ಬುಧವಾರ, ಜನವರಿ 29, 2020
28 °C
ಕೆ.ಎಸ್‌.ನಿಸಾರ್‌ ಅಹಮದ್‌ ಅಭಿಮತ

ಕಹಿ ಘಟನೆ ಸಾಧನೆಗೆ ಪೂರಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಮೂಡುಬಿದಿರೆ: ಬದುಕಿನ ಕಹಿ ಘಟನೆ­ಗಳನ್ನು ಸಾಧನೆಯ ಹಾದಿಯಲ್ಲಿ ಪೂರಕ­ವಾಗಿ ಸ್ವೀಕಿರಿಸಬೇಕು ಎಂದು ಹಿರಿಯ ಕವಿ ಡಾ. ಕೆ.ಎಸ್‌.ನಿಸಾರ್‌ ಅಹಮದ್‌ ಅವರು ಅಭಿಪ್ರಾಯಪಟ್ಟರು.ಆಳ್ವಾಸ್‌ ವಿಶ್ವ ನುಡಿಸಿರಿ ವಿರಾಸತ್‌ನ ಎರಡನೇ ದಿನವಾದ ಶುಕ್ರವಾರ ರತ್ನಾಕರವರ್ಣಿ ವೇದಿಕೆಯಲ್ಲಿ ಏರ್ಪ­ಡಿಸಿದ್ದ ಕವಿಸಮಯ, ಕವಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಟೀಕಾಕಾರರು, ನಿಂದಕರು ಇರಬೇಕು. ಅವರು ಆನೆಗೆ ಅಂಕುಶದಂತೆ ಕೆಲಸ ಮಾಡುತ್ತಾರೆ. ಸಾಧನೆಗೆ ಪ್ರೇರಕರು ಎಂದು ಅವರನ್ನು ಭಾವಿಸಬೇಕು ಎಂದು ವಿವರಿಸಿದರು.ಕುಹಕ ಸಲ್ಲದು:  ಒಳ್ಳೆಯ ಕೆಲಸವನ್ನು ಯಾರೇ ಮಾಡಿದಾಗ ಬೆನ್ನು ತಟ್ಟಬೇಕು. ಇಲ್ಲದಿದ್ದರೆ ಸುಮ್ಮನಿರಬೇಕು. ಉತ್ತಮ ಕೆಲಸದಲ್ಲಿ ಹುಳುಕು ಹುಡುಕಿ ಕುಹಕ ಮಾಡುವುದನ್ನು ಸಲ್ಲದು ಬಿಡಬೇಕು ಎಂದು ಅವರು ತಿಳಿಸಿದರು.‘ಬೇರೆಯವರ ಕಪಟ ಗೊತ್ತಿದ್ದೂ ಸುಮ್ಮನಿರುವುದು ಕಷ್ಟದ ಕೆಲಸ ಎಂಬುದನ್ನು ‘ಒಳಗೊಳಗೆ ಬೇರು ಕೊಯ್ದು...’ ಕವನದ ಸಾಲಿನ ಮೂಲಕ ಉದಾಹರಿಸಿದ ಅವರು, ನುಡಿಸಿರಿ ಸಂಘಟಕ ಡಾ.ಮೋಹನ ಆಳ್ವ ಅವರು ಒಳ್ಳೆಯ ಕೆಲಸ ಮಾಡುತ್ತಿದ್ದಾರೆ. ಅವರನ್ನು ಪ್ರಶಂಸಿಸುವ ಬದಲು ಹುಳುಕು ಹುಡುಕಿ  ಕುಹಕವಾಡುವುದು ಒಳ್ಳೆಯದಲ್ಲ. ಇಂಥ ಕಹಿ ಅನುಭವಗಳು ನನಗೂ ಆಗಿವೆ’ ಎಂದು ವಿವರಿಸಿದರು.ಲಾಲ್‌ಬಾಗ್‌ ಮಲೆನಾಡಾಯ್ತು:

‘ನಾನು ಹೆಚ್ಚು ಅಂತರ್ಮುಖಿ. ನನಗೆ ಮನೆಯ ಪಕ್ಕದಲ್ಲೇ ಇದ್ದ ಬೆಂಗಳೂರಿನ ಲಾಲ್‌ಬಾಗ್‌ ಮಲೆನಾಡಾಯ್ತು. ಈಗಿನಂತೆ ಆಗ ಶಾಲೆಗಳು ನಾಯಿಕೊಡೆಗಳಂತೆ ಇರಲಿಲ್ಲ. ಬಳಪ, ಸ್ಲೇಟ್‌ ಹಿಡಿದೇ ಕಲಿತೆ. ಎಲ್‌ಎಸ್‌ ಪರೀಕ್ಷೆ ಬಂದಾಗ ಪೆನ್‌ ಹಿಡಿದೆ. ಕೈಯೆಲ್ಲಾ ಮಸಿ ಮಾಡಿಕೊಂಡು ಬರೆದೆ’ ಎಂದು ಅವರು ಬಾಲ್ಯವನ್ನು ಮೆಲುಕು ಹಾಕಿದರು.‘ಕಾವ್ಯದ ಮೋಡಿ, ಮೋಹಕತೆ ನಮ್ಮನ್ನು ಸೆರೆ ಹಿಡಿಯಿತು’ ಎಂದಾಗ ಕೊಟ್ಟ ಸಮಯ ಮುಗಿದಿತ್ತು. ‘ನಾದಾ ನನಗೆ ಅಂಕುಶ ಹಾಕುತ್ತಿದ್ದಾರೆ’ ಎಂದು ತಿಳಿಸಿದ ಅವರು, ‘ದೇಶ ದೇವಿ ಉತ್ಸವದಲಿ ಹಬ್ಬದೊಸಗೆ ಸಂಭ್ರಮ­ದಲಿ’ ಕವನ ಓದಿದರು.ಅವರ ಕವನಕ್ಕೆ ಸುರೇಖಾ ದನಿಯಾ­ದರು. ನಾ.ದಾಮೋದರ ಶೆಟ್ಟಿ ವೇದಿಕೆ­ಯಲ್ಲಿದ್ದರು. ಕೆ.ವಿ. ರಮಣ್‌ ಅವರ ನಿರ್ದೇಶನದಲ್ಲಿ ಉಡುಪಿಯ ನೃತ್ಯ­ನಿಕೇತನದ ಕಲಾವಿದರು ಹೆಜ್ಜೆ ಹಾಕಿದರು. ಇನ್ನೊಂದೆಡೆ ಕಲಾವಿದ ಬಿ.ಕೆ.ಎಸ್‌. ವರ್ಮ ಅವರು ಚಿತ್ರ ಬರೆದರು. ಗಾಯನ– ನೃತ್ಯ– ಕುಂಚದ ಮೂಲಕ ಏಕಕಾಲಕ್ಕೆ ಕವಿನಮನ ನಡೆಯಿತು.

ಪ್ರತಿಕ್ರಿಯಿಸಿ (+)