ಭಾನುವಾರ, ಮೇ 22, 2022
21 °C

ಕವಿ ತ್ರಾನ್ಸ್ ತೋಮರ್ ಕಾವ್ಯದ ಟ್ರಾನ್ಸ್‌ಫಾರ್ಮರ್!

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕವಿ ತ್ರಾನ್ಸ್ ತೋಮರ್ ಕಾವ್ಯದ ಟ್ರಾನ್ಸ್‌ಫಾರ್ಮರ್!

ಲಂಡನ್ನಿನ `ಲ್ಯಾಂಡ್‌ಬ್ರೋಕ್~ ಎಂಬ ಜೂಜು ಕಂಪನಿ ಪ್ರತಿವರ್ಷ ನೊಬೆಲ್ ಪ್ರಶಸ್ತಿ ಯಾವ ಬರಹಗಾರನಿಗೆ ಬರಬಹುದೆಂಬುದರ ಬಗ್ಗೆ ಬಾಜಿಕಟ್ಟಲು ತನ್ನ ಗಿರಾಕಿಗಳನ್ನು ಆಹ್ವಾನಿಸುತ್ತದೆ. ಆಗ ಕೇಳಿಬರುವ ಹೆಸರುಗಳಲ್ಲಿ ಅಪರೂಪದ ಹೆಸರುಗಳಿರುತ್ತವೆ- ಕೀನ್ಯಾದ ಗೂಗಿ ವಾ ತ್ಯಾಂಗೊ, ಸಿರಿಯಾದ ಅಡೊನಿಸ್, ಚೀಣಾದ ಗಾವೋ ಷಿಂಜಿಯಾನ್ ಇತ್ಯಾದಿ ಜೊತೆಗೆ ಪಶ್ಚಿಮಕ್ಕೆ ಪರಿಚಿತವಾದ ಹೆಸರುಗಳೂ ಕೇಳಿಬರುತ್ತವೆ: ಅಮೆರಿಕದ ಆಲಿಸ್ ಮನ್ರೋ, ಫಿಲಿಪ್ ರೊತ್ ಇತ್ಯಾದಿ. ಇವರಲ್ಲಿ ಯಾರಿಗೆ ಪ್ರಶಸ್ತಿ ದೊರಕುವ ಅವಕಾಶ ಎಷ್ಟಿದೆ ಎಂಬುದನ್ನೂ ನಿಗದಿಪಡಿಸಲಾಗುತ್ತದೆ. ಉದಾಹರಣೆಗೆ ಸಿರಿಯಾದ ಅಡೊನಿಸ್‌ಗೆ ಈ ವರ್ಷ ಆರರಲ್ಲಿ ಒಂದು ಅವಕಾಶವಿತ್ತು. ಆದರೆ ಕೊನೆಗೆ ಪ್ರಶಸ್ತಿ ಸಿಗಲಿಲ್ಲ. ಅದು ಸಿಕ್ಕಿದ್ದು ಹತ್ತರಲ್ಲಿ ಒಂದು ಅವಕಾಶವಿದ್ದ ಸ್ವೀಡನ್ ಕವಿ ಥಾಮಸ್‌ ತ್ರಾನ್ಸ್ ತೋಮರ್‌ಗೆ. ಸಾಹಿತ್ಯಾಭಿಮಾನಿಗಳಿಗೆ ಇದೊಂದು ಅನಿರೀಕ್ಷಿತ ಆಯ್ಕೆ. ಸ್ವತಃ ತ್ರಾನ್ಸ್ ತ್ರೋಮರ್‌ಗೆ ಕೂಡ. ಕಳೆದ ಹಲವು ವರ್ಷಗಳಿಂದ ಪಟ್ಟಿಯಲ್ಲಿ ಅವರ ಹೆಸರು ಸುಳಿದುಹೋಗುತ್ತಿತ್ತು. ಈ ಬಗ್ಗೆ ಅವರ ಅನುವಾದಕಮಿತ್ರರು ಪ್ರತಿಸಲ ತಮ್ಮ ಪತ್ರದಲ್ಲಿ ಪ್ರಸ್ತಾಪ ಮಾಡಿದಾಗ ತಮಗೆ ಸಿಗುವ ಸಾಧ್ಯತೆಗಳನ್ನು ಅವರು ತಳ್ಳಿಹಾಕುತ್ತಿದ್ದರು. ಅರೆಬಿಯಾದ ಅತ್ಯಂತ ಪ್ರಸಿದ್ಧ ಕವಿ ಅಡೊನಿಸ್, ಮೂರನೇ ಜಗತ್ತಿನ ಚಿಂತನೆಗೆ ಹೊಸಾ ದಿಶೆ ತೋರಿದ ಆಫ್ರಿಕಾದ ಗೂಗಿ, ಈ ಬಾರಿ ಪಟ್ಟಿಯಲ್ಲಿ ನುಸುಳಿಕೊಂಡಿದ್ದ ಭಾರತದ ಸಚ್ಚಿದಾನಂದನ್, ಮಹಾಶ್ವೇತಾದೇವಿ- ಇತ್ಯಾದಿ ಹೊರನಾಡ ಪ್ರತಿಭೆಗಳನ್ನು ಕೈಬಿಟ್ಟು ನೊಬೆಲ್ ಸಮಿತಿ ತ್ರಾನ್ಸ್ ತೋಮರ್ ಅವರನ್ನು ಆಯ್ಕೆ ಮಾಡಿ ಮತ್ತೆ ವಿವಾದಕ್ಕೆ ಎಡೆಮಾಡಿಕೊಟ್ಟಿದೆ. ಪ್ರತಿಭೆಗಳು ಅನೇಕ. ಆದರೆ ಪ್ರಶಸ್ತಿ ಒಂದೇ. ಸ್ಥಂದಾಲ್‌ನ ಮಾತು ನೆನಪಾಗುತ್ತದೆ: ಪ್ಯಾರಿಸ್ಸಿನ ಪ್ರತಿ ಕಾನೂನು ವಿದ್ಯಾರ್ಥಿಯೂ ಅಟಾರ್ನಿ ಜೆನರಲ್ ಆಗಬಯಸುತ್ತಾನೆ. ಆದರೆ ಪ್ಯಾರಿಸ್ಸಿನಲ್ಲಿ ಅಟಾರ್ನಿ ಜನರಲ್‌ನ ಪೀಠ ಒಂದೇ ಎಂಬುದನ್ನು ಮರೆಯುತ್ತಾನೆ.

ಈ ಹಿಂದೆ ನೊಬೆಲ್‌ನ ರಾಜಕೀಯದ ಬಗ್ಗೆ, ವಸ್ತುನಿಷ್ಠತೆಯ ಬಗ್ಗೆ ಚರ್ಚೆಗಳಾಗಿವೆ. ನೈಜೀರಿಯಾದ ವೊಲೆಶೊಯಿಂಕಾನಿಗೆ ನೊಬೆಲ್ ಬಂದಾಗ ಅವನು ತನ್ನ ಸ್ವೀಕಾರ ಭಾಷಣದಲ್ಲಿ ಹೇಳಿದ: `ಈ ಮಹಾನ್ ಸನ್ಮಾನಕ್ಕಾಗಿ ನಾನು ಕೃತಜ್ಞ. ಈ ಪ್ರಶಸ್ತಿ ಸ್ಥಾಪನೆಯ ಅದೆಷ್ಟು ದಶಕಗಳ ಬಳಿಕ ಕರಿಯನೊಬ್ಬನಿಗೆ ಇದನ್ನು ನೀಡಿದ್ದೀರ. ಇದಕ್ಕೆ ಪೂರ್ಣ ಕೃತಜ್ಞತೆ ವ್ಯಕ್ತಪಡಿಸಬೇಕೆಂದರೆ ನಾವು ಕರಿಯರು ಒಂದು ಪ್ರಶಸ್ತಿಯನ್ನು ಈಗ ಸ್ಥಾಪಿಸಿ ಒಂದು ನೂರು ವರ್ಷದ ಬಳಿಕ ಬಿಳಿಯನೊಬ್ಬನಿಗೆ ಆ ಪ್ರಶಸ್ತಿ ನೀಡಬೇಕು~. ಫ್ರೆಂಚ್ ಲೇಖಕ ಜೋ ಪಾಲ್ ಸಾರ್ತ್ರೆಗೆ ನೊಬೆಲ್ ಸಿಕ್ಕಾಗ ವಾಮಪಂಥೀಯರಿಗೆ ಪ್ರಶಸ್ತಿ ನೀಡದೆ ಅವಮಾನ ಮಾಡಲಾಗಿದೆಯೆಂದು ನೊಬೆಲ್ ಪ್ರಶಸ್ತಿಯನ್ನೇ ನಿರಾಕರಿಸಿದ್ದ. ರಷ್ಯನ್ ಕವಿ ಪಾಸ್ತರ್ನಾಕ್‌ಗೆ ನೊಬೆಲ್ ಸಿಕ್ಕಾಗ, ನೊಬೆಲ್ ಕಮ್ಯುನಿಸ್ಟ್ ವಿರೋಧಿಗಳಿಗೆ ನೀಡಲಾಗುವ ಪ್ರಶಸ್ತಿಯೆಂದೂ, ಕಮ್ಯುನಿಸಂನ ಸಮರ್ಥಕನಲ್ಲದ ಪಾಸ್ಟರ್ನಾಕನಿಗೆ ಈ ಗೌರವ ನೀಡಿ ಸೋವಿಯತ್ ಒಕ್ಕೂಟವನ್ನು ನೊಬೆಲ್ ಸಮಿತಿ ಅಪಮಾನಿಸಿದೆಯೆಂದೂ ಆರೋಪಿಸಿತು. ಪ್ರಶಸ್ತಿ ಸ್ವೀಕರಿಸಿದರೆ ಪಾಸ್ಟರ‌್ನಾಕ್ ದೇಶಭ್ರಷ್ಟನಾಗುತ್ತಾನೆಂದು ಘೋಷಿಸಿತು. ಕೊನೆಗೆ ದೇಶಭಕ್ತನಾದ ಪಾಸ್ಟರ‌್ನಾಕ್ ನೊಬೆಲ್ ಪ್ರಶಸ್ತಿಯನ್ನು ನಿರಾಕರಿಸಿ ಸ್ವದೇಶವಾಸವನ್ನೇ ಆಯ್ದುಕೊಂಡ.

ಅದಷ್ಟೇ ಅಲ್ಲ. ನೊಬೆಲ್ ನೀಡಿಕೆಯ ಸ್ಥಾನವಾದ ಸ್ವೀಡನ್ನಿನಲ್ಲೇ ಅದರ ಬಗ್ಗೆ ದೂರುಗಳಿವೆ. ಸ್ವೀಡನ್ನಿನ ಮಹಾನ್ ನಾಟಕಕಾರ ಸ್ಟ್ರೀಂಡ್ ಬರ್ಗನಿಗೆ ಅಥವಾ ಮಹಾಕವಿ ಗುನ್ನಾರ್ ಎಕಲಾಫನಿಗೆ ನೊಬೆಲ್ ಸಿಗಲೇ ಇಲ್ಲ. ಅತ್ಯಂತ ಜನಪ್ರಿಯ ಲೇಖಕನಾದ ಸ್ಟ್ರೀಂಡ್ ಬರ್ಗನಿಗೆ ಬದಲಾಗಿ ಇನ್ನೊಬ್ಬರಿಗೆ ಪ್ರಶಸ್ತಿ ಕೊಟ್ಟಾಗ ಸಿಟ್ಟಿಗೆದ್ದ ಸ್ವೀಡನ್ನಿನ ಕಾರ್ಮಿಕವರ್ಗದವರು ಚಂದಾ ಎತ್ತಿ ನೊಬೆಲ್ ಪ್ರಶಸ್ತಿಯ ಹಣದಷ್ಟೇ ಮೊತ್ತವನ್ನು ಕೂಡಿಸಿ ಸ್ಟ್ರೀಂಡ್ ಬರ್ಗನಿಗೆ ನೀಡಿದ್ದು ಸಾಹಿತ್ಯ ಚರಿತ್ರೆಗಳಲ್ಲೇ ಅಪರೂಪದ ಘಟನೆ. ನೊಬೆಲ್ ಸಿಗದ ಮಹಾನ್ ಲೇಖಕರ ಪಟ್ಟಿ ಬಹಳ ದೊಡ್ಡದು: ಟಾಲ್‌ಸ್ಟಾಯ್, ಬ್ರೆಕ್ಟ್, ಯುಕಿಯೊ ಮಿಷೊಮ, ಆಯ್ ಚಿಂಗ್ ಇನ್ನೂ ಅನೇಕ. ಕೈಲಾಸವೆಲ್ಲರಿಗು ಇಲ್ಲ ಸರ್ವಜ್ಞ.

ಈ ಬಾರಿಯ ನೊಬೆಲ್ ಪ್ರಶಸ್ತಿ ವಿಜೇತ ತ್ರಾನ್ಸ್‌ತ್ರೋಮರ್ ಬರೆದದ್ದು ಕಡಿಮೆ, ಸಾಧಿಸಿದ್ದು ಬಹಳ ಅನ್ನುತ್ತಾರೆ ಅವರ ಸಮರ್ಥಕರು. ಸ್ವೀಡಿಷ್ ಅಕಾಡೆಮಿಯ ಸ್ಥಾಯಿ ಕಾರ್ಯದರ್ಶಿ ಪೀಟರ್ ಇಂಗ್ಲೆಂಡ್ ಪ್ರಕಾರ: 1951ರಲ್ಲಿ ಮೊದಲ ಸಂಗ್ರಹ ಬಂದಾಗಿನಿಂದ ಬರೆಯುತ್ತಿರುವ ತ್ರಾನ್ಸ್ ತ್ರೋಮರ್ ಸೃಜಿಸಿದ ಕೃತಿಗಳ ಗಾತ್ರ ಕಡಿಮೆ. ಆದರೂ ಅವರು ದೊಡ್ಡ ವಸ್ತುಗಳ ಬಗ್ಗೆ ಬರೆಯುತ್ತಾ ಬಂದಿದ್ದಾರೆ- ಸಾವಿನ ಬಗ್ಗೆ, ಚರಿತ್ರೆಯ ಬಗ್ಗೆ, ಸ್ಮರಣೆಯ ಬಗ್ಗೆ, ನಿಸರ್ಗದ ಬಗ್ಗೆ. ಆದರೆ ಎಡಪಂಥವಾದಿ ಪ್ರವೃತ್ತಿಗಳು ಮೇಲುಗೈ ಪಡೆದ 70ರ ದಶಕದ ಸಂದರ್ಭದಲ್ಲಿ ತ್ರಾನ್ಸ್‌ತ್ರೋಮರ್ ಪಲಾಯನವಾದಿ ವ್ಯಕ್ತಿನಿಷ್ಠ ಕವಿಯೆಂಬ ಆಪಾದನೆ ಎದುರಿಸಬೇಕಾಗಿ ಬಂತು. ಸಂಕ್ಷಿಪ್ತತೆ ಅವರ ಕವಿತೆಯ ಪ್ರಧಾನ ಗುಣ. ನೊಬೆಲ್ ಪ್ರಶಸ್ತಿ ಸಂಸ್ಥೆ ಹೀಗೆಂದಿದೆ: `ತಮ್ಮ ಚುಟುಕಾದ, ಪಾರದರ್ಶಕ ಪ್ರತಿಮೆಗಳ ಮೂಲಕ ಅವರು ನಮ್ಮ ಜಗತ್ತಿಗೊಂದು ಹೊಸ ಪ್ರವೇಶ ನೀಡಿದ್ದಾರೆ~.

ಸ್ಟಾಕ್‌ಹೋಂನಲ್ಲಿ 1931ರಲ್ಲಿ ಹುಟ್ಟಿದ ತ್ರಾನ್ಸ್‌ತ್ರೋಮರ್‌ರನ್ನು ಗಂಡನಿಂದ ಬೇರೆಯಾಗಿದ್ದ ಅವರ ಶಾಲಾ ಉಪಾಧ್ಯಾಯಿನಿ ತಾಯಿ ಬೆಳೆಸಿದರು. ಅಲ್ಲಿಯೇ ಹೈಸ್ಕೂಲು ಮುಗಿಸಿದ ನಂತರ ಅವರು 1956ರಲ್ಲಿ ಸ್ಟಾಕ್ ಹೋಂ ವಿಶ್ವವಿದ್ಯಾಲಯದಲ್ಲಿ ಮನೋವಿಜ್ಞಾನ ಪದವೀಧರರಾದರು. ಮುಂದೆ ಮೊನಿಕಾ ಬ್ಲಾಷ್‌ರನ್ನು ಮದುವೆಯಾದ ಅವರು ಉದರಂಭರಣಕ್ಕೆ ಮನೋವಿಜ್ಞಾನಿಯ ಹುದ್ದೆ ಹಿಡಿದು, ಆತ್ಮಸಂಗಾತಕ್ಕೆ ಕವಿತೆಯನ್ನು ಹಿಡಿದರು. 2007ರಲ್ಲಿ ಅವರ ಅತ್ಯಂತ ಇತ್ತೀಚಿನ ಸ್ವೀಡಿಷ್ ಸಂಗ್ರಹ ಪ್ರಕಟವಾಯಿತು. 2010ರಲ್ಲಿ ಅವರ ಕವಿತೆಗಳ ಇಂಗ್ಲಿಷ್ ಅನುವಾದವೊಂದು ಹೊರಬಂತು. ಸುಮಾರು 60 ಭಾಷೆಗಳಿಗೆ ತರ್ಜುಮೆಗೊಂಡಿರುವ ಅವರು 1884ರಲ್ಲಿ ಭೂಪಾಲ್ ಗ್ಯಾಸ್ ದುರಂತದ ಬಳಿಕ ಭಾರತಕ್ಕೂ ಬಂದಿದ್ದರು. ಆಗ ನನ್ನನ್ನೂ ಒಳಗೊಂಡು ಹಲವು ಭಾರತೀಯ ಕವಿಗಳು ಅವರನ್ನು ಭೆಟ್ಟಿ ಮಾಡಿದರು. ಆ ಸಂದರ್ಭದಲ್ಲಿ ಕೆ.ಸಚ್ಚಿದಾನಂದನ್, ಫೆರೆನ್ಸ್ ಯೂಹಾಸ್ ಮುಂತಾದ ಕವಿಗಳ ಜೊತೆಗೂಡಿ ಅನಿಲ ದುರಂತ ವಿರೋಧಿ ಕವಿಸಮ್ಮೇಳನದಲ್ಲಿ ಪಾಲ್ಗೊಂಡಿದ್ದರು.

ಭಾರತೀಯ ಭಾಷೆಗಳಲ್ಲೂ ಅನುವಾದ ಆಗಿರುವ ತ್ರಾನ್ಸ್ ತ್ರೋಮರ್‌ರ ಕಾವ್ಯ ಸ್ವೀಡಿಷ್ ಕಾವ್ಯ ಪರಂಪರೆಯ ವಿಶಿಷ್ಟಗುಣಗಳನ್ನು ಮೈಗೂಡಿಸಿಕೊಂಡಿದೆ. ಜೀವದ ಒಂಟಿತನ, ನಿರಾಶೆ, ಸಾವಿನ ಅನಿವಾರ್ಯತೆ ಇವು ಸ್ವೀಡನ್ನಿನ ಮಹಾನ್ ಕಲಾಕಾರರಾದ ನಾಟಕಕಾರ ಆಗಸ್ಟ್ ಸ್ಟ್ರೀಂಡ್‌ಬರ್ಗ್‌ನಲ್ಲಿ, ಮಹಾಕವಿ ಗುನ್ನಾರ್ ಎಕಲಾಫನಲ್ಲಿ, ಸಿನಿಮಾಕಾರ ಇಗ್ಮಾರ್ ಬರ್ಗ್ನಮನ್‌ನಲ್ಲಿ ಅನುರಣಿಸುವ ಕಾಳಜಿಗಳು. ಇವು ತ್ರಾನ್ಸ್ ತ್ರೋಮರರಲ್ಲೂ ಇವೆ. ಅಲ್ಲದೆ ಯೂರೋಪಿನ ಆಧುನಿಕ ಕಾವ್ಯಕ್ಕೆ ಆಧಾರ ಆಗಿರುವ ಚುಟುಕುತನ, ಸಂಯಮ, ಪ್ರತಿಮಾನಿಷ್ಟತೆ- ಇವುಗಳೂ ತ್ರಾನ್ಸ್‌ತ್ರೋಮರರ ಕಾವ್ಯದಲ್ಲಿ ಪ್ರಧಾನ ಗುಣವಾಗಿವೆ. ಭಾಷಣಕ್ಕೆ ಹೇಸುವ ಅವರ ಮಿತಭಾಷಿತ್ವ ಸ್ವಲ್ಪದರಲ್ಲಿ ಬಹಳ ಹೇಳಲು ಹವಣಿಸುತ್ತದೆ. ಇಲ್ಲಿ ಅನುವಾದಿಸಿರುವ ಕವಿತೆಗಳು ಇದಕ್ಕೆ ನಿದರ್ಶನಗಳಾಗಿವೆ. ಅಲ್ಲದೆ ವಿಮರ್ಶಕರು ಅವರ ಕವಿತೆಗಳಲ್ಲಿ ಒಂದು ಬಗೆಯ `ಮಿಸ್ಟಿಸಿಸಂ~ ಅನ್ನೂ ಗುರುತಿಸಿದ್ದಾರೆ. ಯಾಕೆಂದರೆ ಅವರ ಶಬ್ದಗ್ರಾಹ್ಯ, ಇಂದ್ರಿಯಗ್ರಾಹ್ಯ ವಿವರಗಳು ಅಗೋಚರ ಒಳಾನುಭವಗಳೆಡೆಗೆ ನಮ್ಮನ್ನು ಸೆಳೆಯುತ್ತವೆ. ತ್ರಾನ್ಸ್‌ತ್ರೋಮರ್ ಈ ಬಗ್ಗೆ ಹೇಳುತ್ತಾರೆ: `ಆಯಾ ಕ್ಷಣಗಳ, ಘಟನೆಗಳ ಪೂರ್ಣ ಅರ್ಥ ಅವುಗಳ ಒಳಗೇ ಇವೆ ಎಂಬ ಧಾರ್ಮಿಕ ನಂಬುಗೆ ನನ್ನಲ್ಲಿ ಬಲವಾಗುತ್ತಿದೆ. ಇದು ಸಾಂಪ್ರದಾಯಿಕ ಧರ್ಮದ ದೃಷ್ಟಿ ಖಂಡಿತಾ ಅಲ್ಲ. ಹುಟ್ಟು-ಸಾವು, ಇಹ-ಪರ ಬೇರ್ಪಡಿಸದ ಸ್ಕ್ಯಾಂಡಿನೀವಿಯಾದ ಕ್ರೈಸ್ತಪೂರ್ವ ಧರ್ಮಗಳ ಲೋಕದೃಷ್ಟಿ~.

ಹಲವು ವರ್ಷಗಳ ಹಿಂದೆ ತ್ರಾನ್ಸ್ ತ್ರೋಮರ್ ಅರೆಪಾರ್ಶ್ವವಾಯುವಿಗೆ ತುತ್ತಾದರು. ಅವರ ಶರೀರದ ಒಂದುಭಾಗ ನಿತ್ರಾಣವಾಗಿದೆ. ಅವರ ಬಾಯಿಯಿಂದ ಮಾತುಗಳೂ ಸ್ಪಷ್ಟವಾಗಿ ಹೊರಡುವುದಿಲ್ಲ. ಇಷ್ಟಾದರೂ ಇಂದಿಗೂ ಅವರ ಕಾವ್ಯ ನಿರ್ಬಾಧಿತವಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.