಳ್ಳುವ ಮತ್ತು ಈ ಪ್ರಕರಣದಲ್ಲಿ ತಮ್ಮಿಂದ ಹಣ ಕೇಳಿಲ್ಲ ಎಂದು ಪತ್ರ ಬರೆಯಿಸಿಕೊಂಡಿದ್ದಾರೆ ಎಂದು ತಿಳಿದುಬಂದಿದೆ. ಪತ್ರ ಸಿಕ್ಕಿರುವುದರಿಂದಲೇ ಪೊಲೀಸರು ಪ್ರೊ. ಗಣಿಹಾರ್‌ ಅವರನ್ನು ಬಂಧಿಸಿದ್ದಾರೆ ಎಂದೂ ಹೇಳಲಾಗಿದೆ. ಆದರೆ ‘ಪತ್ರದಲ್ಲಿರುವ ಅಂಶವನ್ನು ತಿಳಿಸಲಾಗದು’ ಎಂದು ಪೊಲೀಸರು ಹೇಳಿದ್ದಾರೆ.

*

ಣಿಹಾರ್‌ ವಿರುದ್ಧದ ದೂರಿಗೆ ಸಂಬಂಧಿಸಿದಂತೆ ಎಲ್ಲಾ ಸಾಕ್ಷ್ಯಗಳನ್ನು ಸಂಗ್ರಹಿಸಲಾಗಿತ್ತು. ಸದ್ಯ ಸಾಕ್ಷ್ಯ ನಾಶ ಮಾಡುವಲ್ಲಿ ಮುಂದಾಗಿರುವ ಕುರಿತ ಈ ದೂರಿನಿಂದ ಪ್ರಕರಣಕ್ಕೆ ಮತ್ತೊಂದು ಸಾಕ್ಷಿ ದೊರೆತಂತಾಯಿತು.

- ಪ್ರೊ. ಕೆ.ಪರಶುರಾಮ,

ಲೋಕಾಯುಕ್ತ ಎಸ್‌.ಪಿ

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.