ಗುರುವಾರ , ಜನವರಿ 30, 2020
22 °C

ಕಸ ವಿಲೇವಾರಿ: ಗುತ್ತಿಗೆ ವಾಪಸ್ ಆದೇಶ ಹಿಂದಕ್ಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೆಲವು ವಾರ್ಡ್‌ಗಳಲ್ಲಿ ಹೆಚ್ಚುವರಿ ಪಾಳಿ ಹಾಗೂ ಶೂನ್ಯ ತ್ಯಾಜ್ಯ ಯೋಜನೆಯಡಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ನೀಡಲಾಗಿದ್ದ ಗುತ್ತಿಗೆಯನ್ನು ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಮುಂದುವರಿಸಲಾಗುವುದು ಎಂದು ಪಾಲಿಕೆ ಆಯುಕ್ತ ಎಂ.ಕೆ. ಶಂಕರಲಿಂಗೇಗೌಡ ಶುಕ್ರವಾರ ಹೇಳಿದರು.ಬಿಬಿಎಂಪಿಯ ಪೌರ ಸಭಾಂಗಣದಲ್ಲಿ ಮೇಯರ್ ಪಿ. ಶಾರದಮ್ಮ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಬಿಜೆಪಿ ಸದಸ್ಯ ಎ.ಎಚ್. ಬಸವರಾಜು, ಇದೇ 25ರಿಂದ ಅನ್ವಯವಾಗುವಂತೆ ಪಾಲಿಕೆ ಆಯುಕ್ತರು ಹೆಚ್ಚುವರಿ ಪಾಳಿ ಹಾಗೂ ಶೂನ್ಯ ತ್ಯಾಜ್ಯ ಯೋಜನೆಯಡಿ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ನೀಡಲಾಗಿದ್ದ ಗುತ್ತಿಗೆಯನ್ನು ಹಿಂಪಡೆಯಲು ಆದೇಶ ಹೊರಡಿಸಿದ್ದಾರೆ. ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳದೆ ಏಕಾಏಕಿ ಗುತ್ತಿಗೆ ರದ್ದುಪಡಿಸುವುದರಿಂದ ಜನರಿಗೆ ತೀವ್ರ ತೊಂದರೆಯಾಗಲಿದೆ ಎಂದು ಹೇಳಿದರು.ಬಿಜೆಪಿ ಸದಸ್ಯ ಎನ್.ಆರ್. ರಮೇಶ್, ಆಡಳಿತ ಪಕ್ಷದ ನಾಯಕ ಬಿ.ಆರ್. ನಂಜುಂಡಪ್ಪ, ವಿರೋಧ ಪಕ್ಷದ ನಾಯಕ ಎಂ. ಉದಯಶಂಕರ್, ಇದೇ 25ರಿಂದ ಹೆಚ್ಚುವರಿ ಪಾಳಿಯಲ್ಲಿ ಕಸ ಸಂಗ್ರಹಿಸುವಂತಹ ಯೋಜನೆಯ ಗುತ್ತಿಗೆ ರದ್ದುಪಡಿಸಲಿರುವುದರಿಂದ ಕಸ ಸಂಗ್ರಹಣೆ ಹಾಗೂ ವಿಲೇವಾರಿಗೆ ತೊಂದರೆಯಾಗಲಿದೆ. ಕೆಲ ಶಾಸಕರು ಗುತ್ತಿಗೆ ಮುಂದುವರಿಸುವಂತೆ ಆಯುಕ್ತರನ್ನು ಕೋರಿ ಪತ್ರ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಸದಸ್ಯರು ಹಾಗೂ ಶಾಸಕರ ಮನವಿಯನ್ನು ಪರಿಗಣಿಸಬೇಕು ಎಂದು ಆಗ್ರಹಿಸಿದರು.ಹೊಸ ಟೆಂಡರ್ ಪ್ರಕ್ರಿಯೆ ಪೂರ್ಣಗೊಳ್ಳುವವರೆಗೆ ಆದೇಶವನ್ನು ಹಿಂಪಡೆಯಲಾಗುವುದು. ಅಲ್ಲಿಯವರೆಗೆ ಈಗಿನ ವ್ಯವಸ್ಥೆಯನ್ನು ಮುಂದುವರಿಸಲು ಜಂಟಿ ಆಯುಕ್ತರಿಗೆ ಸೂಚನೆ ನೀಡಲಾಗುವುದು ಎಂದು ಆಯುಕ್ತರು ಸಭೆಗೆ ತಿಳಿಸಿದರು.24ರಂದು ಹೈಕೋರ್ಟ್‌ನಲ್ಲಿ ಅಂತಿಮ ವಿಚಾರಣೆ: ಒಳಚರಂಡಿ ಕೊಳವೆಗಳಲ್ಲಿ ಖಾಸಗಿ ಕಂಪೆನಿಗಳು ಅಕ್ರಮವಾಗಿ ಅಳವಡಿಸಿರುವ ಒಎಫ್‌ಸಿ ಕೇಬಲ್‌ಗಳನ್ನು ತೆರವುಗೊಳಿಸುವ ಪ್ರಕರಣದ ಅಂತಿಮ ವಿಚಾರಣೆ ಇದೇ ತಿಂಗಳ 24ರಂದು ಹೈಕೋರ್ಟ್‌ನಲ್ಲಿ ನಡೆಯಲಿದ್ದು, ನ್ಯಾಯಾಲಯ ನೀಡುವ ಆದೇಶಕ್ಕೆ ಪಾಲಿಕೆ ಬದ್ಧ ಎಂದು ಆಯುಕ್ತರು ಸಭೆಗೆ ತಿಳಿಸಿದರು.ಬಿಜೆಪಿಯ ಎನ್.ಆರ್. ರಮೇಶ್ ಮಾತನಾಡಿ, ನಗರದಲ್ಲಿ ಸುಮಾರು 1700 ಕಿ.ಮೀ.ನಷ್ಟು ಉದ್ದದ ಒಳಚರಂಡಿ ಕೊಳವೆಗಳೊಳಗೆ 18 ಕಂಪೆನಿಗಳು ಒಎಫ್‌ಸಿ ಕೇಬಲ್ ಅಳವಡಿಸಿವೆ. ಇದರಿಂದ ಮಳೆಗಾಲದಲ್ಲಿ ನೀರು ಸರಾಗವಾಗಿ ಹರಿಯದೆ ತಗ್ಗುಪ್ರದೇಶಗಳು ಜಲಾವೃತಗೊಳ್ಳುತ್ತಿವೆ ಎಂದು ಸಭೆಯ ಗಮನಸೆಳೆದರು. ಸದ್ಯಕ್ಕೆ ಯಾವುದೇ ಒಎಫ್‌ಸಿ ಕೇಬಲ್ ತೆರವುಗೊಳಿಸಲು ಹೈಕೋರ್ಟ್‌ನ ತಡೆಯಾಜ್ಞೆಯಿದೆ ಎಂದು ಆಯುಕ್ತರು ತಿಳಿಸಿದರು.ನಗರದಲ್ಲಿ 6061 ಕಿ.ಮೀ. ಒಎಫ್‌ಸಿ ಕೇಬಲ್ ಅಳವಡಿಸಿರುವುದಾಗಿ ಕಂಪೆನಿಗಳು ಹೇಳುತ್ತಿವೆ. ಆದರೆ, ಒಂಬತ್ತು ಸಾವಿರ ಕಿ.ಮೀ. ಉದ್ದದ ಮಾರ್ಗದಲ್ಲಿ ಕಂಪೆನಿಗಳು ಅಕ್ರಮವಾಗಿ ಒಎಫ್‌ಸಿ ಕೇಬಲ್ ಅಳವಡಿಸಿರಬಹುದು ಎಂದು ಪಾಲಿಕೆ ಅಂದಾಜಿಸಿದೆ. ಒಳಚರಂಡಿ ಕೊಳವೆಗಳಲ್ಲಿ ಒಎಫ್‌ಸಿ ಕೇಬಲ್ ಅಳವಡಿಕೆಗೆ ಪಾಲಿಕೆ ಅನುಮತಿ ನೀಡಿದರೂ ಬಾಡಿಗೆ ಶುಲ್ಕ ಸಂಗ್ರಹಿಸುವುದು ಜಲಮಂಡಳಿಯ ವ್ಯಾಪ್ತಿಗೆ ಸೇರುತ್ತದೆ. ಆದರೂ, ಹೈಕೋರ್ಟ್ ತೀರ್ಪಿನ ನಂತರ ಈ ಬಗ್ಗೆ ಗಮನಹರಿಸಲಾಗುವುದು ಎಂದರು.ಚೆನ್ನೈನಲ್ಲಿ 2002ರಿಂದಲೇ ಅಲ್ಲಿನ ಮಹಾನಗರ ಪಾಲಿಕೆಯು ಒಎಫ್‌ಸಿ ಕೇಬಲ್ ಅಳವಡಿಸಿರುವ ಕಂಪೆನಿಗಳಿಂದ ಬಾಡಿಗೆ ಶುಲ್ಕ ಸಂಗ್ರಹಿಸುತ್ತಿದೆ. ಚೆನ್ನೈನಲ್ಲಿ ಇದು ಸಾಧ್ಯವಾದರೆ ಬಿಬಿಎಂಪಿಗೆ ಏಕೆ ಸಾಧ್ಯವಾಗುವುದಿಲ್ಲ ಎಂದು ರಮೇಶ್ ಪ್ರಶ್ನಿಸಿದರು. ಈ ಬಗ್ಗೆ ದೇಶದ ವಿವಿಧ ಮಹಾನಗರ ಪಾಲಿಕೆಗಳಿಂದ ಮಾಹಿತಿ ಪಡೆಯಲಾಗುವುದು. ಹೈಕೋರ್ಟ್ ತೀರ್ಪು ಹೊರ ಬಂದ ನಂತರ ಬಾಡಿಗೆ ಶುಲ್ಕ ನಿಗದಿಪಡಿಸುವ ಕುರಿತು ತೀರ್ಮಾನ ಕೈಗೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದರು.

ಪ್ರತಿಕ್ರಿಯಿಸಿ (+)